ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಕಳ್ಳ ಸಾಗಣೆದಾರ ಸೆರೆ

ಡಿಆರ್‌ಐ ಅಧಿಕಾರಿಗಳಿಂದ ₹4 ಕೋಟಿ ಮೌಲ್ಯದ 1,012 ಆಮೆ ರಕ್ಷಣೆ
Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಹಾಗೂ ಹೊರರಾಜ್ಯದ ಅರಣ್ಯದಲ್ಲಿ ಸಿಗುವ ವಿವಿಧ ಜಾತಿಯ ಆಮೆಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಕಳ್ಳ ಸಾಗಣೆದಾರನೊಬ್ಬ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳಿಗೆ ಸೆರೆಸಿಕ್ಕಿದ್ದಾನೆ.

ನಗರದಲ್ಲಿ ಪ್ರಾಣಿಗಳ ಆಹಾರ ಮಳಿಗೆ ಇಟ್ಟುಕೊಂಡಿರುವ ಆತ, ಗ್ಯಾಂಗ್ ಕಟ್ಟಿಕೊಂಡು ಈ ಕೃತ್ಯ ಎಸಗುತ್ತಿದ್ದ. ಆತನ ಗ್ಯಾಂಗ್ ಸದಸ್ಯರ ಬಗ್ಗೆ ಮಾಹಿತಿ ಕಲೆಹಾಕುತ್ತಿರುವುದರಿಂದ ಬಂಧಿತನ ಹೆಸರನ್ನು ಅಧಿಕಾರಿಗಳು ಗೋಪ್ಯವಾಗಿರಿಸಿದ್ದಾರೆ.

‘ಹೊಸೂರು ಕಡೆಯಿಂದ ನಗರಕ್ಕೆ ಬರುತ್ತಿದ್ದ ಚೆನ್ನೈ ನೋಂದಣಿಯ ಎರಡು ಕಾರುಗಳಲ್ಲಿ ಆಮೆಗಳನ್ನು ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಅತ್ತಿಬೆಲೆ ಟೋಲ್‌ಗೇಟ್‌ನಲ್ಲಿ ಭಾನುವಾರ ಕಾರುಗಳನ್ನು ತಡೆದು ತಪಾಸಣೆ ನಡೆಸಿದೆವು. ಈ ವೇಳೆ 7 ಚೀಲಗಳಲ್ಲಿ 1,012 ಆಮೆಗಳಿರುವುದು ಗೊತ್ತಾಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳಿಗೆ ₹4 ಕೋಟಿ ಬೆಲೆ ಇದೆ’ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.

ವಿಮಾನದ ಮೂಲಕ ಸಾಗಣೆ: ‘ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದಲ್ಲಿ ಸಕ್ರಿಯವಾಗಿರುವ ಗ್ಯಾಂಗ್ ಸದಸ್ಯರು, ಅಲ್ಲಿಯ ಅರಣ್ಯದಲ್ಲಿ ಸಿಗುವ ಆಮೆಗಳನ್ನು ಕದ್ದು ತಂದು ಹೊರದೇಶಕ್ಕೆ ರವಾನಿಸುತ್ತಿದ್ದರು.’

‘ರಸ್ತೆ ಮಾರ್ಗವಾಗಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಮೆಗಳನ್ನು ತಂದು, ಇಲ್ಲಿಂದ ಸಾಗಿಸುತ್ತಿದ್ದರು. ನಿಲ್ದಾಣದ ಕೆಲ ಸಿಬ್ಬಂದಿಯು ಈ ಜಾಲದೊಂದಿಗೆ ಶಾಮೀಲಾಗಿರುವ ಅನುಮಾನವಿದೆ. ಇದರಿಂದಲೇ ಅವರ ಕೃತ್ಯವು ಇದುವರೆಗೂ ಬಯಲಾಗಿರಲಿಲ್ಲ’ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.

‘ಚೀನಾ, ಜಪಾನ್‌ನ ರೆಸ್ಟೋರೆಂಟ್‌ಗಳಲ್ಲಿ ಇಂಥ ಆಮೆಗಳನ್ನು ಆಹಾರವಾಗಿ ಬಳಸುತ್ತಾರೆ. ಹೀಗಾಗಿ ಅವುಗಳಿಗೆ ಬೇಡಿಕೆ ಹೆಚ್ಚಿದೆ. ಆಮೆಗಳ ಗಾತ್ರ ಹಾಗೂ ಜಾತಿಯ ಆಧಾರದಲ್ಲಿ ಬೆಲೆ ನಿಗದಿ ಮಾಡಲಾಗುತ್ತದೆ. ಆರೋಪಿ ಯಾವ ದೇಶಕ್ಕೆ ಹಾಗೂ ಯಾವ ದರದಲ್ಲಿ ಆಮೆಗಳನ್ನು ಮಾರಾಟ ಮಾಡುತ್ತಿದ್ದ ಎಂಬುದು ಗೊತ್ತಾಗಿಲ್ಲ. ಆತನನ್ನು ವಿಚಾರಣೆಗೆ ಒಳಪಡಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ರೆಡ್‌ ಕಾರ್ನರ್‌ ನೋಟಿಸ್‌: ‘ಆರೋಪಿ ಹಲವು ವರ್ಷಗಳಿಂದ ವನ್ಯಜೀವಿಗಳ ಅಕ್ರಮ ಸಾಗಣೆಯಲ್ಲಿ ತೊಡಗಿದ್ದ. ಸಿಂಗಪುರ, ಫಿನ್‌ಲೆಂಡ್‌ ಹಾಗೂ ಥೈಲೆಂಡ್‌ ಪೊಲೀಸರು ರೆಡ್‌ಕಾರ್ನರ್‌ ನೋಟಿಸ್‌ ಜಾರಿ ಮಾಡಿ ಹುಡುಕಾಟ ನಡೆಸಿದ್ದರು. ಈಗ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಹೇಳಿದರು.

‘ದೇಶಗಳಿಂದ ದೇಶಕ್ಕೆ ವಾಸಸ್ಥಳ ಬದಲಾಯಿಸಿದ್ದ ಆರೋಪಿ ನಾಲ್ಕು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ. ಹೆಣ್ಣೂರು ಮುಖ್ಯರಸ್ತೆಯಲ್ಲಿ ವಾಸವಿದ್ದ. ಗುರುತು ಸಿಗಬಾರದು ಎಂದು ತಲೆ ಬೋಳಿಸಿಕೊಂಡು ಓಡಾಡುತ್ತಿದ್ದ’ ಎಂದು ತಿಳಿಸಿದರು.

ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ: ‘ಡಿಆರ್‌ಐ ಅಧಿಕಾರಿಗಳು ಆಮೆಗಳನ್ನು ನಮ್ಮ ವಶಕ್ಕೆ ನೀಡಿದ್ದಾರೆ. ಅವುಗಳಿಗೆ ಬನ್ನೇರುಘಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಎಲ್ಲ ಆಮೆಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದೇವೆ’ ಎಂದು ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮನೆಯಲ್ಲಿ ದಾಸ್ತಾನು
ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಆರೋಪಿಯ ಮನೆ ಮೇಲೆಯೂ ದಾಳಿ ನಡೆಸಿದ ಪೊಲೀಸರು ಹಲವು ಮಾಹಿತಿ ಕಲೆಹಾಕಿದ್ದಾರೆ. ತಾನೊಬ್ಬ ಉದ್ಯಮಿ ಎಂದು ಅಕ್ಕ–ಪಕ್ಕದ ನಿವಾಸಿಗಳಿಗೆ ಹೇಳಿಕೊಳ್ಳುತ್ತಿದ್ದ ಆತ, ಮನೆಯಲ್ಲಿ ಆಮೆಗಳನ್ನು ದಾಸ್ತಾನು ಮಾಡುತ್ತಿದ್ದ. ಖರೀದಿಯ ಆದೇಶ ಸಿಗುತ್ತಿದ್ದಂತೆ ಅಲ್ಲಿಂದಲೇ ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT