ಕೀಟಬಾಧೆ: ರಾಗಿ ಇಳುವರಿ ತಗ್ಗುವ ಭೀತಿ

ಮಂಗಳವಾರ, ಜೂನ್ 25, 2019
30 °C

ಕೀಟಬಾಧೆ: ರಾಗಿ ಇಳುವರಿ ತಗ್ಗುವ ಭೀತಿ

Published:
Updated:
ಕೀಟಬಾಧೆ: ರಾಗಿ ಇಳುವರಿ ತಗ್ಗುವ ಭೀತಿ

ಕೋಲಾರ: ರಾಜ್ಯದಲ್ಲಿ ರಾಗಿ ಬೆಳೆಗೆ ಎಲೆ ಸುರುಳಿ ಹಾಗೂ ಹಸಿರು ಗೇಣು ಕೀಟಬಾಧೆ ಕಾಣಿಸಿಕೊಂಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ರಾಗಿ ಬೆಳೆಯಲ್ಲಿ ಮೊದಲ ಸ್ಥಾನದಲ್ಲಿರುವ ತುಮಕೂರು ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 1.61 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗುತ್ತಿದ್ದು, ಸರಾಸರಿ 2.71 ಲಕ್ಷ ಟನ್‌ ರಾಗಿ ಉತ್ಪಾದನೆಯಾಗುತ್ತಿದೆ. ಏಳನೇ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 66 ಸಾವಿರ ಟನ್‌ ರಾಗಿ ಉತ್ಪಾದನೆಯಾಗುತ್ತಿದೆ.

ಸತತ ಬರದಿಂದ ಬೆಳೆ ಕಳೆದುಕೊಂಡು ಬಸವಳಿದಿದ್ದ ಜಿಲ್ಲೆಯ ರೈತರಿಗೆ ಪ್ರಸಕ್ತ ಮುಂಗಾರು ಹಂಗಾಮು ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿತ್ತು.ಆದರೆ ಕೋಲಾರ ಜಿಲ್ಲೆ ಒಂದರಲ್ಲೇ 4,148 ಹೆಕ್ಟೇರ್ ರಾಗಿ ಬೆಳೆಯು ಕೀಟಬಾಧೆಗೆ ತುತ್ತಾಗಿದೆ. ತುಮಕೂರು ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್‌ಗೂ ಅಧಿಕ ಬೆಳೆ ನಾಶಗೊಂಡಿದೆ.

ಸಾಮಾನ್ಯವಾಗಿ ಭತ್ತದ ಬೆಳೆಯಲ್ಲಿ ಎಲೆ ಸುರುಳಿ ಕೀಟಬಾಧೆ ಕಾಣಿಸಿಕೊಳ್ಳುತ್ತದೆ. ರಾಜ್ಯದಲ್ಲಿ ಈವರೆಗೆ ರಾಗಿ ಬೆಳೆಗೆ ಈ ರೋಗ ತಗುಲಿದ ಉದಾಹರಣೆ ಇಲ್ಲ. ಆದರೆ, ಇದೇ ಮೊದಲ ಬಾರಿಗೆ ರಾಗಿ ಬೆಳೆಗೆ ಎಲೆ ಸುರುಳಿ ಕೀಟಬಾಧೆ ಬಂದಿದ್ದು, ಕಾರಣ ನಿಗೂಢವಾಗಿದೆ.

ಬಹುತೇಕ ಜಮೀನುಗಳಲ್ಲಿ ರಾಗಿ ಬೆಳೆ ಸೊಂಪಾಗಿ ಬೆಳೆದು ತೆನೆ ಕಟ್ಟುವ ಹಂತದಲ್ಲಿದ್ದು, ಎಲೆ ಸುರುಳಿ ಹಾಗೂ ಹಸಿರು ಗೇಣು ಹುಳುಗಳು ಗಿಡದ ಕೆಳ ಭಾಗದ ಎಲೆಗಳನ್ನು ತಿನ್ನುತ್ತಿವೆ. ತಡವಾಗಿ ಬಿತ್ತನೆಯಾಗಿರುವ ಜಮೀನುಗಳಲ್ಲಿ ಗಿಡಗಳ ಬೆಳವಣಿಗೆಯ ಹಂತದಲ್ಲೇ ಹುಳುಗಳು ಎಲೆ ಮೇಯುತ್ತಿವೆ. ಇದರಿಂದ ಬೆಳೆ ಒಣಗುತ್ತಿದ್ದು, ಇಳುವರಿ ಕುಸಿಯುವ ಭೀತಿ ಎದುರಾಗಿದೆ.

ತೇವಾಂಶ ಕಾರಣ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ತಂಡವು ಕೋಲಾರ ತಾಲ್ಲೂಕಿನ ವೇಮಗಲ್‌, ಸುಗಟೂರು, ಹುತ್ತೂರು, ಶ್ರೀನಿವಾಸಪುರ ತಾಲ್ಲೂಕಿನ ಕಸಬಾ, ಮುಳಬಾಗಿಲು ತಾಲ್ಲೂಕಿನ ಬೈರಕೂರು ಮತ್ತು ಮಾಲೂರು ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿನ ಕೀಟಬಾಧಿತ ರಾಗಿ ತಾಕುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ಮಾಡಿದ್ದಾರೆ.

ಸೆಪ್ಟೆಂಬರ್‌ ಮಧ್ಯ ಭಾಗದಿಂದ ಪದೇ ಪದೇ ಮಳೆಯಾಗುತ್ತಿರುವ ಕಾರಣ ಭೂಮಿಯಲ್ಲಿ ತೇವಾಂಶ ಪ್ರಮಾಣ ಹೆಚ್ಚಿದೆ. ಜತೆಗೆ ಜಮೀನು

ಗಳಲ್ಲಿ ಮಳೆ ನೀರು ನಿಂತಿರುವುದರಿಂದ ಮತ್ತು ವಾತಾವರಣದಲ್ಲಿ ಉಷ್ಣಾಂಶ ಪ್ರಮಾಣ ಕಡಿಮೆಯಾಗಿರುವ ಕಾರಣ ರಾಗಿ ಬೆಳೆಗೆ ಕೀಟಬಾಧೆ ಬಂದಿರುವ ಸಾಧ್ಯತೆ ಎಂದು ಕೃಷಿ ವಿಜ್ಞಾನಿಗಳು ಶಂಕಿಸಿದ್ದಾರೆ.

ರಾಜ್ಯವ್ಯಾಪಿ: ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಯಲ್ಲೂ ರಾಗಿ ಬೆಳೆಗೆ ಎಲೆ ಸುರುಳಿ ಹಾಗೂ ಹಸಿರು ಗೇಣು ಕೀಟಬಾಧೆ ಬಂದಿದೆ. ಜತೆಗೆ ಲದ್ದಿ ಹುಳು, ಕಾಂಡ ಕೊರೆಯುವ ಹುಳುವಿನ ಬಾಧೆ ಮತ್ತು ಬೆಂಕಿ ರೋಗ ಕಾಣಿಸಿಕೊಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹತೋಟಿಗೆ ಬರುತ್ತಿಲ್ಲ: ರೈತರು ಬೆಳೆಗೆ ಗೋಮೂತ್ರ, ಬೇವಿನ ಎಣ್ಣೆ ಹಾಗೂ ವಿವಿಧ ಕೀಟನಾಶಕಗಳನ್ನು ಸಿಂಪಡಿಸಿದರೂ ಕೀಟಬಾಧೆ ಹತೋಟಿಗೆ ಬರುತ್ತಿಲ್ಲ. ಕೀಟನಾಶಕ ಸಿಂಪಡಿಸಿ ಒಂದು ದಿನ ಕಳೆಯುವಷ್ಟರಲ್ಲಿ ಬೆಳೆಯಲ್ಲಿ ಪುನಾ ಹುಳುಗಳು ಕಾಣಿಸಿಕೊಳ್ಳುತ್ತಿವೆ. ಮತ್ತೊಂದೆಡೆ ಪಕ್ಕದ ರಾಗಿ ತಾಕುಗಳಿಗೆ ಕೀಟಬಾಧೆ ಹಬ್ಬುತ್ತಿದೆ. ಇದರಿಂದ ರೈತರು ಹಾಗೂ ಕೃಷಿ ವಿಜ್ಞಾನಿಗಳಿಗೆ ದಿಕ್ಕು ತೋಚದಂತಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry