ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದಿ ಸ್ಮಾರಕಗಳಿಗೆ ಮತ್ತೆ ಹರೆಯ!

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನೀವು ಹಂಪಿಗೆ ಬಂದುಹೋಗಿ ಕೆಲವು ವರ್ಷಗಳು ಕಳೆದಿವೆಯೇ? ಹಾಗಾದರೆ, ಈಗೊಮ್ಮೆ ಬಂದುನೋಡಿ. ಒಂದೊಮ್ಮೆ ಮಾಸಲು ಬಣ್ಣದಿಂದ ಅಂದಗೆಟ್ಟಿದ್ದ ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರ ಈಗ ಚಿನ್ನದ ಮಳೆಯಲ್ಲಿ ಮಿಂದಿರುವಂತೆ ಹೊಂಬಣ್ಣದಿಂದ ಮಿರಿ ಮಿರಿ ಹೊಳೆಯುತ್ತಿದೆ.

ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೋಗುವ ಮುಂಚೆಯೇ ಸಿಗುವ ಉಗ್ರ ನರಸಿಂಹ ದೇವಸ್ಥಾನದ ಮುಂಭಾಗದ ಆವರಣ ಪೂರ್ತಿ ಈಗ ಕಲ್ಲಿನ ಹಾಸು ಕಂಡಿದೆ. ಅಲ್ಲಿಯೇ ಜೀರ್ಣಾವಸ್ಥೆಯಲ್ಲಿ ಬಿದ್ದಿದ್ದ ಕಲ್ಲಿನ ಮಂಟಪ ಮತ್ತೆ ರಾಜಗಾಂಭೀರ್ಯದಿಂದ ತಲೆ ಎತ್ತಿನಿಂತಿದೆ. ಅಷ್ಟೇ ಅಲ್ಲ, ವಿಜಯ ವಿಠಲ ಮಂದಿರ ತನ್ನ ಸಪ್ತಸ್ವರ ಹೊರಡಿಸುತ್ತಿದ್ದ ಕಂಬಗಳ ಸ್ವರೂಪದಲ್ಲೇ ಹೊಸ ಕಂಬಗಳನ್ನು ಪಡೆಯುತ್ತಿದೆ!

ಹೌದು, ವಿಶ್ವ ಪಾರಂಪರಿಕ ತಾಣ ಎಂಬ ಹೆಗ್ಗಳಿಕೆ ಹೊಂದಿರುವ ಹಂಪಿಯಲ್ಲಿನ ಸ್ಮಾರಕಗಳ ಜೀರ್ಣೋದ್ಧಾರ ಕೆಲಸ ಭರದಿಂದ ನಡೆಯುತ್ತಿದೆ. ಸ್ಮಾರಕಗಳಿಗೆ ಹೊಸ ಮೆರುಗು ನೀಡಲಾಗುತ್ತಿದೆ. ಸ್ಮಾರಕಗಳ ಜೀರ್ಣೋದ್ಧಾರ ಪರ್ವವೇ ಇಲ್ಲೀಗ ಆರಂಭವಾಗಿದೆ.

ಹಂಪಿಯಲ್ಲಿ ಈಗ ಸುತ್ತಾಡಿದರೆ ಅರಸರ ಕಾಲದಲ್ಲೂ ಈ ಕಟ್ಟಡಗಳ ನಿರ್ಮಾಣ ಕಾರ್ಯ ಹೀಗೇ ನಡೆದಿದ್ದರಬಹುದೇ ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಕಂಬಗಳ ಮೇಲೆ ಹಲವು ಟನ್‌ಗಳಷ್ಟು ಭಾರದ ಕಲ್ಲಿನ ತೊಲೆಯನ್ನು ಕ್ರೇನ್‌ ಎತ್ತಿಡುವಾಗ ಯಂತ್ರಗಳು ಇಲ್ಲದಿದ್ದ ಆ ಕಾಲದಲ್ಲಿ ಕಾರ್ಮಿಕರು ತೊಲೆಯನ್ನು ಎತ್ತಿದ್ದು ಹೇಗೆ ಎಂದು ನೆನಪಿಸಿಕೊಂಡಾಗ ಮೈ ಜುಮ್‌ ಎನ್ನುತ್ತದೆ. ಆನೆಗಳ ಸಹಾಯದಿಂದ ಆಗ ಕಲ್ಲಿನ ಕಂಬ ಹಾಗೂ ತೊಲೆಗಳನ್ನು ನಿಲ್ಲಿಸಲಾಗುತ್ತಿಂತೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಹಂಪಿ ವೃತ್ತದ ಮೇಲ್ವಿಚಾರಣೆಯಲ್ಲಿ ಸ್ಮಾರಕಗಳ ಜೀರ್ಣೋದ್ಧಾರ ಕೆಲಸ ನಡೆಯುತ್ತಿದೆ. ಸ್ಮಾರಕಗಳಿಗೆ ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹೊಳಪು ನೀಡಲಾಗುತ್ತಿದೆ. ಹಂಪಿ ಉತ್ಸವದ ಸಮಯದಲ್ಲಿ ಮಾತ್ರ ತಮ್ಮ ಮೇಲೆ ಬೆಳಕಿನ ಮಳೆ ಸುರಿಸುವಂತೆ ಈಗಿನ ಮೆರುಗೇನು ತಾತ್ಕಾಲಿಕವಲ್ಲ ಎಂಬ ಹೆಮ್ಮೆ ಈ ಸ್ಮಾರಕಗಳಿಗೆ.

ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪ್ಪಯ್ಯ ಗೋಪುರಕ್ಕೆ ನೈಸರ್ಗಿಕ ಬಣ್ಣ ಬಳಿಯಲಾಗಿದೆ. ಗೋಪುರಕ್ಕೆ ಚಿನ್ನದ ಮೆರುಗು ನೀಡಲು ಸುಣ್ಣ, ಬೆಲ್ಲ ಹಾಗೂ ಕಡು ಕಾಯಿಯ ರಸಾಯನ ಬಳಸಲಾಗಿದೆ. ದೇಗುಲದ ಇನ್ನೆರಡು ಪ್ರಮುಖ ಗೋಪುರಗಳಾದ ರಾಯ ಹಾಗೂ ಕನಕಗಿರಿ ಗೋಪುರಗಳ ಜೀರ್ಣೋದ್ಧಾರ ಕಾರ್ಯ ಇನ್ನೇನು ಶುರುವಾಗಲಿದೆ. ದೇಗುಲಕ್ಕೆ ಹೊಂದಿಕೊಂಡಂತೆ ಇರುವ ಹೇಮಕೂಟ ಗುಡ್ಡದಿಂದ ಮಳೆ ನೀರು ನೇರವಾಗಿ ದೇವಸ್ಥಾನದ ಪ್ರಾಂಗಣದಲ್ಲಿ ಬಂದು ಸೇರುತ್ತಿತ್ತು. ಅರಸರ ಕಾಲದಲ್ಲಿ ನಿರ್ಮಿಸಿದ್ದ ಒಳಚರಂಡಿ ಮೂಲಕ ನೀರು ತುಂಗ ಭದ್ರಾ ನದಿಗೆ ಸೇರುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ತ್ಯಾಜ್ಯ ತುಂಬಿಕೊಂಡು ನೀರು ಹರಿದು ಹೋಗುತ್ತಿರಲಿಲ್ಲ. ಒಳಚರಂಡಿ ಸ್ವಚ್ಛತೆ ಜತೆಗೆ ದುರಸ್ತಿ ಮಾಡಲಾಗುತ್ತಿದೆ. ಮೊದಲಿನಂತೆ ನೀರು ನೇರವಾಗಿ ತುಂಗೆಯ ಒಡಲು ಸೇರುವಂತೆ ಯುದ್ಧೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.

ಸ್ವಲ್ಪ ಮಳೆ ಬಂದರೂ ಉಗ್ರ ನರಸಿಂಹ, ಬಡವಿಲಿಂಗ ಸ್ಮಾರಕ ಗಳ ಪರಿಸರದಲ್ಲಿ ಕೊಚ್ಚೆಯಾಗುತ್ತಿತ್ತು. ಪ್ರವಾಸಿಗರು ಸ್ಮಾರಕಗಳ ಹತ್ತಿರ ಹೋಗಲು ಆಗದಂತೆ ವಾತಾವರಣ ಸೃಷ್ಟಿ ಆಗುತ್ತಿತ್ತು. ಹಾಗಾಗಿ ಎರಡೂ ಸ್ಮಾರಕಗಳ ಪರಿಸರದಲ್ಲಿ ಹಾಸುಗಲ್ಲು ಹಾಕಲಾಗಿದೆ. ಅಷ್ಟೇ ಅಲ್ಲ, ಎರಡೂ ಸ್ಮಾರಕಗಳ ನಡುವಿನಿಂದ ಹರಿಯುವ ಕಿರು ಕಾಲುವೆಯನ್ನೂ ದುರಸ್ತಿಗೊಳಿಸಲಾಗಿದ್ದು, ಸ್ಮಾರಕಗಳ ಮಾರ್ಗ ಮಧ್ಯದಲ್ಲಿರುವ ಮಂಟಪವನ್ನು ಸುವ್ಯವಸ್ಥಿತ ವಾಗಿ ಮರು ಜೋಡಣೆ ಮಾಡಲಾಗುತ್ತಿದೆ. ಮುಖ್ಯರಸ್ತೆವರೆಗೆ ಹಾಸುಗಲ್ಲು ಹಾಕಲು ತೀರ್ಮಾನಿಸಲಾಗಿದೆ.

ವಿಜಯ ವಿಠಲ ದೇವಸ್ಥಾನದ ತದ್ರೂಪದಂತಿರುವ ಕಮಲಾಪುರ ಸಮೀಪದ ಪಟ್ಟಾಭಿರಾಮ ದೇವಸ್ಥಾನ ಇದುವರೆಗೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಈಗ ಅದನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಗಿದೆ. ದೇಗುಲದ ಇಡೀ ಪರಿಸರದಲ್ಲಿ ಹಾಸುಗಲ್ಲು ಹಾಕಲಾಗಿದೆ. ಮಂಟಪದ ಕಲ್ಲುಗಳನ್ನು ಮರು ಜೋಡಿಸಲಾಗಿದೆ.

ಹೀಗಾಗಿ ಇಡೀ ದೇವಸ್ಥಾನಕ್ಕೆ ಹೊಸರೂಪ ಬಂದಿದೆ. ಈಗ ನಿತ್ಯ ನೂರಾರು ಪ್ರವಾಸಿಗರು ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ.

ವಿಜಯ ವಿಠಲ ದೇವಸ್ಥಾನದಲ್ಲಿ ಸಪ್ತಸ್ವರ ಹೊರಡಿಸುತ್ತಿದ್ದ ಕಲ್ಲಿನ ಕಂಬಗಳು ಕೆಲವು ವರ್ಷಗಳ ಹಿಂದೆಯೇ ಜೀರ್ಣಾವಸ್ಥೆಗೆ ತಲುಪಿದ್ದವು. ಆ ಕಂಬಗಳನ್ನೇ ಹೋಲುವ ಹೊಸ ಕಂಬಗಳನ್ನು ನಿರ್ಮಿಸುವ ಕೆಲಸ ಭರದಿಂದ ಸಾಗಿದೆ. ತಮಿಳುನಾಡಿನ ಶಿಲ್ಪಿಗಳು ಕಂಬಗಳನ್ನು ಕೆತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜರ ಖಾಸಾ ಜಾಗ, ವೀರ ಹರಿಹರನ ಅರಮನೆಗೆ ಸಂಬಂಧಿಸಿದ ಯಾವುದೇ ಕುರುಹುಗಳೇ ಇದ್ದಿರಲಿಲ್ಲ. 1983ರಲ್ಲಿ ನಡೆದ ಉತ್ಖನನದಿಂದ ಆ ಸ್ಮಾರಕಗಳು ಇರುವ ಜಾಗ ಪತ್ತೆಯಾಗಿತ್ತು. ಅಲ್ಲೀಗ ಅವುಗಳ ಅಡಿಪಾಯ ನೋಡಬಹುದು. ಮೂರು ವರ್ಷ ಗಳಿಂದ ನಡೆಯುತ್ತಿದ್ದ ಜೀರ್ಣೋದ್ಧಾರ ಕೆಲಸ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ.

ಈಗ ಕೃಷ್ಣದೇವರಾಯನ ಅರಮನೆ ಅಭಿವೃದ್ಧಿಪಡಿಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ಅನಂತಶಯನಗುಡಿಗೆ ಸಂಪೂರ್ಣ ಹೊಸರೂಪ ಕೊಡಲಾಗುತ್ತಿದೆ. ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಪಾರಂಪರಿಕ ಕಟ್ಟಡ ನಿರ್ಮಾಣದ ಕೌಶಲ ವನ್ನೇ ಬಳಕೆ ಮಾಡಿಕೊಳ್ಳಲಾಗಿದ್ದು, ಗಾರೆ, ಸುಣ್ಣ, ಬೆಲ್ಲ, ತೆಂಗಿನ ನಾರು ಉಪಯೋಗಿಸಲಾಗುತ್ತಿದೆ. ಹಿಂದೆ ಅರಸರ ಕಾಲದಲ್ಲಿ ಅವುಗಳನ್ನೇ ಬಳಸಿಕೊಂಡು ಸ್ಮಾರಕಗಳನ್ನು ನಿರ್ಮಿಸಲಾಗಿತ್ತು. ಹೀಗಾಗಿ ಈಗಲೂ ಅವುಗಳ ಮೊರೆ ಹೋಗಲಾಗಿದೆ.

ಶೀಘ್ರದಲ್ಲೇ ಆನೆಸಾಲು ಮಂಟಪ, ಹಜಾರರಾಮ ದೇವ ಸ್ಥಾನ, ರಾಣಿ ಸ್ನಾನಗೃಹ, ಭದ್ರತಾ ಸಿಬ್ಬಂದಿ ಮನೆ, ಸಾರ್ವಜನಿಕ ಶೌಚಗೃಹಗಳ ಜೀರ್ಣೋದ್ಧಾರ ಕೆಲಸ ಆರಂಭವಾಗಲಿದೆ. ಐ.ಐ.ಟಿ. ಮದ್ರಾಸ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ತಜ್ಞ ರಿಂದ ಸಲಹೆ ಪಡೆದು ಹಂಪಿ ಬಜಾರ್‌ ಅಭಿವೃದ್ಧಿಗೊಳಿಸಲು ತೀರ್ಮಾನಿಸಲಾಗಿದೆ. ಇಡೀ ಹೇಮಕೂಟ ಸ್ಮಾರಕವನ್ನು ಜೀರ್ಣೋದ್ಧಾರಗೊಳಿಸಲು ಈಗಾಗಲೇ ರೂಪು ರೇಷೆ ತಯಾರಿಸಲಾಗಿದೆ ಎನ್ನುತ್ತಾರೆ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳು.

‘ಸ್ಮಾರಕಗಳ ಜೀರ್ಣೋದ್ಧಾರ ಹಾಗೂ ನಿರ್ವಹಣೆಗೆ ಹಿಂದಿನ ವರ್ಷ ಒಟ್ಟು ₹ 67 ಕೋಟಿ ವೆಚ್ಚ ಮಾಡಲಾಗಿದೆ. ಈ ಬಾರಿ 34 ಪ್ರಸ್ತಾವಗಳಿಗೆ ಒಪ್ಪಿಗೆ ಸಿಕ್ಕಿದೆ. ಹಣ ಬಿಡುಗಡೆಯಾದ ಕೂಡಲೇ ಕೆಲಸ ಆರಂಭಿಸಲಾಗುತ್ತದೆ. ಖಾಸಗಿಯವರು ನಮ್ಮ ಕೆಲಸಕ್ಕೆ ಕೈಜೋಡಿಸಲು ಮುಂದೆ ಬಂದಿದ್ದಾರೆ. ಕೃಷ್ಣ ದೇವಸ್ಥಾನವನ್ನು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್‌.ಆರ್‌.) ಅಡಿ ಅಭಿವೃದ್ಧಿಪಡಿಸಲು ಜಿಂದಾಲ್‌ ಕಂಪನಿ ಮುಂದೆ ಬಂದಿದೆ’ ಎಂದು ಎ.ಎಸ್‌.ಐ. ಹಂಪಿ ವೃತ್ತದ ಪ್ರಭಾರ ಸೂಪರಿಂಟೆಂಡೆಂಟ್‌ ಕೆ. ಮೂರ್ತೇಶ್ವರಿ ಹೇಳುತ್ತಾರೆ. ಹೌದು. ಹಂಪಿಯಲ್ಲಿರುವ ಸ್ಮಾರಕಗಳು ಶೀಘ್ರದಲ್ಲೇ ಮೊದಲಿನ ರೂಪ ಪಡೆದುಕೊಂಡು ಗತವೈಭವವನ್ನು ಸಾರಲಿವೆ.⇒ಚಿತ್ರಗಳು: ಬಿ.ಬಾಬುಕುಮಾರ

***
ಸ್ಮಾರಕಗಳ ಮೇಲಿರಲಿ ಕಾಳಜಿ

ರಾಜ್ಯದ ಹೆಮ್ಮೆಯ ಪಾರಂಪರಿಕ ತಾಣಗಳ ರಕ್ಷಣೆಯಲ್ಲಿ ನಮ್ಮ ಹೊಣೆಯೂ ಇದೆ. ಅಂತಹ ತಾಣಗಳಿಗೆ ಭೇಟಿ ಕೊಟ್ಟಾಗ ಈ ಅಂಶಗಳನ್ನು ಗಮನದಲ್ಲಿ ಇಡಬೇಕು

* ವ್ಯಕ್ತಿಗಳ ಮೇಲಿನ ನಿಮ್ಮ ಪ್ರೀತಿಯ ಅಭಿವ್ಯಕ್ತಿ ವೈಯಕ್ತಿಕ. ಆದರೆ, ಸ್ಮಾರಕಗಳ ಮೇಲಿನ ಯಜಮಾನಿಕೆ ಸಾರ್ವಜನಿಕ. ಹೀಗಾಗಿ ಅವುಗಳ ಮೇಲೆ ಹೆಸರು ಕೆತ್ತುವುದು ಬೇಡ.

* ಸ್ಮಾರಕಗಳ ಒಳಗೆ ಕೂಗು ಹಾಕುವುದು, ನಿಷಿದ್ಧ ಸ್ಥಳಗಳಲ್ಲಿ ಫೋಟೊ ತೆಗೆಯುವುದು ಅನಾಗರಿಕ ಲಕ್ಷಣ. ಅಂತಹ ಅನಾಗರಿಕರು ನಾವಾಗುವುದು ಬೇಡ.

* ಪಾರಂಪರಿಕ ತಾಣಗಳು ಬೆರಗಿನ ಗೂಡುಗಳು. ಹಾಗಂತ ಮುಟ್ಟಿ–ತಟ್ಟಿ ಅವುಗಳ ಪರೀಕ್ಷೆ ಮಾಡುವುದು ಬೇಡ (ವಿಜಯ ವಿಠಲ ದೇವಾಲಯದ ಸಪ್ತಸ್ವರದ ಕಂಬಗಳಿಗೆ ಜನ ಕುಟ್ಟಿ–ಕುಟ್ಟಿಯೇ ಅವುಗಳನ್ನು ಸಂಪೂರ್ಣ ಹಾಳುಮಾಡಿದ್ದು ನೆನಪಿದೆ ತಾನೆ? ಅವುಗಳ ಪ್ರತಿಕೃತಿ ನಿರ್ಮಾಣ ಮಾಡಬಹುದೇ ಹೊರತು ಅಂತಹ ಕಂಬಗಳಿಂದ ಸಪ್ತಸ್ವರ ಹೊರಡಿಸಲು ಸಾಧ್ಯವಿಲ್ಲ).

* ಸ್ಮಾರಕದ ಸುತ್ತಲಿನ ಸಂರಕ್ಷಿತ, ನಿಷೇಧಿತ ಹಾಗೂ ನಿರ್ಬಂಧಿತ ವಲಯದಲ್ಲಿ ವಾಹನ ನಿಲುಗಡೆ, ಊಟದ ಆತಿಥ್ಯದ ಮೂಲಕ ಗಲೀಜು ಮಾಡುವುದು ಬೇಡ.

* ಸ್ಮಾರಕಗಳನ್ನು ವಿರೂಪಗೊಳಿಸುವುದು ಪುರಾತತ್ವ ತಾಣ ಮತ್ತು ಭಗ್ನಾವಶೇಷಗಳ ಸಂರಕ್ಷಣಾ (ಎಎಂಎಎಸ್‌ಆರ್‌) ಕಾಯ್ದೆ–1958 ಪ್ರಕಾರ ಶಿಕ್ಷಾರ್ಹ ಅಪರಾಧ. ಈ ಕಾಯ್ದೆಯನ್ನು ಮರೆಯುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT