ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಸಾಲ: ಗಮನಿಸಬೇಕಾದ ಅಂಶಗಳು

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸ್ವಂತ ಮನೆ ಹೊಂದುವುದು ಎಲ್ಲರ ಕನಸು. ಪ್ರತಿಯೊಬ್ಬರಿಗೂ ಮನೆಯ ಬಗ್ಗೆ ಅವರದ್ದೇ ಆದ ಕಲ್ಪನೆಗಳಿರುತ್ತವೆ. ಒಟ್ಟಾರೆ ಎಲ್ಲರೂ ಒಂದು ಸೂರು ಬೇಕು ಎನ್ನುವ ಆಶಯ ಹೊಂದುವುದು ಸಾಮಾನ್ಯ. ಆದರೆ, ಮನೆ ನಿರ್ಮಾಣದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ಬಹುಪಾಲು ಮಂದಿ ಸಾಲಕ್ಕೆ ಮೊರೆ ಹೋಗುವುದು ಅನಿವಾರ್ಯ. ಸಾಲ ಪಡೆಯುವ ಪ್ರಕ್ರಿಯೆ ಸಂಕೀರ್ಣವೆನಿಸುವುದು ಸಹಜ. ಅರ್ಜಿ ಸಲ್ಲಿಕೆಯಿಂದ ಆರಂಭವಾಗಿ ವಿವಿಧ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇವೆಲ್ಲವೂ ಅನಿವಾರ್ಯವೂ ಹೌದು. ಹೀಗಾಗಿ ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.

ಆದಾಯ ಮತ್ತು ವಯಸ್ಸು
ಗೃಹ ಸಾಲ ಪಡೆಯಲು ಆದಾಯ ಅತ್ಯಂತ ಪ್ರಮುಖ ಅಂಶ. ಅರ್ಜಿದಾರರು ಸಂಬಳ ಪಡೆಯುವವರಾಗಿದ್ದರೆ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ವೇತನ ಮತ್ತು ವಯಸ್ಸನ್ನು ಪರಿಗಣಿಸುತ್ತವೆ. ಸಾಲ ನೀಡುವ ಮುನ್ನ ಅರ್ಜಿದಾರರ ಅರ್ಹತೆಯನ್ನು ಪರಿಶೀಲಿಸುತ್ತವೆ. ನೌಕರರ ಆದಾಯ ಮತ್ತು ವಯಸ್ಸು ಸಾಲಕ್ಕೆ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಅಂದರೆ, ಎಷ್ಟು ವರ್ಷಗಳ ಕಾಲ ಸಾಲ ತೀರಿಸುವ ಸಾಮರ್ಥ್ಯ ಅರ್ಜಿದಾರ ಅಥವಾ ನೌಕರ ಹೊಂದಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ.

ಮನೆ ಸಾಲದ ಮೊತ್ತವನ್ನು ಹೆಚ್ಚಿಸಲು ಅರ್ಜಿದಾರರು ಪತ್ನಿಯ ಆದಾಯವನ್ನು ಸಹ ನಮೂದಿಸಿ ದಾಖಲೆಗಳನ್ನು ಸಲ್ಲಿಸಬೇಕು. ಆಗ ಪತ್ನಿಯ ವಯಸ್ಸು ಸಹ ಮುಖ್ಯವಾಗುತ್ತದೆ. ಸಹ ಅರ್ಜಿದಾರರನ್ನು ಪರಿಗಣಿಸುವಾಗ ಅವರ ವಯಸ್ಸಿನ ಬಗ್ಗೆ ಹಣಕಾಸು ಸಂಸ್ಥೆಗಳು ಹೆಚ್ಚಿನ ಗಮನ ನೀಡುತ್ತವೆ.

ಉದಾಹರಣೆಗೆ 29 ವರ್ಷದ ಬೃಂದಾ ರಾಯ್‌ ಅವರು ಸಹ–ಅರ್ಜಿದಾರರಾಗಿದ್ದ  ಅವರ 60 ವರ್ಷದ ತಾಯಿ ಜತೆ ಮನೆ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ಭಾವಿಸೋಣ. ಆಗ ಸಾಲದ ಅವಧಿಯನ್ನು ತಾಯಿಯ ವಯಸ್ಸಿನ ಆಧಾರದ ಮೇಲೆ ಲೆಕ್ಕಾಚಾರ ಹಾಕಲಾಗುತ್ತದೆ. ಸಾಲದ ಅವಧಿಯನ್ನು 10ರಿಂದ 15 ವರ್ಷಗಳಕ್ಕೆ ಸೀಮಿತಗೊಳಿಸಲಾಗುತ್ತದೆ. ಇದು ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ಬೃಂದಾ ಅವರು ವೈಯಕ್ತಿಕವಾಗಿ ಮನೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರೆ ಆಗ ಅವರ ಅರ್ಹತೆ ವೈಯಕ್ತಿಕ ಸಾಮರ್ಥ್ಯದ ಮೇಲೆಯೇ ನಿರ್ಧರಿಸಲಾಗುತ್ತದೆ.

ವೈಯಕ್ತಿಕ ಸಾಲ
ಅರ್ಜಿದಾರರಿಗೆ ಒಂದು ವೇಳೆ ಕಾರು ಅಥವಾ ವೈಯಕ್ತಿಕ ಸಾಲವಿದ್ದರೆ ಮನೆ ಸಾಲದ ಮೇಲೆಯೂ ಪರಿಣಾಮ ಬೀರುತ್ತದೆ. ಈಗಾಗಲೇ ಮನೆ ಸಾಲವಿದ್ದು, 12 ಕಂತುಗಳನ್ನು ಪಾವತಿಸದಿದ್ದರೆ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಪುನರ್‌ ಪರಿಶೀಲನೆ ಒಳಪಡಿಸುತ್ತವೆ. ಆದ್ದರಿಂದ ಹಾಲಿ ಇರುವ ಸಾಲವನ್ನು ಸಂಪೂರ್ಣವಾಗಿ ಪಾವತಿಸಿರಬೇಕು ಅಥವಾ ಅರ್ಧದಷ್ಟಾದರೂ ಬಾಕಿ ಸಾಲವನ್ನು ಪಾವತಿಸಿರಬೇಕು. ಇದರಿಂದ ಮನೆ ಸಾಲ ಪಡೆಯುವ ಅವಕಾಶ ದೊರೆಯುತ್ತದೆ.

ಕ್ರೆಡಿಟ್‌ ಸ್ಕೋರ್‌
ಮನೆ ಸಾಲ ಪಡೆಯಲು ಅರ್ಹತೆ ಹೊಂದಲು ’ಕ್ರೆಡಿಟ್‌ ಸ್ಕೋರ್‌’ ಅತಿ ಮುಖ್ಯ. ಇದು ಸಾಮಾನ್ಯವಾಗಿ 400ರಿಂದ 900ರ ನಡುವೆ ಇರುತ್ತದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು 750ರ ಮೇಲಿನ ಕ್ರೆಡಿಟ್‌ ಸ್ಕೋರ್‌ ಇದ್ದವರಿಗೆ ಹೆಚ್ಚು ಆದ್ಯತೆ ನೀಡುತ್ತವೆ.

ಈ ಸ್ಕೋರ್‌ ಅರ್ಜಿದಾರರ ಹಿನ್ನೆಲೆಯನ್ನು ತಿಳಿಸುತ್ತದೆ. ಬಾಕಿ ಸಾಲವನ್ನು ಅರ್ಜಿದಾರರು ಯಾವ ರೀತಿ ಪಾವತಿಸಿದ್ದಾರೆ ಎನ್ನುವ ವಿವರವೂ ಕ್ರೆಡಿಟ್‌ ಸ್ಕೋರ್‌ನಿಂದ ದೊರೆಯುತ್ತದೆ.

ಮನೆ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಅರ್ಹತೆಯ ಮಾನದಂಡಗಳನ್ನು ಪರಿಶೀಲಿಸುವುದು ಅತಿ ಮುಖ್ಯ. ಬಳಿಕ ಎಷ್ಟು ಮೊತ್ತಕ್ಕೆ ತಾವು ಅರ್ಹ ಹೊಂದಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಜತೆಗೆ ಎಷ್ಟು ಬಡ್ಡಿ ದರಕ್ಕೆ ಸಾಲ ದೊರೆಯುತ್ತದೆ ಎನ್ನುವ ಮಾಹಿತಿ ಪಡೆದುಕೊಳ್ಳಬೇಕು. ಇದರಿಂದ ಸಾಲಕ್ಕೆ ಮಂಜೂರಾತಿ ದೊರಕಿಸಿಕೊಳ್ಳಲು ಸಹಾಯವಾಗುತ್ತದೆ.

ಈ ಎಲ್ಲ ಅಂಶಗಳು ಸಾಲಕ್ಕೆ ಅರ್ಹತೆ ಹೊಂದುವ ಜತೆ ವೈಯಕ್ತಿಕವಾಗಿ ಹಣಕಾಸಿನ ಯೋಜನೆ ರೂಪಿಸಿಕೊಳ್ಳಲು ಮತ್ತು ಹಣಕಾಸಿನ ಭದ್ರತೆ ಹೊಂದಲು ಸಹ ಪೂರಕವಾಗುತ್ತದೆ.

ಹರ್ಷಿಲ್‌ ಮೆಹ್ತಾ, ಡಿಎಚ್‌ಎಫ್‌ಎಲ್‌ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT