ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಗೇಟ್‌ ಕೆಳಸೇತುವೆ ಪೂರ್ಣಗೊಳಿಸಲು ಆಗ್ರಹ

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಿಗೇಹಳ್ಳಿ ರೈಲ್ವೆಗೇಟ್‌ ಕೆಳಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಬ್ಯಾಟರಾಯನಪುರ ಕ್ಷೇತ್ರದ ಜೆಡಿಎಸ್‌ ಘಟಕದ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಸಹಕಾರ ನಗರದ ಕೆನರಾ ಬ್ಯಾಂಕ್‌ ಲೇಔಟ್‌ನ ರೈಲ್ವೆಗೇಟ್‌ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಘಟಕ ಅಧ್ಯಕ್ಷ ಟಿ.ಜಿ.ಚಂದ್ರು ಮಾತನಾಡಿ, ‘ಕೊಡಿಗೇಹಳ್ಳಿ ರೈಲ್ವೆಗೇಟ್‌ ಕೆಳಸೇತುವೆ ಕಾಮಗಾರಿ ಆರಂಭವಾಗಿ ನಾಲ್ಕು ವರ್ಷಗಳಾದರೂ ಇದುವರೆಗೂ ಪೂರ್ಣಗೊಂಡಿಲ್ಲ. ಬಳ್ಳಾರಿ ಮುಖ್ಯ ರಸ್ತೆಯಿಂದ ಕೊಡಿಗೇಹಳ್ಳಿ ರೈಲ್ವೆಗೇಟ್‌ ಮೂಲಕ ತಿಂಡ್ಲು, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ ಸೇರಿ ಅಕ್ಕಪಕ್ಕದ ಬಡಾವಣೆಗಳಿಗೆ ಹೋಗಲು ವಾಹನ ಚಾಲಕರು, ಬೈಕ್‌ ಸವಾರರು ನಾಲ್ಕೈದು ಕಿಲೊ ಮೀಟರ್‌ ಬಳಸಿ ಕೆನರಾ ಬ್ಯಾಂಕ್‌ ಲೇಔಟ್‌ ಮೂಲಕ ಸಂಚರಿಸಬೇಕಾಗಿದೆ’ ಎಂದು ದೂರಿದರು.

'ಕಚೇರಿ ಮತ್ತು ಕಾರ್ಖಾನೆಗಳಿಗೆ ಹೋಗುವ ನೌಕರರು, ಕೂಲಿಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಮುಖ್ಯರಸ್ತೆಯಲ್ಲಿರುವ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡು, ಅಂಗಡಿ ನಡೆಸುವವರು ತಿಂಗಳ ಬಾಡಿಗೆ ಕಟ್ಟಲು ಹಣವಿಲ್ಲದೆ, ಜೀವನ ನಿರ್ವಹಣೆಗೂ ಆದಾಯವಿಲ್ಲದೆ ತೊಂದರೆಯಲ್ಲಿದ್ದಾರೆ’ ಎಂದರು.

'ಕೃಷಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೂ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. 15 ದಿನಗಳ ಒಳಗಾಗಿ ಕಾಮಗಾರಿ ಆರಂಭಿಸಿ, ಶೀಘ್ರದಲ್ಲೇ ಪೂರ್ಣಗೊಳಿಸದಿದ್ದರೆ, ಈ ಇಬ್ಬರು ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಹಿರಿಯ ಮುಖಂಡ ಗೋವಿಂದೇಗೌಡ ಮಾತನಾಡಿ, ‘ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ರಸ್ತೆ ವಿಸ್ತರಿಸಿದ್ದರಿಂದ ನಿವೇಶನ ಕಳೆದುಕೊಂಡವರು ಪರಿಹಾರಕ್ಕಾಗಿ ಎರಡು ವರ್ಷಗಳಿಂದ ಕಚೇರಿ ಅಲೆದು ಸುಸ್ತಾಗಿದ್ದಾರೆ. ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡ ಎಂ.ಹನುಮಂತೇಗೌಡ ಮಾತನಾಡಿ, ‘ಬಿಬಿಎಂಪಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಷರತ್ತುಬದ್ಧ ಒಪ್ಪಂದ ಮಾಡಿಕೊಂಡು ಕಾಮಗಾರಿ ಕೈಗೊಂಡಿದ್ದರೆ, ಕಾಮಗಾರಿ ಪೂರ್ಣಗೊಳಿಸಲು ನಾಲ್ಕು ವರ್ಷ ಬೇಕಾಗುತ್ತಿರಲಿಲ್ಲ. ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿರುವುದರಿಂದ ಪ್ರತಿನಿತ್ಯ ನಾಲ್ಕೈದು ಸಾವಿರ ಜನರು ಪ್ರಯಾಸದಿಂದ ಸಂಚರಿಸುತ್ತಿದ್ದಾರೆ’ ಎಂದರು.

ತಿಂಡ್ಲು ಗ್ರಾಮದಿಂದ ರೈಲ್ವೆ ಗೇಟ್‌ವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ, ಬಿಬಿಎಂಪಿ ಯಲಹಂಕ ವಲಯದ ಉಪ ಆಯುಕ್ತ ಶಿವೇಗೌಡ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT