ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಡಾಡಿ ದನ, ನಾಯಿಗಳ ಹಾವಳಿ ಹೆಚ್ಚಳ!

Last Updated 9 ಅಕ್ಟೋಬರ್ 2017, 6:03 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಕೆಲ ಬಡಾವಣೆಗಳಲ್ಲಿ ಬೀಡಾಡಿ ದನ, ಕರುಗಳು, ನಾಯಿಗಳದ್ದೇ ಕಾರುಬಾರು.! ಬೀದಿ ನಾಯಿಗಳಿಗೆ ರಸ್ತೆಗಳೇ ಆಶ್ರಯ ತಾಣಗಳಾಗಿರುವುದರಿಂದ ನಗರದಲ್ಲಿ ಸಂಚರಿಸುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ನೆಮ್ಮದಿಯಿಂದ ವಾಹನ ಚಾಲನೆ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ನಗರಸಭೆ ಮಾತ್ರ ಈ ವಿಷಯದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

‌ ಪ್ರತಿ ರಸ್ತೆಯಲ್ಲಿಯೂ ಬೀದಿ ನಾಯಿಗಳು ಗುಂಪು ಗುಂಪಾಗಿ ಅಡ್ಡಾಡುತ್ತವೆ, ಕೆಲವೊಮ್ಮೆ ಮಲಗಿರುತ್ತವೆ. ಒಂದೆರಡು ವರ್ಷಗಳಲ್ಲಿ ಹತ್ತಾರು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿವೆ. ಇಂಥ ಬೀದಿ ನಾಯಿಗಳ ಹತೋಟಿಗೆ ಕ್ರಮ ಕೈಗೊಳ್ಳದ ನಗರಸಭೆ ವಿರುದ್ಧ ಗೋಪಾಲಪುರ ಬಡಾವಣೆಯ ಕೆಲ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳು, ನಾಗರಿಕರಿಗೆ ತೊಂದರೆ: ಗೋಪಾಲಪುರ ರಸ್ತೆಯಲ್ಲಿ ನಾಯಿ ಹಾವಳಿ ಮಿತಿ ಮೀರಿದೆ. ವಾಯುವಿಹಾರಕ್ಕಾಗಿ ಹೋಗುವವರಿಗೂ ನಾಯಿ ಕಚ್ಚಿ ತೊಂದರೆಯಾಗಿದೆ. . ಅಲ್ಲದೆ, ಮಕ್ಕಳು ಆಟವಾಡುವ ವೇಳೆ ತೊಂದರೆ ಮಾಡುತ್ತಿವೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳಾದ ರಮಾ, ಸುಧಾ.

ವಾಹನ ಸವಾರರನ್ನೂ ಬಿಟ್ಟಿಲ್ಲ: ‘ಗೋಪಾಲಪುರ ರಸ್ತೆ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ದ್ವಿಚಕ್ರ ವಾಹನ ಸವಾರರನ್ನು ನಾಯಿಗಳು ಅಟ್ಟಿಸಿಕೊಂಡು ಹೋದ ಕಾರಣ ಹಂಪ್ ಎಗರಿಸಲು ಪ್ರಯತ್ನಿಸಿ ಸವಾರರೊಬ್ಬ ಈಚೆಗೆ ಬಿದ್ದು ಗಾಯಗೊಂಡಿದ್ದಾರೆ.

ನಗರಸಭೆಯಿಂದ ಕೆಲ ತಿಂಗಳ ಹಿಂದೆ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಕೈಗೊಳ್ಳಲಾಯಿತು. ಈಗಲೂ ಅದೇ ರೀತಿ ಕ್ರಮ ಕೈಗೊಂಡು ನಾಯಿಗಳನ್ನು ಬೇರೆಡೆ ಸಾಗಿಸಲು ಮುಂದಾಗುವ ಮೂಲಕ ಹಾವಳಿ ತಪ್ಪಿಸಿ, ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಗೋಪಾಲಪುರ ರಸ್ತೆ ನಿವಾಸಿ ಮಧು.

ಕೈಕಾಲುಗಳಿಗೆ ಪೆಟ್ಟು: ‘ನಗರದ ಬುರುಜನ ಹಟ್ಟಿ, ಜೋಗಿಮಟ್ಟಿ ರಸ್ತೆ, ಗುಮಾಸ್ತರ ಕಾಲೊನಿ, ಜೆಸಿಆರ್‌ ಬಡಾವಣೆ, ಐಯುಡಿಪಿ ಬಡಾವಣೆ ಹಾಗೂ ಅನೇಕ ಕಡೆ ಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಚ್ಚಿಸಿಕೊಂಡು ತೊಂದರೆ ಅನುಭವಿಸಿದ್ದೇವೆ. ವಾಹನಕ್ಕೆ ಅಡ್ಡವಾದಾಗ ತಪ್ಪಿಸಲು ಹೋಗಿ ಕೈಕಾಲು ಪೆಟ್ಟು ಮಾಡಿಕೊಂಡಿದ್ದೇವೆ’ ಎಂದು ವಾಹನ ಸವಾರ ರಮೇಶ್ ಅಳಲು ತೋಡಿಕೊಂಡರು.

ಸವಾರರು ಹಾರ್ನ್ ಮಾಡಿದರೂ ಅವು ಜಗ್ಗುವುದಿಲ್ಲ. ಇದರಿಂದ ಸವಾರರು ಮುಂದೆ ಸಾಗಲು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ನಗರಸಭೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಉಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT