ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ ಸಿನಿಮಾ ಮಾಡಿ

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಈ ಸಿನಿಮೋತ್ಸವದ ಆಯ್ಕೆ ಸಮಿತಿಯಲ್ಲಿ ಇದ್ದ ಅನುಭವ..
ನಾನು ಹಾಗೂ ಸಿನಿಮೋತ್ಸವ ನಿರ್ದೇಶಕರಾದ ರಿಕ್ಕಿ ಕೇಜ್ ಗೆಳೆಯರು. ಅವರು ಈ ಸಿನಿಮೋತ್ಸವದ ಬಗ್ಗೆ ಹೇಳಿದಾಗ ಖುಷಿ ಆಯ್ತು. ನನಗೆ ಭಾರತವನ್ನು ನೋಡುವ ಆಸೆ ಇತ್ತು. ನನ್ನ ಗೆಳತಿ ಕೂಡ ಭಾರತದವಳೇ. ಹಾಗಾಗಿ ಇಲ್ಲಿ ಬಂದೆವು. ವಿಶ್ವದಾದ್ಯಂತ ಹಲವು ಭಾಷೆಯ ಸಿನಿಮಾಗಳು ಬಂದಿದ್ದವು. ಎಲ್ಲವೂ ನಿಜಕ್ಕೂ ಅದ್ಭುತ ಸಿನಿಮಾಗಳು. ಉತ್ತಮ ಸಂದೇಶ ಇರುವ ಪರಿಸರ ಕಾಳಜಿಯುಳ್ಳ ಕಥೆಗಳಾಗಿದ್ದವು.

ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಬಂದಿದ್ದು ಹೇಗೆ..
ನನ್ನ ತಂದೆಯ ಪೋಷಕರು ಹಾಗೂ ತಾಯಿ ಪೋಷಕರು ಸಿನಿಮಾ ಕ್ಷೇತ್ರದಲ್ಲಿ ಇದ್ದವರೇ. ನನ್ನ ಅಜ್ಜಿಯ ತಾಯಿ ಸ್ವೀಡನ್ ದೇಶದ ಮೊದಲ ಮಹಿಳಾ ನಿರ್ದೇಶಕಿ. ನನ್ನ ತಾತ ಸಿನಿಮಾ ನಿರ್ದೇಶಕ ಹಾಗೂ ಅದ್ಭುತ ಛಾಯಾಗ್ರಹಕ. ಹೀಗಾಗಿ ಹುಟ್ಟಿನಿಂದಲೇ ನನಗೆ ಸಿನಿಮಾ ನಂಟು ಬೆಳೆದು ಬಂದಿದೆ. ನಾನು ಪ್ರೌಢಶಾಲೆ ನಂತರ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ನಲ್ಲಿ ಡಿಪ್ಲೊಮಾ ಮಾಡಿದೆ. ಕಾಲೇಜಿನಿಂದಲೇ ರಂಗಭೂಮಿಯ ನಂಟು ಬೆಳೆಯಿತು. ಅಲ್ಲಿ ನನಗೆ ಅಭಿನಯದ ಕಷ್ಟ ಅರಿವಾಯಿತು. ಮೂರ್ನಾಲ್ಕು ಪುಟದಷ್ಟು ಸಂಭಾಷಣೆ ನೆನಪಿಟ್ಟುಕೊಳ್ಳುವುದು, ರಂಗದ ಮೇಲೆ ಗಂಟೆಗಟ್ಟಲೆ ಅಭಿನಯಿಸುವುದು ನನ್ನಿಂದ ಸಾಧ್ಯವಿಲ್ಲ ಎನಿಸಿತು. ಆದರೆ ನಾನು ತೆರೆ ಹಿಂದಿನ ಕೆಲಸದಲ್ಲಿ ನಿಪುಣನಾಗಿದ್ದೆ. ಹಾಗಾಗಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡೆ. ಹಲವು ಸಿನಿಮಾಗಳಿಗೆ ಕಥೆ ಬರೆದೆ, ನಿರ್ದೇಶನ ಮಾಡಿದೆ.

*ನೀವು ಆರಂಭಿಸಿರುವ ಪ್ರಿಯಾಂಪ್‌ ಎಂಬ ಸಾಕ್ಷ್ಯಚಿತ್ರ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆ ಬಗ್ಗೆ ಹೇಳಿ..
ನಾನು ಸಣ್ಣದೊಂದು ಕಂಪ್ಯೂಟರ್ ಪ್ರೋಗ್ರಾಮಿಂಗ್‌ ಕಂಪೆನಿಯನ್ನು ಆರಂಭಿಸಿದ್ದೆ. ಒಳ್ಳೆ ಹಣವನ್ನೂ ಗಳಿಸುತ್ತಿದ್ದೆ. ಆದರೆ ನನ್ನೊಳಗಿನ ಸಿನಿಮಾ ತುಡಿತ ಸುಮ್ಮನಿರಲು ಬಿಡಲಿಲ್ಲ. ಎಷ್ಟು ದುಡ್ಡಿದರೇನು ನನಗೆ ಇಷ್ಟವಿರುವ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕಾಡುತ್ತಿತ್ತು. ಹಾಗಾಗಿ ನನ್ನ ಪ್ರೋಗ್ರಾಮಿಂಗ್ ಸಂಸ್ಥೆಯನ್ನು ಮಾರಿದೆ. ನಂತರ ಪ್ರಿಯಾಂಪ್‌(preamp) ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದೆ. ಅನಿಮೇಟೆಡ್‌ ಸಿನಿಮಾಗಳನ್ನು ಮಾಡ ತೊಡಗಿದೆ. ನನಗೆ ಸಾಕ್ಷ್ಯಚಿತ್ರ ಮಾಡುವುದು ಕೂಡ ತುಂಬಾ ಇಷ್ಟ. ಸ್ಥಳೀಯ (ಸ್ವೀಡನ್) ಸಿನಿಮಾ ನಿರ್ದೇಶಕರನ್ನು ನಮ್ಮ ಸಂಸ್ಥೆ ಪ್ರೋತ್ಸಾಹಿಸುತ್ತಿದೆ.  

*‘ಮಾರಿಯಾ ಆ್ಯಂಡ್ ಹರ್ ಶ್ಯಾಡೊ’ ಸಾಕ್ಷ್ಯಚಿತ್ರ ಕುರಿತು ಹೇಳಿ..
ನಾನು ಮಾಡಿದ ಮಹತ್ವಪೂರ್ಣ ಸಾಕ್ಷ್ಯಚಿತ್ರದಲ್ಲಿ ಇದು ಮುಖ್ಯವಾದುದು. 2007ರಲ್ಲಿ ನಿರ್ಮಿಸಿದೆ. ಇದು ಅನಾರೋಗ್ಯಕ್ಕೆ ತುತ್ತಾದ ಮಹಿಳಾ ಬಾಕ್ಸರ್‌ ಕಥೆ. ಮರಿಯಾ, ಸ್ವೀಡನ್‌ ದೇಶದ ಹೆಮ್ಮೆಯ ಬಾಕ್ಸರ್. ಆಕೆಯ ತಲೆಯಲ್ಲಿ ರಕ್ತ ಸೋರಿಕೆಯಾದ್ದರಿಂದ ಆಕೆಯನ್ನು ಬಾಕ್ಸಿಂಗ್ ಪಂದ್ಯದಿಂದ ಸ್ವೀಡನ್ ಬಾಕ್ಸಿಂಕ್ ಫೆಡರೇಷನ್ ನಿರ್ಬಂಧ ಹೇರಿತು. ಇದನ್ನು ಕಂಡ ನನಗೆ ಕೋಪವಾಗುತ್ತಿತ್ತು. ಈಕೆ ಯಾವುದೇ ದೇಶಕ್ಕೆ ಪಂದ್ಯವಾಡಲು ಹೋದರು ಹಲವರು ಆಕೆಯನ್ನು ಹೀಯಾಳಿಸುತ್ತಿದ್ದರು. ಆದರೆ ಅವರು ಸುಮ್ಮನೆ ಕೂರಲಿಲ್ಲ, ಅವರ ಪ್ರಯತ್ನ ಫಲಿಸಿ ರಷ್ಯಾ ಹಾಗೂ ಜರ್ಮನಿ ದೇಶದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಪಂದ್ಯವಾಡಿ ಮೂರು ಬಾರಿ ಪದಕ ಪಡೆದರು. ಇವರ ಬಾಕ್ಸಿಂಗ್ ಪಯಣವನ್ನು ‘ಮಾರಿಯಾ ಆ್ಯಂಡ್ ಹರ್ ಶ್ಯಾಡೊ’ ಸಾಕ್ಷ್ಯಚಿತ್ರದಲ್ಲಿ ಹಿಡಿದಿಟ್ಟಿದ್ದೇನೆ. ನಾನು ನಿರ್ಮಿಸಿದ ಮೊದಲ ಸಾಕ್ಷ್ಯಚಿತ್ರವಿದು. ಅದ್ಭುತ ಅನುಭವನ್ನು ನೀಡಿತು.

*ಭಾರತೀಯ ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯ
ಭಾರತೀಯ ಸಿನಿಮಾ ಎಂದರೆ ಬಾಲಿವುಡ್‌ ಬಗ್ಗೆ ಮಾತನಾಡಲೇ ಬೇಕು. ಅದುಹೇಗೆ ಸಿನಿಮಾ ಕತೆ ಮಧ್ಯೆ ಹಾಡು; ನೃತ್ಯ ಬಂದು ಹೋಗುತ್ತೆ ನನಗೆ ನಿಜಕ್ಕೂ ಕುತೂಹಲವಿದೆ. ನನ್ನ ಮುಂದಿನ ಸಿನಿಮಾದಲ್ಲಿ ಹಾಡೊಂದನ್ನು ಚಿತ್ರೀಕರಿಸುವ ಯೋಚನೆಯಲ್ಲಿ ಇದ್ದೇನೆ. ಹಾಗೇ ಲಂಚ್‌ಬಾಕ್ಸ್‌ನಂಥ ಅದ್ಭುತ ಸಿನಿಮಾಗಳೂ ಇವೆ. ಭಾರತೀಯ ಸಿನಿಮಾ ಎಂದರೆ ನನಗೆ ಎಂದಿಗೂ ಕೌತುಕ

*ಮಕ್ಕಳ ಸಿನಿಮಾ ನಿರ್ಮಾಣ ಕುರಿತು ನಿಮ್ಮ ಕಾರ್ಯಚಟುವಟಿಕೆ ಬಗ್ಗೆ ಹೇಳಿ..
ಸಿನಿಮಾ ನಿರ್ಮಾಣವನ್ನು ತೀರಾ ವ್ಯವಹಾರಿಕವಾಗಿ ನೋಡಲಾಗುತ್ತಿದೆ. ಹಣಗಳಿಕೆ ಒಂದೇ ಉದ್ದೇಶವಲ್ಲ. ಆದರೂ ಹಣವಿಲ್ಲದೆ ಯಾವುದೇ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಸ್ವೀಡನ್‌ನ ಸರ್ಕಾರ ಮಕ್ಕಳ ಸಿನಿಮಾ ತಯಾರಿಕೆಗೆ ಹೆಚ್ಚು ಪ್ರೋತ್ಸಹ ನೀಡುತ್ತಿದೆ. ಸಬ್ಸಿಡಿ ಹಣವನ್ನೂ ನೀಡುತ್ತಿದೆ. ಹಾಗಾಗಿ ಕಿರುತೆರೆಗಾಗಿ ಮಕ್ಕಳ ಅನಿಮೇಟೆಡ್‌ ಸಿನಿಮಾವನ್ನು ತಯಾರಿಸುತ್ತಿದ್ದೇನೆ. ಹಾಗೇ ನಮ್ಮ ದೇಶದಲ್ಲಿ ಇಂಟರ್‌ನೆಟ್‌ ಬಳಕೆ ಹೆಚ್ಚಿದೆ. ಹಾಗಾಗಿ ಆನ್‌ಲೈನ್ ಅನಿಮೇಟೆಡ್‌ ರಿಯಾಲಿಟಿ ಷೋ ಮಾಡುತ್ತಿದ್ದೇನೆ.

*ಅನಿಮೇಟೆಡ್‌ ರಿಯಾಲಿಟಿ ಷೋ ನಮಗೆ ಹೊಸದು. ಅದರ ಬಗ್ಗೆ ಇನ್ನಷ್ಟು ಹೇಳುವಿರಾ?
ಇದೊಂದು ಬಗೆಯ ಸಂವಾದ ಕಾರ್ಯಕ್ರಮ. 2ಡಿ ಅನಿಮೇಷನ್‌ನ ಟೆಡ್ಡಿಬೇರ್ ಪರದೆಯ ಮೇಲೆ ಬರುತ್ತದೆ, ಟೆಡ್ಡಿಬೇರ್‌ನೊಂದಿಗೆ ಮಕ್ಕಳು ನೇರವಾಗಿ ಮಾತನಾಡಬಹುದು, ಪ್ರಶ್ನೆ ಕೇಳಬಹುದು. ಆ ಟೆಡ್ಡಿಬೇರ್‌ ಅದಕ್ಕೆ ಉತ್ತರಿಸುತ್ತದೆ. ವ್ಯಕ್ತಿಯೊಬ್ಬರು ಟೆಡ್ಡಿಬೇರ್‌ನಂತೆ ಕುಳಿತುಕೊಂಡಿರುತ್ತಾರೆ. ತೆರೆ ಮೇಲೆ ಅವರ ಚಲನವಲವನ್ನು ಟೆಡ್ಡಿಬೇರ್‌ನಂಥ ವರ್ಚ್ಯೂಲ್ ವಿಡಿಯೊ ಮಾಡಿ ನೇರ ಪ್ರಸಾರ ಮಾಡಲಾಗುತ್ತದೆ. ಅಡೋಬ್‌ ತಂತ್ರಜ್ಞಾನಕ್ಕೆ ಧನ್ಯವಾದ ಹೇಳಬೇಕು. ಮಕ್ಕಳೇ ನಮ್ಮ ಮುಂದಿನ ಭವಿಷ್ಯ. ಅವರಿಗಾಗಿ ನಾವು ಉತ್ತಮ ಸಮಾಜ ಮತ್ತು ಪರಿಸರವನ್ನು ನಿರ್ಮಿಸಿ ಹೋಗಬೇಕು.

*ನಿಮ್ಮ ಸಾಮಾಜಿಕ ಕೆಲಸಗಳಿಗೆ ಸಿನಿಮಾ ಮಾಧ್ಯಮವನ್ನು ಆಯ್ದುಕೊಂಡಿದ್ದು ಏಕೆ...
ನನಗೊಂದು ಜವಾಬ್ದಾರಿ ಇದೆ. ನಾವು ಅಂದುಕೊಂಡಂತೆ ಬದುಕಲು ಸಾಧ್ಯವಿಲ್ಲ. ಪರಿಸರದ ಬಗ್ಗೆ ಮಾತನಾಡುತ್ತೇವೆ, ಆದರೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿಲ್ಲ. ಸಂಚಾರ ದಟ್ಟಣೆ ಬಗ್ಗೆ ಮಾತನಾಡುತ್ತೇವೆ, ಒಬ್ಬೊಬ್ಬರು ಒಂದೊಂದು ಕಾರಿನಲ್ಲಿ ಓಡಾಡುತ್ತೇವೆ. ಎಲ್ಲರೂ ವಿದ್ಯಾವಂತರೇ. ಆದರೂ ನಿತ್ಯ ನಾಗರಿಕ ಕರ್ತವ್ಯಗಳನ್ನು ನೆನಪಿಸುತ್ತಿರಬೇಕು. ಈ ಎಲ್ಲಾ ಹಾದಿಯ ಪರಿಣಾಮಕಾರಿ ಪಯಣಕ್ಕೆ ಸಿನಿಮಾ ಮಾಧ್ಯಮ ಆಯ್ದುಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT