ಪ್ರಶ್ನೋತ್ತರ

ಗುರುವಾರ , ಜೂನ್ 20, 2019
29 °C

ಪ್ರಶ್ನೋತ್ತರ

Published:
Updated:
ಪ್ರಶ್ನೋತ್ತರ

ರಾಧಾಕೃಷ್ಣ, ಬೆಂಗಳೂರು

ನಾನು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ನಾನು DHFL  ನಿಂದ ಶೇ 10.25 ಬಡ್ಡಿ ದರದಲ್ಲಿ ₹ 20 ಲಕ್ಷ ಗೃಹ ಸಾಲ ಪಡೆದಿದ್ದೆ. ಇವರು ಗೃಹ ಸಾಲದ ಬಡ್ಡಿ ಕಡಿಮೆ ಮಾಡುತ್ತಿಲ್ಲ, ಹೀಗಾಗಿ ಮೊದಲು ನಿರ್ಧರಿಸಿದ ತಿಂಗಳ ಸಮಾನ ಕಂತು ಕಟ್ಟುತ್ತಿದ್ದೇನೆ. ನನಗೆ ಮುಂದೇನು ಮಾಡಬೇಕು ಎಂದು ತಿಳಿಸಿ.

ಉತ್ತರ: ಭಾರತೀಯ ರಿಸರ್ವ್ ಬ್ಯಾಂಕ್  ರೆಪೊ ರೇಟ್ (ಆರ್.ಬಿ.ಐ. ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ) ಕಡಿಮೆ ಆದಾಗಲೆಲ್ಲ, ಬ್ಯಾಂಕುಗಳು ಗೃಹಸಾಲದ ಬಡ್ಡಿ ದರ ತನ್ನ ಗ್ರಾಹಕರಿಗೆ ಕಡಿಮೆ ಮಾಡುವುದು ಸಹಜ. DHFL  ಈ ವ್ಯಾಪ್ತಿಯೊಳಗೆ ಬಾರದಿರಬಹುದು. ನೀವು DHFL  ನಿಂದ ನೀವು ಸಂಬಳ ಪಡೆಯುವ ಬ್ಯಾಂಕ್‌ಗೆ ಅಥವಾ ಎಸ್.ಬಿ.ಐ.ಗೆ ಸಾಲ ವರ್ಗಾಯಿಸಿಕೊಳ್ಳಿ. ಪ್ಲೋಟಿಂಗ್ ಬಡ್ಡಿದರದಲ್ಲಿ ಗೃಹ ಸಾಲ ಪಡೆಯಿರಿ. ಇದಕ್ಕಿಂತ ಸುಲಭ ಹಾಗೂ ಲಾಭದಾಯಕ ಮಾರ್ಗ ಬೇರೊಂದಿಲ್ಲ.

ಎಂ.ಜಿ. ಗಾಣಿಗೇರ, ಧಾರವಾಡ

ನಾನು ಸರ್ಕಾರಿ ನೌಕರ. ವಾರ್ಷಿಕ ಆದಾಯ ₹ 6 ಲಕ್ಷ. ನನಗೆ ಗೃಹ ಸಾಲದ ಬಡ್ಡಿ ₹ 1.50 ಲಕ್ಷ, ಉಳಿತಾಯದಲ್ಲಿ ₹ 1.50 ಲಕ್ಷ ತೆರಿಗೆ ವಿನಾಯಿತಿಗೆ ಒಳಗಾಗುತ್ತದೆ. ನಾನು 1996ರಲ್ಲಿ ₹ 46,000 ಕೊಟ್ಟು ನಿವೇಶನ ಕೊಂಡಿದ್ದೆ. ಈಗ ಅದನ್ನು ₹ 45 ಲಕ್ಷಕ್ಕೆ ಮಾರಾಟ ಮಾಡಬೇಕೆಂದಿದ್ದೇನೆ. ನನ್ನ ಪ್ರಶ್ನೆ: 1) ಸಂಪೂರ್ಣ ₹ 45 ಲಕ್ಷ ತೆರಿಗೆಗೆ ಒಳಗಾಗುತ್ತದೆಯೇ. 2) ತೆರಿಗೆ ಉಳಿಸಲು ಯಾವ ಬಾಂಡ್‌ನಲ್ಲಿ ತೊಡಗಿಸಲಿ, 3) ಇದು ಈ ವರ್ಷಕ್ಕೆ ಅನ್ವಯವಾಗುತ್ತದೆಯೋ?

ಉತ್ತರ: ನಿಮ್ಮ ಸಂಬಳದ ಆದಾಯಕ್ಕೂ, ಆಸ್ತಿ ಮಾರಾಟ ಮಾಡಿ ಬರುವ ಲಾಭಕ್ಕೂ ಯಾವ ಸಂಬಂಧವಿರುವುದಿಲ್ಲ. ಇವೆರಡೂ ಆದಾಯಕ್ಕೆ ಪ್ರತ್ಯೇಕವಾಗಿ ತೆರಿಗೆ ಹಾಕಬೇಕಾಗುತ್ತದೆ.

ಸಂಬಳದ ಆದಾಯಕ್ಕೆ ಆದಾಯಕ್ಕನುಗುಣವಾಗಿ ಕ್ರಮವಾಗಿ ಶೇ 10, 20, 30 ತೆರಿಗೆ ಸಲ್ಲಿಸಬೇಕಾಗುತ್ತದೆ. ಈ ಆದಾಯ ಹೊರತುಪಡಿಸಿ ಸ್ಥಿರ ಆಸ್ತಿ ಮಾರಾಟ ಮಾಡಿದಾಗ ಲಾಭ ಎಷ್ಟೇ ಬರಲಿ ಶೇ 20 ಲಾಭದಲ್ಲಿ ತೆರಿಗೆ ಕೊಡಬೇಕಾಗುತ್ತದೆ. ಹೀಗೆ ತೆರಿಗೆ ಲೆಕ್ಕ ಹಾಕುವಾಗ ಕೊಂಡ ಬೆಲೆ,  ಸ್ಟ್ಯಾಂಪ್, ನೋಂದಣಿ ಖರ್ಚು ಮತ್ತು ಕೊಂಡ ವರ್ಷದಿಂದ ಮಾರಾಟ ಮಾಡುವ ವರ್ಷಗಳ ತನಕ Cost Of Inflation Index ಲೆಕ್ಕ ಹಾಕಿ, ಮಾರಾಟ ಮಾಡಿದ ಹಣದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಇದೇ ವೇಳೆ ಸೆಕ್ಷನ್ 54 EC ಆಧಾರದ ಮೇಲೆ ಗರಿಷ್ಠ ₹ 50 ಲಕ್ಷ, NHIA- REC ಬಾಂಡ್‌ಗಳಲ್ಲಿ 3 ವರ್ಷಗಳ ಅವಧಿಗೆ  ತೊಡಗಿಸಿ, ಸಂಪೂರ್ಣ ಬಂಡವಾಳ ವೃದ್ಧಿ ತೆರಿಗೆ (Capital Gain Tax) ವಿನಾಯ್ತಿ ಪಡೆಯಬಹುದು. ತೆರಿಗೆ ಕೊಡುವ ಸಂದರ್ಭದಲ್ಲಿ ಆಸ್ತಿ ಮಾರಾಟ ಮಾಡಿದ, 6 ತಿಂಗಳೊಳಗೆ ತೆರಿಗೆ ಪಾವತಿಸಬಹುದು.

ಮಂಜುನಾಥ, ಗಾಣದಾಳು

ಪ್ರಾಥಮಿಕ ಶಾಲಾ ಶಿಕ್ಷಕ. ಒಟ್ಟು ಸಂಬಳ ₹ 25,041. ಕಡಿತ LIC ₹ 1859, KGID ₹ 2000, NPS ₹ 2300, RD ₹ 500, PLI ₹ 900. ಸ್ವಂತ ಮನೆ ಇದೆ. ಒಂದು ಹೆಣ್ಣು ಮಗು ಇದೆ. ಇವಳ ಹೆಸರಿನಲ್ಲಿ ₹ 2000 ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರತೀ ತಿಂಗಳೂ ಕಟ್ಟುತ್ತೇನೆ. ಕೆನರಾ ಬ್ಯಾಂಕಿನಲ್ಲಿ ಸಾಲದ ಕಂತು ₹ 4000 (ಇನ್ನು ಒಂದು ವರ್ಷ), ಕೈಸಾಲದ ಕಂತು ₹ 4324 (ಮುಗಿಯಲು ಮೂರು ವರ್ಷ). ನಾನು 9 ವರ್ಷ ಸೇವೆ ಸಲ್ಲಿಸಿದರೂ, ಕೈಯಲ್ಲಿ ಯಾವುದೇ ನಗದು ಇಲ್ಲ. ನನ್ನ ಮನೆ ಖರ್ಚು ₹ 3000. ಎಲ್ಲಾ ಕಳೆದು ತಿಂಗಳಿಗೆ ₹ 3000–4000 ಮಾತ್ರ ಉಳಿಯುತ್ತದೆ. ಬೇರೆ ಯಾವುದೇ ಆದಾಯವಿಲ್ಲ. ಎರಡೂ ವರ್ಷ ತಡವಾಗಿಯಾದರೂ, ₹  8 ಲಕ್ಷದ ನಿವೇಶನ ಹಾಗೂ ₹ 8 ಲಕ್ಷ ಕಾರು ಖರೀದಿಸಲು, ಉಳಿತಾಯ ಹೂಡಿಕೆ ಮಾಡಲು ಹಾಗೂ ನಗದು ಉಳಿಯಲು ಮಾರ್ಗದರ್ಶನ ಮಾಡಿ.

ಉತ್ತರ: ನಿಮ್ಮ ಎಲ್ಲಾ ಉಳಿತಾಯಗಳು ಚೆನ್ನಾಗಿವೆ. ಅವುಗಳನ್ನು ಹಾಗೆಯೇ ಮುಂದುವರಿಸಿ. ಕೆನರಾ ಬ್ಯಾಂಕ್  ಹಾಗೂ ಕೈಸಾಲ ಮನೆ ಕಟ್ಟಲು ಪಡೆದಿರಬೇಕು. ನಿಮ್ಮ ಪ್ರಕಾರ ಇವೆರಡೂ ಸಾಲಗಳು 2–3 ವರ್ಷಗಳಲ್ಲಿ ತೀರಿ ಹೋಗುತ್ತದೆ. ಇದರಿಂದ ಸುಮಾರು ₹ 8000 ಹೆಚ್ಚಿನ ಉಳಿತಾಯ ಮಾಡಬಹುದು ಹಾಗೂ ಅಷ್ಟರಲ್ಲಿ ಸಂಬಳ ಪರಿಷ್ಕರಣೆ (Salary Rivision) ಆಗುವ ಸಾಧ್ಯತೆ ಕೂಡಾ ಇರುತ್ತದೆ.

ಇದೇ ವೇಳೆ ವಾರ್ಷಿಕ  ಇನ್‌ಕ್ರಿಮೆಂಟ್ ಮತ್ತು ಡಿ.ಎ. ಹೆಚ್ಚಳದಿಂದ ಸ್ವಲ್ಪ ಆದಾಯ ಹೆಚ್ಚಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ₹ 4000 ಕ್ಕಿಂತ ಹೆಚ್ಚಿನ ಉಳಿತಾಯ ಮಾಡಲು ನಿಮಗೆ ಅವಕಾಶವಿಲ್ಲ. ನಿವೇಶನ ಹಾಗೂ ಕಾರು ಇವುಗಳಲ್ಲಿ ನಿವೇಶನಕ್ಕೆ ಆದ್ಯತೆ ಕೊಡಿ. ನಿಮ್ಮ ಕೈಯಲ್ಲಿ ಹಣ ಉಳಿಯಲು, ನಿಮ್ಮ ಆದಾಯದಲ್ಲಿ ನೀವು ಎಷ್ಟು ಉಳಿಸಬೇಕು ಎನ್ನುವುದನ್ನು ಮೊದಲೇ ನಿಗದಿಪಡಿಸಿ, ಉಳಿಯುವ ಹಣ ಮಾತ್ರ ಖರ್ಚು ಮಾಡಬೇಕು. ಇದೊಂದು ಸೂತ್ರ ಮಾತ್ರ. ನೀವು ಇದನ್ನು ಈಗಲೇ ಆಚರಿಸುತ್ತಿದ್ದು, ಮನೆ ಖರ್ಚಿಗೆ ಬರೀ ₹ 3000 ತೆಗೆದಿಟ್ಟಿದೀರಿ.

ಸಾಲ ತೀರುವ ತನಕ ವಾರ್ಷಿಕ ಕನಿಷ್ಠ 15 ಗ್ರಾಂ ಬಂಗಾರದ ನಾಣ್ಯಕೊಂಡು ಬ್ಯಾಂಕ್ ಲಾಕರಿನಲ್ಲಿ ಇರಿಸುತ್ತಾ ಬನ್ನಿ. ಈ ಪ್ರಕ್ರಿಯೆ ಮಗಳ ಮದುವೆ ತನಕ ಮುಂದುವರೆಸಿ. ನಿವೇಶನ ಕೊಳ್ಳುವಾಗ ಸ್ವಲ್ಪ ಸಾಲ ಮಾಡಬೇಕಾದೀತು. ಇಲ್ಲಿ ಹೆಚ್ಚಿನ ಹಣ ಬೇಕಾಗುವುದರಿಂದ, ಬರೀ ಎರಡು ವರ್ಷ ಎಷ್ಟಾದರಷ್ಟು ಹಣ ಉಳಿಸಿ ನಿವೇಶನ ಕೊಳ್ಳಲು ಬರುವುದಿಲ್ಲ. ಸ್ಥಿರ ಆಸ್ತಿಗೆ ಮಿಗಿಲಾದ ಹೂಡಿಕೆ ಇನ್ನೊಂದಿಲ್ಲ. ನಿವೇಶನ ಕೊಂಡ ನಂತರ ಕಾರು ಕೊಳ್ಳಲು ಪ್ರಯತ್ನಿಸಿರಿ. ಒಮ್ಮೆಲೇ ₹ 8 ಲಕ್ಷದ ಕಾರು ಕೊಳ್ಳುವ ಬದಲಾಗಿ ಸಣ್ಣ ಕಾರನ್ನು ಕೊಂಡುಕೊಳ್ಳಿ.

ಮಧುಕೇಶ್ವರ.ಎಚ್.ಎಲ್., ಸಾಗರ

ನಾನು ನಿಮ್ಮ ಪ್ರಶ್ನೋತ್ತರ ಪ್ರತೀ ಬುಧವಾರ ಓದುತ್ತಿದ್ದೇನೆ. ನಾನು ₹ 15,000 ಪ್ರತೀ ತಿಂಗಳೂ ನಮ್ಮ  ಊರಿನ ಸೌಹಾ‌ರ್ದ ಸಹಕಾರ ಬ್ಯಾಂಕಿನಲ್ಲಿ ₹ 10.% ಒಂದು ವರ್ಷಕ್ಕೆ ಠೇವಣಿ ಮಾಡಬೇಕೆಂದಿದ್ದೇನೆ. ಬಡ್ಡಿ ಬಂದ ನಂತರ ಮುಂದಿನ ವರ್ಷ ₹ 15,000 ಸೇರಿಸಿ ಒಂದು ವರ್ಷಕ್ಕೆ ಠೇವಣಿ ಮಾಡುವ ಬಗ್ಗೆ ನಿಮ್ಮ ಸಲಹೆ ಕೇಳುವ ಸಲುವಾಗಿ ಈ ಪತ್ರದ ಮುಖಾಂತರ ವಿನಂತಿಸಿಕೊಳ್ಳುತ್ತೇನೆ.

ಉತ್ತರ: ನಿಮ್ಮ ಉಳಿತಾಯದ ಪ್ಲಾನ್ ನಿಜವಾಗಿ ಚೆನ್ನಾಗಿದೆ. ಆದರೆ ಈ ಪ್ರಕ್ರಿಯೆ ತುಂಬಾ ಕೆಲಸವಾಗುತ್ತದೆ, ಜೊತೆಗೆ ಒಂದಿಲ್ಲಾ ಒಂದು ಆರ್ಥಿಕ ಅಡಚಣೆಯಿಂದಾಗಿ ಪ್ಲಾನು ನಿಂತು ಹೋಗುವ ಸಾಧ್ಯತೆ ಕೂಡಾ ಇದೆ. ನಿಮ್ಮ ಮುಖ್ಯ ಉದ್ದೇಶವೆಂದರೆ ಕನಿಷ್ಠ ₹ 15,000 ಪ್ರತೀ ತಿಂಗಳೂ ಉಳಿಸಿ ವರ್ಷಾಂತಕ್ಕೆ ಬರುವ ಬಡ್ಡಿಸಮೇತ ಮುಂದೆ. ಕೂಡಾ ಠೇವಣಿ ಮಾಡುವುದಾಗಿರುತ್ತದೆ.

ಇದಕ್ಕೆ ಅತೀ ಉತ್ತಮ ಪರ್ಯಾಯ ಪ್ಲಾನ್ ಆರ್.ಡಿ. ನೀವು ₹ 15,000, 5 ವರ್ಷಗಳ ಅವಧಿಗೆ ಮಾಡಿ, ಇದರಲ್ಲಿ ನಿಮ್ಮ ಅನಿಸಿಕೆ ಸಂಪೂರ್ಣ ಅಡಕವಾಗಿದ್ದು, ಯಾವುದೇ ರೀತಿಯಲ್ಲಿ ಬಡ್ಡಿ ನಷ್ಟವಾಗದೇ, ತಿಂಗಳು ತುಂಬುವ ಆರ್.ಡಿ. ಕಂತು ಚಕ್ರಬಡ್ಡಿಯಲ್ಲಿ ಬೆಳೆಯುತ್ತಿರುತ್ತದೆ.

ಈ ಮಾರ್ಗದಲ್ಲಿ ಒಮ್ಮೆ ನೀವು ಬ್ಯಾಂಕಿಗೆ ಹೋಗಿ ₹ 15,000 ಆರ್.ಡಿ. ಮಾಡಿ, ಆರ್.ಡಿ. ಕಂತನ್ನು, ನಿಮ್ಮ ಉಳಿತಾಯ ಖಾತೆಯಿಂದ ಭರಿಸಲು Standing Instruction ಬ್ಯಾಂಕಿಗೆ ಕೊಡಿರಿ ಹಾಗೂ ಉಳಿತಾಯ ಖಾತೆಯಲ್ಲಿ ಬೇಕಾದಷ್ಟು ಹಣ ಜಮಾ ಇಡಿರಿ. ಈ ಸೇವೆ ಶುಲ್ಕ ರಹಿತ ಕೂಡಾ. ಮುಂದೆ ಠೇವಣಿ ಬಡ್ಡಿ ದರ ಕಡಿಮೆ ಆಗುವ ಸಾಧ್ಯತೆ ಇರುವುದರಿಂದ, 5 ವರ್ಷಗಳ ಆರ್.ಡಿ. ಮಾಡಿರಿ. ಇಂದಿರುವ ₹ 10.25% ಬಡ್ಡಿಯೇ 5 ವರ್ಷಗಳ ಕಾಲ ದೊರೆಯುತ್ತದೆ.

ರಾಜಣ್ಣ.ಯು. ತುಮಕೂರು

2017–18ನೇ ಸಾಲಿನ ತೆರಿಗೆ ಮಿತಿ ಹಾಗೂ ವಿನಾಯಿತಿಗಳ ಬಗ್ಗೆ ತಿಳಿಸಿ.

ಉತ್ತರ: ತೆರಿಗೆ ಮಿತಿ ಅಥವಾ ವಿನಾಯಿತಿಯಲ್ಲಿ ಯಾವ ಪರಿವರ್ತನೆ ಆಗಲಿಲ್ಲ. ಸೆಕ್ಷನ್ 80C. ಅಡಿಯಲ್ಲಿ ಹಿಂದಿನ ಆರ್ಥಿಕ ವರ್ಷದಲ್ಲಿ ಘೋಷಿಸಿದಂತೆ ರೂ. 1.50 ಲಕ್ಷ ಉಳಿತಾಯ ಮಿತಿ ಮುಂದುವರಿಸಲಾಗಿದೆ. ಇದೇ ವೇಳೆ ಸೆಕ್ಷನ್ 80ಸಿ ಹೊರತುಪಡಿಸಿ ಸೆಕ್ಷನ್ 80CCD(1B) ಆಧಾರದ ಮೇಲೆ National Pensin Scheme) ಅಡಿಯಲ್ಲಿ ರೂ. 50,000 ಉಳಿಸಿ ಒಟ್ಟು ₹ 2 ಲಕ್ಷಗಳ ತನಕ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಪಿಂಚಣಿ ಇರುವ ವ್ಯಕ್ತಿಗಳಿಗೆ ಇದೊಂದು ವರದಾನ ಹಾಗೂ ಹೆಚ್ಚಿನ ತೆರಿಗೆ ಕೊಡುವವರಿಗೆ ಬಹಳಷ್ಟು ತೆರಿಗೆ ಉಳಿಸಲು ಅವಕಾಶ ಈ ಯೋಜನೆಯಲ್ಲಿದೆ.

ಹೆಸರು ಬೇಡ, ಬೆಂಗಳೂರು–62

ನಾನೊಬ್ಬ ನಿವೃತ್ತ ಹಿರಿಯನಾಗರಿಕ. ಮಾಸಿಕ ಪಿಂಚಣಿ ₹ 25,500 ನಿವೃತ್ತಿಯಿಂದ ₹ 25 ಲಕ್ಷ ಹಣ ಬಂದಿದೆ. ₹ 5 ಲಕ್ಷ ನಬಾರ್ಡ್‌ ಬಾಂಡು, ಶ್ರೀಮತಿಗೆ (ಗೃಹಿಣಿ) ₹ 10 ಲಕ್ಷ ದಾನ ಪತ್ರ ಮುಖಾಂತರ, ನನ್ನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ₹ 5 ಲಕ್ಷ, ಉಳದ ₹ 5 ಲಕ್ಷ ನನ್ನ ಹೆಸರಿನಲ್ಲಿ ಅಂಚೆ ಕಚೇರಿ ಕೆವಿಪಿ ಪತ್ರದಲ್ಲಿ, ಹೀಗೆ ತೊಡಗಿಸಿದ್ದೇನೆ. ತಿಂಗಳ ಮನೆ ಬಾಡಿಗೆ ₹ 10,000. ಮಿತ್ರರೊಬ್ಬರ ಸಲಹೆಯಂತೆ, ನನ್ನ ಹೆಂಡತಿ ಪಡೆಯುವ ಠೇವಣಿ ಮೇಲಿನ ಬಡ್ಡಿ ನನ್ನ ಆದಾಯಕ್ಕೆ ಸೇರಿಸಿ ಆದಾಯ ತೆರಿಗೆ ಸಲ್ಲಿಸಿ, ರಿಟರ್ನ್‌ ತುಂಬುತ್ತಿದ್ದೇನೆ. ಹೆಂಡತಿ ಪ್ರತ್ಯೇಕವಾಗಿ ರಿಟರ್ನ್‌ ತುಂಬುತ್ತಿಲ್ಲ. ಹಾಗಾಗಿ ಅವರು ಪಡೆಯುವ ಬಡ್ಡಿಗೆ ಪ್ರತ್ಯೇಕ ತೆರಿಗೆ ವಿನಾಯತಿ ಸಿಗಬಹುದೇ ತಿಳಿಸಿ ಹಾಗೂ ತೆರಿಗೆ ಉಳಿಸಬಹುದಾದ ಮಾರ್ಗಗಳಿದ್ದರೆ ತಿಳಿಸಿ. ದಾನ ಪತ್ರ ನೊಂದಾಯಿಸಲಿಲ್ಲ– ನೋಟರಿ ಮಾಡಿದ್ದೇನೆ. ಜೀವನ ಆನಂದ ಪಾಲಿಸಿಯಿಂದ ಬರುವ ಪಿಂಚಣಿಗೆ ತೆರಿಗೆ ಇದೆಯೇ. ಮನೆ ಬಾಡಿಗೆ–ಮನೆ ಖರ್ಚು, ಆದಾಯ ತೆರಿಗೆ ವಿನಾಯತಿಗೆ ಒಳಗಾಗುತ್ತಿದೆಯೇ?

ಉತ್ತರ: ನೀವು ಇದುವರೆಗೆ ಮಾಡಿರುವ ಠೇವಣಿ ಹಾಗೂ ತೆರಿಗೆ ಪಾವತಿ ಸರಿ ಇರುತ್ತದೆ. ನಿಮ್ಮ ಮಿತ್ರರು ತಿಳಿಸಿದಂತೆ, ನೀವು ನಿಮ್ಮ ಹೆಂಡತಿಗೆ ದಾನಪತ್ರ ಮಾಡಿ ಹಣ ವರ್ಗಾಯಿಸಿದರೂ,  ಅಲ್ಲಿ ಬರುವ ಬಡ್ಡಿಗೆ ನೀವೇ ತೆರಿಗೆ ಸಲ್ಲಿಸಬೇಕಾಗುತ್ತದೆ. ಅವರು ತೆರಿಗೆ ಕೊಡುವ– ರಿಟರ್ನ್‌ ತುಂಬುವ ಅವಶ್ಯವಿಲ್ಲ. ಗಂಡ ಹೆಂಡತಿ ಹೆಸರಿನಲ್ಲಿ ಹಣ ವಿರಿಸಿದಾಗ, ಮಾಡಿದ ದಾನಪತ್ರ ನೊಂದಾಯಿಸುವ ಅವಶ್ಯವಿಲ್ಲ. ಒಟ್ಟಿನಲ್ಲಿ ಅವರ ಹೆಸರಿನಲ್ಲಿ ಇರಿಸಿದ ಠೇವಣಿಗೆ ಪ್ರತ್ಯೇಕ ತೆರಿಗೆ ವಿನಾಯತಿ ಇರುವುದಿಲ್ಲ. ಜೀವನ ಪಿಂಚಣಿ ಹಣಕ್ಕೆ ತೆರಿಗೆ ಇದೆ ಹಾಗೂ, ನೀವು ಕೊಡುವ ಮನೆ ಬಾಡಿಗೆ–ಮನೆ ಖರ್ಚು, ನಿಮ್ಮ ಆದಾಯದಿಂದ ಕಳೆದು ತೆರಿಗೆ ಸಲ್ಲಿಸುವ ಅವಕಾಶವಿಲ್ಲ.

***

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.ಇ–ಮೇಲ್‌: businessdesk@prajavani.co.in

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry