ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ, ವನ್ಯಜೀವಿ ಸಂರಕ್ಷಿಸಿ: ರವಿಶಂಕರ ಗುರೂಜಿ

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭೂಮಿ ಮೇಲಿರುವ ಯಾವುದೇ ಒಂದು ಪ್ರಭೇದ ಅಳಿದರೆ ಅದು ಮನುಕೂಲಕ್ಕೆ ದೊಡ್ಡ ಆಪತ್ತು. ಹಾಗಾಗಿ ನಮ್ಮ ಪರಿಸರವನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕು. ವನ್ಯಜೀವಿಗಳನ್ನು ಸಂರಕ್ಷಿಸಬೇಕು’ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ತಿಳಿಸಿದರು.

ಅರಣ್ಯ ಇಲಾಖೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ 63ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಗರ ಮತ್ತು ಸುತ್ತಮುತ್ತಲಿನ ಕೆರೆಕಟ್ಟೆಗಳಿಗೆ ತ್ಯಾಜ್ಯ ಸೇರುತ್ತಿರುವುದರಿಂದ ಜಲಮೂಲಗಳು ಮಲಿನವಾಗುತ್ತಿವೆ. ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ವಿಸರ್ಜಿಸುತ್ತಿರುವುದರಿಂದಲೂ ಜಲಮಾಲಿನ್ಯವಾಗುತ್ತಿದೆ. ಇದರಿಂದ ಜಲಚರಗಳು, ಪ್ರಾಣಿ, ಪಕ್ಷಿಗಳು ಜೀವ ಕಳೆದುಕೊಳ್ಳುತ್ತಿವೆ. ನಗರವಾಸಿಗಳು ನೆಲ, ಜಲ ಪರಿಶುದ್ಧವಾಗಿಟ್ಟುಕೊಳ್ಳಲು ಗಮನ ಕೊಡಬೇಕು’ ಎಂದರು.

‘ಬನ್ನೇರುಘಟ್ಟ ಅರಣ್ಯದ ಸುತ್ತಮುತ್ತ ಜಿಂಕೆಗಳನ್ನು ಬೇಟೆಯಾಡುವುದನ್ನು ನೋಡುತ್ತಿದ್ದೇವೆ. ಮನುಷ್ಯನಿಗೆ ಪ್ರಾಣಿ ದಯೆ ಇರಬೇಕು. ಇಲ್ಲದಿದ್ದರೆ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ. ನಗರದಲ್ಲಿದ್ದುಕೊಂಡು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಿಸಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ನಗರವಾಸಿಗಳಿಗೆ ಮೂಡಬಹುದು. ಅರಣ್ಯ ಮತ್ತು ವನ್ಯಜೀವಿ ತಾಣಗಳಿಗೆ ಭೇಟಿ ಕೊಟ್ಟಾಗ, ತ್ಯಾಜ್ಯವನ್ನು ಅಲ್ಲಿ ಬಿಸಾಡಿ ವನ್ಯಜೀವಿಗಳ ಜೀವಕ್ಕೆ ಕುತ್ತಾಗದಂತೆ ಎಚ್ಚರ ವಹಿಸಬೇಕು. ಈ ರೀತಿ ಪರಿಸರ ಸ್ವಚ್ಛವಾಗಿಡುವ ಪ್ರಜ್ಞೆ ಬೆಳೆಸಿಕೊಂಡರೆ ಅದು ಕೂಡ ವನ್ಯಜೀವಿ ಸಂರಕ್ಷಣೆಗೆ ಕೊಡುಗೆ ಕೊಟ್ಟಂತಾಗುತ್ತದೆ’ ಎಂದರು.

‘ಪಕ್ಷಿಗಳು ಗೂಡು ಸೇರಿ ನಿದ್ರಿಸುವ ರಾತ್ರಿ ವೇಳೆ ಪಟಾಕಿ ಸಿಡಿಸುವುದಿಲ್ಲವೆಂಬ ಸಂಕಲ್ಪವನ್ನು ಯುವಜನರು ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳಬೇಕು. ದೀಪಾವಳಿ ಹಬ್ಬ ಸಮೀಪವಿರುವಾಗ ಪಟಾಕಿ ಸಿಡಿಸದಂತೆ ಜಾಗೃತಿ ಮೂಡಿಸುವುದು ದೊಡ್ಡ ಆಂದೋಲನವಾಗಲಿ’ ಎಂದು ಆಶಿಸಿದರು.

ಶಾಸಕ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ‘ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಸರ್ಕಾರಗಳಿಗೆ ಮಾತ್ರ ಸೀಮಿತವಾದ ಜವಾಬ್ದಾರಿಯಲ್ಲ. ಇದಕ್ಕಾಗಿ ಕಠಿಣ ಕಾಯ್ದೆ ರೂಪಿಸಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ದೊಡ್ಡ ಸವಾಲು ಇದೆ. ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮಾಡಬಹುದು’ ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್‌.ಸುಗಾರ ಮಾತನಾಡಿ,‘ವನ್ಯಜೀವಿ ಮತ್ತು ಮಾನವ ಸಂಘರ್ಷದಿಂದ ರಾಜ್ಯದಲ್ಲಿ ಒಂದು ವರ್ಷದಲ್ಲಿ 40 ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಇಲಾಖೆಯಿಂದಲೂ 42 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂದು ನಾವು ಹುಲಿ ರಕ್ಷಣೆಯಲ್ಲಿ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದ್ದೇವೆ. ಹುಲಿ ಮತ್ತು ಆನೆಗಳ ರಕ್ಷಣೆಯಲ್ಲೂ ನಮ್ಮ ರಾಜ್ಯ ದೇಶದಲ್ಲೇ ಅಗ್ರಸ್ಥಾನದಲ್ಲಿದೆ’ ಎಂದರು.

ಅರಣ್ಯ ಇಲಾಖೆ ಸಹಯೋಗದಲ್ಲಿ ಬೆಂಗಳೂರು ಬಟರ್‌ಫ್ಲೈ ಕ್ಲಬ್‌ ಮತ್ತು ಬೆಂಗಳೂರು ವೈಲ್ಡ್‌ಲೈಫ್‌ ಫ್ರೆಂಡ್ಸ್‌ ಸಂಸ್ಥೆಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ 10 ಸ್ಥಳಗಳಲ್ಲಿ ಗುರುತಿಸಿರುವ 97 ವಿಧದ ಚಿಟ್ಟೆಗಳ ಮಾಹಿತಿ ಮತ್ತು ಚಿತ್ರ ಒಳಗೊಂಡ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT