ಇಪ್ಪತ್ತೊಂಬತ್ತು ರಸ್ತೆಗಳ ವೈಟ್‌ ಟಾಪಿಂಗ್‌ಗೆ ಚಾಲನೆ

ಸೋಮವಾರ, ಮೇ 27, 2019
24 °C

ಇಪ್ಪತ್ತೊಂಬತ್ತು ರಸ್ತೆಗಳ ವೈಟ್‌ ಟಾಪಿಂಗ್‌ಗೆ ಚಾಲನೆ

Published:
Updated:
ಇಪ್ಪತ್ತೊಂಬತ್ತು ರಸ್ತೆಗಳ ವೈಟ್‌ ಟಾಪಿಂಗ್‌ಗೆ ಚಾಲನೆ

ಬೆಂಗಳೂರು: ಬಿಬಿಎಂಪಿಯು ಮುಖ್ಯಮಂತ್ರಿ ಅವರ ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ 29 ರಸ್ತೆಗಳು ಹಾಗೂ ಆರು ಜಂಕ್ಷನ್‌ಗಳಲ್ಲಿ ವೈಟ್‌ ಟಾಪಿಂಗ್‌ ಮಾಡುವ ಕಾಮಗಾರಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಸೋಮವಾರ ಚಾಲನೆ ನೀಡಿದರು.

ಮೈಸೂರು ರಸ್ತೆಯ ಜ್ಞಾನಭಾರತಿ ಕ್ಯಾಂಪಸ್‌ನ ಮುಖ್ಯದ್ವಾರದ ಬಳಿ ಸ್ಥಾಪಿಸಿರುವ ಕಾಂಕ್ರೀಟ್‌ ಮಿಶ್ರಣ ಮಾಡುವ ಘಟಕವನ್ನೂ ಉದ್ಘಾಟಿಸಲಾಯಿತು. ವೈಟ್‌ ಟಾಪಿಂಗ್‌ಗೆ ಬೇಕಿರುವ ಕಾಂಕ್ರೀಟ್‌ ಮಿಶ್ರಣವನ್ನು ಇಲ್ಲಿಂದಲೇ ಪೂರೈಸಲಾಗುತ್ತದೆ.

ಈ ಕಾಮಗಾರಿಯನ್ನು ಎರಡು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಾಗಿದೆ. ಆರು ರಸ್ತೆಗಳು ಹಾಗೂ ಆರು ವೃತ್ತಗಳ ಅಭಿವೃದ್ಧಿಯನ್ನು ಒಳಗೊಂಡ ಕಾಮಗಾರಿಯನ್ನು ಪ್ಯಾಕೇಜ್‌–1 ಎಂದು ಗುರುತಿಸಿದ್ದು, ಇದರ ಗುತ್ತಿಗೆಯನ್ನು ಎನ್‌ಸಿಸಿ ಕಂಪೆನಿಗೆ ವಹಿಸಲಾಗಿದೆ.

24 ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಪ್ಯಾಕೇಜ್‌–2 ಎಂದು ಗುರುತಿಸಿದ್ದು, ಕಾಮಗಾರಿಯನ್ನು ಮಧುಕಾನ್‌ ಪ್ರೈವೇಟ್‌ ಕಂಪೆನಿಗೆ ವಹಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು 11 ತಿಂಗಳು ಕಾಲಾವಕಾಶ ನೀಡಲಾಗಿದೆ.

ಡಾಂಬರು ರಸ್ತೆಗಳ ಮೇಲ್ಮೈ ಮೇಲೆ ಕಾಂಕ್ರೀಟ್‌ ಹೊದಿಕೆ ಹಾಕುವುದನ್ನು ವೈಟ್‌ ಟಾಪಿಂಗ್‌ ಎನ್ನುತ್ತಾರೆ. ಈ ರಸ್ತೆಗಳು 20–30 ವರ್ಷ ಬಾಳಿಕೆ ಬರುತ್ತವೆ. ರಸ್ತೆಗಳ ಭಾರ ಹೊರುವ ಸಾಮರ್ಥ್ಯ ಹೆಚ್ಚಿಸುವುದು ವೈಟ್‌ ಟಾಪಿಂಗ್‌ನ ಉದ್ದೇಶವಾಗಿದೆ.

ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭ: ಮೈಸೂರು ರಸ್ತೆಯ ಚರ್ಚ್‌ ವೃತ್ತದಿಂದ ಟಿಸಿಎಂ ರಸ್ತೆವರೆಗಿನ ರಸ್ತೆಗೆ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಮಧುಕಾನ್‌ ಪ್ರೈವೇಟ್‌ ಕಂಪೆನಿಯವರು ಆರಂಭಿಸಿದ್ದಾರೆ.

‘ಮೈಸೂರು ರಸ್ತೆಯ ಕೆ.ಆರ್‌.ಮಾರುಕಟ್ಟೆ ವೃತ್ತದಿಂದ ಬಿಎಚ್‌ಇಎಲ್‌ ವೃತ್ತದವರೆಗೆ 4.80 ಕಿ.ಮೀ. ವೈಟ್‌ ಟಾಪಿಂಗ್‌ ಮಾಡುತ್ತೇವೆ. ಮಿಲ್ಲಿಂಗ್‌ ಯಂತ್ರದ ಮೂಲಕ ಡಾಂಬರಿನ ಪದರವನ್ನು ತೆಗೆಯಲಾಗುತ್ತಿದೆ. ಇದರ ಮೇಲೆ ಎಂ–40 ಗ್ರೇಡ್‌ನ 160 ಮಿ.ಮೀ. ದಪ್ಪದ ಕಾಂಕ್ರೀಟ್‌ ಹಾಕುತ್ತೇವೆ. ಇಲ್ಲಿ ಕಲ್ಲಿನಿಂದ ನಿರ್ಮಿಸಿದ ಚರಂಡಿ ಇದೆ. ಇದನ್ನು ತೆಗೆದು ಆರ್‌ಸಿಸಿ ಚರಂಡಿ ನಿರ್ಮಿಸುತ್ತೇವೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಮಧುಕಾನ್‌ ಪ್ರೈವೇಟ್‌ ಕಂಪೆನಿಯ ಸಲಹೆಗಾರ ಎಂ.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಟೆಂಡರ್‌ ಶ್ಯೂರ್‌ ಮಾದರಿ ರಸ್ತೆಗೆ ಚಾಲನೆ:‌ ಮುಖ್ಯಮಂತ್ರಿ ಅವರ ನಗರೋತ್ಥಾನ ಯೋಜನೆಯಡಿ ಗಾಂಧಿನಗರ ಕ್ಷೇತ್ರದ ವ್ಯಾಪ್ತಿಯ ಆರು ರಸ್ತೆಗಳನ್ನು ಟೆಂಡರ್ ಶ್ಯೂರ್ ರಸ್ತೆಗಳನ್ನಾಗಿ ಪರಿವರ್ತಿಸುವ ಕಾಮಗಾರಿಗೆ ಕೆ.ಜೆ.ಜಾರ್ಜ್‌ ಚಾಲನೆ ನೀಡಿದರು.

ಸುಬೇದಾರ್‌ ಛತ್ರ ರಸ್ತೆ–ಕೆ.ಜಿ.ರಸ್ತೆ– ಶೇಷಾದ್ರಿಪುರ ರಸ್ತೆ (0.60 ಕಿ.ಮೀ), ಗುಬ್ಬಿ ತೋಟದಪ್ಪ ರಸ್ತೆ– ಗೂಡ್‌ ಶೆಡ್‌ ರಸ್ತೆ ಜಂಕ್ಷನ್‌– ಸಿ.ಜೆ. ರಸ್ತೆ (1.68 ಕಿ.ಮೀ), ಧನ್ವಂತರಿ ರಸ್ತೆ– ಉಪ್ಪಾರಪೇಟೆ ಪೊಲೀಸ್‌ ಠಾಣೆ– ಆನಂದರಾವ್‌ ವೃತ್ತ (1.50 ಕಿ.ಮೀ), ಹನುಮಂತಪ್ಪ ರಸ್ತೆ– ಶೇಷಾದ್ರಿಪುರ ರಸ್ತೆ– ಕೆ.ಜಿ.ರಸ್ತೆ (0.68 ಕಿ.ಮೀ), ಗಾಂಧಿನಗರದ 2ನೇ ಮುಖ್ಯರಸ್ತೆ– 2ನೇ ಅಡ್ಡರಸ್ತೆ– 5ನೇ ಮುಖ್ಯರಸ್ತೆ– ಬಿ.ಬಿ.ನಾಯ್ಡು ರಸ್ತೆ (4.60 ಕಿ.ಮೀ), ಭಾಷ್ಯಂ ರಸ್ತೆ (ಕಾಟನ್‌ಪೇಟೆ ಮುಖ್ಯರಸ್ತೆ), ಗೂಡ್‌ಶೆಡ್‌ ರಸ್ತೆ–ಮೈಸೂರು ರಸ್ತೆಯವರೆಗೆ (1.25 ಕಿ.ಮೀ) ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ.

‘10 ಕಿ.ಮೀ. ಉದ್ದದ ರಸ್ತೆಗಳನ್ನು ₹105 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಇದರ ಗುತ್ತಿಗೆಯನ್ನು ಅಮೃತ್ ಕನ್‌ಸ್ಟ್ರಕ್ಷನ್‌ ಸಂಸ್ಥೆಗೆ ನೀಡಲಾಗಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇವೆ. ಈ ಭಾಗದಲ್ಲಿ ಜನದಟ್ಟಣೆ ಹಾಗೂ ವಾಹನ ದಟ್ಟಣೆ ಇರುತ್ತದೆ. ಹೀಗಾಗಿ ಪೊಲೀಸರ ಸಹಾಯ ಪಡೆದು ರಸ್ತೆ ನಿರ್ಮಾಣ ಮಾಡುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ತಿಳಿಸಿದರು.

ಜೆಡಿಎಸ್‌ಗೆ ನಾಲ್ಕು ಸ್ಥಾಯಿ ಸಮಿತಿ: ‘ಬಿಬಿಎಂಪಿ ಸ್ಥಾಯಿ ಸಮಿತಿ ಹಂಚಿಕೆಯು ಸುಸೂತ್ರವಾಗಲಿ ನಡೆಯಲಿದೆ. ಜೆಡಿಎಸ್‌ನವರ ಬೇಡಿಕೆಯಂತೆ ನಾಲ್ಕು ಸ್ಥಾಯಿ ಸಮಿತಿಗಳನ್ನು ನೀಡುತ್ತೇವೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯನ್ನು ಯಾವ ಪಕ್ಷಕ್ಕೆ ಕೊಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಎತ್ತರಿಸಿದ ಕಾರಿಡಾರ್‌ ಡಿಪಿಆರ್‌ ಸಿದ್ಧ: ‘ಎತ್ತರಿಸಿದ ಕಾರಿಡಾರ್‌ನ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ. ಈ ಯೋಜನೆ ಅನುಷ್ಠಾನಗೊಳಿಸಲು ₹22 ಸಾವಿರ ಕೋಟಿ ಬೇಕು. ವಿದೇಶಿ ಹೂಡಿಕೆದಾರರಿಂದ ಹಣ ಸಂಗ್ರಹಿಸಲು ನಿರ್ಧರಿಸಲಾಗಿದೆ’ ಎಂದು ಜಾರ್ಜ್‌ ತಿಳಿಸಿದರು.

‘ಸದ್ಯಕ್ಕೆ ಬಿಬಿಎಂಪಿ ವಿಭಜನೆ ಇಲ್ಲ’: ‘ಬಿಬಿಎಂಪಿ ವಿಭಜನೆಯ ನಿರ್ಣಯವನ್ನು ರಾಷ್ಟ್ರಪತಿ ಅವರಿಗೆ ಕಳುಹಿಸಲಾಗಿದೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಚುನಾವಣಾ ವರ್ಷದಲ್ಲಿ ಬಿಬಿಎಂಪಿ ವಿಭಜನೆಗೆ ಕೈ ಹಾಕುವುದಿಲ್ಲ. ನಮ್ಮದೇ ಪಕ್ಷವು ಮುಂದಿನ ಬಾರಿಯೂ ಅಧಿಕಾರಕ್ಕೆ ಬರಲಿದೆ. ಆಗ ಬಿಬಿಎಂಪಿ ವಿಭಜನೆ ಮಾಡುತ್ತೇವೆ’ ಎಂದರು.

‘ಭ್ರಷ್ಟರ ಪರ ಯಡಿಯೂರಪ್ಪ’: ‘ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡುವ ಅಧಿಕಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಇದೆ. ಆದರೆ, ಬಿ.ಎಸ್‌.ಯಡಿಯೂರಪ್ಪ ಅವರು ಭ್ರಷ್ಟ ಅಧಿಕಾರಿಗಳ ಪರವಾಗಿ ನಿಂತಿದ್ದಾರೆ’ ಎಂದು ಜಾರ್ಜ್‌ ಆರೋಪಿಸಿದರು.

‘ಐಟಿ ಅಧಿಕಾರಿಗಳಿಗೆ ದಾಳಿ ಮಾಡುವ ಅಧಿಕಾರ ಇದೆ. ಆದರೆ, ರಾಜಕೀಯ ಪ್ರೇರಿತವಾಗಿ ದಾಳಿ ಮಾಡುವುದು ಸರಿಯಲ್ಲ. ಇದಕ್ಕೆ ಬಿಜೆಪಿಯವರು ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ವೈಟ್‌ ಟಾಪಿಂಗ್‌ ರಸ್ತೆಗಳ ವಿಶೇಷತೆ

* ರಸ್ತೆಗೆ ಎಂ–40 ಗ್ರೇಡ್‌ನ ಕಾಂಕ್ರೀಟ್‌ ಅಳವಡಿಕೆ

* ರಸ್ತೆಯ ಅಂಚಿನಲ್ಲಿ ಅಗತ್ಯ ಮೂಲಸೌಕರ್ಯಗಳಿಗೆ ಪೇವರ್‌ ಬ್ಲಾಕ್‌ಗಳ ಅಳವಡಿಕೆ

* ಪಾದಚಾರಿಗಳಿಗೆ ಅನುಕೂಲಕರವಾದ ಮಾರ್ಗ ನಿರ್ಮಾಣ

* ಮೂಲಸೌಕರ್ಯಗಳಿಗೆ ಎನ್‌ಪಿ3 ಹ್ಯೂಮ್‌ ಪೈಪ್‌ಗಳ ಅಳವಡಿಕೆ

* ಒಎಫ್‌ಸಿಗಾಗಿ 110 ಮಿ.ಮೀ. ವ್ಯಾಸದ 4 ಮತ್ತು ಬೆಸ್ಕಾಂಗಾಗಿ 200 ಮಿ.ಮೀ. ವ್ಯಾಸದ ಎಚ್‌ಡಿಪಿಇ ಕೊಳವೆಗಳ ಅಳವಡಿಕೆ

* ವಾಹನಗಳ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಕರ್ಬ್‌ಗಳ ಅಳವಡಿಕೆ

* ಜಂಕ್ಷನ್‌ಗಳ ಉನ್ನತೀಕರಣ

* ಎಲ್‌ಇಡಿ ದೀಪಗಳ ಅಳವಡಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry