ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಷ್‌–ಎ–ಮೊಹಮದ್ ಕಮಾಂಡರ್‌ ಖಾಲಿದ್‌ ಹತ್ಯೆ

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಶ್ರೀನಗರ: ಭದ್ರತಾ ಪಡೆಗಳ ಜಂಟಿ ತಂಡ ಕಾರ್ಯಾಚರಣೆ ವೇಳೆ ಸೋಮವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಜೈಷ್‌–ಎ–ಮೊಹಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಉಮರ್ ಖಾಲಿದ್‌ನನ್ನು ಹತ್ಯೆ ಮಾಡಲಾಗಿದೆ.

ನಿರ್ದಿಷ್ಟ ಮಾಹಿತಿ ಆಧರಿಸಿ, ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್ ಪ್ರದೇಶದ ಲಡೂರ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಭಯೋತ್ಪಾದಕರು ಭದ್ರತಾ ಪಡೆ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ, ಪ್ರತಿದಾಳಿ ನಡೆಸಲಾಯಿತು. ಎನ್‌ಕೌಂಟರ್‌ನಲ್ಲಿ ಖಾಲಿದ್‌ ಮೃತಪಟ್ಟಿದ್ದಾನೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ವೈದ್ ತಿಳಿಸಿದ್ದಾರೆ.

ಉತ್ತರ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಶಿಬಿರಗಳ ಮೇಲೆ ಹಲವು ಬಾರಿ ನಡೆದ ದಾಳಿ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. ಅಲ್ಲದೆ ಪೊಲೀಸರನ್ನು ಗುರಿಯಾಗಿಸಿಕೊಂಡು ಈತ ದಾಳಿಗಳನ್ನು ನಡೆಸುತ್ತಿದ್ದ. ಈತ ಮೃತಪಟ್ಟಿರುವುದು ಭದ್ರತಾ ಪಡೆಗಳಿಗೆ ಮಹತ್ವದ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಪಡೆಯ ವಿಶೇಷ ಕಾರ್ಯಾಚರಣೆ ಪಡೆ, ಸ್ಥಳೀಯ ಪೊಲೀಸರು, ಸಿಆರ್‌ಪಿಎಫ್ ಹಾಗೂ ಸೇನಾಪಡೆ ಒಟ್ಟಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈತ ಮೃತಪಟ್ಟಿದ್ದಾನೆ’ ಎಂದು ವೈದ್ ತಿಳಿಸಿದ್ದಾರೆ.

ಪಾಕಿಸ್ತಾನಿ ಪ್ರಜೆ: ಪಾಕಿಸ್ತಾನಿ ಪ್ರಜೆಯಾಗಿದ್ದ ಖಾಲಿದ್‌ ಕಳೆದ ಎರಡು ಮೂರು ವರ್ಷಗಳಿಂದ ಈ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ. ಅಲ್ಲದೆ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನುಸೇರ್ಪಡೆಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದ. ಈಚೆಗಷ್ಟೆ ಹಂದ್ವಾರದಲ್ಲಿ ವಿಶೇಷ ಪೊಲೀಸ್ ಅಧಿಕಾರಿ ಮತ್ತು ಅವರ ಏಳು ವರ್ಷದ ಮಗನ ಮೇಲೆ ಈತ ದಾಳಿ ನಡೆಸಿದ್ದ. ಈತನ ತಲೆಗೆ ₹7 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ದಾಳಿ ಕುರಿತು ತನಿಖೆ: ಭಾರಿ ಭದ್ರತೆ ಇದ್ದ ಶ್ರೀನಗರದ ವಿಮಾನ ನಿಲ್ದಾಣದ ಬಳಿಯ ಬಿಎಸ್‌ಎಫ್ ಪಡೆಯ ಮುಖ್ಯನೆಲೆ ಮೇಲೆ ಜೈಷ್‌–ಎ–ಮೊಹಮದ್‌ ಈಚೆಗೆ ನಡೆಸಿದ್ದ ದಾಳಿಯಲ್ಲಿ ಈತನ ಪಾತ್ರ ಇರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪುಲ್ವಾಮಾದಲ್ಲಿ ಜಿಲ್ಲಾ ಪೊಲೀಸ್‌ ಅಧಿಕಾರಿಗಳ ನೆಲೆ ಮೇಲೆ ನಡೆದ ದಾಳಿ ಸಂಚಿನಲ್ಲಿಯೂ ಈತನ ಪಾತ್ರ ಇರುವ ಶಂಕೆ ಇದೆ.

ಪ್ರತಿಭಟನೆ
ಮಹಿಳೆಯರ ಜಡೆಗಳನ್ನು ಯಾರೋ ಕತ್ತರಿಸುತ್ತಿರುವುದನ್ನು ಪ್ರತಿಭಟಿಸಲು ಪ್ರತ್ಯೇಕತಾವಾದಿಗಳು ಕರೆ ನೀಡಿದ್ದರಿಂದ ಕಾಶ್ಮೀರ ಕಣಿವೆಯಲ್ಲಿ ಸಹಜ ಜನಜೀವನಕ್ಕೆ ಸೋಮವಾರ ತೊಂದರೆ ಆಯಿತು.

ಶ್ರೀನಗರದಲ್ಲಿ ಏಳು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿತ್ತು. ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಪ್ರಮುಖ ಪಟ್ಟಣಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮಚ್ಚಲಾಗಿತ್ತು. ಸಾರ್ವಜನಿಕ ಸಾರಿಗೆ ಇರಲಿಲ್ಲ. ಖಾಸಗಿ ವಾಹನಗಳ ಸಂಚಾರ ಎಂದಿನಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT