ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಹಂತದ ಹಸಿರೀಕರಣಕ್ಕೆ ಚಾಲನೆ

Last Updated 9 ಅಕ್ಟೋಬರ್ 2017, 8:38 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ತನ್ನ ಹಸಿರುವಲಯ ನಿರ್ಮಾಣದ ಭಾಗವಾಗಿ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಕೈಗೆತ್ತಿಕೊಂಡಿರುವ ಮೊದಲನೇ ಹಂತದ ಹಸಿರೀಕರಣ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದ ಹಸಿರೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭಾನುವಾರ ಚಾಲನೆ ನೀಡಿದರು.

ಮೊದಲ ಹಂತದ ಹಸಿರೀಕರಣ ಯೋಜನೆಯಲ್ಲಿ ನಿಸರ್ಗಧಾಮದ ಒಳಗಿನ 20 ಎಕರೆ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಗಿದೆ. ಇದಕ್ಕಾಗಿ ಎಂಆರ್‌ಪಿಎಲ್‌ ₹ 30 ಲಕ್ಷ ನೀಡಿದೆ. ಈ ಪ್ರದೇಶದಲ್ಲಿ ಪಶ್ಚಿಮ ಘಟ್ಟದಲ್ಲಿ ಬೆಳೆಯುವ 52 ಜಾತಿಯ 2,000 ಸಸಿಗಳು, 50 ಜಾತಿಯ 1,000 ಔಷಧೀಯ ಸಸಿಗಳು ಮತ್ತು 100 ಜಲ ಸಸ್ಯಗಳನ್ನು ಬೆಳೆಸಲಾಗಿದೆ.

ಹೈಬ್ರಿಡ್‌ ನೇಪಿಯರ್‌ ತಳಿಯ 15,000 ಹುಲ್ಲಿನ ಸಸಿಗಳನ್ನು ನಾಟಿ ಮಾಡಲಾಗಿದೆ. ಇದರಿಂದ ನಿಸರ್ಗಧಾಮದ ಪ್ರಾಣಿಗಳಿಗೆ ಸಾಕಾಗುವಷ್ಟು ಹುಲ್ಲು ಉತ್ಪಾದನೆಯಾಗುತ್ತಿದೆ. ಚಿಟ್ಟೆ ಪಾರ್ಕ್‌ ಅಭಿವೃದ್ಧಿಪಡಿಸುವ ಉದ್ದೇಶದಿಂದ 150 ದುಂಬಿಗಳನ್ನು ಆಕರ್ಷಿಸುವ ಮತ್ತು ಮಕರಂದ ಸಸ್ಯಗಳನ್ನು ನೆಡಲಾಗಿದೆ.

ಎರಡನೇ ಹಂತಕ್ಕೆ ಚಾಲನೆ: ಎರಡನೇ ಹಂತದ ಹಸಿರೀಕರಣ ಯೋಜನೆಯಡಿ ನಿಸರ್ಗಧಾಮದ ಒಳಗಿನ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದಿರುವ ಅಕೇಶಿಯಾ ಗಿಡಿಗಳನ್ನು ಕಟಾವು ಮಾಡಿ ಪಶ್ಚಿಮ ಘಟ್ಟ ಪ್ರದೇಶದ ಸಸ್ಯಗಳು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತದೆ. ಒಟ್ಟು 30 ಎಕರೆ ವಿಸ್ತೀರ್ಣದಲ್ಲಿ ಈ ರೀತಿ ಗಿಡಗಳನ್ನು ನೆಡಲಾಗುತ್ತದೆ. ಇದಕ್ಕಾಗಿ ಎಂಆರ್‌ಪಿಎಲ್‌ ₹ 40 ಲಕ್ಷ ನೀಡುತ್ತಿದೆ.

‘ಎಂಆರ್‌ಪಿಎಲ್‌ ಹಸಿರು ವಲಯ ಯೋಜನೆಯಡಿ ನಿಸರ್ಗಧಾಮದ ಒಳಭಾಗದಲ್ಲಿ ಪಶ್ಚಿಮಘಟ್ಟದಲ್ಲಿ ಬೆಳೆಯುವ ಸಸ್ಯಗಳನ್ನು ನೆಡಲಾಗುತ್ತಿದೆ. ಹಂತ ಹಂತವಾಗಿ ಇಲ್ಲಿರುವ ಅಕೇಶಿಯಾ ಮರಗಳನ್ನು ತೆಗೆದು ಪ್ರಾಕೃತಿಕ ಅರಣ್ಯ ನಿರ್ಮಾಣ ಮಾಡಲಾಗುವುದು. ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆಯ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದಿದ್ದೇವೆ. ಎರಡನೇ ಹಂತಕ್ಕೆ ಹಾಸನದಿಂದ ಸಸಿಗಳನ್ನು ತರಿಸಲಾಗುವುದು’ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್‌.ಜಯಪ್ರಕಾಶ್ ಭಂಡಾರಿ ತಿಳಿಸಿದರು.

‘ನಿಸರ್ಗಧಾಮದಲ್ಲಿರುವ 1,200 ಪ್ರಾಣಿಗಳಲ್ಲಿ 200ಕ್ಕೂ ಹೆಚ್ಚು ಪ್ರಾಣಿಗಳು ಹುಲ್ಲು ತಿಂದು ಜೀವಿಸುವಂತಹವು. ಮೊದಲು ಅವುಗಳಿಗೆ ಆಹಾರ ಪೂರೈಸುವುದು ಬಹಳ ಕಷ್ಟವಾಗಿತ್ತು. ಈಗ ನೇಪಿಯರ್‌ ತಳಿಯ ಹುಲ್ಲು ಬೆಳೆದಿರುವುದರಿಂದ ಸಮಸ್ಯೆಗೆ ಪರಿಹಾರ ದೊರೆತಿದೆ. ಇನ್ನೂ ಹೆಚ್ಚಿನ ಹುಲ್ಲು ಬೆಳೆದು, ಸ್ಥಳೀಯ ರೈತರಿಗೆ ರಿಯಾಯ್ತಿ ದರದಲ್ಲಿ ಒದಗಿಸುವ ಯೋಚನೆ ಇದೆ. ಹಣ್ಣು ತಿನ್ನುವ ಪ್ರಾಣಿಗಳಿಗೆ ಆಹಾರ ಪೂರೈಸಲು ಬಾಳೆ, ಅನಾನಸ್‌ ನಾಟಿ ಮಾಡಲಾಗಿದೆ. ಕಬ್ಬು, ಗೆಡ್ಡೆ ಜಾತಿಯ ಸಸ್ಯಗಳನ್ನೂ ಬೆಳೆಸಲಾಗುತ್ತಿದೆ’ ಎಂದರು.

ಜೋಕಟ್ಟೆಯಲ್ಲೂ ಹಸಿರೀಕರಣ: ‘ಎಂಆರ್‌ಪಿಎಲ್‌ ಕಂಪೆನಿಯ ಒಟ್ಟು ವಿಸ್ತೀರ್ಣದ ಶೇಕಡ 30ರಷ್ಟನ್ನು ಹಸಿರು ವಲಯವನ್ನಾಗಿ ಮೀಸಲಿಡಬೇಕಿತ್ತು. ಅದು ಸಾಧ್ಯವಾಗದ ಕಾರಣ ಬೇರೆಡೆ ಹಸಿರು ವಲಯ ನಿರ್ಮಾಣಕ್ಕೆ ಅವಕಾಶ ಸಿಕ್ಕಿದೆ. ಪಿಲಿಕುಳದಲ್ಲಿ 50 ಎಕರೆ ಹಸಿರು ವಲಯ ನಿರ್ಮಿಸುವುದರ ಜೊತೆಗೆ ಜೋಕಟ್ಟೆ ಪ್ರದೇಶದಲ್ಲಿ 27 ಎಕರೆಯಲ್ಲಿ ಹಸಿರುವ ವಲಯ ನಿರ್ಮಿಸಲಾಗುವುದು.

ಜಮೀನು ಲಭ್ಯವಾದ ತಕ್ಷಣ ಕೆಲಸ ಆರಂಭವಾಗಲಿದೆ’ ಎಂದು ಎಂಆರ್‌ಪಿಎಲ್‌ ಕಾರ್ಪೋರೇಟ್‌ ಕಮ್ಯುನಿಕೇಷನ್‌ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಬಾಳಿಗ ತಿಳಿಸಿದರು. ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ಎಂಆರ್‌ಪಿಎಲ್‌ ನಿರ್ದೇಶಕರಾದ ಎ.ಕೆ.ಸಾಹೂ (ಹಣಕಾಸು), ಎಂ.ವೆಂಕಟೇಶ್‌ (ರಿಫೈನರಿ) ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT