ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಗಳಲ್ಲಿ ಮಾತ್ರ ಶೌಚಾಲಯ

Last Updated 9 ಅಕ್ಟೋಬರ್ 2017, 5:33 IST
ಅಕ್ಷರ ಗಾತ್ರ

ಬೀದರ್‌: ‘ದಾಖಲೆಗಳಲ್ಲಿ ಮಾತ್ರ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ. ಆದರೆ, ವಾಸ್ತವದಲ್ಲಿ ಯಾವ ಸೌಲಭ್ಯಗಳೂ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ರೋಟರಿ ಕ್ಲಬ್‌ ಆಫ್ ಬೀದರ್ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ವಾಶ್ ಇನ್ ಸ್ಕೂಲ್ಸ್’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಸಾಕಷ್ಟು ಅನುದಾನ ನೀಡಿ ಎಲ್ಲಾ ಶಾಲೆಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ ಮಾಡಿದೆ ಎಂಬುದು ಕೇವಲ ಕಾಗದ ಮೇಲೆ ಇದೆ. ಆದರೆ, ಬಹುತೇಕ ಕಡೆ ನಿಜವಾಗಿಯೂ ಶೌಚಾಲಯ ನಿರ್ಮಾಣ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲವೊಂದು ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದರೂ ಕೂಡ ಅದರ ಬಳಕೆಯಾಗುತ್ತಿಲ್ಲ. ಇನ್ನೂ ಕೆಲವು ಕಡೆ ಅವು ಕಿಡಿಗೇಡಿಗಳಿಗೆ ಜೂಜಾಟದ ಹಾಗೂ ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ’ ಎಂದರು.

‘ರಾಷ್ಟ್ರೀಯ ಮಾಧ್ಯಯಮಿಕ ಶಿಕ್ಷಣ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಅಡಿ ಶಾಲೆಗಳಲ್ಲಿ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವ ಜವಾಬ್ದಾರಿ ಆಯಾ ಶಾಲೆಗಳ ಶಾಲಾ ಉಸ್ತುವಾರಿ ಸಮಿತಿ ಹಾಗೂ ಮುಖ್ಯ ಶಿಕ್ಷಕರಿಗೆ ವಹಿಸಲಾಗಿದೆ. ಆದರೆ, ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಕಾರಣ ವಾಸ್ತವದಲ್ಲಿ ಶೌಚಾಲಯಗಳು ನಿರ್ಮಾಣವಾಗುತ್ತಿಲ್ಲ’ ಎಂದು ಹೇಳಿದರು.

‘ಶಾಲೆಗಳ ಸುತ್ತಮುತ್ತ ಪರಿಸರ ಶುದ್ಧವಾಗಿ ಇದ್ದರೆ ಮಾತ್ರ ಮಕ್ಕಳು ಸದೃಢ ಆರೋಗ್ಯದಿಂದ ಬೆಳೆಯಲು ಸಾಧ್ಯವಿದೆ. ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು ಅಲ್ಲದೇ ಇದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಿಸಬಹುದು. ಆದ್ದರಿಂದ ಎಲ್ಲಾ ಶಾಲೆಗಳಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಎಲ್ಲಾ ಸೌಲಭ್ಯಗಳು ಒದಗಿಸಬೇಕು’ ಎಂದು ತಿಳಿಸಿದರು.

ಸಾರ್ವತ್ರಿಕ ಆರೋಗ್ಯ ಹಕ್ಕು ಕಾಯ್ದೆ ಶೀಘ್ರ ಜಾರಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದಿರುವ ಮಾದರಿಯಲ್ಲಿಯೇ ರಾಜ್ಯದಲ್ಲಿ ಸಾರ್ವತ್ರಿಕ ಆರೋಗ್ಯ ಹಕ್ಕು ಕಾಯ್ದೆಯನ್ನು ರಾಜ್ಯ ಸರ್ಕಾರ ಶೀಘ್ರ ಜಾರಿಗೆ ತರಲಿದೆ ಎಂದು ಅವರು ಹೇಳಿದರು.

‘ಎಲ್ಲರೂ ಆರೋಗ್ಯವಂತರಾಗಿ ಇರಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಸಾರ್ವತ್ರಿಕ ಆರೋಗ್ಯ ಹಕ್ಕು ಕಾಯ್ದೆ ಜಾರಿಗೊಳಿಸುತ್ತಿದೆ’ ಎಂದು ತಿಳಿಸಿದರು.
ರೋಟರಿ ಇಂಡಿಯಾ ವಿನ್ಸ್ ಸದಸ್ಯ ಕಾರ್ಯದರ್ಶಿ ರಮೇಶ ಅಗ್ರವಾಲ್ ಉಪನ್ಯಾಸ ನೀಡಿದರು.

ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ ಜಿಲ್ಲಾ ಗವರ್ನರ್ ಕೆ. ಮಧು ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಬಸವರಾಜ ಧನ್ನೂರು, ಡಾ. ಮಹೇಶ ಕೊತಬಗಿ, ಜೆ ಅಬ್ರಾಹಂ, ವೆಂಕಟೇಶ ಚನ್ನಾ, ಜಿ.ಎನ್. ವರಲಕ್ಷ್ಮಿ, ರವಿ ವದ್ಲಾಮಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT