ಶುಕ್ರವಾರ, ಸೆಪ್ಟೆಂಬರ್ 20, 2019
22 °C

₹ 300 ಕೋಟಿ ಬೆಲೆ ಬಾಳುವ ಜಮೀನು ಡಿನೋಟಿಫಿಕೇಷನ್ ಮಾಡಿದ ಸಿದ್ದರಾಮಯ್ಯ

Published:
Updated:
₹ 300 ಕೋಟಿ ಬೆಲೆ ಬಾಳುವ ಜಮೀನು ಡಿನೋಟಿಫಿಕೇಷನ್ ಮಾಡಿದ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲಂಘಿಸಿ ಬೆಂಗಳೂರು ಉತ್ತರ ತಾಲ್ಲೂಕು ಭೂಪಸಂದ್ರ ಗ್ರಾಮದಲ್ಲಿ ಸುಮಾರು ₹ 300 ಕೋಟಿ ಬೆಲೆಬಾಳುವ 6.26 ಎಕರೆ ಜಮೀನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಬಿಜೆಪಿಯಿಂದ ಗಂಭೀರ ಆರೋಪ ಮಾಡಲಾಗಿದೆ.

ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ, ಬಿಜೆಪಿ ವಕ್ತಾರ ಗೋ. ಮಧುಸೂಧನ್, ಶಾಸಕ ರವಿಸುಬ್ರಹ್ಮಣ್ಯ ಅವರು ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದರು.

‘ಸಿದ್ದರಾಮಯ್ಯ ಅವರು ತಮ್ಮದು ಭ್ರಷ್ಟಾಚಾರ ರಹಿತ, ಹಗರಣ ರಹಿತ ಸರ್ಕಾರ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇಲ್ಲಿ ನಿಯಮ ಉಲ್ಲಂಘಿಸಿ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಲಾಗಿದ್ದು, 42 ನಿವೇಶನದಾರರು ಬೀದಿಪಾಲಾಗಿದ್ದಾರೆ. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬುಧವಾರ (ಅ.11)  ದೂರು ನೀಡಲಾಗುವುದು. ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಪುಟ್ಟಸ್ವಾಮಿ ಆಗ್ರಹಿಸಿದರು.

ಏನಿದು ಆರೋಪ?

‘ರಾಜಮಹಲ್ ವಿಲಾಸ್ ಎರಡನೇ ಹಂತದ ಬಡಾವಣೆ ನಿರ್ಮಿಸುವುದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)  ಭೂಪಸಂದ್ರ ಸರ್ವೆ ಸಂಖ್ಯೆ 20ರಲ್ಲಿ 3.34 ಎಕರೆ ಹಾಗೂ ಸರ್ವೆ ಸಂಖ್ಯೆ 21ರಲ್ಲಿ 2.32 ಎಕರೆ ಸ್ವಾಧಿನಕ್ಕಾಗಿ 1978ರಲ್ಲಿ ಪ್ರಾರಂಭಿಕ ಅಧಿಸೂಚನೆ ಹೊರಡಿಸಿ 1987ರಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಬಳಿಕ ಬಡಾವಣೆ ನಿರ್ಮಿಸಿ, ಹಣ ಪಡೆದ 22 ಜನರಿಗೆ ಅದನ್ನು ಹಂಚಿಕೆ ಮಾಡಲಾಗಿತ್ತು’.

‘1992ರಲ್ಲಿ ಆಗಿನ ಸರ್ಕಾರ ಈ ಜಮೀನನ್ನು ಸಂಪೂರ್ಣವಾಗಿ ಡಿನೋಟಿಫಿಕೇಷನ್ ಮಾಡಿ ಮೂಲ ಜಮೀನುದಾರರಾದ ಸೈಯದ್ ಭಾಷೀದ್, ಕೆ.ವಿ. ಜಯಲಕ್ಷ್ಮಮ್ಮ ಮತ್ತು ದೋಬಿ ಮುನಿಸ್ವಾಮಿ ಎಂಬುವರ ವಶಕ್ಕೆ ನೀಡಿತು. ಇದನ್ನು ಪ್ರಶ್ನಿಸಿ ನಿವೇಶನದಾರರು ಹೈಕೋರ್ಟ್‌ ಮೊರೆ ಹೋದಾಗ ಭೂ ಸ್ವಾಧಿನ ಹಿಂಪಡೆದಿರುವುದನ್ನು ನ್ಯಾಯಾಲಯ ರದ್ದುಪಡಿಸಿ ಮರಳಿ ನಿವೇಶನದಾರರಿಗೆ ಸಿಗಬೇಕು ಎಂದು ಆದೇಶ ನೀಡಿತು. ಇದನ್ನು ಪ್ರಶ್ನಿಸಿ ಸೈಯದ್ ಭಾಷಿದ್ ಹೈಕೋರ್ಟ್‌ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದಾಗಲೂ ಅದು ತಿರಸ್ಕೃತ ಆಯಿತು. ಬಳಿಕ ಸುಪ್ರೀಂ ಕೋರ್ಟ್‌ ಮೊರೆ ಹೋದಾಗಲೂ ಅರ್ಜಿ ತಿರಸ್ಕರಿಸಲಾಯಿತು’.

Post Comments (+)