ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಕಸರತ್ತು

ಸೋಮವಾರ, ಜೂನ್ 17, 2019
22 °C

ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಕಸರತ್ತು

Published:
Updated:
ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಕಸರತ್ತು

ಶಿವಮೊಗ್ಗ: ಅವಿಭಜಿತ ಶಿವಮೊಗ್ಗ ಸೇರಿದಂತೆ 6 ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಪದವೀಧರ ಹಾಗೂ ಶಿಕ್ಷಕರ ವಿಧಾನ ಪರಿಷತ್‌ ಕ್ಷೇತ್ರಕ್ಕೆ ಮತದಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದರೂ, ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಗಿದಿಲ್ಲ. ಕೊಡಗು, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳು ಈಶಾನ್ಯ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ. ಕ್ಷೇತ್ರ ವ್ಯಾಪ್ತಿಯಲ್ಲಿ 30 ತಾಲ್ಲೂಕು, ಅಷ್ಟೇ ಸಂಖ್ಯೆಯ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

ಚುನಾವಣೆಗೆ ಇನ್ನೂ 9 ತಿಂಗಳು ಬಾಕಿ ಇದ್ದರೂ, ಆರು ಜಿಲ್ಲೆಗಳ ಸುತ್ತಳತೆ ಸುಮಾರು ಒಂದು ಸಾವಿರ ಕಿ.ಮೀ.ಗೂ ಹೆಚ್ಚು ವಿಸ್ತಾರ ಇರುವ ಕಾರಣ ಅಭ್ಯರ್ಥಿಗಳು ಎರಡು ಮೂರು ಬಾರಿ ಸುತ್ತುವಷ್ಟರಲ್ಲೇ ಸಮಯ ಸರಿದುಹೋಗುತ್ತದೆ.

ಮತದಾರರ ನೋಂದಣಿ ಪ್ರಕ್ರಿಯೆ ಆರಂಭವಾಗುವ ಎರಡು ತಿಂಗಳ ಮೊದಲೇ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಘೋಷಿಸಿದೆ. ನಿಯೋಜಿತ ಅಭ್ಯರ್ಥಿಗಳು ಈಗಾಗಲೇ ಊರೂರು ತಿರುಗಿ ಮತದಾರರ ನೋಂದಣಿ ಜತೆಗೆ ಮತಯಾಚನೆಯನ್ನೂ ಆರಂಭಿಸಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾಡದೇ ಸಾಮೂಹಿಕವಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಿದೆ.

ಶಂಕರಮೂರ್ತಿ 3 ದಶಕಗಳ ಅಧಿಪತಿ: ನೈರುತ್ಯ ಪದವೀಧರ ಕ್ಷೇತ್ರ 1988ರಲ್ಲಿ ರಚನೆಯಾಯಿತು. ಅಂದು ಬಿಜೆಪಿಯಿಂದ ಸ್ಪರ್ಧಿಸಿದ್ದ ಈಗಿನ ವಿಧಾನ ಪರಿಷತ್ ಸಭಾಪತಿ

ಡಿ.ಎಚ್. ಶಂಕರಮೂರ್ತಿ ಅವರು ಮೊದಲ ಪ್ರಯತ್ನದಲ್ಲೇ ಯಶ ಕಂಡಿದ್ದರು. ನಂತರ ಪ್ರತಿ 6 ವರ್ಷಗಳಿಗೊಮ್ಮೆ ನಡೆದ ಎಲ್ಲ ಚುನಾವಣೆಗಳಲ್ಲೂ ಗೆಲುವು ಸಾಧಿಸುವ ಮೂಲಕ 30 ವರ್ಷಗಳು ಸತತ ಅಧಿಪತ್ಯ ಸ್ಥಾಪಿಸಿದ್ದಾರೆ.

2012ರಲ್ಲಿ 5ನೇ ಬಾರಿ ವಿಧಾನ ಪರಿಷತ್ ಪ್ರವೇಶಿಸಿದ್ದರು. ಈಗ ಸಭಾಪತಿ ಸ್ಥಾನದಲ್ಲಿ ಇದ್ದಾರೆ. ಕಳೆದ ಬಾರಿ ಸ್ಪರ್ಧಿಸಿದಾಗ ಹೇಳಿದಂತೆ ಅದೇ ಅವರ ಕಡೆ ಚುನಾವಣೆ. ನಿರಂತರವಾಗಿ ಶಂಕರಮೂರ್ತಿ ಅವರೇ ಅಭ್ಯರ್ಥಿಯಾಗುತ್ತಾ ಬಂದ ಕಾರಣ ಬಿಜೆಪಿಗೆ ಮೂರು ದಶಕಗಳೂ ಹೊಸ ಅಭ್ಯರ್ಥಿ ಆಯ್ಕೆಯ ಸಮಸ್ಯೆಯೇ ಇರಲಿಲ್ಲ. ಈಗ ಹೊಸ ಅಭ್ಯರ್ಥಿ ಆಯ್ಕೆ ಮಾಡುವ ಹೊಣೆಗಾರಿಕೆ ಹಲವು ಸಮಸ್ಯೆ ತಂದೊಡ್ಡಿದೆ.

ಸ್ಪರ್ಧೆಗೆ ಮುಖಂಡರ ಪೈಪೋಟಿ: ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಇದೇ ಮೊದಲ ಬಾರಿ ಬಿಜೆಪಿ ಮುಖಂಡರ ಮಧ್ಯೆ ತೀವ್ರ ಪೈಪೋಟಿ ಕಂಡುಬಂದಿದೆ. ಮಾಜಿ ಸಂಸದ ಆಯನೂರು ಮಂಜುನಾಥ್, ಶಂಕರಮೂರ್ತಿ ಪುತ್ರ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಡಿ.ಎಸ್‌. ಅರುಣ್, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್. ದತ್ತಾತ್ರಿ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್, ಮುಖಂಡ ದೇವದಾಸ್‌ ನಾಯ್ಕ ಸ್ಪರ್ಧೆಗೆ ಇಳಿಯಲು ಪೈಪೋಟಿ ನಡೆಸಿದ್ದಾರೆ.

ಈಗಲೇ ಅಭ್ಯರ್ಥಿಗಳನ್ನು ಆಯ್ಕೆಮಾಡಿದರೆ ಅತೃಪ್ತರ ಬಂಡಾಯ ವಿಧಾನ ಪರಿಷತ್ ಚುನಾವಣೆಗೂ ಮೊದಲೇ ನಡೆಯುವ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಬಿಜೆಪಿ ವರಿಷ್ಠರನ್ನು ಕಾಡುತ್ತಿದೆ. ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಆಯನೂರು ಮಂಜುನಾಥ್ ಅವರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಗಲೇ ಒತ್ತಡ ಹಾಕಿದ್ದರು.

ಭಿನ್ನಮತ ಶಮನದ ನಂತರ ಕೆ.ಎಸ್‌. ಈಶ್ವರಪ್ಪ ಅವರಿಗೇ ಟಿಕೆಟ್‌ ನೀಡುವುದು ಖಚಿತ ಎಂದು ಭಾವಿಸಿದ ಅವರು ವಿಧಾನ ಪರಿಷತ್‌ಗೆ ಸ್ಪರ್ಧಿಸಲು ಬೇಡಿಕೆ ಸಲ್ಲಿಸಿದ್ದಾರೆ. ಭಿನ್ನಮತದ ಸಮಯದಲ್ಲಿ ಈಶ್ವರಪ್ಪ ಬಣದ ಜತೆ ಗುರುತಿಸಿಕೊಂಡಿದ್ದ ದತ್ತಾತ್ರಿ, ಗಿರೀಶ್ ಪಟೇಲ್‌ ಅವಕಾಶ ನೀಡುವಂತೆ ಈಶ್ವರಪ್ಪ ಅವರ ಮೂಲಕ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ. ತಂದೆಯ ಕಾಲದಿಂದಲೂ ಕ್ಷೇತ್ರದ ಮತದಾರರ ಜತೆ ಒಡನಾಟ ಹೊಂದಿರುವ ಅರುಣ್‌ ಪ್ರಬಲ ಆಕಾಂಕ್ಷಿ.

‘ಯಾರಿಗೇ ಸ್ಪರ್ಧಿಸಲು ಅನುಮತಿ ನೀಡಿದರೂ ಆ ಅಸಮಾಧಾನ ವಿಧಾನ ಪರಿಷತ್ ಚುನಾವಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎನ್ನುವ ಆತಂಕ ವರಿಷ್ಠರು ಅಭ್ಯರ್ಥಿ ಅಂತಿಮಗೊಳಿಸಲು ಅಡ್ಡಿಯಾಗಿದೆ’ ಎನ್ನುವುದು ಬಿಜೆಪಿ ಸ್ಥಳೀಯ ಮುಖಂಡರ ಅನಿಸಿಕೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry