ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಷಾ ವಜಾಕ್ಕೆ ಪಟ್ಟು

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಪುತ್ರನ ಅಕ್ರಮ ವಹಿವಾಟು ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯಿಂದ ಅಮಿತ್‌ ಷಾ ಅವರನ್ನು ಕೆಳಗಿಳಿಸುವಂತೆ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿವೆ.

ಕೇಂದ್ರದಲ್ಲಿ 2014ರಲ್ಲಿ  ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಅಮಿತ್‌ ಷಾ ಅವರ ಮಗ ಜಯ್‌ ಷಾ ಅವರ ಒಡೆತನದ ಕಂಪೆನಿ  ಏಕಾಏಕಿ ಕೋಟ್ಯಂತರ ರೂಪಾಯಿ ಗಳಿಸಿದೆ ಎಂಬ ಮಾಧ್ಯಮದ ವರದಿಯ ಸತ್ಯಾಸತ್ಯೆಯ ಬಗ್ಗೆ ತನಿಖೆ ನಡೆಸುವಂತೆ ಎರಡೂ ಪಕ್ಷಗಳು ಆಗ್ರಹಿಸಿವೆ.

ತನಿಖೆ ಮುಗಿದು ದೋಷಮುಕ್ತರಾಗುವವರೆಗೂ ಷಾ ಅವರು ಬಿಜೆಪಿ ಅಧ್ಯಕ್ಷ ಹುದ್ದೆಯಿಂದ ದೂರ ಉಳಿಯಲಿ. ಈ ಹಿಂದೆ ತಮ್ಮ ವಿರುದ್ಧ ಆರೋಪ ಕೇಳಿ ಬಂದಾಗ ಅವರದೇ ಪಕ್ಷದ ನಾಯಕರಾದ ಎಲ್‌.ಕೆ. ಅಡ್ವಾಣಿ ಮತ್ತು ನಿತಿನ್‌ ಗಡ್ಕರಿ ರಾಜೀನಾಮೆ ನೀಡಿ ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅಮಿತ್‌ ಷಾ ಕೂಡ ಅನುಸರಿಸಲಿ ಎಂದು ಕಾಂಗ್ರೆಸ್ ಸಲಹೆ ಮಾಡಿದೆ.

‘ವಾಚಾಳಿ ಪ್ರಧಾನಿ ಈಗೇಕೆ ಮೌನ?’ ‘ಪ್ರಧಾನಿ ನರೇಂದ್ರ ಮೋದಿ ಈಗಲಾದರೂ ಮೌನ ಮುರಿಯಲಿ’ ಎಂದು ಕಾಂಗ್ರೆಸ್‌ ನಾಯಕ ಆನಂದ್‌ ಶರ್ಮಾ ಮತ್ತು ಮುಖ್ಯ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರು ವ್ಯಂಗ್ಯವಾಡಿದ್ದಾರೆ

ಪ್ರಧಾನಿ ವಿಪರೀತ ವಾಚಾಳಿ. ಪ್ರತಿ ವಿಷಯದ ಬಗ್ಗೆಯೂ ಅವರು ಮಾತನಾಡುತ್ತಾರೆ. ಆದರೆ, ಈಗೇಕೆ ಮೌನವಾಗಿದ್ದಾರೆ ಎಂದು ಶರ್ಮಾ
ಅವರು ಪ್ರಶ್ನಿಸಿದ್ದಾರೆ.

ಷಾ ಪುತ್ರನ ಬೆಂಬಲಕ್ಕೆ ನಿಂತ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ‘ಪೀಯೂಷ್‌ ಗೋಯಲ್‌ ಕೇಂದ್ರ ಸಚಿವರೋ ಇಲ್ಲ ಅಮಿತ್‌ ಷಾ ಪುತ್ರನ ಬಿಸಿನೆಸ್‌ ಮ್ಯಾನೇಜರ್‌ ಅಥವಾ ವಕ್ತಾರರೋ’ ಎಂದು ಕೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯಿಂದ ಷಾ ಅವರನ್ನು ಕೂಡಲೇ ಕೆಳಗಿಳಿಸಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲಿ. ಈ ಎಲ್ಲ ಪ್ರಕ್ರಿಯೆ ಪಾರದರ್ಶಕ ಮತ್ತು ಜವಾಬ್ದಾರಿಯಿಂದ ಕೂಡಿರಲಿ ಎಂದು ಸುರ್ಜೆವಾಲಾ ಅವರು ಜೈಪುರದಲ್ಲಿ ಹೇಳಿದ್ದಾರೆ.

‘ಬಿಜೆಪಿ ತನ್ನ ಅಧ್ಯಕ್ಷರನ್ನು ಸಮರ್ಥಿಸಿಕೊಳ್ಳುವ ಹಾಗೆ ಏನೂ ಅಕ್ರಮ ನಡೆದಿಲ್ಲ ಎಂದಾದರೆ ತನಿಖೆಗೆ ಹೆದರುವುದೇಕೆ? ಬೆಂಕಿ ಇಲ್ಲದೆ ಹೊಗೆ ಬರುತ್ತದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ. ‘ದೇಶ ತನ್ನ ಅಭಿವೃದ್ಧಿಗಾಗಿ ಕಾಯ್ದು ಕುಳಿತಿದ್ದರೆ, ಅಲ್ಲಿ ಜಯ್‌ ಅಭಿವೃದ್ಧಿಯಾಗಿದೆ’ ಎಂದು ಅವರು
ವ್ಯಂಗ್ಯವಾಡಿದ್ದಾರೆ.

ಗುಜರಾತ್‌ ಮಾದರಿ ವಿಫಲ: ನೋಟು ರದ್ದು ಮತ್ತು ಜಿಎಸ್‌ಟಿಯಿಂದ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ. ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿ ಸೇರಿದಂತೆ ಎನ್‌ಡಿಎ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ಎಡವಿದೆ. ಗುಜರಾತ್‌ ಮಾದರಿ ವಿಫಲವಾಗಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT