ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆಯಿಂದ ಸ್ಪರ್ಧೆ ಖಚಿತ: ಶಶಿಶೇಖರ ನಾಯ್ಕ್

Last Updated 10 ಅಕ್ಟೋಬರ್ 2017, 5:55 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಈ ಬಾರಿಯ ವಿಧಾನಸಭಾ ಚುನಾವಣೆಗೆ ನಾನು ಹೊಳಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ’ ಎಂದು ಉದ್ಯಮಿ ಶಶಿಶೇಖರ ನಾಯ್ಕ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರೊಂದಿಗೆ ಸಂಪರ್ಕದಲ್ಲಿದ್ದೇನೆ.

ಕೊನೆಗಳಿಗೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದರೂ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ. ನಾನು ಚಳ್ಳಕೆರೆ ತಾಲ್ಲೂಕಿನ ಮೈಮನಹಟ್ಟಿ ಗ್ರಾಮದವನಾಗಿದ್ದು, ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದೇನೆ. ನನ್ನ ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಇದ್ದು, ಜನಸೇವೆ ಮಾಡುವ ಅಭಿಲಾಷೆ ಇದೆ. ಜಿಲ್ಲೆಯಲ್ಲಿ ಹೊಳಲ್ಕೆರೆ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಆಗಿರುವುದರಿಂದ ಇಲ್ಲಿಂದ ಸ್ಪರ್ಧಿಸಲು ಮುಂದಾ ಗಿದ್ದೇನೆ’ ಎಂದರು.

‘ಹುಟ್ಟೂರು ಚಳ್ಳಕೆರೆ ಆದರೂ ಹೊಳಲ್ಕೆರೆ ಕ್ಷೇತ್ರದೊಂದಿಗೆ ಮೊದಲಿನಿಂದಲೂ ಬಾಂಧವ್ಯ ಇದೆ. ಈ ಕ್ಷೇತ್ರದ ಭರಮಸಾಗರ, ಸಿರಿಗೆರೆ, ಸಾಸಲು ಭಾಗದಲ್ಲಿ ಸಂಬಂಧಿಕರಿದ್ದು, ಹೆಚ್ಚಿನ ನಂಟಿದೆ. 2009ರಲ್ಲಿ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಆಗ 46,000 ಮತಗಳನ್ನು ಪಡೆದಿದ್ದು, ಹೊಳಲ್ಕೆರೆ ಕ್ಷೇತ್ರದಿಂದಲೇ ಹೆಚ್ಚು ಮತಗಳು ಬಂದಿದ್ದವು. ಈಗ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಮನಸ್ಸಿದೆ’ ಎಂದು ಶಶಿಶೇಖರ ನಾಯ್ಕ್ ಹೇಳಿದರು.

‘ಹೊಳಲ್ಕೆರೆ ಕ್ಷೇತ್ರದಲ್ಲಿ 28,000 ಲಂಬಾಣಿ ಮತಗಳಿದ್ದರೂ ಇಲ್ಲಿ ನಮ್ಮ ಜನಾಂಗ ರಾಜಕೀಯವಾಗಿ ಹಿಂದಿದೆ. ನಮ್ಮ ಜನಾಂಗದ ಬೆಂಬಲ ಪಡೆಯುವುದರೊಂದಿಗೆ ಎಲ್ಲಾ ಜಾತಿ, ಧರ್ಮಗಳ ಜನರ ವಿಶ್ವಾಸ ಗಳಿಸುತ್ತೇನೆ. ದ್ವೇಷ ರಾಜಕಾರಣ ಮಾಡದೆ ಎಲ್ಲರನ್ನೂ ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ. ಕಾರ್ಯಕರ್ತರ ಭೇಟಿಗೆ ಶೀಘ್ರದಲ್ಲೇ ಪಟ್ಟಣದಲ್ಲಿ ಕಚೇರಿ ಆರಂಭಿಸುತ್ತೇನೆ. ಪಟ್ಟಣದಲ್ಲಿ ವಾಸಕ್ಕಾಗಿ ಮನೆಯನ್ನೂ ಹೊಂದುತ್ತೇನೆ’ ಎಂದರು.

‘ನಮ್ಮ ತಂದೆ ರಾಜಕಾರಣದಲ್ಲಿ ಇದ್ದರು. ಅವರ ಹೆಸರಿನಲ್ಲಿ ಸ್ಥಾಪಿಸಿರುವ ‘ಹರಿದಾಸ ನಾಯ್ಕ ಟ್ರಸ್ಟ್’ ನಿಂದ ಸಮಾಜ ಸೇವೆ ಮಾಡುತ್ತಿದ್ದೇನೆ. ಟ್ರಸ್ಟ್ ನಿಂದ ಕ್ಷೇತ್ರದ ಎಲ್ಲಾ ಶಾಲೆಗಳ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ₹ 499 ಬೆಲೆಯ ಸಾಮಾನ್ಯ ಜ್ಞಾನ ಪುಸ್ತಕ ವಿತರಿಸುವ ಉದ್ದೇಶ ಇದೆ. ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಸಮಾವೇಶ ನಡೆಸಿ ಅವರ ಸ್ವಾವಲಂಬನೆಗೆ ನೆರವು ನೀಡುವ ಗುರಿ ಇದೆ’ ಎಂದು ತಿಳಿಸಿದರು.

‘ಧಾರ್ಮಿಕ ಕಾರ್ಯಗಳಲ್ಲಿಯೂ ನಾನು ಸಕ್ರಿಯವಾಗಿದ್ದು, ಹಿಂದೆ ನಾಯಕನಹಟ್ಟಿ ಜಾತ್ರೆಯಲ್ಲಿ ₹ 35 ಕ್ಕೆ ಮುಕ್ತಿ ಬಾವುಟ ಪಡೆದಿದ್ದೆ. ಈ ಬಾರಿಯೂ ಚಿತ್ರದುರ್ಗದಲ್ಲಿ ₹1.75 ಲಕ್ಷ ನೀಡಿ ಹಿಂದೂ ಮಹಾಗಣಪತಿ ಮುಕ್ತಿ ಬಾವುಟ ಪಡೆದಿದ್ದೇನೆ. ಈಗಿನಿಂದಲೇ ಕ್ಷೇತ್ರದಲ್ಲಿ ಸಂಚರಿಸಿ ಜನ ಬೆಂಬಲ ಪಡೆಯುತ್ತೇನೆ. ಕಾರ್ಯಕರ್ತರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT