ಸೋಮವಾರ, ಸೆಪ್ಟೆಂಬರ್ 16, 2019
29 °C

ರಾಜ್ಯದಲ್ಲಿ ‘ಜಂಗಲ್’ ಸರ್ಕಾರ: ನಳಿನ್ ಲೇವಡಿ

Published:
Updated:

ಪುತ್ತೂರು: ‘ಮೋದಿ ಸರ್ಕಾರ ನಮ್ಮ ಜಿಲ್ಲೆಗೆ ₹15ಸಾವಿರ ಕೋಟಿ ಅನುದಾನ ನೀಡಿದೆ. ಆದರೆ, ಅದರ ಸಮರ್ಪಕ ಅನುಷ್ಠಾನಕ್ಕೆ ಸಿದ್ದರಾಮಯ್ಯ ಸರ್ಕಾರ ಬಿಡುತ್ತಿಲ್ಲ’ ಎಂದು ಸಂಸದ ನಳಿನ್‌ಕುಮಾರ್‌ ಕಟೀಲ್‌ ಆರೋಪಿಸಿದರು. ಪುತ್ತೂರಿನ ಕೊಟೇಚಾ ಸಭಾಭವನದಲ್ಲಿ ಸೋಮವಾರ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಿಳಾ ಮೋರ್ಚಾ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ನೆರವು ಪಡೆದು, ರಾಜ್ಯ ಸರ್ಕಾರ ಕೇವಲ ₹ 3 ಸೇರಿಸಿ ಬಡವರಿಗೆ ನೀಡಲಾಗುವ ಅನ್ನಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಅವರು ನಮ್ಮ ಯೋಜನೆ ಎಂದು ಹೇಳುತ್ತಿದ್ದಾರೆ. ಅವರದ್ದು ಯಾರೋ ಮಾಡುವ ಕೆಲಸಗಳನ್ನು ನಮ್ಮದೆಂದು ಹೇಳಿಕೊಳ್ಳುವ, ಹೇಳಿದಂತೆ ಮಾಡದ ಬಂಡಲ್ ಮಂತ್ರಿಗಳನ್ನು ಕಟ್ಟಿಕೊಂಡು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಜಂಗಲ್ ರಾಜ್ಯ ಸರ್ಕಾರ ಎಂದು ಲೇವಡಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಯಾವ ಮಂತ್ರಿಗಳೂ, ಹೇಳಿದಂತೆ ಕೆಲಸ ಮಾಡುವುದಿಲ್ಲ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ಪೊಲೀಸರ ಕೈ ಕಟ್ಟಿಹಾಕಲಾಗಿದ್ದು, ನಿರಂತರವಾಗಿ ಹತ್ಯೆ ಪ್ರಕರಣಗಳು, ಡ್ರಗ್ ಮಾಫಿಯಾ, ಭಯೋತ್ಪಾದನೆ, ಮರಳು ಮಾಫಿಯಾ ನಡೆಯುತ್ತಿದೆ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದರು.

ಹಿಂದೆ ಬ್ರಿಟಿಷ್ ಸರ್ಕಾರ ಉಪ್ಪಿಗೆ ಕರ ಹಾಕುವ ಮೂಲಕ ಜನರನ್ನು ಸಂಕಟಕ್ಕೆ ದೂಡಿತ್ತು. ಆಗ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯಿತು. ಇವತ್ತು ಸಿದ್ದರಾಮಯ್ಯ ಸರ್ಕಾರ, ಬಡವರ ಪಾಲಿನ ಬಂಗಾರವಾದ ಮರಳಿಗೆ ತೆರಿಗೆ ಹಾಕುವ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ತಿಳಿಸಿದರು.

ಮಹಿಳೆಯರ ಕಲ್ಯಾಣಕ್ಕೆ ಮೋದಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕೇವಲ ಮೂರೂವರೆ ವರ್ಷದಲ್ಲಿ 82 ಯೋಜನೆ ಜಾರಿಗೊಳಿಸಿ, ದಾಖಲೆ ನಿರ್ಮಿಸಿದೆ. ಬಿಜೆಪಿ ವೋಟ್‌ ಬ್ಯಾಂಕ್ ರಾಜಕಾರಣ ಮಾಡುತ್ತಿಲ್ಲ. ವೋಟ್‌ ದೃಷ್ಟಿಯಿಂದ ಇವತ್ತು ಮಹಿಳಾ ಸಮಾವೇಶ ಮಾಡುತ್ತಿಲ್ಲ. ಬದಲಾಗಿ ಮೋದಿ ಸರ್ಕಾರ ರೂಪಿಸಿದ ಮಹಿಳಾ ಸಶಕ್ತೀಕರಣ ಯೋಜನೆಗಳು ಜನರಿಗೆ ತಲುಪಬೇಕು. ಮಹಿಳೆಯರ ಕಲ್ಯಾಣದ ಮೂಲಕ ಭವ್ಯ ಭಾರತ ನಿರ್ಮಾಣವಾಗಬೇಕು ಎಂಬ ಕಾರಣಕ್ಕೆ ಮಾಡುತ್ತಿದ್ದೇವೆ ಎಂದರು.

ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ದೇಶದಲ್ಲಿ ಮಹಿಳಾ ಶಕ್ತಿಗೆ ಉತ್ತೇಜನ ನೀಡಿದವರು ಅಟಲ್ ಬಿಹಾರಿ ವಾಜಪೇಯಿ. ಅದನ್ನು ಈಗ ಮೋದಿ ಮುಂದುವರಿಸಿದ್ದಾರೆ.

ಮಹಾತ್ಮ ಗಾಂಧೀಜಿ ಮಾತನ್ನು ಧಿಕ್ಕರಿಸಿದ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಸಿಕ್ಕ ಮೇಲೆ ಕಾಂಗ್ರೆಸ್ ಎಂಬ ಸಂಘಟನೆಯನ್ನು ವಿಸರ್ಜಿಲು ಗಾಂಧೀಜಿ ಹೇಳಿದ್ದರೂ, ಕೇಳದೆ ಅದನ್ನು ರಾಜಕೀಯ ಪಕ್ಷವಾಗಿ ಮುಂದುವರಿಸಿದರು. ಗಾಂಧಿ ವಂಶದವರಲ್ಲದಿದ್ದರೂ ಗಾಂಧಿ ಹೆಸರನ್ನು ಬಳಸಿಕೊಂಡರು ಎಂದು ಆರೋಪಿಸಿದರು.

ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಧ್ಯಕ್ಷ ಸಂಜೀವ ಮಠಂದೂರು, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಪೂಜಾ ಪೈ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿದರು.

ಮಹಿಳಾ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷೆ ಉಷಾ ನಾರಾಯಣ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ್, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಪಕ್ಷದ ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಶೈಲಜಾ ಭಟ್, ಜಯಂತಿ ನಾಯಕ್, ವಿದ್ಯಾಗೌರಿ, ಸಂಧ್ಯಾ ವೆಂಕಟೇಶ್, ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ, ಪಕ್ಷದ ಪುತ್ತೂರು ಕ್ಷೇತ್ರ ಉಸ್ತುವಾರಿ ಕಡಬ ಕೃಷ್ಣ ಶೆಟ್ಟಿ ಇದ್ದರು. ಶಯನಾ ಜಯಾನಂದ್ ಮತ್ತು ಗೌರಿ ಬನ್ನೂರು ನಿರೂಪಿಸಿದರು. ವಿದ್ಯಾಗೌರಿ ವಂದಿಸಿದರು.

Post Comments (+)