ಹಸಿರು ಹೊದ್ದ ಕಪ್ಪತಗುಡ್ಡ

ಬುಧವಾರ, ಜೂನ್ 19, 2019
28 °C

ಹಸಿರು ಹೊದ್ದ ಕಪ್ಪತಗುಡ್ಡ

Published:
Updated:
ಹಸಿರು ಹೊದ್ದ ಕಪ್ಪತಗುಡ್ಡ

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾದ ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಈಗ ಹಸಿರು ಸಂಭ್ರಮ. 80 ಸಾವಿರ ಎಕರೆ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಈ ಗುಡ್ಡ ಹಸಿರು ಹೊನ್ನು ಉಟ್ಟು ಮಿನುಗುತ್ತಿದೆ. ಧಾರಾಕಾರವಾಗಿ ಮಳೆಯಾದ ಬೆನ್ನಲ್ಲೇ ಬೆಟ್ಟದ ಶ್ರೇಣಿಯಲ್ಲಿ ಹಸಿರು ಚಿಗುರೊಡೆದಿದೆ.

ಅರಣ್ಯ ಇಲಾಖೆಯು, ಗುಡ್ಡದಲ್ಲಿ ನೆಡುತೋಪು ನಿರ್ಮಿಸಿ 2.49 ಲಕ್ಷ ಸಸಿಗಳನ್ನು ನೆಟ್ಟಿದೆ. ಗುಡ್ಡದ ತಪ್ಪಲಲ್ಲಿರುವ ಹಲವು ಚೆಕ್‌ಡ್ಯಾಂಗಳು, ಕೆರೆಗಳು ಮಳೆ ನೀರಿನಿಂದ ಭರ್ತಿಯಾಗಿವೆ. ಜಿಲ್ಲೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪರಿಸರ ಸ್ನೇಹಿ ಸಂಘಟನೆಗಳು, ಮಳೆಗಾಲದ ಆರಂಭದಲ್ಲಿ ಲಕ್ಷಾಂತರ ಬೀಜದ ಉಂಡೆಗಳನ್ನು ಗುಡ್ಡದಲ್ಲಿ ಬಿತ್ತಿದ್ದು, ಅವು ಈಗ ಮೊಳಕೆ ಹಂತದಲ್ಲಿವೆ.

ಕಳೆದ ಬೇಸಿಗೆಯಲ್ಲಿ ಮುಂಡರಗಿ ತಾಲ್ಲೂಕಿನ ಬೀಡನಾಳ–ವಿರೂಪಾಪುರ ತಾಂಡಾ ಸೇರಿದಂತೆ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಬೆಂಕಿ ಬಿದ್ದು, ನೂರಾರು ಎಕರೆ ಅರಣ್ಯ ಸುಟ್ಟು ಕರಕಲಾಗಿತ್ತು. ಇದೀಗ ಮತ್ತೆ ಹುಲ್ಲು ಚಿಗುರಿದ್ದು, ಇಡೀ ಬೆಟ್ಟ ಹಸಿರು ಹೊದ್ದು ನಿಂತಿದೆ.

ಸಮಗ್ರ ಅಭಿವೃದ್ಧಿಗೆ ಯೋಜನೆ: ಕಪ್ಪತಗುಡ್ಡದ ಒಟ್ಟು ಭೂಪ್ರದೇಶ 32,346.524 ಹೆಕ್ಟೇರ್‌. ಇದರಲ್ಲಿ 17,872 ಹೆಕ್ಟೇರ್‌ ಪ್ರದೇಶವನ್ನು ಮಾತ್ರ ‘ಸಂರಕ್ಷಿತ ಪ್ರದೇಶ’ ಎಂದು ಸರ್ಕಾರ ಏಪ್ರಿಲ್‌ನಲ್ಲಿ ಮರು ಘೋಷಣೆ ಮಾಡಿದೆ. ‘ಸಂರಕ್ಷಿತ ಪ್ರದೇಶದ ಮಾನ್ಯತೆ ಲಭಿಸಿ ಈಗ ಐದು ತಿಂಗಳಾಗಿದೆ.

ಆದರೆ, ಬಹುವಿಶಾಲವಾಗಿ ಹಬ್ಬಿಕೊಂಡಿರುವ ಈ ಅಪರೂಪದ ಜೀವವೈವಿಧ್ಯ ತಾಣವನ್ನು ಕೇವಲ ಸ್ಥಳೀಯರ ಸಹಭಾಗಿತ್ವದಿಂದ ಸಂರಕ್ಷಿಸುವುದು, ಅಭಿವೃದ್ಧಿಪಡಿಸುವುದು ಆಗದ ಕೆಲಸ. ಇದನ್ನು ಸರ್ಕಾರ ಮಾತ್ರ ನಿಭಾಯಿಸಲು ಸಾಧ್ಯ’ ಎನ್ನುತ್ತಾರೆ ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ.

‘ಈ ನಿಟ್ಟಿನಲ್ಲಿ ಕಪ್ಪತಗುಡ್ಡದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಏನು ಕ್ರಮ ಕೈಗೊಳ್ಳಬೇಕು ಎನ್ನುವುದರ ಕುರಿತು ಚರ್ಚೆ ನಡೆಸಲು ನವೆಂಬರ್‌ ಕೊನೆಯ ವಾರದಲ್ಲಿ ಗದುಗಿನ ತೋಂಟದಾರ್ಯ ಮಠದ ಕಲ್ಯಾಣ ಮಂಟಪದಲ್ಲಿ ಬೃಹತ್‌ ವಿಚಾರ ಸಂಕಿರಣ ನಡೆಯಲಿದೆ. ಅರಣ್ಯ ಇಲಾಖೆ, ಧಾರವಾಡದ ಸಮಾಜ ಪರಿವರ್ತನಾ ಸಮುದಾಯ, ವಿವಿಧ ಸಂಘಟನೆಗಳು, ಪರಿಸರ ತಜ್ಞರು, ಈ ಭಾಗದ ಜನಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಸಭೆಯ ನಿರ್ಧಾರಗಳನ್ನು ಸರ್ಕಾರ ಸಲ್ಲಿಸುತ್ತೇವೆ’ ಎಂದು ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇವಲ ಸಂರಕ್ಷಿತ ಪ್ರದೇಶವಾದರೆ ಮಾತ್ರ ಸಾಲದು, ಕಪ್ಪತಗುಡ್ಡದ ಶಾಶ್ವತ ಉಳಿವಿಗೆ ಸರ್ಕಾರ ಯೋಜನೆ ರೂಪಿಸಬೇಕು. ಗುಡ್ಡದಲ್ಲಿ ಸುರಿಯುವ ಮಳೆನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದನ್ನು ತಡೆದು, ಭೂಮಿಯೊಳಗೆ ಇಂಗಿಸಲು ಅರಣ್ಯ ಇಲಾಖೆ ಇನ್ನೂ ಹೆಚ್ಚಿನ ಇಂಗು ಗುಂಡಿಗಳನ್ನು ನಿರ್ಮಿಸಬೇಕು. ತುಂಗಭದ್ರಾ ನದಿ ನೀರನ್ನು ಬಳಸಿ ಈ ಭಾಗದ 70–80 ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು. ಇಲ್ಲಿನ ಜೀವ ವೈವಿಧ್ಯ ಹಾಳಾಗದಂತೆ ಔಷಧೀಯ ಸಸ್ಯಗಳ ಬಗ್ಗೆ ಸಂಶೋಧನೆಗೆ ಅನುಕೂಲವಾಗುವಂತೆ ಇಲ್ಲಿ ಔಷಧವನ ಸ್ಥಾಪನೆಯಾಗಬೇಕು’ ಎನ್ನುತ್ತಾರೆ ಕಪೋತಗಿರಿ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ.

ಗದಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಅಧ್ಯಕ್ಷತೆಯಲ್ಲಿನ ಕಪ್ಪತಗುಡ್ಡ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸಮಿತಿ, ಗುಡ್ಡದ ಉಳಿವಿಗೆ, ಹಸೀರಿಕರಣಕ್ಕೆ ಸಂಬಂಧಿಸಿ ಈಗಾಗಲೇ ಮೊದಲ ಸುತ್ತಿನ ಸಭೆ ನಡೆಸಿದೆ. ‘ಶೀಘ್ರದಲ್ಲೇ ಎರಡನೆಯ ಸುತ್ತಿನ ಸಭೆ ನಡೆಯಲಿದ್ದು, ಕಪ್ಪತಗುಡ್ಡದ ಉಳಿವಿಗೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಡಿಎಫ್‌ಒ ಪತ್ರಿಕೆಗೆ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry