ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ರ ಮಧ್ಯರಾತ್ರಿಯಿಂದಲೇ ಪೆಟ್ರೋಲ್‌ ಬಂಕ್‌ ಬಂದ್

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೆಟ್ರೋಲ್‌ ಬಂಕ್‌ ಮಾಲೀಕರ ಕಮಿಷನ್‌ ಮೊತ್ತವನ್ನು ಪರಿಷ್ಕರಿಸುವ ಕುರಿತ ನ್ಯಾಯಮೂರ್ತಿ ಅಪೂರ್ವಚಂದ್ರ ಸಮಿತಿಯ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ತೈಲ ಮಾರಾಟಗಾರರು ಇದೇ 13ರಂದು ಪೆಟ್ರೋಲ್‌ ಬಂಕ್‌ ಬಂದ್‌ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಪೆಟ್ರೊಲಿಯಂ ವಿತರಕರ ಸಂಘದ ಅಧ್ಯಕ್ಷ ಬಿ.ಆರ್. ರವೀಂದ್ರನಾಥ್, ‘ರಾಷ್ಟ್ರದಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ರಾಜ್ಯದ ಪೆಟ್ರೋಲ್‌ ಬಂಕ್‌ ಮಾಲೀಕರೆಲ್ಲರೂ ಬೆಂಬಲ ನೀಡಿದ್ದೇವೆ. ರಾಜ್ಯದ 4,000 ಬಂಕ್‌ಗಳು ಸೇರಿ ದೇಶದ 54 ಸಾವಿರ ಬಂಕ್‌ಗಳು 12ರ ರಾತ್ರಿ 12ರಿಂದ 13ರ ತಡರಾತ್ರಿವರೆಗೆ ಬಂದ್‌ ಆಗಲಿವೆ’ ಎಂದರು.

‘ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಬೇಕು. ದೇಶದಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಏಕರೂಪತೆ ತರಬೇಕು. ಇಂಧನ ಬೆಲೆ (ಪೆಟ್ರೋಲ್–ಡೀಸೆಲ್‌) ಪ್ರತಿನಿತ್ಯ ಪರಿಷ್ಕರಣೆ ಅವೈಜ್ಞಾನಿಕವಾಗಿದ್ದು, ಇದನ್ನು ರದ್ದು ಮಾಡಬೇಕು’ ಎಂದು ಅವರು ಆಗ್ರಹಿಸಿದರು.

‘ಸ್ಪಚ್ಛ ಭಾರತ ಅಭಿಯಾನದ ಭಾಗವಾಗಿ ಬಂಕ್‌ಗಳಲ್ಲಿ ಶೌಚಾಲಯ ನಿರ್ಮಿಸಬೇಕು ಎಂದು ಸರ್ಕಾರ ಸೂಚಿಸಿದೆ. ಸ್ವಚ್ಛತೆ ಕಾಪಾಡದಿದ್ದರೆ ಮೊದಲ ಹಂತದಲ್ಲಿ ₹ 10 ಸಾವಿರ, ನಂತರ ₹ 25 ಸಾವಿರ, ಬಳಿಕ ₹ 50 ಸಾವಿರ ದಂಡ ವಿಧಿಸಲು ನಿರ್ಧರಿಸಿದೆ. ಇದು ವಿತರಕರ ಮೇಲಿನ ದಬ್ಬಾಳಿಕೆಯ ಮುಂದುವರಿದ ಭಾಗ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಂದ್ ಬಳಿಕವೂ ನಮ್ಮ ಬೇಡಿಕೆಗಳನ್ನು ಸರ್ಕಾರವು ಈಡೇರಿಸದಿದ್ದರೆ ಇದೇ 27ರಿಂದ ಮತ್ತೆ ಮುಷ್ಕರ ನಡೆಸುತ್ತೇವೆ’ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT