ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಗಳ ಮೇಲೆ ನಿರೀಕ್ಷೆಗಳ ಭಾರ!

Last Updated 9 ಅಕ್ಟೋಬರ್ 2017, 6:37 IST
ಅಕ್ಷರ ಗಾತ್ರ

ಹಾವೇರಿ: ನಗರದ ಅಭಿವೃದ್ಧಿಗೆ ಕಳೆದ ಕೆಲವು ವರ್ಷಗಳಲ್ಲಿ ಹಲವು ಯೋಜನೆಗಳು ಘೋಷಣೆಯಾದರೂ, ಕಾರ್ಯ ರೂಪಕ್ಕೆ ಬಂದಿಲ್ಲ. ಮೂಲ ಸೌಕರ್ಯಗಳಾದ ನೀರು, ರಸ್ತೆ, ತ್ಯಾಜ್ಯ ವಿಲೇವಾರಿ, ಚರಂಡಿ ಸ್ವಚ್ಛತೆ, ಬೀದಿ ದೀಪದ ಸಮಸ್ಯೆಗಳೇ ಬಗೆಹರಿದಿಲ್ಲ. ಆದರೆ, ವಿವಿಧ ಯೋಜನೆಗಳ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ.

₹50 ಕೋಟಿ: ಹಾವೇರಿ ನಗರದ ಅಭಿವೃದ್ಧಿಗೆ 2016–17ರ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ₹50ಕೋಟಿ ಘೋಷಿಸಲಾಗಿತ್ತು. ಆಬಳಿಕ ಮತ್ತೊಂದು ಬಜೆಟ್‌ ಮಂಡನೆಯಾದರೂ, ನಗರದಲ್ಲಿ ಕಾಮಗಾರಿಗಳು ಆರಂಭಗೊಂಡಿಲ್ಲ.

ಈ ಪೈಕಿ ಇತ್ತೀಚೆಗೆ ₹28.5 ಕೋಟಿ ಕಾಮಗಾರಿಗಳಿಗೆ ಚಾಲನೆ ವೇಳೆ ನಗರಸಭೆ ಅಧ್ಯಕ್ಷರ ವಾರ್ಡ್‌ನಲ್ಲೇ ಪ್ರತಿಭಟನೆ ವ್ಯಕ್ತವಾಗಿತ್ತು. ನಗರಸಭೆ ಸದಸ್ಯರ ನಿರ್ಲಕ್ಷ್ಯ, ಅನಾಸಕ್ತಿ ವಿರುದ್ಧ ಸಿಟ್ಟು ಹಾಗೂ ಯೋಜನೆಗಳ ಘೋಷಣೆಗಳು ಅನುಷ್ಠಾನಕ್ಕೆ ಬಂದಿಲ್ಲ ಎನ್ನುವುದಕ್ಕೆ ಅದು ನಿದರ್ಶನದಂತಿತ್ತು.

ನೀರು: ನಗರವು ಅತಿಹೆಚ್ಚು ಜಲಮೂಲವನ್ನು ಹೊಂದಿದ್ದರೂ, ಕನಿಷ್ಠ ವಾರಕ್ಕೊಮ್ಮೆ ನೀರು ಪೂರೈಸಲು ಸಾಧ್ಯಗಳನ್ನು ನೀಡುವ ನಗರಸಭೆ, ಶಾಶ್ವತ ಪರಿಹಾರ ಕೈಗೊಂಡಿಲ್ಲ. 24x7 ಕುಡಿಯುವ ನೀರು ಸರಬರಾಜು ಯೋಜನೆಗೆ ಮುಖ್ಯಮಂತ್ರಿಗಳೇ ಶಂಕುಸ್ಥಾಪನೆ ನೆರವೇರಿಸಿ ವರ್ಷ ಕಳೆದಿದೆ. ಕಾಮಗಾರಿ ವೇಗವಾಗಿ ನಡೆದಿದ್ದರೂ, ಇನ್ನೂ ನೀರು ಪೂರೈಸಲು ನಗರಸಭೆಗೆ ಸಾಧ್ಯವಾಗಿಲ್ಲ.

ನಗರೋತ್ಥಾನದ ₹35 ಕೋಟಿ: ನಗರೋತ್ಥಾನದಡಿ  ₹35 ಕೋಟಿ ಮಂಜೂರಾಗಿದೆ ಎಂಬ ಹೇಳಿಕೆಗಳು ಪದೇ ಪದೇ ಕೇಳಿಬಂದಿವೆ. ಯೋಜನೆ ಫಲ ಮಾತ್ರ ಜನರನ್ನು ತಲುಪಿಲ್ಲ. ಒಳಚರಂಡಿ ಕಾಮಗಾರಿಗಳು ವೇಗ ಪಡೆದಿವೆ. ಆದರೆ, ಕಾಮಗಾರಿ ನಡೆದ ಸ್ಥಳದಲ್ಲಿ ಸಮರ್ಪಕವಾಗಿ ರಸ್ತೆ ದುರಸ್ತಿ ಮಾಡದ ಪರಿಣಾಮ ಹಲವು ಅವಘಡಗಳು ನಡೆಯುತ್ತಿವೆ.

ಶೌಚಾಲಯಗಳ ನಿರ್ಮಾಣ: ಕನಿಷ್ಠ ಶೌಚಾಲಯವೂ ನಗರದಲ್ಲಿ ಇಲ್ಲ. ಐದು ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಅವುಗಳು ವರ್ಷ ಕಳೆದರೂ ಜನರ ಉಪಯೋಗಕ್ಕೆ ದಕ್ಕಿಲ್ಲ. ಜನರಿಗೆ ಹಾದಿ ಬೀದಿಯೆ ಗತಿಯಾದರೆ, 31 ಪುರಪಿತೃಗಳೇ ಇರುವ ನಗರಸಭೆಯ ಶೌಚಾಲಯಕ್ಕೇ ಹೋಗಲು ಸಾಧ್ಯವಿಲ್ಲದ ಸ್ಥಿತಿ ಇದೆ.

ಎಸ್‌ಎಫ್‌ಸಿ ಕಾಮಗಾರಿಗಳು: ನಗರಸಭೆಯು ₹36.91 ಕೋಟಿ ಬಜೆಟ್ ಹೊಂದಿದೆ. ರಾಜ್ಯ ಹಣಕಾಸು ಆಯೋಗ (ಎಸ್ಎಫ್‌ಸಿ), ಕರ, ಶುಲ್ಕಗಳು ಮತ್ತಿತರ ಮೂಲಗಳಿಂದ ಆದಾಯ ಬರುತ್ತಿದೆ. ಈ ಪೈಕಿಯೂ ಯೋಜನೆಗಳನ್ನು ರೂಪಿಸಲಾಗುತ್ತದೆ. ಆದರೆ, ಹೇಳಿಕೊಳ್ಳುವಂಥ ಯಾವುದೇ ಮಹತ್ತರ ಯೋಜನೆ  ಜಾರಿಗೊಂಡಿಲ್ಲ.

ಹೆಗ್ಗೇರಿಗೆ ನೀರು: ಹೆಗ್ಗೇರಿ ಕೆರೆ ಭರ್ತಿಯಾದರೆ, ನಗರದ ಅಂತರ್ಜಲ ಹೆಚ್ಚುವ ಕಾರಣ ಶೇ 50ರಷ್ಟು ನೀರಿನ ಬವಣೆ ನೀಗುತ್ತದೆ. ‘ಹೆಗ್ಗೇರಿಗೆ ನೀರು’ ಎಂಬುದು ಸರ್ವ ಪಕ್ಷಗಳ ಸಾರ್ವಕಾಲಿಕ ಘೋಷಣೆ. ತುಂಗಭದ್ರಾ ಮತ್ತು ವರದಾ ನದಿಯಲ್ಲಿ ಹರಿವಿದ್ದರೂ, ಹೆಗ್ಗೇರಿ ಕೆರೆ ತುಂಬಿಸಲು ಸಾಧ್ಯವಾಗಲೇ ಇಲ್ಲ.

ಕೆರೆಗಳ ಅಭಿವೃದ್ಧಿ: ನಗರದಲ್ಲಿ ಆರು ಕೆರೆಗಳಿವೆ. ಈ ಕೆರೆಗಳ ಒತ್ತುವರಿಯನ್ನು ತೆರವು ಮಾಡಿಸಲೂ ಸಾಧ್ಯವಾಗಿಲ್ಲ. ಒತ್ತುವರಿಯ ಪರಿಣಾಮ ಕೆರೆಗಳು ಕೆಟ್ಟು ಹೋಗಿವೆ. ನೀರು ಬಳಕೆಗೆ ಅಸಾಧ್ಯವಾಗಿ, ರೋಗ–ರುಜಿನಗಳ ತಾಣವಾಗಿವೆ. ‘ನಗರ ಅಭಿವೃದ್ಧಿಯ ವಿವಿಧ ಯೋಜನೆಗಳಿಗೆ ಮಂಜೂರಾತಿ ದೊರೆತಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಭರವಸೆ ನೀಡುತ್ತಾರೆ.

‘ನಗರಸಭೆ ಸದಸ್ಯರ ವಿರುದ್ಧಜನರ ಅಸಹನೆ ಕಟ್ಟೆಯೊಡೆದಿದೆ. ಅಭಿವೃದ್ಧಿಗೆ ಅಡ್ಡಗಾಲು ಹಾಕುವ ‌ ಮುಖಂಡರನ್ನು ಹೊರಗಿಟ್ಟು, ಅಧಿಕಾರಿಗಳಿಗೆ ಪೂರ್ಣಾಧಿಕಾರ ನೀಡುವ ಮೂಲಕ ಸಚಿವ ರುದ್ರಪ್ಪ ಲಮಾಣಿ ಅವರು ಅಭಿವೃದ್ಧಿ ಪರ್ವ ತೋರಿಸಬೇಕು. ಜಿಲ್ಲಾಡಳಿತ, ಪೊಲೀಸರ ಬೆಂಬಲ ಪಡೆದು ನಿರ್ದಾಕ್ಷಿಣ್ಯ ಕ್ರಮದ ಮೂಲಕ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.

ಆಗ ಜನತೆಯೇ ಸಚಿವರನ್ನು ಬೆಂಬಲಿಸುತ್ತಾರೆ. ಲೆಕ್ಕಕ್ಕುಂಟು ಉಪಯೋಗಕ್ಕಿಲ್ಲದ ಜನಪ್ರತಿನಿಧಿ, ಮುಖಂಡರ ಮಾತು ಕೇಳುತ್ತಾ ಕೂರಲು ಸಚಿವರಿಗೂ ಇನ್ನು ಉಳಿದಿರುವುದು ಕೇವಲ ಅರ್ಧ ವರ್ಷ ಅಷ್ಟೇ’ ಎನ್ನುತ್ತಾರೆ ಬಸವೇಶ್ವರ ನಗರದ ನಿವಾಸಿ ಶಿವಯೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT