ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಶಾಪವಾದ ರೈಲ್ವೆ ಕೆಳ ಸೇತುವೆ

Last Updated 9 ಅಕ್ಟೋಬರ್ 2017, 6:55 IST
ಅಕ್ಷರ ಗಾತ್ರ

ಕೋಲಾರ: ನಗರದ ಖಾದ್ರಿಪುರ ರೈಲ್ವೆ ಕೆಳ ಸೇತುವೆಯು (ಅಂಡರ್‌ಪಾಸ್‌) ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳಿಗೆ ಶಾಪವಾಗಿ ಪರಿಣಮಿಸಿದೆ. ಜನರ ಅನುಕೂಲಕ್ಕಾಗಿ ನಿರ್ಮಿಸಿದ ಈ ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ.

ಸಂಸದ ಕೆ.ಎಚ್‌.ಮುನಿಯಪ್ಪ ಅವರು ರೈಲ್ವೆ ಸಚಿವರಾಗಿದ್ದಾಗ ಖಾದ್ರಿಪುರ ಹಾಗೂ ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಅಂಡರ್‌ಪಾಸ್‌ ನಿರ್ಮಿಸಲಾಯಿತು. ಆದರೆ, ಈ ಕೆಳ ಸೇತುವೆಯಿಂದ ಅನುಕೂಲಕ್ಕಿಂತ ಸಮಸ್ಯೆಯೇ ಹೆಚ್ಚಿದೆ.

ಖಾದ್ರಿಪುರ, ಹೊಸ ಬಡಾವಣೆ, ಕೇಶವನಗರ ಹಾಗೂ ಅಕ್ಕಪಕ್ಕದ ಬಡಾವಣೆಗಳ ಜನ ಈ ಅಂಡರ್‌ಪಾಸ್‌ ಮೂಲಕವೇ ನಗರ ಭಾಗಕ್ಕೆ ಹೋಗಿ ಬರಬೇಕು. ಖಾದ್ರಿಪುರದಲ್ಲಿ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಖಾಸಗಿ ಶಾಲೆಯಿದ್ದು, ಈ ಭಾಗದಲ್ಲಿ ಶಾಲಾ ವಾಹನಗಳು ಮತ್ತು ವಿದ್ಯಾರ್ಥಿಗಳ ಓಡಾಟ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

ಕೆಳ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಪ್ರತಿ ಬಾರಿ ಮಳೆ ಬಂದಾಗಲೂ ಅಂಡರ್‌ಪಾಸ್‌ನಲ್ಲಿ ನೀರು ಕೆರೆಯಂತೆ ನಿಲ್ಲುತ್ತಿದೆ. ನಗರದಲ್ಲಿ ಕಳೆದೊಂದು ತಿಂಗಳಿಂದ ಮಳೆಯಾಗುತ್ತಿರುವುದರಿಂದ ಕೆಳ ಸೇತುವೆಯಲ್ಲಿ ನೀರು ನಿಂತು ಬಡಾವಣೆಗಳಿಗೆ ಸಂಪರ್ಕ ಕಡಿದು ಹೋಗಿದೆ.

ಹಳಿ ದಾಟುವ ಸಮಸ್ಯೆ: ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿರುವುದರಿಂದ ವಾಹನ ಸವಾರರು ಹಾಗೂ ಸ್ಥಳೀಯರು ರೈಲು ಹಳಿಗೆ ಸಮನಾಂತರವಾಗಿ ಹಾದು ಹೋಗಿರುವ ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಕೆಲ ಸ್ಥಳೀಯರು ಅಂಡರ್‌ಪಾಸ್‌ ಮೇಲೆ ಹಳಿ ದಾಟಿ ಹೋಗುತ್ತಿದ್ದು, ರೈಲು ಸಂಚಾರದ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಹಳಿ ದಾಟುವ ಯತ್ನದಲ್ಲಿ ಯುವಕನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿದ್ದು, ಪದೇ ಪದೇ ಈ ರೀತಿಯ ಅವಘಡಗಳು ನಡೆಯುತ್ತಿವೆ.

ರಸ್ತೆ ಅಗೆತ: ರೈಲು ಹಳಿಯ ಪಕ್ಕದ ರಸ್ತೆಯು ಮಣ್ಣಿನ ರಸ್ತೆಯಾಗಿರುವ ಕಾರಣ ಮಳೆಯಿಂದ ರಾಡಿಯಾಗಿದೆ. ಈ ನಡುವೆ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲ್ಯೂಎಸ್‌ಡಿಬಿ) ಯುಜಿಡಿ ಕಾಮಗಾರಿಗಾಗಿ ಈ ರಸ್ತೆಯನ್ನು ಅಗೆದಿದೆ. ಆಗಸ್ಟ್‌ನಲ್ಲಿ ಆರಂಭವಾದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಕಾಮಗಾರಿಯಿಂದ ರಸ್ತೆಯ ಚಿತ್ರಣವೇ ಬದಲಾಗಿದೆ.

ಮಳೆಯಿಂದ ರಸ್ತೆಯು ಕೆಸರು ಗದ್ದೆಯಂತಾಗಿದ್ದು, ಈ ಭಾಗದಲ್ಲಿ ನಡೆದು ಹೋಗುವುದು ಸಹ ಕಷ್ಟವಾಗಿದೆ. ಕೆಸರಿನ ನಡುವೆ ವಾಹನಗಳು ನಿಧಾನ ಗತಿಯಲ್ಲಿ ಸಾಗುವ ದೃಶ್ಯ ಪ್ರತಿನಿತ್ಯ ಕಂಡುಬರುತ್ತದೆ. ವಾಹನ ಸವಾರರು ರಸ್ತೆಯಲ್ಲಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.

ಸ್ಥಳ ಪರಿಶೀಲನೆ: ಅಂಡರ್‌ಪಾಸ್‌ನ ಅವ್ಯವಸ್ಥೆ ಸಂಬಂಧ ಸ್ಥಳೀಯರು ನಗರಸಭೆ, ರೈಲ್ವೆ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಈಗಾಗಲೇ ಹಲವು ಬಾರಿ ದೂರು ಕೊಟ್ಟಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ನಗರಸಭೆ, ಲೋಕೋಪಯೋಗಿ ಹಾಗೂ ರೈಲ್ವೆ ಸಚಿವಾಲಯದ ಅಧಿಕಾರಿಗಳು ಹಲವು ಬಾರಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಆಗೊಮ್ಮೆ ಈಗೊಮ್ಮೆ ನೀರಿನ ಪಂಪ್‌ನಿಂದ ಕೆಳ ಸೇತುವೆಯಲ್ಲಿನ ಮಳೆ ನೀರನ್ನು ಹೊರ ತೆಗೆಯಲಾಗುತ್ತಿದೆ. ಆಗ ಮಾತ್ರ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರವಾಗುತ್ತದೆ. ಮತ್ತೆ ಮಳೆ ಬಂದರೆ ಸಮಸ್ಯೆ ಮರುಕಳಿಸುತ್ತಿದೆ. ಹೀಗಾಗಿ ಅಂಡರ್‌ಪಾಸ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT