ಮೀಸಲಾತಿ ಏರಿಕೆಯ ದಾರಿ ಸುಲಭವೇ?

ಬುಧವಾರ, ಜೂನ್ 19, 2019
28 °C

ಮೀಸಲಾತಿ ಏರಿಕೆಯ ದಾರಿ ಸುಲಭವೇ?

Published:
Updated:

–ಎಸ್‌. ಗಣೇಶನ್

ಎರಡು ವರ್ಷಗಳ ಹಿಂದೆ ನಡೆಸಿದ ‘ಜಾತಿ ಜನಗಣತಿ’ ವರದಿಯ ಆಧಾರದ ಮೇಲೆ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ 50ರಿಂದ ಶೇ 70ಕ್ಕೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಾತಿ ಗಣತಿಯ ವಸ್ತುಸ್ಥಿತಿ ವರದಿಯನ್ನು ಪ್ರಕಟಿಸುವುದು, ಪರಿಶಿಷ್ಟ ಜಾತಿಗೆ ಈಗಿರುವ ಶೇ 15ರಷ್ಟು ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸುವುದು ಸರ್ಕಾರದ ಉದ್ದೇಶ ಇದ್ದಂತಿದೆ. ಉಳಿದಂತೆ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಇರಾದೆ ಸರ್ಕಾರದ್ದು.

ಆದರೆ ಈ ನಿರ್ಧಾರವನ್ನು ಜಾರಿಗೆ ತರುವುದು ಸಿದ್ದರಾಮಯ್ಯ ಅವರಿಗೆ ಅಷ್ಟು ಸುಲಭವಲ್ಲ. ಒಂದು ಕಡೆ ಪ್ರಬಲ ಜಾತಿಗಳ ವಿರೋಧ, ಮತ್ತೊಂದು ಕಡೆ ಕಾನೂನಿನ ಅಡಚಣೆ ಎದುರಾಗಲಿದೆ. ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಇರುವುದನ್ನು ಬಿಟ್ಟರೆ ದೇಶದ ಇತರೆ ಯಾವುದೇ ರಾಜ್ಯದಲ್ಲಿಯೂ ಮೀಸಲಾತಿ ಪ್ರಮಾಣ ಶೇ 50 ಮೀರಿಲ್ಲ. ವಾಸ್ತವ ಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣ

ಶೇ 70ರಷ್ಟು ಆಗುವುದು ಸುಲಭವೇ?

ಮೀಸಲಾತಿಗೆ ಸಂಬಂಧಿಸಿದಂತೆ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1992ರ ನ. 16ರಂದು ನೀಡಿದ ತೀರ್ಪಿನ ಪ್ರಕಾರ ‘ಸಂವಿಧಾನದ ವಿಧಿ 16 (4)ರ ಅನ್ವಯ ಮೀಸಲಾತಿಯ ಪ್ರಮಾಣ ಶೇ 50 ಮೀರುವಂತಿಲ್ಲ’. ಆದರೂ ತಮಿಳುನಾಡಿನಲ್ಲಿ ಮೀಸಲಾತಿಯ ಪ್ರಮಾಣ ಹೇಗೆ ಶೇ 69ರಷ್ಟು ಇದೆ ಎನ್ನುವುದು ಅಚ್ಚರಿಯ ಸಂಗತಿ!

ತಮಿಳುನಾಡಿನಲ್ಲಿ 1921ರಿಂದಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಮತ್ತು ಅತಿ ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುತ್ತಾ ಬರಲಾಗಿದೆ. ಇದರ ಪ್ರಮಾಣ ಶೇ 69 ಇತ್ತು. ಮೀಸಲಾತಿ ಪ್ರಮಾಣ ಶೇ 50 ಮೀರಬಾರದೆಂದು ಸುಪ್ರೀಂ ಕೋರ್ಟ್ 1992ರಲ್ಲಿ ತೀರ್ಪು ನೀಡಿದಾಗ ತಮಿಳುನಾಡಿಗೆ ಆಘಾತವಾಯಿತು. ಮೀಸಲು ವ್ಯಾಪ್ತಿಯಲ್ಲಿ ಬರುತ್ತಿದ್ದ ಹಲವು ಜಾತಿಗಳನ್ನು ಕೈಬಿಡಬೇಕಾದ ಸ್ಥಿತಿ ಎದುರಾಯಿತು. ಆದರೆ ತಮಿಳುನಾಡು ಸರ್ಕಾರ ಹಾಗೇನೂ ಮಾಡಲು ಹೋಗಲಿಲ್ಲ. ಬದಲಾಗಿ ತನ್ನದೇ ಸೂತ್ರವನ್ನು ಸಿದ್ಧಮಾಡಿಕೊಂಡು ಕೇಂದ್ರ ಸರ್ಕಾರದ ಮುಂದೆ ಹೋಯಿತು. ತನ್ನ ರಾಜ್ಯದಲ್ಲಿ ಪರಿಶಿಷ್ಟರು ಮತ್ತು ಹಿಂದುಳಿದವರ ಜನಸಂಖ್ಯೆ ಶೇ 87ರಷ್ಟು ಇದೆ. ಹಾಗಾಗಿ 1921ರಿಂದಲೂ ಇರುವ ಮೀಸಲಾತಿ ವ್ಯವಸ್ಥೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಆ ಮೂಲಕ ತಮಿಳುನಾಡಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿತು.

ಮೀಸಲಾತಿ ಪ್ರಮಾಣವನ್ನು ಕಡಿತ ಮಾಡಿದರೆ ರಾಜ್ಯದ ಹಿಂದುಳಿದ ಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅನ್ಯಾಯ ಆಗುತ್ತದೆ ಎಂದು ತನ್ನ ಮೀಸಲಾತಿ ನೀತಿಯನ್ನು ಉಳಿಸಿಕೊಳ್ಳಲು ಹಲವು ತಂತ್ರಗಳನ್ನು ಹೆಣೆಯಿತು.

ಈ ಮಧ್ಯೆ ಬಿ.ಪಿ. ಮಂಡಲ್ ಆಯೋಗದ ತೀರ್ಪನ್ನು ಪ್ರಶ್ನಿಸಿದ್ದ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದ ಕೂಡಲೇ 1993ರಲ್ಲಿ ತಮಿಳುನಾಡಿನ ಮೀಸಲಾತಿ ಪ್ರಮಾಣವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟಿನಲ್ಲಿ ರಿಟ್ ಅರ್ಜಿಗಳು ದಾಖಲಾದವು. ಇವುಗಳ ವಿಚಾರಣೆ ನಡೆಸಿದ ಹೈಕೋರ್ಟ್, ‘1993–94ರ ಅವಧಿಯಲ್ಲಿ ಹಿಂದಿನ ಮೀಸಲಾತಿಯನ್ನೇ ಮುಂದುವರಿಸಲಿ. ಮುಂದಿನ ವರ್ಷದಿಂದ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ತಗ್ಗಿಸಬೇಕು’ ಎಂದು ತಮಿಳುನಾಡಿಗೆ ಸ್ಪಷ್ಟವಾಗಿ ಹೇಳಿತು. ಆದರೆ ತಮಿಳುನಾಡು ಸರ್ಕಾರ, ಹೈಕೋರ್ಟಿನ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ವಿಶೇಷ ಮೇಲ್ಮನವಿಯನ್ನು ಸಲ್ಲಿಸಿತು. ಸುಪ್ರೀಂ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿ ‘ಶೇ 50ರಷ್ಟು ಮೀಸಲಾತಿಗೆ ಬದ್ಧವಾಗಬೇಕು’ ಎಂದು ಹೇಳಿತು.

ಆಗ ಜೆ. ಜಯಲಲಿತಾ ನೇತೃತ್ವದ ಸರ್ಕಾರಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಯಿತು. 1993ರ ನವೆಂಬರ್ 9ರಂದು ವಿಧಾನಸಭೆಯ ವಿಶೇಷ ಅಧಿವೇಶನ ಕರೆದು, ‘ಶೇ 69ರಷ್ಟು ಇರುವ ಮೀಸಲಾತಿ ಪ್ರಮಾಣವನ್ನು ಮುಂದುವರಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು’ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಒಮ್ಮತದ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯದಂತೆ ‘ಹೊಸ ಕಾಯ್ದೆಯೊಂದನ್ನು ಮಾಡಬೇಕು. ಶೇ 69ರಷ್ಟು ಇರುವ ತನ್ನ ಮೀಸಲಾತಿಯನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸದಂತೆ ಅದನ್ನು ವಿಧಿ 31-ಸಿ ವ್ಯಾಪ್ತಿಯೊಳಗೆ ಸೇರಿಸಬೇಕು’ ಎಂದು ರಾಷ್ಟ್ರಪತಿಯವರಿಗೆ ಮನವಿ ಮಾಡಿ ಅದನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಿತು.

ಪಿ.ವಿ. ನರಸಿಂಹ ರಾವ್ ಅವರ ಅಲ್ಪ ಬಹುಮತದ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿದ್ದ ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ಒತ್ತಡಕ್ಕೆ ಕೇಂದ್ರ ಮಣಿಯಬೇಕಾಯಿತು. ಆಗ ಕೇಂದ್ರ ಗೃಹ ಸಚಿವರು, ಸರ್ವಪಕ್ಷಗಳ ಸಭೆ ಕರೆದು ತಮಿಳುನಾಡಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಎಲ್ಲ ಪಕ್ಷಗಳ ಒಪ್ಪಿಗೆ ಪಡೆದರು.

ತಮಿಳುನಾಡು ಬೇಡಿಕೆಗೆ ಸರ್ವ ಪಕ್ಷಗಳ ಒಪ್ಪಿಗೆ ಸಿಕ್ಕಿದ್ದರಿಂದ ನರಸಿಂಹ ರಾವ್ ನೇತೃತ್ವದ ಸರ್ಕಾರಕ್ಕೆ ಬಲ ಬಂದಿತು. ತಮಿಳುನಾಡು ಸರ್ಕಾರದ 1994ರ ಕಾಯ್ದೆಗೆ ಸಂವಿಧಾನ ರಕ್ಷಣೆ ನೀಡಲು ಕೇಂದ್ರ ಸರ್ಕಾರವು 1994ರ ಆಗಸ್ಟ್ 31ರಂದು ಸಂವಿಧಾನಕ್ಕೆ 76ನೇ ತಿದ್ದುಪಡಿ ತಂದಿತು. ಇದರಿಂದಾಗಿ ತಮಿಳುನಾಡಿನ ಶೇ 69ರಷ್ಟು ಇರುವ ಮೀಸಲಾತಿಗೆ ಸಂವಿಧಾನದ 9ನೇ ಪರಿಚ್ಛೇದದಲ್ಲಿ ರಕ್ಷಣೆ ದೊರೆಯಿತು. ಕೇಂದ್ರ ಸರ್ಕಾರದ ಜೊತೆಗಿನ ತನ್ನ ಹೋರಾಟದಲ್ಲಿ ತಮಿಳುನಾಡು ಜಯ ಗಳಿಸಿತು.

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಭೂಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸಿದ್ದರು. ರಾಜ್ಯ ಸರ್ಕಾರಗಳು ಅಥವಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ಇದರ ಸಿಂಧುತ್ವವನ್ನು ಪ್ರಶ್ನಿಸದಂತೆ ಈ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಿದ್ದರು.

ಆದರೆ 2007ರಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಬರ್‌ವಾಲ್‌ ನೇತೃತ್ವದ ನ್ಯಾಯಪೀಠವು ‘ಸಂವಿಧಾನದ 9ನೇ ಪರಿಚ್ಛೇದಕ್ಕೆ 1973ರ ನಂತರ ಸೇರ್ಪಡೆಯಾಗಿರುವ ತಿದ್ದುಪಡಿಗಳು ಸಂವಿಧಾನದ ಮೂಲತತ್ವಕ್ಕೆ ಮತ್ತು ವಿಧಿ 14, 19, 20 ಮತ್ತು 21ಕ್ಕೆ ಧಕ್ಕೆ ತರುವುದಾಗಿದ್ದರೆ ಅವುಗಳನ್ನು ನ್ಯಾಯಾಂಗದ ಪರಾಮರ್ಶೆಗೆ ಒಳಪಡಿಸುವ ಅವಶ್ಯಕತೆ ಇದೆ’ ಎಂದು ತೀರ್ಪು ನೀಡಿತು. ನ್ಯಾಯಾಂಗದ ಪರಾಮರ್ಶೆಯಿಂದ ತಪ್ಪಿಸಿಕೊಂಡಿರುವ ತಿದ್ದುಪಡಿಗಳನ್ನು ಮತ್ತೆ ಪರಾಮರ್ಶೆಗೆ ಈಗ ಮುಕ್ತವಾಗಿರಿಸಲಾಗಿದೆ. ತಮಿಳುನಾಡಿನ ಮೀಸಲಾತಿಯೂ  ಪರಾಮರ್ಶೆ ವ್ಯಾಪ್ತಿಗೆ ಒಳಪಡಲಿದೆ. ಆದರೆ ತಮಿಳುನಾಡಿಗೆ ಇದುವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.

ತಮಿಳುನಾಡು ತನ್ನ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಕೇಂದ್ರ ಸರ್ಕಾರವನ್ನು ಮಣಿಸಿ ಶೇ 69 ರಷ್ಟು ಮೀಸಲಾತಿ ವ್ಯವಸ್ಥೆ

ಯನ್ನು ಉಳಿಸಿಕೊಂಡಿದೆ.

ತಮಿಳುನಾಡಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಶೇ 70 ರಷ್ಟು ಮೀಸಲಾತಿ ತರಲು ಹೊರಟಿರುವ ಕರ್ನಾಟಕ ಸರ್ಕಾರ, ಈ ಬಗ್ಗೆ ತಾನು ಏನು ಮಾಡಲಿದ್ದೇನೆ ಎನ್ನುವುದನ್ನು ಈವರೆಗೂ ಬಹಿರಂಗಪಡಿಸಿಲ್ಲ. ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ಬದ್ಧತೆ ಸಿದ್ದರಾಮಯ್ಯ ಅವರಿಗೆ ಇರಬಹುದು. ಆದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ತೊಡೆ ತಟ್ಟುತ್ತಲೇ ಬಂದಿರುವ ಅವರು, ಸಂವಿಧಾನ ತಿದ್ದುಪಡಿ ಮಾಡಿಸುವಷ್ಟು ಶಕ್ತರೇ ಎನ್ನುವುದು ಪ್ರಶ್ನೆ. ಜೊತೆಗೆ ಅಂತರಂಗದಲ್ಲಿ ಮೀಸಲಾತಿ ವ್ಯವಸ್ಥೆಗೆ ವಿರೋಧವಾಗಿರುವ ಬಿಜೆಪಿ ಮತ್ತು ಜನತಾದಳ ಇದಕ್ಕೆ ವಿಧಾನ ಮಂಡಲದಲ್ಲಿ ಬೆಂಬಲ ನೀಡಲಿವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry