ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದಕೀಯ ಕಾಲೇಜುಗಳ ‘ಸಿ’ ಗ್ರೂಪ್‌ ನೌಕರರು ಅತಂತ್ರ

Last Updated 10 ಅಕ್ಟೋಬರ್ 2017, 8:56 IST
ಅಕ್ಷರ ಗಾತ್ರ

ಮಂಡ್ಯ: ರಾಜ್ಯದ ಎಲ್ಲ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಸಂಚಿತ ವೇತನ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 'ಸಿ' ಗ್ರೂಪ್‌ ನೌಕರರಿಗೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಕಾಯಮಾತಿ ಆದೇಶವನ್ನು ಈಗ ಹಿಂದಕ್ಕೆ ಪಡೆದ ಕಾರಣ ವಯೋಮಿತಿ ಮೀರುತ್ತಿರುವ 1,200ಕ್ಕೂ ಹೆಚ್ಚು ನೌಕರರ ಬದುಕು ಅತಂತ್ರ ಸ್ಥಿತಿಯಲ್ಲಿದೆ.

ಬಿಜೆಪಿ ಸರ್ಕಾರ ಬೋಧಕೇತರ ಸಿಬ್ಬಂದಿಯನ್ನು ಕಾಯಂಗೊಳಿಸಿ 2013 ಮಾರ್ಚ್ 14ರಂದು ಆದೇಶ ಹೊರಡಿಸಿತ್ತು. ಗ್ರಂಥಪಾಲಕರು, ಕಂಪ್ಯೂಟರ್‌ ಆಪರೇಟರ್‌ಗಳು, ತಂತ್ರಜ್ಞರು, ಚಿತ್ರ ಕಲಾವಿದರು, ಛಾಯಾಚಿತ್ರಗ್ರಾಹಕರು, ದಾಖಲಾತಿ ಸಿಬ್ಬಂದಿ ಹಾಗೂ ಕೆಲ ‘ಡಿ’ ಗ್ರೂಪ್‌ ನೌಕರರೂ ಈ ಆದೇಶದಿಂದ ಕಾಯಂಗೊಳ್ಳಲಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ವಿ.ಸಾಯಿಬಾಬಾ ಕಾಯಮಾತಿ ಆದೇಶ ನೀಡಿದ್ದರು. ಅದೇ ವರ್ಷದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆದು ಬಿಜೆಪಿ ಅಧಿಕಾರ ಕಳೆದುಕೊಂಡಿತು.

2013 ಮೇ ನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವು ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆಯಿತು. ಇಲಾಖೆಯ ಅಧೀನ ಕಾರ್ಯದರ್ಶಿಯಾಗಿದ್ದ ಮೆಹಬೂನ್‌ ಖಾನ್‌ 2013 ಅ. 3ರಂದು ಸಂಚಿತ ವೇತನ ಪಡೆಯುತ್ತಿರುವ ನೌಕರರನ್ನು ಕಾಯಂಗೊಳಿಸಲು ಕಾನೂನಿನ ಅಡಿಯಲ್ಲಿ ಅವಕಾಶ ಇಲ್ಲ ಎಂಬ ಕಾರಣ ನೀಡಿ ಆದೇಶ ರದ್ದುಗೊಳಿಸಿದರು. ಈ ಆದೇಶದಿಂದ ಆಘಾತಕ್ಕೆ ಒಳಗಾದ ನೌಕರರು ನಾಲ್ಕೂವರೆ ವರ್ಷಗಳಿಂದ ಇಲಾಖೆ ಕಚೇರಿಗೆ ಅಲೆಯುತ್ತಿದ್ದು ಸೇವೆ ಕಾಯಂಗೆ ಒತ್ತಾಯಿಸುತ್ತಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಚರ್ಚೆ: ಮಾನವೀಯತೆ ದೃಷ್ಟಿಯಿಂದ ‘ಸಿ’ ಗ್ರೂಪ್‌ ನೌಕರರನ್ನು ಕಾಯಂ ಮಾಡಿಕೊಳ್ಳುವಂತೆ ಒತ್ತಾಯಿಸಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ನೌಕರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಸಿಕ್ಕಿದ್ದು, ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚಿಸಿ ಕಾಯಮಾತಿಗೆ ಕ್ರಮ ಕೈಗೊಳ್ಳಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.

‘ಈ ಹಿಂದೆ ನರ್ಸ್‌ಗಳನ್ನಷ್ಟೇ ಕಾಯಂ ಮಾಡಿಕೊಂಡು ಬೋಧಕೇತರ ಸಿಬ್ಬಂದಿಯನ್ನು ಸರ್ಕಾರ ಕಡೆಗಣಿಸಿದೆ. ನಾನು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆರಂಭವಾದ (2006) ದಿನದಿಂದಲೂ ದುಡಿಯುತ್ತಿದ್ದೇನೆ. ಬಿಜೆಪಿ ಸರ್ಕಾರದ ಮೇಲಿನ ಕೋಪಕ್ಕೆ ಕಾಂಗ್ರೆಸ್‌ ಸರ್ಕಾರ ನಮ್ಮ ಬದುಕನ್ನು ಅತಂತ್ರ ಸ್ಥಿತಿಗೆ ತಳ್ಳಿತು.

ನಮ್ಮ ಸೇವೆಗೆ ಯಾವುದೇ ಬೆಲೆ ಇಲ್ಲ, ಸರ್ಕಾರಿ ಕೆಲಸದ ಕನಸಿನಲ್ಲೇ ವಯಸ್ಸು 50 ಆಯಿತು’ ಎಂದು ಮಿಮ್ಸ್‌ನಲ್ಲಿ ಕಲಾವಿದರಾಗಿ ದುಡಿಯುತ್ತಿರುವ ಮಾರ್ಕಲ್‌ ದೇವರಾಜ್‌ ನೋವು ತೋಡಿಕೊಂಡರು.

‘ಬಿಜೆಪಿ ಸರ್ಕಾರ ಕಾಯಮಾತಿ ಆದೇಶ ಹೊರಡಿಸಿದಾಗ ಯಾವುದೇ ಕಾನೂನು ತೊಡಕು ಇರಲಿಲ್ಲ. ಆದರೆ, ಕಾಂಗ್ರೆಸ್‌ನವರಿಗೆ ಮಾತ್ರ ಕಾನೂನಿನ ತೊಡಕು ಎದುರಾಗಿದೆ. ರಾಜಕೀಯ ಕಾರಣಕ್ಕೆ ನಮ್ಮ ಬದುಕು ಹಾಳಾಗಿದೆ’ ಎಂದು ಮಿಮ್ಸ್‌ನ ದಾಖಲಾತಿ ವಿಭಾಗದ ಸಿಬ್ಬಂದಿ ದಿವಾಕರ್‌ ಹೇಳಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT