ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ನೆಲಕಚ್ಚಿದ ಬೆಳೆ:ರೈತರು ಕಂಗಾಲು

Last Updated 10 ಅಕ್ಟೋಬರ್ 2017, 6:20 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನ ತಡಸ, ಧುಂಡಸಿ ಭಾಗದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆ–ಗಾಳಿಗೆ ಬೆಳೆದು ನಿಂತಿರುವ ಗೋವಿನಜೋಳದ ಬೆಳೆ ನೆಲ ಕಚ್ಚಿದ್ದು, ಅಪಾರ ಹಾನಿಯಾಗಿದೆ. ಮುಂಗಾರು ಮಳೆ ಅಭಾವದಿಂದ ಬಿತ್ತನೆ ಕಡಿಮೆಯಾಗಿತ್ತು. ಒಂದಿಷ್ಟು ಪ್ರದೇಶದಲ್ಲಿ ಬಿತ್ತಿದ್ದ ಬೀಜವೂ ಮೊಳಕೆ ಒಡೆದಿರಲಿಲ್ಲ. ಸಂಕಷ್ಟದ ನಡುವೆಯ ಅಲ್ಲಲ್ಲಿ ಬೆಳೆದ ಬೆಳೆಯೂ ಇತ್ತೀಚೆಗೆ ಸುರಿಯುತ್ತಿರುವ ಮಳೆಯ ಪರಿಣಾಮ ಕೈಗೆ ಬರುವ ಮೊದಲೇ ಮಣ್ಣುಪಾಲಾಗಿದೆ.

ಮಳೆ–ಗಾಳಿಯ ಹೊಡೆತಕ್ಕೆ ಕಟಾವಿಗೆ ಬಂದಿರುವ ಗೋವಿನಜೋಳ ನೆಲ ಕಚ್ಚಿದೆ. ಮಳೆಯಿಂದಾಗಿ ತೆನೆಗಳು ಅಲ್ಲೆ ಮೊಳಕೆ ಒಡೆಯುತ್ತಿವೆ. ಅದರಿಂದಾಗಿ ಕೈಗೆ ಬಂದಿರುವ ತುತ್ತು ಬಾಯಿಗೆ ಬರದಂತಾಗಿದೆ.

‘ಮಲೆನಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಅಂದಲಗಿ, ಹೊಸೂರು, ಕೋಣನಕೇರಿ ಧುಂಡಸಿ, ತಡಸ ಭಾಗದಲ್ಲಿ ಮಳೆ ಅಭಾವದಿಂದ ಭತ್ತದ ಬದಲಿಗೆ ಗೋವಿನ ಜೋಳ ಬಿತ್ತನೆ ಮಾಡಲಾಗಿತ್ತು. ಅಲ್ಲಲ್ಲಿ ಭತ್ತವೂ ಇದೆ. ಆದರೆ, ಇತ್ತೀಚೆಗೆ ಸುರಿದ ಮಳೆ ಹಾಗೂ ಗಾಳಿಗೆ ಬೆಳೆಗಳು ನೆಲ ಕಚ್ಚಿವೆ. ಶೇಕಡಾ 80ರಷ್ಟು ಬೆಳೆ ಹಾನಿಯಾಗಿದೆ’ ಎಂದು ಶ್ಯಾಬಳ ಗ್ರಾಮದ ನೀಲಕಂಠಗೌಡ ಪಾಟೀಲ ಅಳಲು ತೋಡಿಕೊಂಡರು.

‘ಮುಂಗಾರು ಮಳೆ ನಿರೀಕ್ಷೆಯಲ್ಲಿ ರೈತರು ಹತ್ತಿ, ಗೋವಿನಜೋಳ, ಸೋಯಾಬಿನ್, ಶೇಂಗಾ, ಭತ್ತ ಬಿತ್ತಿದ್ದ ರೈತರು, ಬರದಿಂದ ಬೆಳೆ ಕಮರಿವಾಗ ಟ್ಯಾಂಕರ್ ನೀರುಣಿಸಿ ಕಾಪಾಡಿಕೊಂಡಿದ್ದರು. ಇಷ್ಟೆಲ್ಲ ಮಾಡಿ ಬೆಳೆ ಕೈಗೆ ಬಂತು ಎನ್ನುವಷ್ಟರಲ್ಲಿ ಸುರಿದ ಮಳೆಗೆ ಬೆಳೆಗಳು ನೆಲ ಕಚ್ಚಿವೆ. ಮತ್ತೊಂದೆಡೆ, ಭತ್ತ, ಗೋವಿನ ಜೋಳಕ್ಕೆ ರೋಗದ ಬಾಧೆ ಎದುರಾಗಿದೆ. ಇದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ’ ಎಂದು ಧುಂಡಿಸಿ ಗ್ರಾಮದ ರೈತ ರುದ್ರಪ್ಪಣ್ಣ ಕಳವಳ ವ್ಯಕ್ತಪಡಿಸಿದರು.

‘ತಾಲ್ಲೂಕಿನಲ್ಲಿ 8 ಸಾವಿರ ಹೆಕ್ಟರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 6 ಸಾವಿರ ಹೆಕ್ಟೇರ್‌ನಷ್ಟು ಬೆಳೆ ಹಾನಿ ಸಂಭವಿಸಿದೆ. 14 ಸಾವಿರ ಹೆಕ್ಟೇರ್‌ನಲ್ಲಿ ಗೋವಿನಜೋಳ ಬೆಳೆದಿದ್ದು, 12 ಸಾವಿರ ಹೆಕ್ಟೇರ್‌ನಷ್ಟು ಗೋವಿನ ಜೋಳದ ಬೆಳೆ ನಷ್ಟವಾಗಿದೆ.

ಈ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿಯಾಗಿ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ’ ಎಂದು ಶಿಗ್ಗಾವಿ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಡಾ.ಆರ್‌.ನಾಗನಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT