ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಿನ ರಾಳಕ್ಕೆ ಇಲ್ಲೂ ಗಾಳ

Last Updated 9 ಅಕ್ಟೋಬರ್ 2017, 10:02 IST
ಅಕ್ಷರ ಗಾತ್ರ

*ಸುಧಾ ಹೆಗಡೆ

‌ನೆಲ್ಲಿಕಾಯಿ ಗುಂಡಿನ ಸರ ನೋಡ್ರಿ... ನೋಡ್ಲಿಕ್ಕೆ ಭರ್ಜರಿ ಕಾಣ್ತದೆ ಅಲ್ಲ? ಆದ್ರೂ ಚಿನ್ನದ ತೂಕ ಕಡಿಮೆ. ಒಳಗೆ ಅರಗು ತುಂಬ್ಸದೆ’ ಎನ್ನುತ್ತ ಅಕ್ಕಸಾಲಿಗ ಸರದ ತೂಕದ ಅನುಭವ ಪಡೆಯಲು ಅಂಗೈಗೆ ದಾಟಿಸಿದಾಗ ಸರಕ್ಕಿಂತಲೂ ಈ ಅರಗು ಎಂಬ ಶಬ್ದವೇ ಹೆಚ್ಚು ಬೆರಗು, ಆಸಕ್ತಿ ಹುಟ್ಟಿಸಿದ್ದು ಸುಳ್ಳಲ್ಲ.

ದೊಡ್ಡವರ ಮಧ್ಯೆ ಚಿನ್ನದ ಒಡವೆ ಸುದ್ದಿ ಬಂದೊಡನೆ ಈ ಅರಗು ಎಂಬ ಶಬ್ದವೂ ಒಳಗೊಳಗೇ ನುಸುಳುತ್ತಿತ್ತು. ಜೊತೆಗೆ ಮಹಾಭಾರತದ ಕತೆಯಲ್ಲಿ ಬರುವ ಅರಗಿನ ಅರಮನೆಯೆಂಬ ಅದ್ಭುತದ ಚಿತ್ರಣ ಕೂಡ. ಆಗೆಲ್ಲ ಈ ಅರಗು ಅಥವಾ ರಾಳ ಎಂಬುದು ಬಂಗಾರದ ಬಳೆ, ಗುಂಡಿನ ಸರಗಳ ಪೊಳ್ಳು ಭರ್ತಿ ಮಾಡಲು ಬಳಸುವ ರಾಸಾಯನಿಕವೋ ಅಥವಾ ಮರದ ಅಂಟೋ ಎಂಬ ಕಲ್ಪನೆಯಿತ್ತು. ಆದರೆ ವಿಜ್ಞಾನ ಓದುತ್ತ ಹೋದಂತೆ ಗೊತ್ತಾಗಿದ್ದು ಅರಗೆಂದರೆ ಚಿಕ್ಕ ಕೀಟಗಳು (ಕಿರ್‍ರಿಯಾ ಲ್ಯಾಕಾ) ಸಸ್ಯದ ರಸ ಹೀರಿ ಹೊರಸೂಸುವ ವಸ್ತು ಎಂದು.

ಹೆಣ್ಣು ಕೀಟಗಳು ತಮ್ಮ ಸುತ್ತ ಕಟ್ಟಿಕೊಳ್ಳುವ ರಕ್ಷಣಾ ಕವಚ, ಈ ಕೆಂಪು ಬಣ್ಣದಿಂದ ಮಿರುಗುವ ವಸ್ತುವೇ ಸಳ್ಳೆ, ನೇರಳೆ ಮರದ ಕಡ್ಡಿಗಳಿಗೆ ಅಂಟಿಕೊಂಡು ಆಕರ್ಷಿಸಿದ ಅರಗು. ದೂರದ ಜಾರ್ಖಂಡ್‌, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಡದಂತಹ ರಾಜ್ಯಗಳಲ್ಲಿ ಕೃಷಿ ಉತ್ಪನ್ನವಾಗಿ ರೈತರ ಕಿಸೆ ಭರ್ತಿ ಮಾಡುತ್ತಿರುವ ಅರಗು ಬೇಸಾಯ ರಾಜ್ಯದ ಕೃಷಿಕರ ಗಮನ ಸೆಳೆದಿದೆ. ಉತ್ತರ ಕನ್ನಡದ ಮುಂಡಗೋಡ, ಶಿರಸಿಯಂತಹ ಪ್ರದೇಶದಲ್ಲಿ ಹಲವು ರೈತರು ಇದನ್ನು ಉಪ ಬೆಳೆಯಾಗಿ ಬೆಳೆದು ಆದಾಯ ಪಡೆಯುತ್ತಿದ್ದಾರೆ.

ಈ ಅರಗಿನ ಕೆಂಪಿನ ರಂಗು ಕರ್ನಾಟಕದಲ್ಲಿ ಹೊಳೆಯು ವಂತೆ ಮಾಡಿದ್ದು ಮುಂಡಗೋಡದ ಕಲ್ಕೊಪ್ಪದ ರೈತ ರಮೇಶ ಜಿಗಳೇರ. ಕಿರು ಅರಣ್ಯ ಉತ್ಪನ್ನವಾಗಿದ್ದ ಅರಗನ್ನು ಕೃಷಿಗೆ ಒಗ್ಗಿಸಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಜಾರ್ಖಂಡ್‌ನ ರಾಂಚಿಗೆ ತೆರಳಿ ಈ ಅರಗಿನ ಕೃಷಿಯ ಬಗ್ಗೆ ವಿವರ ತಿಳಿದುಕೊಂಡಿದ್ದಲ್ಲದೇ ಅರಗಿನ ಹುಳಗಳಿರುವ ಕಡ್ಡಿಯನ್ನು ತಮ್ಮೂರಿಗೆ ತಂದರು. ಈ ಕಡ್ಡಿಯೇ ‘ಬ್ರೂಡ್‌ ಲ್ಯಾಕ್‌’. ಈ ‘ಲ್ಯಾಕ್‌’ ಈಗ ಕರ್ನಾಟಕದ ಹಲವು ರೈತರಿಗೆ ಲಕ್ಷ ಲಕ್ಷ ಹಣ ತಂದು ಕೊಡುವ ಬೆಳೆಯಾಗಿ ಹೊರಹೊಮ್ಮಿದೆ.

‘ಈ ಅರಗು ಕೃಷಿಗೆ ಹೆಚ್ಚಿನ ಶ್ರಮ ಬೇಕಾಗಿಲ್ಲ. ಆದರೆ ಸಹನೆ ಬೇಕು’ ಎನ್ನುತ್ತಾರೆ ಈ ಕೃಷಿಯನ್ನು ತಮ್ಮ ತೋಟದಲ್ಲಿ ಉಪ ಬೇಸಾಯವಾಗಿ ಕೈಗೆತ್ತಿಕೊಂಡಿರುವ ಶಿರಸಿಯ ರೈತ ಮಹಿಳೆ ವಿನುತಾ ಹೆಗಡೆ.

ನೈಸರ್ಗಿಕವಾಗಿ ಈ ಅರಗಿನ ಹುಳಗಳು ಮುತ್ತುಗ, ಬಾರೆ, ಅಕೇಶಿಯ, ಸಾಗಡಿ ಮೊದಲಾದ ಮರಗಳ ರೆಂಬೆಗಳಿಗೆ ಅರಗು ಕಟ್ಟುತ್ತವೆ. ಆದರೆ ಈ ಮರಗಳಿಲ್ಲದ ಕಡೆ ಬೇಸಾಯ ಮಾಡಲು ಈ ಕೀಟಗಳಿಗೆ ಆಶ್ರಯ ಗಿಡ ಒದಗಿಸಬೇಕಾಗುತ್ತದೆ. ಫ್ಲೆಮಿಂಜಿಯಾ ಸೆಮಿಅಲಾಟಾ ಎಂಬ ಗಿಡಗಳನ್ನು ನಾಟಿ ಮಾಡ ಬೇಕು. ಇದರ ಬೀಜಗಳನ್ನು ಶಿರಸಿಯ ಕದಂಬ ಚಾರಿಟಬಲ್‌ ಪ್ರತಿಷ್ಠಾನದ ಮೂಲಕ ಒದಗಿಸುವ ಕೆಲಸ ನಡೆದಿದೆ.

ಮೊದಲಿಗೆ ಪಾಲಿಥೀನ್‌ ಚೀಲಗಳಲ್ಲಿ ಬೀಜ ಹಾಕಿ ಸಸಿ ಬೆಳೆಸಿ ನಂತರ ಕೃಷಿ ಭೂಮಿಗೆ ವರ್ಗಾಯಿಸಬಹುದು. ನೆಲವನ್ನು ಸ್ವಲ್ಪ ಆಳವಾಗಿ ಉಳುಮೆ ಮಾಡಿದರೆ ಒಳಿತು. ಈ ಗಿಡಗಳು ಬಹುಬೇಗ ಬೆಳೆದು, ಅಂದರೆ ಒಂದೇ ವರ್ಷದಲ್ಲಿ ಬ್ರೂಡ್‌ ಲ್ಯಾಕ್‌ ಕಟ್ಟಲು ಯೋಗ್ಯವಾಗುತ್ತವೆ. 7–8 ಅಡಿ ಎತ್ತರಕ್ಕೆ ಬೆಳೆಯುವ ಗಿಡಗಳು ಪೊದೆಯ ರೀತಿಯಲ್ಲಿ ದಟ್ಟವಾದ ಎಲೆಗಳಿಂದ ಕೂಡಿದ್ದು ಸದಾ ಹಸಿರಾಗಿ ಕಂಗೊಳಿಸುತ್ತವೆ. ಒಮ್ಮೆ ಈ ಗಿಡಗಳನ್ನು ಬೆಳೆದರೆ ಸಾಕು, 10–12 ವರ್ಷಗಳ ಕಾಲ ಈ ಅರಗು ಕೃಷಿಯನ್ನು ಕೈಗೊಳ್ಳಬಹುದು.

‘ಈ ಗಿಡಗಳು 4–5 ಅಡಿ ಬೆಳೆದರೆ ಸಾಕು, ಬ್ರೂಡ್‌ ಲ್ಯಾಕ್‌ ಕಟ್ಟಬಹುದು’ ಎನ್ನುತ್ತಾರೆ ಕಳೆದ 2–3 ವರ್ಷಗಳಿಂದ ಅರಗು ಬೆಳೆದು ಲಾಭ ಮಾಡುತ್ತಿರುವ ಉತ್ತರ ಕನ್ನಡದ ಸಿದ್ದಾಪುರದ ಬಿದ್ರಕಾನಿನ ರೈತ ಸುರೇಂದ್ರ ಹೆಗಡೆ. ಸುಮಾರು ಮೂರೂವರೆ ಎಕರೆ ಜಾಗದಲ್ಲಿ ಈ ಗಿಡಗಳನ್ನು ಬೆಳೆಸಿರುವ ಸುರೇಂದ್ರ ಇದು ವರೆಗೆ 3–4 ಬೆಳೆ ಕಟಾವು ಮಾಡಿದ್ದಾರೆ. ಒಂದು ಎಕರೆಯಲ್ಲಿ 3–4 ಸಾವಿರ ಗಿಡಗಳನ್ನು ಬೆಳೆಯಬಹುದು. ಒಂದು ಗಿಡಕ್ಕೆ ಸರಾಸರಿ ಕಾಲು ಕೆ.ಜಿ ಅರಗು ಪಡೆಯಬಹುದು ಎಂಬುದು ಅವರ ಅಂಬೋಣ. ಒಂದು ಗಿಡಕ್ಕೆ ಒಂದು ಕೆ.ಜಿ ಬ್ರೂಡ್‌ ಲ್ಯಾಕ್‌ ಕಟ್ಟಿದರೆ ಐದರಿಂದ ಆರು ಪಟ್ಟು ಅರಗನ್ನು ಪಡೆಯಬಹುದು.

‘ರಾಂಚಿಯಲ್ಲಿ ಸಾಗಡಿ ಎಂಬ ಮರಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಅದರಲ್ಲಿ ಅರಗು ಕೃಷಿ ಮಾಡಲಾಗುತ್ತಿದೆ. ಕುಮಟಾದಲ್ಲೂ ಈ ಸಾಗಡಿ ಮರಗಳಲ್ಲಿ ಪ್ರಾಯೋಗಿಕವಾಗಿ ಕೃಷಿ ಶುರು ಮಾಡಿದ್ದಾರೆ’ ಎನ್ನುವ ಸುರೇಂದ್ರ, ಸಿದ್ದಾಪುರದ ಅರಣ್ಯ ಪ್ರದೇಶದಲ್ಲಿರುವ ಅತ್ತಿ ಮರ ಹಾಗೂ ದಡಸಲು ಮರಗಳಲ್ಲಿ ಈ ಅರಗು ಬೆಳೆಯಬಹುದು ಎಂಬುದು ಸಾಬೀತಾಗಿದೆ ಎನ್ನುತ್ತಾರೆ.

ಈ ಬ್ರೂಡ್‌ ಲ್ಯಾಕ್‌ ಅಥವಾ ಅರಗಿನ ಕಡ್ಡಿಯೊಳಗೆ ಮೊಟ್ಟೆ ಗಳಿದ್ದು, ಮೊಟ್ಟೆಯೊಡೆದು ಕೀಟಗಳು ಹೊರಬಂದು ಗಿಡಗಳಿಗೆ ಸಂಪೂರ್ಣವಾಗಿ ಹತ್ತಿಕೊಳ್ಳಲು 10–12 ದಿನಗಳು ಬೇಕು. ನಂತರ ಈ ಕಡ್ಡಿಗಳನ್ನು ಬಿಚ್ಚಬಹುದು.

ಲಕ್ಷಾಂತರ ಕೀಟಗಳು ಗಿಡದ ರೆಂಬೆಗಳ ಮೇಲೆ ತಮ್ಮ ಸಂಸಾರ ಶುರು ಮಾಡುತ್ತವೆ. ಈ ಅರಗಿನ ಕೀಟಗಳಲ್ಲಿ ಹೆಣ್ಣು ಕೀಟಗಳು ತಮ್ಮ ಕುಟುಂಬದ ರಕ್ಷಣೆ ಗೆಂದು ಈ ರಸವನ್ನು ಒಸರುತ್ತವೆ.

ಕೀಟದ ಚರ್ಮ ದಿಂದ ಈ ರಸ ಒಸರಿ ಗಟ್ಟಿಯಾದ ಮೇಣದಂತಹ ವಸ್ತು ಗಿಡದ ಕಡ್ಡಿಗೆ ಅಂಟಿ ಕೊಳ್ಳುತ್ತದೆ. ಒಳಗಿರುವ ಕೀಟಗಳು ಅಲ್ಲಿಂದಲೇ ಸಸ್ಯದ ರಸ ಹೀರಿ ಬದುಕುತ್ತವೆ. ಒಮ್ಮೆ ಕಡ್ಡಿ ಕಟ್ಟಿದ ನಂತರ ಸುಮಾರು 6–7 ತಿಂಗಳಲ್ಲಿ ಪೂರ್ತಿ ಅರಗಿನ ಕಡ್ಡಿ ತಯಾರಾಗುತ್ತದೆ. ನಂತರ ಈ ಕಡ್ಡಿಗಳನ್ನು ನೆಲದಿಂದ 8–10 ಇಂಚು ಬಿಟ್ಟು ಕಟಾವು ಮಾಡಬಹುದು. ಅಂದರೆ 6–7 ತಿಂಗಳಲ್ಲಿ ಈ ಕೀಟಗಳ ಜೀವನಚಕ್ರ ಮುಗಿದು ಅವು ಮೊಟ್ಟೆಗಳನ್ನು ಇಡುತ್ತವೆ. ಒಮ್ಮೆ ಕಟಾವು ಮಾಡಿದ ನಂತರ ಈ ಗಿಡಗಳು ಬೆಳೆಯಲು ಮತ್ತೆ ಆರು ತಿಂಗಳು ಬೇಕು. ಕೀಟಗಳು ಎಳೆಯ ರೆಂಬೆಗಳನ್ನು ಹೆಚ್ಚು ಇಷ್ಟಪಡುವುದರಿಂದ ಒಂದು ಬೆಳೆ ತೆಗೆದ ನಂತರ ಗಿಡಗಳನ್ನು ಕಟಾವು ಮಾಡಿದರೆ ಅನುಕೂಲ.

‘ಈ ಅರಗಿನ ಕಡ್ಡಿಗಳಿಗೆ ಸದ್ಯದ ಮಾರುಕಟ್ಟೆ ದರ ಕೆ.ಜಿಗೆ 200– 250 ರೂಪಾಯಿಯಿದೆ. ಒಂದು ಎಕರೆಗೆ ಏನಿಲ್ಲ ವೆಂದರೂ ವಾರ್ಷಿಕ 1.5– 2 ಲಕ್ಷ ರೂಪಾಯಿ ಆದಾಯ ಪಡೆಯಬಹುದು’ ಎನ್ನುವ ಸುರೇಂದ್ರ, ‘ರಾಂಚಿಯಲ್ಲಿ ಕೆಜಿಗೆ ಒಂದು ಸಾವಿರ ರೂಪಾಯಿವರೆಗೂ ಬೆಲೆಯಿತ್ತು. ಇತ್ತೀಚೆಗೆ ಗುಣಮಟ್ಟದ ಕಾರಣ ಬೆಲೆ ಸ್ವಲ್ಪ ಕಡಿಮೆಯಾಗಿದೆ’ ಎಂದು ಕಾರಣ ವಿವರಿಸುತ್ತಾರೆ. ಕೀಟವಿಲ್ಲದೇ ಹೆರೆದ ಅರಗಿಗೆ ಕೆಜಿಗೆ 50–60 ರೂಪಾಯಿ ದರವಿದೆ. ಶಿರಸಿಯ ಕದಂಬ ಪ್ರತಿಷ್ಠಾನವೇ ರೈತರಿಂದ ಅರಗನ್ನು ಖರೀದಿಸಿ ರಾಂಚಿಗೆ ಕಳಿಸುತ್ತದೆ. ಅಲ್ಲಿ ಸಂಸ್ಕರಣೆ ನಡೆದು (ಶೆಲ್ಯಾಕ್‌) ವಿದೇಶಗಳಿಗೆ ರಫ್ತಾಗು ತ್ತದೆ. ಬೆಳೆದ ಅರಗನ್ನು ಒಂದು ವರ್ಷ ದವರೆಗೆ ಇಟ್ಟರೂ ಕೆಡುವುದಿಲ್ಲ. ಅಂದರೆ ಒಳ್ಳೆಯ ದರ ಸಿಗುವವರೆಗೂ ಕಾಯ ಬಹುದು. ಆದರೆ ಗಿಡಕ್ಕೆ ಕಟ್ಟುವ ಅರಗು ಕಡ್ಡಿಯನ್ನು ಮಾತ್ರ ಒಂದು ವಾರದೊಳಗೆ ಕಟ್ಟಬೇಕಾಗುತ್ತದೆ. ಹುಳುಗಳು ಹೊರಗೆ ಬರಲಾರಂಭಿಸುವುದರಿಂದ ಈ ಎಚ್ಚರಿಕೆ ಅಗತ್ಯ.

ಮುಂಡಗೋಡ ರೈತರ ಸಾಧನೆ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ 500– 600 ಕೃಷಿಕರು ಈ ಅರಗು ಕೃಷಿಯಲ್ಲಿ ತೊಡಗಿದ್ದು, ಸದ್ಯ ಮೈಸೂರಿನ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್‌.ನಗರ ತಾಲ್ಲೂಕುಗಳ 40–50 ರೈತರು ಆಸಕ್ತಿ ವಹಿಸಿ ಈ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ಹವಾಮಾನ ಈ ಕೃಷಿಗೆ ಹೇಳಿ ಮಾಡಿಸಿದಂತಿದೆ’ ಎನ್ನುವ ಮುಂಡಗೋಡಿನ ರಮೇಶ ಜಿಗಳೇರ ಸ್ವತಃ ರಾಂಚಿಗೆ ತೆರಳಿ ಇದರಲ್ಲಿ ತರಬೇತಿ ಪಡೆದವರು. ಶಿರಸಿಯ ಕದಂಬ ಪ್ರತಿಷ್ಠಾನದ ಸ್ಥಾಪಕ, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರು ರಮೇಶ್‌ ಸೇರಿದಂತೆ ಕೆಲವು ರೈತರನ್ನು ರಾಂಚಿಯ ಐಐಎನ್‌ಆರ್‌ಜಿಗೆ (ಭಾರತೀಯ ನೈಸರ್ಗಿಕ ಅಂಟು ಮತ್ತು ಅರಗು ಸಂಸ್ಥೆ) ತರಬೇತಿಗೆಂದು ಕಳಿಸಿ ಅಲ್ಲಿಂದ ಬ್ರೂಡ್‌ ಲ್ಯಾಕ್‌ ತರಿಸಿಕೊಟ್ಟು ಸಹಕಾರ ನೀಡಿದ್ದಾರೆ. ಅಲ್ಲಿಂದ ಕೃಷಿ ವಿಜ್ಞಾನಿಗಳನ್ನು ಶಿರಸಿಗೆ ಕರೆಸಿ ರೈತರಿಗೆ ತಿಳಿವಳಿಕೆ ನೀಡುವ ಪ್ರಯತ್ನ ಮಾಡಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿರುವ ಜಿಗಳೇರ ಸೊರಬ– ಆನವಟ್ಟಿ ಮಾರ್ಗದಲ್ಲಿರುವ ಜಂಡಲ ಹೊಸೂರು ಎಂಬಲ್ಲಿ ಒಂದೇ ಒಂದು ಸಾಗಡಿ ಮರಕ್ಕೆ ಬ್ರೂಡ್‌ ಲ್ಯಾಕ್‌ ಕಟ್ಟಿ ಆರು ತಿಂಗಳಲ್ಲಿ ಒಂದೂ ಮುಕ್ಕಾಲು ಲಕ್ಷ ಆದಾಯ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.

‘ಸಾಗಡಿ ಮರಗಳು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ತಾಲ್ಲೂಕುಗಳು ಹಾಗೂ ಮುಂಡಗೋಡ, ಹಳಿಯಾಳ ಭಾಗದಲ್ಲಿ ಹೇರಳವಾಗಿವೆ. ಈ ಮರಗಳಿಲ್ಲದ ಕಡೆ ಫ್ಲೆಮೆಂಜಿಯ ಗಿಡಗಳನ್ನು ಬೆಳೆದು ಅರಗು ಕಡ್ಡಿ ಕಟ್ಟಬಹುದು. ಈ ಕೃಷಿಯಲ್ಲಿ ಶಿಲೀಂಧ್ರ ಸೋಂಕಲ್ಲದೇ,

ಅರಗು ಹಾಗೂ ಹುಳವನ್ನು ತಿನ್ನುವ ಕ್ರಿಮಿಗಳ ಕಾಟವೂ ಇದೆ. ಇದಕ್ಕೆಲ್ಲ ಔಷಧಿ ಸಿಂಪಡಿಸಬಹುದು’ ಎನ್ನುತ್ತಾರೆ ಜಿಗಳೇರ. ‘ಮುಂಡಗೋಡದ ಟಿಬೆಟ್‌ ಕಾಲನಿಯಲ್ಲಿ ಕೃಷಿಕರೊಬ್ಬರು ಮುಕ್ಕಾಲು ಎಕರೆಗೆ 3 ಲಕ್ಷ ರೂಪಾಯಿ ಬೆಳೆ ತೆಗೆದಿದ್ದಾರೆ’ ಎಂದು ಈ ಕೃಷಿಯಲ್ಲಿರುವ ಲಾಭವನ್ನು ಅವರು ಬಿಚ್ಚಿಡುತ್ತಾರೆ.

ಸದ್ಯ ಶಿರಸಿಯ ಅರಣ್ಯ ಕಾಲೇಜಿನ ಡಾ.ಜವರೇಗೌಡ ನೇತೃತ್ವದಲ್ಲಿ ಈ ಕೃಷಿ ಬಗ್ಗೆ ಹೆಚ್ಚಿನ ಸಂಶೋಧನೆ ನಬಾರ್ಡ್‌ ನೆರವಿನಲ್ಲಿ ನಡೆಯುತ್ತಿದೆ. ಗೋವಾದಲ್ಲೂ ಈ ಕೃಷಿ ಬಗ್ಗೆ ಅಲ್ಲಿಯ ರೈತರಿಗೆ ಮನವರಿಕೆ ಮಾಡಿಕೊಡಲು ಜಿಗಳೇರ ಯತ್ನಿಸುತ್ತಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಅರಗು ಬೆಳೆಯುವ ದೇಶ ಭಾರತ. ಒಟ್ಟು ಪ್ರಮಾಣದಲ್ಲಿ ಶೇ 50 ಕ್ಕಿಂತಲೂ ಹೆಚ್ಚು ಇಲ್ಲಿಯೇ ಉತ್ಪಾದನೆ ಆಗುತ್ತದೆ. ಈ ಮೊದಲು ಗ್ರಾಮಾಫೋನುಗಳ ತಟ್ಟೆಗಳ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿತ್ತು. ಇದನ್ನು ಔಷಧ, ಸುಗಂಧ ದ್ರವ್ಯ, ಆಹಾರ, ರಾಸಾಯನಿಕ, ಬೊಂಬೆ, ವಿದ್ಯುತ್‌ ಉಪಕರಣ, ಬಟ್ಟೆಗೆ ಬಣ್ಣ ಹಾಕುವ ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದ್ದು, ಆಭರಣ, ವಾರ್ನಿಷ್‌ ತಯಾರಿಕೆಯಲ್ಲೂ ಬಳಕೆಯಾಗುತ್ತಿದೆ. ಮರದಿಂದ ತಯಾರಾದ ಸಾಮಗ್ರಿಗಳಿಗೆ ಹೊಳಪು ನೀಡಲು ಕುಶಲಕರ್ಮಿಗಳು ಉಪಯೋಗಿಸುವ ಮೆರಗೆಣ್ಣೆಯಲ್ಲಿ ಈ ಅರಗು ಮಿಶ್ರ ಮಾಡಲಾಗುವುದು. ಎರಡು ಲೋಹಗಳನ್ನು ಮಿಶ್ರ ಮಾಡಲೂ ಇದು ಉಪಯುಕ್ತ.

(ಹೆಚ್ಚಿನ ಮಾಹಿತಿಗೆ: ರಮೇಶ ಜಿಗಳೇರ – 9741307992, ಸುರೇಂದ್ರ ಹೆಗಡೆ - 9448223384)

***

ಅರಗಿನ ಕೀಟದ ವೈಜ್ಞಾನಿಕ ಹೆಸರು ಕಿರ್‍ರಿಯಾ ಲ್ಯಾಕಾ (Kerria Lacca) ಅಥವಾ ಚಿಕ್ಕದಾಗಿ Kerr. ಲಾಸಿಫೆರಿಡೆ ಕುಟುಂಬ, ಹೋಮೊಪ್ಟೆರಾ ವರ್ಗಕ್ಕೆ ಸೇರಿದೆ. ಎರಡು ಪ್ರಭೇದಗಳಿದ್ದು, ಇವೆಂದರೆ ಕುಸಮಿ ಮತ್ತು ರಂಗೀನಿ. ಈ ಕೀಟಗಳು ವರ್ಷದಲ್ಲಿ ಎರಡು ಜೀವನಚಕ್ರವನ್ನು ಹೊಂದಿವೆ. ಈ ಕೀಟಗಳು ಲಾರ್ವಾ ಹಂತದಲ್ಲಿ ಕಾಂಡದ ಮೇಲೆ ಹರಿದಾಡಿ ಅವುಗಳನ್ನು ಕೊರೆಯಲಾರಂಭಿಸುತ್ತವೆ.

ಕಾಂಡದ ಒಳ ತಿರುಳನ್ನು ತಿಂದು ಬದುಕುವ ಇವು ತಮ್ಮ ಚರ್ಮದ ಮೂಲಕ ಒಸರುವ ರಸವನ್ನು ಕಾಂಡದ ರಂಧ್ರ ಮುಚ್ಚಲು ಬಳಸುತ್ತವೆ. ಇದೇ ಅರಗು.

ಈ ಕೀಟಗಳ ಆಶ್ರಯ ಸಸ್ಯಗಳ ಸಂಖ್ಯೆ ಸುಮಾರು 400. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಸಾಗಡಿ (Schleichera oleosa), ಬೋರೆ (Ziziphus mauritiana), ಅತ್ತಿ (Ficus racemosa), ಖೈರಾ (Acacia catechu), ಕ್ಯಾಲಿಯಂಡ್ರಾ (Calliandra calothyrsus), ಸೋಮಲತಾ (Flemingia semialata), ದಡಸಲು (Grewia latifolia) ಗಿಡಗಳನ್ನು ಆಶ್ರಯಿಸುತ್ತವೆ. ಇವುಗಳಲ್ಲಿ ಕ್ಯಾಲಿಯಂಡ್ರಾ ಮತ್ತು ಫ್ಲೆಮಿಂಜಿಯ ಸೆಮಿಅಲಟ ಶೀಘ್ರವಾಗಿ ಅಂದರೆ ಒಂದು ವರ್ಷದೊಳಗೇ ಬೆಳೆದು ಬ್ರೂಡ್‌ ಲ್ಯಾಕ್‌ ಕಟ್ಟಿಸಿಕೊಳ್ಳಲು ಸಿದ್ಧವಾಗುತ್ತವೆ.

ಈ ಅರಗಿನ ಕೀಟಕ್ಕೆ ಇಬ್ಲೆಮಾ ಎಂಬ ಪತಂಗ ಕಾಟ ಕೊಡುತ್ತದೆ. ಉತ್ತರ ಕನ್ನಡದ ಕೆಲವು ರೈತರು ಈ ಇಬ್ಲೆಮಾ ಹಾಗೂ ಒಂದು ರೀತಿಯ ಶಿಲೀಂಧ್ರದ ಬಾಧೆಯನ್ನು ಎದುರಿಸಿದ ಅನುಭವ ಹೇಳುತ್ತಾರೆ. ಆದರೆ ಇದಕ್ಕೆ ಸೂಕ್ತ ಸಮಯದಲ್ಲಿ ಔಷಧಿ ಸಿಂಪಡಿಸಿ ಪರಿಹಾರ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT