ಮಳೆಯ ಕೊರತೆಯಲ್ಲೂ ಉತ್ತಮ ನವಣಿ ಇಳುವರಿ

ಸೋಮವಾರ, ಜೂನ್ 24, 2019
29 °C

ಮಳೆಯ ಕೊರತೆಯಲ್ಲೂ ಉತ್ತಮ ನವಣಿ ಇಳುವರಿ

Published:
Updated:
ಮಳೆಯ ಕೊರತೆಯಲ್ಲೂ ಉತ್ತಮ ನವಣಿ ಇಳುವರಿ

ಹನುಮಸಾಗರ: ‘ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿತ್ತನೆಯಾಗಿದ್ದ ನವಣಿ ಬೆಳೆ ಮಾತ್ರ ಉತ್ತಮ ಇಳುವರಿ ಬಂದಿದ್ದು, ರೈತರು ಸಂತಸದಲ್ಲಿದ್ದಾರೆ’ ಎಂದು ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದ ಮುಂದಾಳು ಡಾ.ಎಮ್‌.ಬಿ.ಪಾಟೀಲ ಹೇಳಿದರು.

ಸಮೀಪದ ಮಾಲಗಿತ್ತಿ ಗ್ರಾಮದ ಸೋಮಪ್ಪ ತೆವರನ್ನವರ ಅವರ ಜಮೀನಿನಲ್ಲಿ ಈಚೆಗೆ ನಡೆದ ನವಣೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಒಟ್ಟು 7,626 ಎಕರೆ ಪ್ರದೇಶದಲ್ಲಿ ನವಣೆ ಬಿತ್ತನೆಯಾಗಿದೆ.

ಇದರಲ್ಲಿ ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದಿಂದ ನೂರು ಎಕರೆ ನವಣಿ ಬೆಳೆಯಲಾಗುತ್ತಿದ್ದು, ಮಾಲಗಿತ್ತಿ ಗ್ರಾಮದಲ್ಲಿ ಜಿಲ್ಲಾ ಕೃಷಿ ಸಂಶೋಧನಾ ಕೇಂದ್ರದಿಂದ ಆಸಕ್ತ ರೈತರಿಗಾಗಿ ವಿತರಿಸಲಾಗಿದ್ದ ಡಿಎಚ್‌ಎಫ್‌ಟಿ–109–3 ತಳಿಯನ್ನು ಸುಮಾರು 50 ಎಕರೆಯಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಕಡಿಮೆ ತೇವಾಂಶದಲ್ಲಿಯೇ ಇಳುವರಿ ಕೊಡುವ ಬರ ನಿರೋಧಕ ಬೆಳೆಯಿಂದ ಉತ್ತಮ ಫಸಲು ನಿರೀಕ್ಷಿಸಬಹುದಾಗಿದೆ’ ಎಂದರು.

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ಮಾತನಾಡಿ, ‘ನವಣೆ ಒಂದು ಸತ್ವಯುತ ಕಿರುಧಾನ್ಯವಾಗಿದ್ದು, ಇದು ಮೂರು ತಿಂಗಳಲ್ಲಿ ಬರುವ ಅಲ್ಪಾವಧಿ ಬೆಳೆಯಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಆಳದ, ಹೆಚ್ಚು ಫಲವತ್ತತೆಯಿಲ್ಲದ ಮಣ್ಣಿನಲ್ಲಿ ಮತ್ತು ಗುಡ್ಡ-ಗಾಡು ಪ್ರದೇಶಗಳಲ್ಲಿ ಸಹ, ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಧಾನ್ಯವಾಗಿದೆ. ಇದಕ್ಕೆ ರಸಗೊಬ್ಬರ ಅಗತ್ಯವೂ ಕಡಿಮೆಯಾಗಿದ್ದು, ಕೊಟ್ಟಿಗೆ ಗೊಬ್ಬರದಲ್ಲಿಯೇ ಬೆಳೆಯುತ್ತದೆ ಎಂಬುದಕ್ಕೆ ಈ ಬಾರಿ ಭರಪೂರ ಪ್ರಮಾಣದಲ್ಲಿ ನವಣಿ ಇಳುವರಿ ಬಂದಿದ್ದೆ ಸಾಕ್ಷಿ’ ಎಂದರು.

ರೈತ ಸೋಮಪ್ಪ ತೆವರನ್ನವರ ಮಾತನಾಡಿ, ‘ಮೆಕ್ಕೆಜೋಳದ ಬೆಳೆಯ ಬದಲು ಎರಡೂವರೆ ಎಕರೆಯಲ್ಲಿ ಬಿತ್ತನೆ ಮಾಡಲಾಗಿದ್ದ ನವಣೆ ಸುಮಾರು 11ಕ್ವಿಂಟಲ್‌ ಇಳುವರಿ ಬರುವ ಸಾಧ್ಯತೆ ಇದೆ. ಅಲ್ಲದೆ ನವಣೆಯ ಜತೆಗೆ ಸಾವೆ, ಕೂರ್ಲೆ, ಹಾರ್ಕಗಳಂತಹ ಸಿರಿಧಾನ್ಯಗಳು ಉತ್ತಮವಾಗಿ ಬೆಳೆದಿವೆ’ ಎಂದು ಸಂತಸ ಹಂಚಿಕೊಂಡರು.

ಕೃಷಿ ಅಧಿಕಾರಿ ಶಿವಾನಂದ ಮಾಳಗಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಜಿಲ್ಲಾ ಸಂಚಾಲಕ ಎಸ್‌.ಬಿ.ಕೋಣಿ, ತಾಲ್ಲೂಕು ಸಂಚಾಲಕ ಸದಸ್ಯ ರಾವುಸಾಹೇಬ್‌ ದೇಸಾಯಿ, ಪ್ರಮುಖರಾದ ದೇವೇಂದ್ರಪ್ಪ ತಳ್ಳಿಹಾಳ, ಸಂಗಮೇಶ ಅಂಗಡಿ, ಅನುವುಗಾರ ಚಿನ್ನಪ್ಪ ಗುಜಮಾಗಡಿ, ಕೆಂಚಪ್ಪ ವಡ್ಡರ, ಹೊನಕೇರಪ್ಪ ಬಸಾಪೂರ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry