ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮಾವತಿ ಟ್ರೇಲರ್‌ ಬಿಡುಗಡೆ: ಎದೆ ಬಡಿತ ಹೆಚ್ಚಿಸುವ ದೃಶ್ಯ ವೈಭವ

Last Updated 9 ಅಕ್ಟೋಬರ್ 2017, 9:31 IST
ಅಕ್ಷರ ಗಾತ್ರ

ಬೆಂಗಳೂರು: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ಪದ್ಮಾವತಿ ಚಿತ್ರದ ಟ್ರೇಲರ್ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

3 ನಿಮಿಷ 9 ಸೆಕೆಂಡ್‌ಗಳ ಟ್ರೇಲರ್‌ನಲ್ಲಿ ಚಿತ್ರದ ಅದ್ದೂರಿ ತನ ಬಿಂಬಿತವಾಗುತ್ತದೆ. ಟ್ರೇಲರ್‌ ಬಿಡುಗಡೆಯಾಗಿ ಒಂದೂವರೆ ಗಂಟೆಯಲ್ಲಿ 1.5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಸೌಂದರ್ಯ ಹಾಗೂ ದಿಟ್ಟತನದ ಪ್ರತೀಕದಂತೆ ಕಾಣುವ ರಾಣಿ ಪದ್ಮಾವತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಂಗೊಳಿಸುತ್ತಾರೆ. ಸಾಮ್ರಾಜ್ಯದ ಹೊಣೆ ಹೊತ್ತು ಹೋರಾಟಕ್ಕೆ ನಿಂತ ಮಹರವಾಲ್‌ ರತನ್‌ ಸಿಂಗ್‌ ಆಗಿ ಶಾಹಿದ್‌ ಕಪೂರ್‌ ಭಿನ್ನವಾಗಿ ಕಾಣುತ್ತಾರೆ.

ಅದ್ದೂರಿತನದೊಂದಿಗೆ ಟ್ರೇಲರ್‌ನಲ್ಲಿ ಗಮನ ಸೆಳಯುವ ಮತ್ತೊಂದು ಅಂಶ ರಣವೀರ್‌ ಸಿಂಗ್‌. ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರದ ಒರಟು ತನ ಎದ್ದು ಕಾಣುತ್ತದೆ. ಉಳಿದಂತೆ ಯುದ್ಧ ಭೂಮಿ, ಕೋಟೆ, ಸೇನೆ, ಅರಮನೆ, ಸೌಂದರ್ಯ, ಸಮರ ಎಲ್ಲವನ್ನೂ ಟ್ರೇಲರ್‌ ಒಳಗೊಂಡಿದೆ.

ಸೋಮವಾರ ಮಧ್ಯಾಹ್ನ 13:03ಕ್ಕೆ ಸರಿಯಾಗಿ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ತೋರ್‌ ಕೋಟೆ ಮೇಲೆ ಆಕ್ರಮಣ ಮಾಡುವ ಅಲ್ಲಾವುದ್ದೀನ್‌ ಖಿಲ್ಜಿ ವಿರುದ್ಧ ರತನ್‌ ಸಿಂಗ್‌ 1303ರಲ್ಲಿ ಮೊದಲ ಬಾರಿ ಹೋರಾಟ ನಡೆಸಿದ ಪ್ರತೀಕವಾಗಿ ಟ್ರೇಲರ್ ಬಿಡುಗಡೆಗೆ 13:03 ಸಮಯ ನಿಗದಿ ಮಾಡಲಾಗಿತ್ತು ಎನ್ನಲಾಗಿದೆ.

ವರ್ಷದ ಬಹುನಿರೀಕ್ಷಿತ ಚಿತ್ರವೆಂದೇ ಪರಿಗಣಿಸಲಾಗಿರುವ ಪದ್ಮಾವತಿ ಡಿಸೆಂಬರ್‌ 1ರಂದು ತೆರೆಕಾಣಲಿದೆ. ಭಾರತದಲ್ಲಿ 8,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ವಯಕಾಂ18 ಸಿದ್ಧತೆ ನಡೆಸಿದೆ.

ಪುರಾಣದ ಕತೆಯನ್ನು ತಿರುಚಿದ್ದಾರೆ ಎಂದು ಆರೋಪಿಸಿ ಧಾರ್ಮಿಕ ಸಂಘಟನೆಗಳು ಈ ಹಿಂದೆ ಚಿತ್ರೀಕರಣದ ಸೆಟ್‌ ಮೇಲೆ ದಾಳಿ ನಡೆಸಿದ್ದಲ್ಲದೆ, ಬನ್ಸಾಲಿ ಅವರ ಮೇಲೆ ಹಲ್ಲೆಯನ್ನೂ ನಡೆಸಿದ್ದರು. ಪರಿಣಾಮವಾಗಿ, ಜೈಪುರದಿಂದ ಚಿತ್ರೀಕರಣ ಸೆಟ್‌ನ್ನು ಎತ್ತಂಗಡಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT