7

ಜಾಣ್ವಕ್ಕಿಗಳ ಪ್ರಣಯ

Published:
Updated:
ಜಾಣ್ವಕ್ಕಿಗಳ ಪ್ರಣಯ

*ಶಶಿಧರಸ್ವಾಮಿ ಹಿರೇಮಠ

ಮನುಷ್ಯನ ಮಾತುಗಳನ್ನು ಅನುಕರಿಸುವ ಶಕ್ತಿ ಇರುವ ಪಕ್ಷಿ ಎಂದರೆ ಗಿಳಿ. ಗಿಳಿಗೆ ಮಾತನಾಡುವ ಪಕ್ಷಿ ಎಂತಲೂ ಕರೆಯುತ್ತಾರೆ. ಇದರ ಜಾಣತನಕ್ಕೆ ಮೆಚ್ಚಿದ ಸಂತ ಕನಕದಾಸರು ತಮ್ಮ ಮೋಹನ ತರಂಗಿಣಿ ಕಾವ್ಯದಲ್ಲಿ ಗಿಣಿಯನ್ನು ಜಾಣ್ವಕ್ಕಿ ಎಂದು ಕರೆದಿರುವುದು ಅದರ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ಇಂತಹ ಜಾಣ್ವಕ್ಕಿಗಳ ಪ್ರಣಯದ ನೋಟಗಳು ಒಂದು ದೃಶ್ಯಕಾವ್ಯ.

ಅದು ಹಾವೇರಿ ಜಿಲ್ಲೆಯ ಕದರಮಂಡಲಗಿಯ ಹೊಲ. ಒಂಟಿತನಕ್ಕೆ ಮಂಗಳ ಹಾಡಿ ಆ ಎರಡು ಜಾಣ್ವಕ್ಕಿಗಳು ಆಗತಾನೆ ಗಾಂಧರ್ವ ವಿವಾಹ ಮಾಡಿಕೊಂಡು ಧರೆಗಿಳಿದಿದ್ದವು. ಆ ಕಲ್ಪವೃಕ್ಷದ ಮೇಲೆ ಮೊದಲಿಗಳಾಗಿ ನಾಚುತ್ತಾ ಮಧುಮಗಳ ಆಗಮನ. ಸುರಸುಂದರಾಂಗನಾದ ಕೊರಳಲ್ಲಿ ಕೆಂಪನೆ ಹಾರ ಧರಿಸಿದ ವರ ಸಹ ಕ್ಷಣಾರ್ಧದಲ್ಲೇ ಬಂದಿಳಿದ. ಆಗ ಇಬ್ಬರೂ ಪ್ರಣಯ ಕೂಟಕ್ಕೆ ಉತ್ಸುಕವಾಗಿರುವಂತೆ ಭಾಸವಾಗುತ್ತಿತ್ತು. ಆ ಕಲ್ಪವೃಕ್ಷದ ಗರಿಯು ರತ್ನಖಚಿತ ಮಂಚವಲ್ಲದಿದ್ದರೂ, ಮೃದುವಾದ ಹಾಸಿಗೆ, ಹೂವಿನ ಪಕಳೆಗಳ ಝಗಮಗಿಸುವ ಮುತ್ತಿನ ಶೃಂಗಾರ ಅಲ್ಲಿಲ್ಲದಿದ್ದರೂ ಭೂರಮೆಯ ಹಚ್ಚಹಸಿರು, ವಿಶಾಲ ನೀಲಾಕಾಶದ ಶೃಂಗಾರವನ್ನು ನೋಡಿ ಆ ನವದಂಪತಿ ಹಿಗ್ಗಿದರು.

ನಾಚಿದ ಅವಳನ್ನು ನೋಡಿದ ವರ, ಒಂದೊಂದೆ ಹೆಜ್ಜೆ ಹಾಕುತ್ತಾ ಅವಳ ಸನಿಹಕ್ಕೆ ಬಂದು, ಒಮ್ಮೆ ತನ್ನ ಕೊರಳು ಎತ್ತಿ ಅವಳನ್ನು ದಿಟ್ಟಿಸಿ ನೋಡಿ ಇನ್ನೂ ಸನಿಹಕೆ ಬಂದ. ಪ್ರಿಯತಮೆಯ ತಲೆಯನ್ನು ತನ್ನ ಬಾಗಿದ ನುಣುಪಿನ ಕೊಕ್ಕಿನಿಂದ ಮೃದುವಾಗಿ ಹಿಡಿದು ಮುತ್ತಿಟ್ಟು ಸಂತಸಪಟ್ಟ. ಬಾಗಿದ ನುಣುಪಿನ ಗಲ್ಲ ಹಿಡಿದು, ಕೊಂಕಿದ ಕೂದಲನ್ನು ತಿದ್ದಿ, ಕೆಂದುಟಿಯನ್ನು ಮೃದುವಾಗಿ ಕುಕ್ಕಿ ಮತ್ತೊಮ್ಮೆ ಮುತ್ತಿಕ್ಕಿದ. ಸೊಗದ ಸೊನೆ ಈಂಟಿ ಮತ್ತೇರಿದ ಹಾಗೆ ಅವರಿಬ್ಬರು ಕಂಡುಬಂದರು.

ಪ್ರಿಯತಮನು ಚುಂಬಿಸಿದಾಗ ಅವನ ಬಾಯೊಳಕ್ಕೆ ಅರೆಗಳಿಗೆಯಲ್ಲಿ ಹೋಳುಗಳನ್ನು ತುಂಬಿ ದಳು ವಧು. ಚುಂಬನಕ್ಕೆ ಪ್ರತಿ ಚುಂಬನದ ಮುಯ್ಯಿ ತೀರಿಸುವ ತವಕದಲ್ಲಿ ನಲ್ಮೆಯ ಆ ತಾಣದಲ್ಲಿ ಕಾಮಾಂಬು ತುಂಬಿ ತುಳುಕಿತು. ತಳಮಳ ತಬ್ಬಿಬ್ಬುಗಳ ಭ್ರಾಂತಿಗೆ ಒಳಗಾದವಳೊಡನೆ ಕಾಮಕ್ರಾಂತಿಗಿದೇ ಸುಸಮಯವೆಂದು ತಿಳಿದ ವರ ಸೈರಣೆಯಿಂದ ಬಿಗಿದಪ್ಪಿ ಮುದ್ದಾಡಿದ. ಎರಡೂ ದೇಹಗಳು ಒಂದಾಗಿ ಬೆಸೆದು ಕೊಂಡವು. ಅಪ್ಪಿದ ತೋಳುಗಳು ಕಂಬಕ್ಕೆ ಹಬ್ಬಿದ ಲತೆಯಂತೆ ಗೋಚರಿಸಿದವು.

ಗಾಡ ಕೂಟ ಶಕ್ತಿಯಿಂದ ಸುಂದರಾಂಗ ಹಿಂದುಮುಂದು ನೋಡದೆ ಹುಮ್ಮಸ್ಸಿನ ಧ್ವನಿ ಸೂಸುತ್ತಾ ಕೂಟದಲಿ, ಜೊತೆಗಾತಿ ಕೊರಳಿನಲ್ಲಿ ನಸೆಯ ಚೀರ್ದನಿ ತುಸು ಮಾರ್ದನಿಸಿದ. ಮುಚ್ಚಿಕೊಂಡ ಇಬ್ಬರ ಕಣ್ಣುಗಳು, ಸದ್ದುಮಾಡದ ಪಿಸು ಲಲ್ಲೆ ಮಾತುಗಳು, ಜೊತೆಗೆ ಬೆಸುಗೆಗೊಂಡ ಅಪ್ಪುಗೆಯಿಂದ ಮೂರ್ಛೆ ಹೋಗಿ, ಮಳೆಬಂದು ಸುರಿದ ನಂತರ ಭೂತಾಯಿಯ ಸ್ತಬ್ಧದ ಹಾಗೆ ಇವರು ಮೌನಕ್ಕೆ ಒಳಗಾದರು. ಬಳಲಿ ಬೆಂಡಾದ ಕಣ್ಣು, ಬಡಿದುಕೊಳ್ಳುವ ಅಳ್ಳೆಯ ನಿಟ್ಟುಸಿರಿನಿಂದ ಶಕ್ತಿಕುಂದಿದ ಭಾವಪರವಶತೆಯಿಂದ ನವದಂಪತಿ ಮತ್ತೆ ಎಚ್ಚೆತ್ತು ಪ್ರಣಯವನ್ನು ಪೂರ್ಣಗೊಳಿಸಿದರು. ⇒ಚಿತ್ರಗಳು: ಲೇಖಕರವು

***

ಏಕಪತ್ನಿ ವ್ರತಸ್ಥ!

ಗುಲಾಬಿ ಕೊರಳಿನ ಗಿಳಿ, ಗೊರವಂಕ ಗಾತ್ರದ ನೀಳ ಬಾಲದ ಹಸಿರು ಪಕ್ಷಿ. ಗಂಡು ಪಕ್ಷಿಯು, ತುದಿಯಲ್ಲಿ ತುಸು ಬಾಗಿದ ಕೆಂಪು ಮೊಂಡಾದ ಕೊಕ್ಕು, ಕೊರಳಿನ ಸುತ್ತ ಗುಲಾಬಿ-ಕೆಂಪು ವರ್ಣದ ಉಂಗುರ, ಗಿಡ್ಡ ಕಾಲು, ಬೂದು ನೀಳವಾದ ಹಸಿರು ಬಾಲ ಹೊಂದಿರುತ್ತದೆ. ಹೆಣ್ಣಿಗೆ ಕೊರಳಿನಲ್ಲಿ ಕೆಂಪು ಉಂಗುರದ ಪಟ್ಟಿ ಇರುವುದಿಲ್ಲ. ಇವು ಸಾಮಾನ್ಯವಾಗಿ ಜನವಸತಿ ಪ್ರದೇಶ, ಕೃಷಿ ಭೂಮಿ, ತೋಟ, ಕುರುಚಲು ಕಾಡುಗಳಲ್ಲಿ ಕಂಡುಬರುತ್ತವೆ. ಸರ್ವೇಸಾಮಾನ್ಯವಾಗಿ ಇವು ಮಾನವನ ಧ್ವನಿಯನ್ನು ಅನುಕರಿಸಬಲ್ಲವು. ಇವುಗಳಿಗೆ ಧ್ವನಿಪೆಟ್ಟಿಗೆ ಇರುವುದಿಲ್ಲ. ಹೀಗಾಗಿ ಇವು ಹೊರಡಿಸುವ ಧ್ವನಿಯು ಶಿಳ್ಳೆಯಂತೆ ಕಿರ್‍ರ್...ಕಿರ್‍ರ್... ಕಿರ್‍ರ್...ಎಂದು ಕೇಳುತ್ತದೆ.

ಇವುಗಳು ಹಣ್ಣು, ಮಕರಂದ, ಮೊಗ್ಗು ಮತ್ತು ಬೀಜಗಳನ್ನು ಆಹಾರವಾಗಿ ಭಕ್ಷಿಸುತ್ತವೆ, ಸಾಮಾನ್ಯವಾಗಿ ಇವು ಏಕಪತ್ನಿ ವ್ರತಸ್ಥರಂತೆ ಜೀವನಪೂರ್ತಿ ಒಂದೇ ಸಂಗಾತಿಯೊಂದಿಗೆ ಜೀವನ ನಡೆಸುತ್ತವೆ. ಇವುಗಳ ಸಂತಾನೋತ್ಪತ್ತಿ ಕ್ರಿಯೆಯು ಫೆಬ್ರುವರಿಯಿಂದ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಒಣಗಿದ ಮರಗಳ ಪೊಟರೆಯಲ್ಲಿ ಗೂಡು ಕಟ್ಟಿ 4-6 ಬಿಳಿ ಮೊಟ್ಟೆಗಳನ್ನಿಟ್ಟು ಮರಿ ಮಾಡಿಸಿ ವಂಶಾಭಿವೃದ್ಧಿ ಮಾಡುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry