ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಸ್ವಗ್ರಾಮದಲ್ಲೇ ಸಮಸ್ಯೆಗಳ ‘ಮಳೆ’

Last Updated 9 ಅಕ್ಟೋಬರ್ 2017, 5:40 IST
ಅಕ್ಷರ ಗಾತ್ರ

ಯಳಂದೂರು: ಗ್ರಾಮೀಣರಿಗೆ ತೊಡಕಾದ ಕೆಸರುಮಯ ರಸ್ತೆಗಳು, ಕಲುಷಿತ ನೀರಿನಿಂದ ಹೆಚ್ಚುತ್ತಿರುವ ಸೊಳ್ಳೆ, ಗ್ರಾಮದ ನಡುವೆ ದುರ್ವಾಸನೆ ಬೀರುವ ಹಳ್ಳಕೊಳ್ಳ, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಕೊಳಚೆ ಹಾಗೂ ಮಳೆ ನೀರು ಇವುಗಳ ನಡುವೆಯೇ ನಿವಾಸಿಗಳು ಬದುಕು ಸಾಗಿಸಬೇಕಾದ ಅನಿವಾರ್ಯತೆ.

ಇದು ತಾಲ್ಲೂಕಿನ ದೊಡ್ಡ ಗ್ರಾಮವಾಗಿರುವ ಹಾಗೂ ಶಾಸಕ ಜಯಣ್ಣ ಅವರ ತವರಾದ ಮಾಂಬಳ್ಳಿಯಲ್ಲಿ ಗ್ರಾಮಸ್ಥರನ್ನು ಕಾಡುವ ಸಮಸ್ಯೆಗಳ ಚಿತ್ರಣ. ಇಲ್ಲಿ ಮಳೆ ಬಂದರೆ, ಸಮಸ್ಯೆಗಳ ಹೊಳೆಯೇ ಹರಿಯುತ್ತದೆ. 8 ಸಾವಿರಕ್ಕೂ ಅಧಿಕ ಜನಸಂಖ್ಯೆಯ ಗ್ರಾಮದ ಮಧ್ಯದಲ್ಲಿ ಕುಂಬಾರಕಟ್ಟೆ ಇದೆ. ಇಲ್ಲಿನ ಬಡಾವಣೆಗಳ ಸುತ್ತಲೂ ಕೊಳಚೆ ನೀರು ಮಡುಗಟ್ಟಿ, ದಿನನಿತ್ಯ ರೋಗಭೀತಿ ಸೃಷ್ಟಿಸಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ನೀರನ್ನು ಹೊರ ಹಾಕಲು ಪಂಚಾಯಿತಿಯಿಂದ ಮೋಟಾರ್ ಅಳವಡಿಸಿದ್ದರೂ ಸಮರ್ಪಕ ನಿರ್ವಹಣೆ ಇಲ್ಲದೆ ನೀರು ನಿಂತಲ್ಲಿಯೇ ಇದ್ದು, ಸುಮಾರು 2 ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ ಹೊಂಡ ಸೃಷ್ಟಿಯಾಗಿದೆ. ಚರಂಡಿ ನೀರು ಇಲ್ಲಿಗೇ ಸೇರುತ್ತದೆ.

ಕಲುಷಿತ ನೀರು ಮಳೆಗಾಲದಲ್ಲಿ ತಗ್ಗುಪ್ರದೇಶದ ಗೌಸಿಯಾ ಮೊಹಲ್ಲಾಗೆ ನುಗ್ಗುತ್ತದೆ. ಈ ವೇಳೆ ಹಾವು, ಕ್ರಿಮಿಕೀಟಗಳು ಮನೆ ಸೇರುವುದರಿಂದ ಕುಟುಂಬಗಳು ರಾತ್ರಿಪೂರ ಆತಂಕದಿಂದ ಕಳೆಯಬೇಕು. ಕುಡಿಯುವ ನೀರಿನ ಪೈಪ್‌ನ್ನು ಚರಂಡಿಯ ತಳ ಭಾಗದಿಂದ ಸಂಪರ್ಕ ಕಲ್ಪಿಸಲಾಗಿದ್ದು, ಕಲುಷಿತ ನೀರು ಸೇರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಬಡಾವಣೆಯ ನಿವಾಸಿಗಳು.

‘ಬಡಾವಣೆಗೆ 4 ವರ್ಷಗಳಿಂದ ಮೂಲಸೌಲಭ್ಯ ಕಲ್ಪಿಸಲಾಗಿಲ್ಲ. ಒಂದು ಬೀದಿಗೆ ಮಾತ್ರ ರಸ್ತೆ ನಿರ್ಮಿಸಲಾಗಿದೆ. ಉಳಿದ ಬೀದಿಗಳಲ್ಲಿ ಮಂಡಿ ಮಟ್ಟದ ಹಳ್ಳ ಬಿದ್ದಿದೆ. ಕಲುಷಿತ ನೀರನ್ನು ಹಾದು ಮಕ್ಕಳು ಶಾಲೆಗೆ ತೆರಳಬೇಕು’ ಎನ್ನುವ ಅಳಲು ತಾ.ಪಂ ಮಾಜಿ ಅಧ್ಯಕ್ಷ ಜೆ. ಶಕೀಲ್ ಅಹಮ್ಮದ್ ಅವರದು.

‘ಮನೆಯಲ್ಲಿ ಎಲ್ಲರೂ ಡೆಂಗಿ ಜ್ವರದಿಂದ ಬಳಲಿದ್ದೇವೆ. ಇಲ್ಲಿ ಮೂಗು ಮುಚ್ಚಿಕೊಂಡು ಬದುಕುವ ಬವಣೆ ನಮ್ಮದಾಗಿದೆ. ಆರ್ಥಿಕವಾಗಿಯೂ ಸುಸ್ಥಿತಿಯಲ್ಲಿ ಇಲ್ಲ. ನಮ್ಮ ಮನವಿಗೆ ಜನ ಪ್ರತಿನಿಧಿಯೂ ಸ್ಪಂದಿಸುತ್ತಿಲ್ಲ.

ಶಾಸಕರ ಸ್ವಗ್ರಾಮದಲ್ಲಿರುವ ಕುಂಬಾರಕಟ್ಟೆಯ ಸುತ್ತಮುತ್ತಾ ನೀರು ನಿಲ್ಲದಂತೆ ಯೋಜನೆ ರೂಪಿಸಬೇಕು. ರಸ್ತೆ, ಚರಂಡಿ ಎತ್ತರಿಸಬೇಕು. ದುರ್ವಾಸನೆಯ ತಾಣಕ್ಕೆ ಮುಕ್ತಿ ನೀಡಬೇಕು’ ಎನ್ನುತ್ತಾರೆ ನಿವಾಸಿಗಳಾದ ಚಂದ್ರಮ್ಮ, ಅನ್ವರ್ ಹಾಗೂ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT