ರಸ್ತೆಯಿಂದ ವಾಹನ ಇಳಿಸುವಾಗ ಬಿದ್ದವರೆಷ್ಟೋ...!

ಶನಿವಾರ, ಮೇ 25, 2019
28 °C

ರಸ್ತೆಯಿಂದ ವಾಹನ ಇಳಿಸುವಾಗ ಬಿದ್ದವರೆಷ್ಟೋ...!

Published:
Updated:
ರಸ್ತೆಯಿಂದ ವಾಹನ ಇಳಿಸುವಾಗ ಬಿದ್ದವರೆಷ್ಟೋ...!

ಹುಬ್ಬಳ್ಳಿ: ಅವಳಿ ನಗರದ ಮಧ್ಯೆ ತ್ವರಿತ ಸಾರಿಗೆ ಸೇವೆ ಒದಗಿಸುವ ಉದ್ದೇಶದಿಂದ ಅನುಷ್ಠಾನಗೊಳ್ಳುತ್ತಿರುವ ಬಿಆರ್‌ಟಿಎಸ್‌ ಕಾಮಗಾರಿಯು ವಿಳಂಬವಾಗಿದ್ದರಿಂದ ವಾಹನ ಸವಾರರ ಪಾಲಿಗೆ ಹಳೇ ಹಾಗೂ ಹೊಸ ರಸ್ತೆಗಳು ದುಸ್ವಪ್ನವಾಗಿ ಕಾಡುತ್ತಿವೆ.

ವಿದ್ಯಾನಗರದ ಗುರುದತ್ತ ಭವನ ಹೋಟೆಲ್‌ ಎದುರಿನ ಹೊಸ ರಸ್ತೆಯಿಂದ ಹಳೇ ಇನ್‌ಕಂ ಟ್ಯಾಕ್ಸ್‌ ರಸ್ತೆಯತ್ತ ಹೋಗಲು ಗಾಡಿ ಇಳಿಸುವ ಸಂದರ್ಭದಲ್ಲಿ ಹಲವು ಜನ ಬಿದ್ದು ಕೈ, ಕಾಲು, ತಲೆಗೆ ಗಾಯ ಮಾಡಿಕೊಂಡಿದ್ದಾರೆ. ರಸ್ತೆ ಮಧ್ಯದಲ್ಲಿ ನಿರ್ಮಾಣಗೊಂಡ ಬಿಎಸ್‌ಎನ್ಎಲ್‌ ಕೇಬಲ್ ಜಂಕ್ಷನ್‌ನ ಅಂಚಿಗೆ ಬಡಿದು ಹಲವು ಕಾರುಗಳ ಚಾಸಿಗಳು ಹಾನಿಗೊಂಡಿವೆ.

ಆರ್‌.ಬಿ. ಪಾಟೀಲ ಆಸ್ಪತ್ರೆ ಬಳಿ ರಸ್ತೆ ಪಕ್ಕದಲ್ಲಿ ಕಡಿ ಹಾಕಿ ಹೋದ ರಸ್ತೆ ಕಾಮಗಾರಿ ಮಾಡುವ ಗುತ್ತಿಗೆದಾರರು ರಸ್ತೆಗೆ ಸಮಾನಾಂತರವಾಗಿ ಡಾಂಬರ್‌ ಹಾಕಲು ಇಲ್ಲವೇ ಕಡಿಗಳನ್ನು ಹಾಕಲೂ ಒಪ್ಪುತ್ತಿಲ್ಲ. ಈ ಬಗ್ಗೆ ಯಾರಿಗೆ ಹೇಳಬೇಕೋ ತಿಳಿಯದಾಗಿದೆ ಎಂದು ಹಲವು ಆಟೊ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.

ಹುಬ್ಬಳ್ಳಿ–ಧಾರವಾಡ ಮಧ್ಯದ ರಸ್ತೆಗಳ ಅವ್ಯವಸ್ಥೆಯ ಬಗ್ಗೆ  ಇತ್ತೀಚೆಗೆ ಸಚಿವ ವಿನಯ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾಗಿತ್ತು.

ಇದರಿಂದ ಎಚ್ಚೆತ್ತಕೊಂಡಿರುವ ಬಿಆರ್‌ಟಿಎಸ್‌ ಅಧಿಕಾರಿಗಳು, ಹೊಸೂರಿನ ನಿಯಾಜ್‌ ಹೋಟೆಲ್‌ ಎದುರಿನ ಹೊಸ ರಸ್ತೆಗೆ ಡಾಂಬರ್‌ ಹಾಕಿ ವಾಹನಗಳು ಸರಾಗವಾಗಿ ಹೋಗುವಂತೆ ಅನುಕೂಲ ಮಾಡಿಕೊಟ್ಟಿದ್ದರು. ಆದರೆ, ಅದೇ ಮುನ್ನೆಚ್ಚರಿಕೆ ಕ್ರಮವನ್ನು ಗುರುದತ್ತ ಹೋಟೆಲ್‌ ಬಳಿ ಏಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸುತ್ತಾರೆ ಆಟೊ ಚಾಲಕ ಶಂಷುದ್ದೀನ್ ಧಾರವಾಡ.

‘ಕೆಲ ದಿನಗಳ ಹಿಂದೆ ಆ್ಯಕ್ಟಿವಾ ವಾಹನದಲ್ಲಿ ಬಂದ ಮಹಿಳೆಯೊಬ್ಬರು ರಸ್ತೆ ದಾಟುವಾಗ ಬಿದ್ದರು. ಮಳೆ ಬಂದಿದ್ದರಿಂದ ನೀರಿನಲ್ಲಿಯೇ ಬಿದ್ದು ಕೆಸರುಮಯವಾದರು. ನಿತ್ಯ ಇಬ್ಬರು, ಮೂವರು ಇಳಿಜಾರಿನ ರಸ್ತೆಯಲ್ಲಿ ಗಾಡಿ ಇಳಿಸುವಾಗ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆ’ ಎಂದು ಆಟೊ ಚಾಲಕ ರುದ್ರಪ್ಪ ಮೇಟಿ ಹೇಳಿದರು.

ಕೆಳಗೆ ಜಾರಿದ ಜಲ್ಲಿಕಲ್ಲಿನ ಸಿಮೆಂಟ್‌ ಚೀಲಗಳು: ಜೆ.ಜಿ. ಕಾಮರ್ಸ್ ಬಳಿ ಬಹಳ ಎತ್ತರದ ಮಟ್ಟದಲ್ಲಿ ಹೊಸ ರಸ್ತೆ ನಿರ್ಮಿಸಲಾಗಿದೆ. ಹಳೇ ರಸ್ತೆ ಎರಡರಿಂದ ಮೂರು ಅಡಿ ಕೆಳಗಿದೆ. ವಾಹನಗಳು ಆಯತಪ್ಪಿ ಬೀಳದಂತೆ ತಡೆಯಲು ಬಿಆರ್‌ಟಿಎಸ್‌ ಇತ್ತೀಚೆಗೆ ಜಲ್ಲಿಕಲ್ಲಿನ ಸಿಮೆಂಟ್‌ ಚೀಲಗಳನ್ನು ಅಲ್ಲಲ್ಲಿ ಇಡಲಾಗಿತ್ತು.

ಮಳೆಯಿಂದಾಗಿ ಚೀಲಗಳು ರಸ್ತೆಯಿಂದ ಕೆಳಕ್ಕೆ ಬಿದ್ದಿವೆ. ರಸ್ತೆಗಳ ಬಗ್ಗೆ ಗೊತ್ತಿಲ್ಲದ ಚಾಲಕರು ಪಕ್ಕದ ರಸ್ತೆಗೆ ವಾಹನ ನುಗ್ಗಿಸುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಆಟೊ ಚಾಲಕ ಶಂಕರ ದಲಭಂಜನ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry