ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಕುಸಿಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಇಲಾಖೆ

Last Updated 9 ಅಕ್ಟೋಬರ್ 2017, 8:24 IST
ಅಕ್ಷರ ಗಾತ್ರ

ಕೆರಗೋಡು: ಸಮೀಪದ ಹೊಡಾಘಟ್ಟ ಗ್ರಾಮದ ಬಳಿ ಸಾಗುವಾಗ ಮಂಡ್ಯ– ಬೆಸಗರಹಳ್ಳಿ ಮುಖ್ಯ ರಸ್ತೆಯಲ್ಲಿ ಸಿಗುವ ಕರಲು ಹಳ್ಳದ ಸೇತುವೆ ಕುಸಿಯಲಾರಂಭಿಸಿದೆ.
ಕಳೆದ ಎರಡು ವರ್ಷಗಳ ಹಿಂದೆ ಹದಗೆಟ್ಟಿದ್ದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು.

ಆ ಸಂದರ್ಭದಲ್ಲಿ ಸೇತುವೆ ಶಿಥಿಲಗೊಂಡ ಬಗ್ಗೆ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಎಚ್ಚರಿಸಿದ್ದರು. ದುರಸ್ತಿ ಮಾಡುವಂತೆ ಕೇಳಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇನ್ನೂ ಸೇತುವೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಹಳ್ಳದ ಸೇತುವೆಯ ಮಣ್ಣು ಭಾಗಶಃ ಕುಸಿದಿದೆ. ರಸ್ತೆಯ ಮೇಲ್ಭಾಗದಲ್ಲೇ ಕುಸಿಯುತ್ತಿರುವ ದೃಶ್ಯ ಕಾಣುತ್ತಿದೆ. ಇದು ಭಾರೀ ಪ್ರಮಾಣದ ಅನಾಹುತಕ್ಕೆ ಕಾರಣವಾಗಲಿದೆ. ಈ ಮಾರ್ಗವು ಮಂಡ್ಯ, ಬೆಸಗರಹಳ್ಳಿ ಮತ್ತು ಮದ್ದೂರು ಕಡೆಗೆ ಸಂಚರಿಸುವ ಪ್ರಮುಖ ಜಿಲ್ಲಾ ಹೆದ್ದಾರಿಯಾಗಿದೆ.

ಹಳ್ಳವು ಸುಮಾರು ಇಪ್ಪತ್ತೈದು ಅಡಿ ಆಳ ಹೊಂದಿದ್ದು ಕಂದಕದ ರೂಪದಲ್ಲಿದೆ. ಸೇತುವೆ ಬಳಿ ಗಿಡಗಂಟಿಗಳು ಬೆಳೆದು ಬಿರುಕು ಕಾಣಿಸುವುದೇ ಇಲ್ಲ. ಜತೆಗೆ ರಸ್ತೆಯು ಈ ಭಾಗದಲ್ಲಿ ತಿರುವಿನಿಂದ ಕೂಡಿದೆ. ಸೂಚನಾ ಫಲಕವೂ ಇಲ್ಲ.

ಕೆಲ ದಿನಗಳ ಹಿಂದೆ ಬೈಕ್‌ ಸವಾರರು ಇದೇ ಸ್ಥಳದಲ್ಲಿ ಸೇತುವೆ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಇಂಥ ಅನೇಕ ಘಟನೆಗಳು ನಡೆದಿವೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸೇತುವೆ ದುರಸ್ತಿಗೊಳಿಸಬೇಕು ಎಂದು ಗ್ರಾಮಪಂಚಾಯಿತಿ ಸದಸ್ಯ ಗಣೇಶ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT