ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳುವರಿ ಕುಂಠಿತ ಭೀತಿ: ತತ್ತರಿಸಿದ ಬೆಳೆಗಾರ

Last Updated 9 ಅಕ್ಟೋಬರ್ 2017, 6:44 IST
ಅಕ್ಷರ ಗಾತ್ರ

ವಾಡಿ: ಬಾರದ ಮಳೆಯಿಂದ ಅನಾವೃಷ್ಟಿಗೆ ಸಿಲುಕಿ ತತ್ತರಿಸಿ ಹೋಗಿದ್ದ ತೊಗರಿ ಬೆಳೆಗಾರರು, ಈಗ ಸತತ ಮಳೆಯಿಂದ ಅನಾವೃಷ್ಟಿಗೆ ಸಿಲುಕಿ ಕಂಗೆಟ್ಟು ಹೋಗಿದ್ದಾರೆ.
ಒಂದು ವಾರದಿಂದ ಸುರಿಯುತ್ತಿರುವ ಸತತ ಮಳೆ, ರೈತರ ನಿದ್ದೆಗೆಡಿಸಿದೆ.

ನಿರಂತರ ಮಳೆಯಿಂದ ತೊಗರಿ ಕಣಜದಲ್ಲಿ ಹಾಹಾಕಾರ ಪ್ರಾರಂಭವಾಗಿದ್ದು, ರೈತರ ಮೊಗದಲ್ಲಿ ಕರಿಛಾಯೆ ಆವರಿಸಿದೆ. ಸಮೃದ್ಧವಾಗಿ ಬೆಳೆದು ನಿಂತ ತೊಗರಿ ಹೊಲಗಳಲ್ಲಿ ಮಳೆ ನೀರು ನಿಂತಿದ್ದರಿಂದ ಹಸಿರು ಫಸಲು ಈಗ ಹಳದಿ ಬಣ್ಣಕ್ಕೆ ತಿರುಗಿ ಸಂಪೂರ್ಣ ಬೆಳೆ ನೆಟೆ ರೋಗಕ್ಕೆ ತುತ್ತಾಗುತ್ತಿದೆ.

ಈಗ ತೊಗರಿ ಬೆಳೆಯು, ಹೂವಾಡುವ ಹಂತದಲ್ಲಿದೆ. ಆದರೆ, ಬೆಳೆಯ ಸುತ್ತ ನೆಟೆ ರೋಗ ಕಾಣಿಸುತ್ತಿದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದರಿಂದ ಇಡೀ ಗಿಡಕ್ಕೆ ಇದು ಮಾರಕ. ಫಸಲು ಹಸಿರಾಗಿದ್ದರೂ ನೆಟೆ ರೋಗಕ್ಕೆ ತುತ್ತಾದರೆ ಗಿಡ ಹಸಿರಾಗಿರುತ್ತದೆ. ಆದರೆ, ಕಾಯಿ ಮಾತ್ರ ಕಟ್ಟುವುದಿಲ್ಲ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ.

ಕುಂದನೂರು, ಚಾಮನೂರು, ಕಡಬೂರು, ಕೊಂಚೂರು, ರಾವೂರು, ಬಳವಡ್ಗಿ, ನಾಲವಾರ, ಲಾಡ್ಲಾಪುರ, ಹಲಕರ್ಟಿ, ಕೊಲ್ಲೂರು, ತರಕಸಪೇಟ್, ಹಣ್ಣೀಕೇರಾ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ತೊಗರಿ ಬೆಳೆ, ಸತತ ವರ್ಷಧಾರೆಗೆ ಹಾಳಾಗಿ ಹೋಗುತ್ತಿವೆ. ಇದರಿಂದ ತೊಗರಿ ಬೆಳೆಯ ಇಳುವರಿಯಲ್ಲಿ ಭಾರಿ ಪ್ರಮಾಣದ ಕುಂಠಿತವಾಗುವ ಲಕ್ಷಣಗಳು ದಟ್ಟವಾಗಿವೆ.

‘ಸತತವಾಗಿ ಸುರಿಯುತ್ತಿರುವ ಮಳೆಯು, ನಮ್ಮ 16 ಎಕರೆ ತೊಗರಿ ಬೆಳೆಗೆ ಮಾರಕವಾಗುತ್ತಿದೆ. ತೊಗರಿ ಬೆಳೆಯಲ್ಲಿ ನೀರು ನಿಂತು ಬೆಳೆಗಳೆಲ್ಲಾ ಸೊರಗಿ ಹೋಗುತ್ತಿದೆ. ಮೊದಲು ಮಳೆ ಬರದೇ ತೊಗರಿ ಸರಿಯಾಗಿ ಬೆಳೆಯಲಿಲ್ಲ. ಈಗ ಮಳೆ ಬಂದು ಬೆಳೆದು ನಿಂತ ತೊಗರಿ ಬೆಳೆಯನ್ನು ಸೊರಗುತ್ತಿದೆ.

ಹಣ ಕೊಟ್ಟು ಜಮೀನು ಹಾಕಿಕೊಂಡಿದ್ದೇವೆ. ದುಬಾರಿ ಬೆಲೆಯ ಬೀಜ ರಸಗೊಬ್ಬರ ಹಾಕಿದ್ದೇವೆ. ಈಗ ಮಳೆ ಬಂದು ನಮ್ಮ ಬೆಳೆ ಹಾಳಾಗಿ ಹೋಗುತ್ತಿದೆ’ ಎನ್ನುತ್ತಾರೆ ಹಲಕರ್ಟಿಯ ರೈತರಾದ ನಾಗಪ್ಪ ಇಸಬಾ ಹಾಗೂ ದೊಡ್ಡಪ್ಪ ಹಲಕರ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT