ಬ್ಯಾರೆಲ್ ಬಳಸಿ, ಮಳೆ ನೀರುಳಿಸಿ

7

ಬ್ಯಾರೆಲ್ ಬಳಸಿ, ಮಳೆ ನೀರುಳಿಸಿ

Published:
Updated:
ಬ್ಯಾರೆಲ್ ಬಳಸಿ, ಮಳೆ ನೀರುಳಿಸಿ

ಮಳೆ ನೀರಿನ ಸಂಗ್ರಹಕ್ಕಾಗಿ ಬ್ಯಾರೆಲ್‌ ಬಳಸುವ ಸಂಬಂಧ ಹೊಸ ಘೋಷಣೆಯನ್ನೇ ಸೃಷ್ಟಿಸಿದ್ದಾರೆ ರಾಜಗೋಪಾಲ ಭಟ್ಟರು. ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆಯ ಹವ್ಯಕಭವನದ ಬಳಿ ಅವರು ಸಣ್ಣ ವ್ಯಾಪಾರ ಮಾಡುತ್ತಿದ್ದಾರೆ. ವಾಸದ ಸ್ವಂತ ಮನೆಯಿದೆ. ಮನೆಯ ಸುತ್ತಲೂ ವಿಧವಿಧದ ತರಕಾರಿ ಮತ್ತು ಹೂಗಳ ಗಿಡಗಳಿವೆ. ನೀರಿನಾಸರೆಯ ತೆರೆದ ಬಾವಿಯಿದೆ. ಈಗ ತಾರಸಿ ಮನೆಯ ಚಾವಣಿ ಮೇಲೆ ಹನಿ ಮಳೆನೀರನ್ನೂ ವ್ಯರ್ಥವಾಗಿ ಹರಿದುಹೋಗಲು ಅವರು ಬಿಡುವುದಿಲ್ಲ. ಜೂನ್ ತಿಂಗಳಿಂದ ನವೆಂಬರ್‌ ತನಕ ಬೀಳುವ ಮಳೆಯ ಎಲ್ಲ ನೀರೂ ತೆರೆದ ಬಾವಿಯೊಳಗೆ ಹೋಗಿ ತುಂಬಿ ತುಳುಕುವಂತೆ ಮಾಡಿದೆ.

ಮಳೆ ನೀರಿಂಗಿಸಲು ಭಟ್ಟರು ಕೈಗೊಂಡ ವಿಧಾನ ಎಲ್ಲರ ಹಾಗಲ್ಲ. ಬಾವಿಯ ಬಳಿ ಅಳತೆ ಪ್ರಕಾರದ ಹೊಂಡ ತೆಗೆದು ಜಲ್ಲಿಕಲ್ಲು, ಇದ್ದಿಲು ಮತ್ತು ನೀರನ್ನು ಜರಡಿಯಾಡುವ ಫಿಲ್ಟರ್ ಬಲೆಗಳನ್ನು ಒಂದೊಂದು ಪದರವಾಗಿ ಹಾಕುವ ಪದ್ಧತಿ ಎಲ್ಲ ಕಡೆಯೂ ಪರಿಚಿತವಾಗಿದೆ. ಆದರೆ ಭಟ್ಟರಿಗೆ ಹೊಂಡ ತೆಗೆದು ಈ ವಿಧಾನವನ್ನು ಅಳವಡಿಸಲು ಅಡ್ಡಿಯಾದದ್ದು ಕೆಲಸಗಾರರ ಸಮಸ್ಯೆ. ಆಗ ಗೆಳೆಯರೊಬ್ಬರ ಸಲಹೆ ಈ ಸಮಸ್ಯೆಗೆ ಉತ್ತರ ನೀಡಿತು. ಅದೇ ಬ್ಯಾರೆಲ್ ಬಳಸಿ ಮಳೆ ನೀರುಳಿಸುವ ವಿಧಾನ. ಇದರಲ್ಲಿ ಬಾವಿಯ ಬಳಿ ಗುಂಡಿ ತೋಡುವ ಅವಶ್ಯವೇ ಇಲ್ಲ. ಯಾರ ಸಹಾಯವೂ ಬೇಕಾಗದೆ ಒಬ್ಬರೇ ನಿಭಾಯಿಸಬಹುದು.

ಬೇಕಾಗುವುದು ಇನ್ನೂರು ಲೀಟರ್ ಅಳತೆಯ ಒಂದು ಫೈಬರ್ ಬ್ಯಾರೆಲ್. ಪೇಟೆಯಲ್ಲಿ ಮಾರಾಟಕ್ಕೆ ಸಿಗುವ ಬ್ಯಾರೆಲ್ ತೆಳ್ಳಗಾಗಿದ್ದು ಬಿಸಿಲಿಗೆ ಬೇಗ ಹಾಳಾಗುತ್ತದೆ. ಇದರ ಬದಲು ರಾಸಾಯನಿಕ ದ್ರವಗಳನ್ನು ತುಂಬಿಕೊಂಡು ಬರುವ ದಪ್ಪ ಬ್ಯಾರೆಲ್ ತಂದರೆ ಬಿಸಿಲನ್ನು ಸಹಿಸಿಕೊಂಡು ತುಂಬ ವರ್ಷ ಬಾಳಿಕೆ ಬರುತ್ತದೆಂಬ ಕಿವಿಮಾತನ್ನು ಹೇಳುತ್ತಾರೆ. ತಳ ಭಾಗದಲ್ಲಿ ಬ್ಯಾರೆಲ್‌ಗೆ ರಂಧ್ರ ಮಾಡಿಸಿ ಬಾವಿಗೆ ನೀರು ಹೋಗಲು ಕೊಳವೆ ಜೋಡಿಸಬೇಕು. ಬಳಿಕ ಮೂರು ಬುಟ್ಟಿಗಳಷ್ಟು ದೊಡ್ಡ ಗಾತ್ರದ ಜಲ್ಲಿಕಲ್ಲುಗಳನ್ನು ಬ್ಯಾರೆಲ್ ತಳದಲ್ಲಿ ಹರಡಬೇಕು. ಅದರ ಮೇಲಿಂದ ವೃತ್ತಾಕಾರದ ಫಿಲ್ಟರ್ ಬಲೆಯನ್ನು ಕೊಂಚವೂ ಜಾಗ ಉಳಿಯದಂತೆ ಒತ್ತಿಡಬೇಕು. ಇದರ ಮೇಲಿಂದ ಎರಡು ಡಬ್ಬ ಇದ್ದಿಲು ಹರಡಿ ಇನ್ನೊಂದು ಬಲೆಯನ್ನು ಮೇಲ್ಭಾಗದಲ್ಲಿರಿಸಿದರೆ ಚಾವಣಿಯ ನೀರನ್ನು ಸ್ವೀಕರಿಸಲು ಗುಂಡಿ ಸಿದ್ಧವಾದಂತೆಯೇ. ಇದಕ್ಕೆ ಬೇಕಾದ ಸಮಯ ಕೇವಲ ಮೂರು ಗಂಟೆ. ಬ್ಯಾರೆಲ್ ಒಳಗೆ ಬಿದ್ದ ನೀರು ಶುದ್ಧೀಕರಣವಾಗುತ್ತದೆ.

ಮೊದಲ ಮಳೆಯ ನೀರನ್ನು ನಾವು ಇದರೊಳಗೆ ಬಿಡುವುದಿಲ್ಲ. ಚಾವಣಿಯ ಕಸ ಕಡ್ಡಿಗಳು ತೊಳೆದುಹೋದ ಬಳಿಕ ಚಾವಣಿಯ ನೀರು ಹರಿದು ಬರಲು ಜೋಡಿಸಿದ ಕೊಳವೆಯ ಮುಖವನ್ನು ಬ್ಯಾರೆಲ್‌ ಒಳಗಿಡುತ್ತೇವೆ. ನೀರು ಶುದ್ಧೀಕರಣಗೊಂಡು 40 ಅಡಿ ಆಳವಿರುವ ತೆರೆದ ಬಾವಿ ಸೇರುತ್ತದೆ ಎನ್ನುತ್ತಾರೆ ಭಟ್ಟರ ಸಹಧರ್ಮಿಣಿ ಜಯಶ್ರೀ. ಪರಿಶುದ್ಧವಾದ ಈ ನೀರು ವಾಸನೆಯಿಲ್ಲ, ಕೆಟ್ಟ ರುಚಿಯಿಲ್ಲ. ಏಪ್ರಿಲ್ ತಿಂಗಳ ಹೊತ್ತಿಗೆ ಕುಡಿಯುವ ನೀರಿಗೂ ತತ್ವಾರವಾಗುತ್ತಿತ್ತು. ಆದರೆ ಈ ರೀತಿ ನೀರಿನ ಉಳಿತಾಯ ಆರಂಭಿಸಿದ ಮೇಲೆ ಎಷ್ಟು ತೆಗೆದರೂ ಬಾವಿಯಲ್ಲಿ ನೀರು ತುಂಬಿಕೊಳ್ಳುತ್ತದೆ. ಇದರಿಂದ ಗಿಡಗಳಿಗೂ ಅನುಕೂಲವಾಗಿದೆ.

ನಮಗೆ ಪಂಚಾಯಿತಿಯ ನಲ್ಲಿಯ ಸೌಲಭ್ಯವಿದ್ದರೂ ನಿಸರ್ಗದ ಈ ಕೊಡುಗೆಯನ್ನು ಪೂರ್ಣವಾಗಿ ಬಳಸಿಕೊಳ್ಳುತ್ತೇವೆ. ಚಾವಣಿಗೆ ಬಿದ್ದ ಹನಿ ನೀರು ಕೂಡ ಚರಂಡಿ ಸೇರದೆ ಬಾವಿಯಲ್ಲೇ ಸಂಗ್ರಹವಾಗುತ್ತದೆ ಎನ್ನುವ ಭಟ್ಟರ ಈ ತಂತ್ರಕ್ಕೆ ಬ್ಯಾರೆಲ್, ನಾಲ್ಕು ಕೊಳವೆ, ಜಲ್ಲಿ, ಇದ್ದಿಲುಗಳಿಗೆ ಮೂರು ಸಾವಿರ ರೂಪಾಯಿ ವೆಚ್ಚವಾಗಿದೆ. ಬಹು ಸುಲಭವಾಗಿ ಈ ವಿಧಾನದಿಂದ ಬೇರೆ ತೊಟ್ಟಿಗಳಲ್ಲಿ ಮಳೆನೀರನ್ನು ಸಂಗ್ರಹಿಸಿಕೊಳ್ಳಬಹುದು ಎಂದು ಹೇಳುತ್ತಾರೆ.⇒v

 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry