ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರು ಬಂದರೂ ಸಿಗಲಿಲ್ಲ ನೆಮ್ಮದಿಯ ಬದುಕು

Last Updated 9 ಅಕ್ಟೋಬರ್ 2017, 9:13 IST
ಅಕ್ಷರ ಗಾತ್ರ

ತುಮಕೂರು: ಬಡಾವಣೆಯ ಜನರೆಲ್ಲ ಸೇರಿ ಹಣ ಸಂಗ್ರಹಿಸಿಕೊಂಡು ಓಡಾಡಲು ಸಾಧ್ಯವಾಗುವಂಥ ಮಣ್ಣಿನ ರಸ್ತೆ ಮಾಡಿಕೊಂಡಿದ್ದರು. ಆದರೆ ಅಭಿವೃದ್ಧಿ ಹೆಸರಿನಲ್ಲಿ ಬಂದ ಪಾಲಿಕೆ  ರಸ್ತೆಯನ್ನೆಲ್ಲ ಅಗೆದು ಹಾಳುಮಾಡಿತು. ವಾಹನಗಳಿರಲಿ, ಜನರು ಕೂಡ ಓಡಾಡದಂತೆ ಮಾಡಿದರು. ಇದು ನಗರದ ಸರಸ್ವತಿಪುರಂ 2ನೇ ಹಂತದ ಸ್ಥಿತಿ.

‘ಯುಜಿಡಿ ಹೆಸರಿನಲ್ಲಿ ರಸ್ತೆ ಹಾಳು ಮಾಡಿರುವ ಅಧಿಕಾರಿಗಳು, ಗುತ್ತಿಗೆದಾರರು ಇತ್ತ ತಿರುಗಿ ನೋಡುತ್ತಿಲ್ಲ. ಜನರ ಸಮಸ್ಯೆ ಆಲಿಸುವುದಾಗಿ ಎರಡೆರಡು ಬಾರಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರಫೀಕ್‌ ಅಹಮ್ಮದ್‌, ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಗಿಲೀಟಿನ ಮಾತುಗಳಾಡಿದರು. ಅವರು ಮಾತು ಕೇಳಿದ ನಾವುಗಳು ಇನ್ನೇನು ಡಾಂಬರು ರಸ್ತೆಯೇ ಆಗಿ ಬಿಟ್ಟಿತು ಎಂದು ಕನಸಿನಲ್ಲಿ ತೇಲಾಡಿವು. ಆದರೆ ನೋಡಿ ನಮ್ಮ ಕನಸಿನ ರಸ್ತೆಗಳ ಸ್ಥಿತಿ’ ಎಂದು ಬಡಾವಣೆಯ ನಾಗರಿಕರು ‘ಪ್ರಜಾವಾಣಿ’ ಎದುರು ದುಃಖ ಬಿಚ್ಚಿಟ್ಟರು.

‘ಸಂಗ್ರಹ ಮಾಡಿದ್ದ ಸುಮಾರು ₹ 7 ಲಕ್ಷ ಖರ್ಚು ಮಾಡಿ ರಸ್ತೆಗಳನ್ನು ದುರಸ್ತಿ ಮಾಡಿಕೊಂಡಿದ್ದೆವು. ಬಡಾವಣೆಯ ಖಾಲಿ ನಿವೇಶನಗಳಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ಕಿತ್ತು ಸ್ವಚ್ಛಗೊಳಿಸಿದ್ದೆವು. ಆದರೆ ಯುಜಿಡಿ ಕಾಮಗಾರಿ ಹೆಸರಿನಲ್ಲಿ ಎಲ್ಲವನ್ನೂ ಹಾಳು ಮಾಡಿದ್ದಾರೆ’ ಎಂದು ಸರಸ್ವತಿಪುರಂ 2ನೇ ಹಂತದ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ದೇವರಾಜ್‌ ಹೇಳಿದರು.

ಮುಖ್ಯ ರಸ್ತೆಯು ಡಾಂಬರೀಕರಣ ಆಗದೇ ಎರಡು ವರ್ಷ ಕಳೆದಿದೆ. ಮಳೆಗಾಲದಲ್ಲಿ ಕೆಸರಿನಿಂದ ಕೂಡಿದ ರಸ್ತೆಯಲ್ಲಿ ಓಡಾಟದ ಸಮಸ್ಯೆಯಾದರೆ ಬೇಸಿಗೆಯಲ್ಲಿ  ದೂಳಿನಿಂದ ತುಂಬಿಕೊಂಡು ವಾಹನ ಚಲಾಯಿಸುವುದೇ ಕಷ್ಟದ ಮಾತಾಗುತ್ತದೆ ಎನ್ನುತ್ತಾರೆ ಇಲ್ಲಿನ ಜನರು. ಜಿಲ್ಲಾಧಿಕಾರಿ ಅವರು ಮುತುವರ್ಜಿ ತೋರಿದ್ದರಿಂದ ಈವರೆಗೂ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಮಾತ್ರ ಕಂಡು ಬಂದಿಲ್ಲ. ಆದರೆ ಮೂಲ ಸೌಕರ್ಯಗಳು ಮಾತ್ರ  ಮರೀಚಿಕೆಯಾಗಿವೆ.

‘ಇಲ್ಲಿಯ ರಸ್ತೆಗಳಲ್ಲಿ ಅದೆಷ್ಟೋ ಬೈಕ್‌ ಸವಾರರು ಬಿದ್ದು ಪೆಟ್ಟುಮಾಡಿಕೊಂಡಿದ್ದಾರೆ. ಮಳೆ ನೀರು ತುಂಬಿಕೊಂಡು ರಸ್ತೆಯಲ್ಲಿರುವ ಗುಂಡಿಗಳು ಕಾಣದ ಕಾರಣ ಸ್ಕೂಟರ್‌ ಚಲಾಯಿಸುವ ಮಹಿಳೆಯರು, ಹೆಣ್ಣುಮಕ್ಕಳು ಸಹ ಬಿದ್ದಿದ್ದಾರೆ’ ಎನ್ನುತ್ತಾರೆ ನಿವಾಸಿ ಅಲ್ತಾಫ್‌ ಖಾನ್‌. ಯುಜಿಡಿ ಕಾಮಗಾರಿಗಾಗಿ ರಸ್ತೆ ಮಧ್ಯಭಾಗದಲ್ಲಿ ಅಗೆದು ಮತ್ತೆ ಯಥಾಸ್ಥಿತಿಗೆ ತಾರದ ಕಾರಣ ಈಗ ಎಲ್ಲಿ ನೋಡಿದರೂ ಮಾರುದ್ದ ಗುಂಡಿ, ಗೊಟರು, ಕೆಸರುಮಯ. ಪಾದಚಾರಿಗಳು ಸಹ ಓಡಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

ಶಾಸಕರು ಮತ್ತು ಪಾಲಿಕೆ ಸದಸ್ಯರನ್ನು ಅನೇಕ ಕಾರ್ಯಕ್ರಮಗಳಿಗೆ ಆಹ್ವಾನಿಸಿ ರಸ್ತೆಯನ್ನು ದುರಸ್ತಿ ಮಾಡಿಕೊಡುವಂತೆ ಮನವಿ ನೀಡಿದ್ದೇವೆ. ಶೀಘ್ರದಲ್ಲಿಯೇ ಕೆಲಸ ಮಾಡಿಸಿಕೊಡುತ್ತೇವೆ ಎಂದು ಉತ್ತರ ನೀಡಿ ಹೋಗುವ ಜನಪ್ರತಿನಿಧಿಗಳು ಇಲ್ಲಿಂದ ಹೋದ ನಂತರ ಈ ಬಗ್ಗೆ ಯೋಚಿಸುವುದೇ ಇಲ್ಲ. ಇಲ್ಲಿಯ ಸಮಸ್ಯೆಗಳನ್ನು ಕಣ್ಣಾರೆ ಕಂಡ ನಂತರವೂ ಈ ರೀತಿಯಾಗಿ ನಿರ್ಲಕ್ಷ್ಯ ವಹಿಸುವುದು ಜನಪ್ರತಿನಿಧಿಗಳಿಗೆ ಸಲ್ಲದು ಎಂದು ನಾರಾಯಣಸ್ವಾಮಿ ಆರೋಪಿಸುತ್ತಾರೆ.

ಬಡಾವಣೆಯಲ್ಲಿರುವ ಶಾಲೆಯ ಎದುರು ಚರಂಡಿಯ ನೀರು ಹರಿಯದೆ ನಿಂತಿರುವುದರಿಂದ  ಮಕ್ಕಳು ಮತ್ತು ಅಲ್ಲಿಯ ನಿವಾಸಿಗಳು ಮೂಗು ಮುಚ್ಚಿಕೊಂಡೆ ದಿನಕಳೆಯುತ್ತಿದ್ದಾರೆ. ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ  ಚರಂಡಿ ಇದ್ದು ಇಲ್ಲದಂತಾಗಿದೆ ಎನ್ನುತ್ತಾರೆ ನಿವಾಸಿ ಅಷ್ಪಾಕ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT