ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊತ್ತಂಬರಿ ಸೊಪ್ಪು, ಬೀನ್ಸ್, ಗೆಡ್ಡೆ ಕೋಸು ದುಬಾರಿ

Last Updated 10 ಅಕ್ಟೋಬರ್ 2017, 8:51 IST
ಅಕ್ಷರ ಗಾತ್ರ

ಮಂಡ್ಯ: ಆಯುಧ ಪೂಜೆ, ಪಿತೃ ಪಕ್ಷ ಮುಗಿದರೂ ಕೊತ್ತಂಬರಿ ಸೊಪ್ಪಿನ ಬೆಲೆ ದುಬಾರಿಯಾಗಿಯೇ ಉಳಿದಿದೆ. ಕೆ.ಜಿ. ಬೀನ್ಸ್‌ ಬೆಲೆ ₹ 80ಕ್ಕೇರಿದ್ದರೆ, ಗೆಡ್ಡೆಕೋಸಿನ ಬೆಲೆ ₹ 100ಕ್ಕೇರಿದೆ. ಇದು ಈ ವಾರದ ಮಾರುಕಟ್ಟೆಯ ವಿಶೇಷ.

ಆಯುಧಪೂಜೆಯ ದಿನ ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ₹ 60 ಇತ್ತು. ವಿವಿಧೆಡೆ ಪಿತೃಪಕ್ಷ ಆಚರಣೆ ನಡೆಯುವಾಗ ಕಟ್ಟು ಕೊತ್ತಂಬರಿ ₹ 50 ಇತ್ತು. ಈಗಲೂ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ₹ 50ರಲ್ಲೇ ಮುಂದುವರಿದಿದ್ದು ಗ್ರಾಹಕರಿಗೆ ಹೊರೆಯಾಗಿದೆ. ಒಂದು ತಿಂಗಳಿಂದ ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಮಾರುಕಟ್ಟೆಗೆ ಸೊಪ್ಪು ಕೊರತೆಯಾಗಿದೆ. ಹೀಗಾಗಿ ಸೊಪ್ಪಿನ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಬಿಸಿಲು ಇದ್ದರೆ ರೈತರು ಸೊಪ್ಪು ಕೊಯ್ಲು ಮಾಡಿ ಮಾರುಕಟ್ಟೆಗೆ ತರುತ್ತಾರೆ. ಆದರೆ ಮಳೆ ಸುರಿಯುತ್ತಿರುವ ಕಾರಣ ಅವರು ಸೊಪ್ಪನ್ನು ಕೊಯ್ಲು ಮಾಡಿಲ್ಲ. ಹೀಗಾಗಿ ಬೆಲೆ ಹೆಚ್ಚಳವಾಗಿದೆ’ ಎಂದು ಸೊಪ್ಪಿನ ವ್ಯಾಪಾರಿ ಸಣ್ಣೇಗೌಡ ಹೇಳಿದರು.

ನಗರದ ತರಕಾರಿ ಮಾರುಕಟ್ಟೆಯಲ್ಲಿ ಕಟ್ಟು ಸಬ್ಬಸಿಗೆ ₹ 30, ಪುದೀನಾ ₹ 10, ಮೆಂಥೆ ₹ 20, ಕರಿಬೇವು ₹ 10 ಬಲೆ ಇದೆ. ಕೀರೆ ಸೊಪ್ಪಿನ ಬೆಲೆ ಕಡಿಮೆಯಾಗಿದ್ದು ಒಂದು ಕಟ್ಟಿಗೆ ₹ 2ರಂತೆ ಮಾರಾಟವಾಗುತ್ತಿದೆ.

ಕಳೆದ ವಾರ ಬೀನ್ಸ್‌ ಬೆಲೆ ₹ 40 ಇತ್ತು. ಆದರೆ ಈ ವಾರ ₹ 80ಕ್ಕೆ ಏರಿಕೆ ಕಂಡಿರುವುದು ಗ್ರಾಹಕರಿಗೆ ಜೇಬಿಗೆ ಕತ್ತರಿ ಬಿದ್ದಿದೆ. ಬೀನ್ಸ್‌ ಬೆಲೆ ಹೆಚ್ಚಳಕ್ಕೂ ವ್ಯಾಪಾರಿಗಳು ಮಳೆಯನ್ನೇ ಕಾರಣ ಮಾಡುತ್ತಾರೆ. ಅತಿಯಾದ ಮಳೆಯಿಂದಾಗಿ ಸ್ಥಳೀಯವಾಗಿ ಬೆಳೆಯುತ್ತಿರುವ ಬೀನ್ಸ್‌ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ಹೊರರಾಜ್ಯದ ಬೀನ್ಸ್‌ ಖರೀದಿ ಮಾಡುತ್ತಿರುವ ಕಾರಣ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದರು.

ಉಳಿದ ತರಕಾರಿ ಬೆಲೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಕ್ಯಾರೆಟ್‌ ₹ 40, ಬೀಟರೂಟ್‌ ₹ 60, ಬದನೆಕಾಯಿ ₹ 40, ಹೂ ಕೋಸು ₹ 50, ಸೀಮೆ ಬದನೆಕಾಯಿ ₹ 20, ಮೂಲಂಗಿ ₹ 20, ಬೆಂಡೆಕಾಯಿ ₹ 30ಕ್ಕೆ, ತೊಂಡೆ ಕಾಯಿ ₹ 30, ಹಾಗಲಕಾಯಿ ₹ 30ಕ್ಕೆ ಮಾರಾಟವಾಗುತ್ತಿವೆ.

ಬಾಳೆಹಣ್ಣಿನ ಬೆಲೆಯಲ್ಲಿ ಇಳಿಕೆ: ಮಾರುಕಟ್ಟೆಗೆ ಸ್ಥಳೀಯ ಏಲಕ್ಕಿ ಬಾಳೆಹಣ್ಣು ಬರುತ್ತಿರುವ ಕಾರಣ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ ತಿಂಗಳು ಮಾರುಕಟ್ಟೆ ತುಂಬೆಲ್ಲ ತಮಿಳುನಾಡು ಬಾಳೆಹಣ್ಣು ತುಂಬಿತ್ತು. ಆದರೆ ಈ ವಾರ ಸ್ಥಳೀಯವಾಗಿ ಬೆಳೆಯುವ ಬಾಳೆ ಕಂಡು ಬರುತ್ತಿದೆ.

ಆಯುಧ ಪೂಜೆ ಸಮಯದಲ್ಲಿ ಕೆ.ಜಿ ಬಾಳೆಹಣ್ಣಿನ ಬೆಲೆ ₹ 100 ಇತ್ತು. ಆದರೆ ಈ ವಾರ ₹ 70ಕ್ಕೆ ಇಳಿಕೆಯಾಗಿದೆ. ಕೆ.ಜಿ.ಶಿಮ್ಲಾ ಸೇಬು ₹ 100, ಕಿತ್ತಳೆ ₹ 50, ಮೋಸಂಬಿ ₹ 60, ಸಪೋಟ ₹ 50, ದ್ರಾಕ್ಷಿ ₹ 100, ಪಪ್ಪಾಯ ₹ 20, ದಾಳಿಂಬೆ ₹ 100, ಕಲ್ಲಂಗಡಿ ₹ 20 ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT