ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತೆಯ ಸಂತೆಯೊಳಗೆ...

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನಸ್ಸು ಚಿಂತೆಯ ಸಂತೆಯಾಗಿದೆ. ನೆಮ್ಮದಿಯಿಂದ ನಿದ್ರೆಯೂ ಬರುತ್ತಿಲ್ಲ. ಯಾವ ಕೆಲಸವನ್ನು ಮಾಡಲಿಕ್ಕೂ ಉತ್ಸಾಹವಿಲ್ಲ. ಕಣ್ಣುರಿ. ತಲೆಬಿಸಿ.

ಹೀಗೆಂದವರಿಗೆ ಸುಮಾರು ಮೂವತ್ತೈದು ವರ್ಷ ವಯಸ್ಸು. ಒಳ್ಳೆಯ ಸಂಬಳ ಬರುವ ಕೆಲಸದಲ್ಲಿದ್ದಾರೆ. ಮದುವೆಯಾಗಿದೆ. ಒಂದು ಮಗುವಿದೆ. ಸರ್ವಸಾಮಾನ್ಯರಂತೆ ಜೀವನಚಕ್ರ ಸರಿಯಾಗಿ ಸಾಗುತ್ತಿದೆ. ಆದರೂ ಮನಸ್ಸಿನಲ್ಲಿ ಚಿಂತೆ ಅವತರಿಸಿದೆ. ಬದುಕನ್ನು ಆವರಿಸಿದೆ.

ಚಿಂತೆಯ ಸಂತೆಯೊಳಗೆ ಹೋಗಲಿಕ್ಕೆ ಇರುವುದು ಒಂದೇ ದಾರಿ. ಅಲ್ಲಿಂದ ಹೊರ ಬರುವುದಕ್ಕೆ ದಾರಿ ಇಲ್ಲ. ಅಲ್ಲಿಗೆ ಹೋಗುವ ಮೊದಲು ನಾವು ಅಲ್ಲಿಗೆ ಹೋಗುತ್ತಿರುವುದರ ಬಗ್ಗೆ ನಮಗೆ ಒಂದಿಷ್ಟೂ ಸುಳಿವು ಸಿಗುವುದಿಲ್ಲ. ಚಿತೆಯ ಮೇಲಿರುವವನಿಗೆ ಮಾತ್ರ ಚಿಂತೆ ಇಲ್ಲ ಎನ್ನುತ್ತಾರೆ. ಅಂದರೆ ಬದುಕಿರುವ ಎಲ್ಲರಿಗೂ ಚಿಂತೆ ಇದ್ದೇ ಇದೆ. ಚಿಂತೆ ಇಲ್ಲದೇ ಬದುಕೇ ಇಲ್ಲ ಎನ್ನುವಂತಾಗಿದೆ ಜನಜೀವನ. ಚಿಂತೆಯ ಬಲೆಯೊಳಗೆ ಬಿದ್ದರೆ ಅದು ಮನುಷ್ಯನನ್ನು ಬಲು ಬೇಗನೇ ಚಿತೆಯನ್ನು ಏರುವಂತೆ ಮಾಡಿತ್ತದೆ.

ಅದು ಚಿಂತೆಗಿರುವ ಶಕ್ತಿ!
ಸೋಮವಾರದಿಂದ ಶನಿವಾರದವರೆಗೆ ಕೀ ಕೊಟ್ಟು ಬಿಟ್ಟ ಯಂತ್ರದಂತೆ ಕೆಲಸ. ವಾರಾಂತ್ಯದಲ್ಲಿ ಮನೆಗೆಲಸ, ಆಪ್ತೇಷ್ಟರ ಭೇಟಿ. ಆಫೀಸು, ದೇವಸ್ಥಾನ, ಶಾಪಿಂಗ್, ಸಿನಿಮಾ, ಅದೂ ಇದೂ ಅಂತೆಲ್ಲ ಸದಾ ಅವಿಶ್ರಾಂತರಾಗಿರುತ್ತೇವೆ. ಹೀಗೆ ನಿತ್ಯ ಅವಿಶ್ರಾಂತ ಜೀವನವಿಧಾನದಲ್ಲಿ ದಿನಕಳೆದಂತೆ ಸುಲಭವಾಗಿ ಹೋಗಿ ಸೇರುವುದು ಚಿಂತೆಯ ಸಂತೆಯನ್ನು. ಅದೊಂದು ರೀತಿಯ ಚಕ್ರವ್ಯೂಹ ಇದ್ದಂತೆ. ಅದರೊಳಗೆ ಸೇರಿಕೊಂಡವರೆಲ್ಲರೂ ವೀರ ಅಭಿಮನ್ಯುಗಳೇ!

ಕೆಲವರಿಗೆ ಸರಿಯಾದ ಕೆಲಸವಿಲ್ಲ ಎನ್ನುವ ಚಿಂತೆ. ಕೆಲವರಿಗೆ ಮಾಡುವ ಕೆಲಸಕ್ಕೆ ಸರಿಯಾದ ಪ್ರತಿಫಲವಿಲ್ಲ ಎನ್ನುವ ಚಿಂತೆ. ಕೆಲವರಿಗೆ ಮಕ್ಕಳಿಲ್ಲ ಎನ್ನುವ ಚಿಂತೆಯಾದರೆ ಇನ್ನು ಕೆಲವರಿಗೆ ಎದೆಯ ಎತ್ತರ ಬೆಳೆದ ಮಕ್ಕಳು ಸರಿಯಾಗಿಲ್ಲ ಎನ್ನುವ ಚಿಂತೆ. ಕೆಲವರಿಗೆ ಮದುವೆಯಾಗಿಲ್ಲ ಎನ್ನುವ ಚಿಂತೆಯಾದರೆ ಮತ್ತೆ ಕೆಲವರಿಗೆ ಯಾಕಾದರೂ ಮದುವೆಯಾದೆವೋ ಎನ್ನುವ ಚಿಂತೆ. ಸ್ವಂತ ಸೈಟು-ಮನೆ ಇಲ್ಲ ಎನ್ನುವ ಚಿಂತೆ ಕೆಲವರಿಗಾದರೆ ಮತ್ತೆ ಕೆಲವರಿಗೆ ಊರುತುಂಬಾ ಇರುವ ಸೈಟು-ಮನೆಗಳನ್ನು ಕಾಪಾಡಿಕೊಳ್ಳುವ ಚಿಂತೆ. ನಾವು ಎಷ್ಟು ಬೇಗ ದೊಡ್ಡವರಾಗುತ್ತೇವಪ್ಪಾ ಎನ್ನುವ ಚಿಂತೆ ಮಕ್ಕಳಿಗಾದರೆ ಮತ್ತೆ ಮಧ್ಯವಯಸ್ಕರಿಗೆ ವಯಸ್ಸಾಗಿ ಹೋಗುತ್ತಿದೆಯಲ್ಲ ಎನ್ನುವ ಚಿಂತೆ! ಹೀಗೆ ಒಬ್ಬೊಬ್ಬರಿಗೂ ಒಂದಷ್ಟು ಚಿಂತೆಗಳು. ಕೆಲವೇ ಕೆಲವರಿಗೆ ಮಾತ್ರ ಕಾಡುವ ಚಿಂತೆಯಿಂದ ಹೇಗಪ್ಪಾ ಪಾರಾಗುವುದು ಎನ್ನುವ ಚಿಂತೆ!

ಮನಸ್ಸಿನ ಹೊಲದಲ್ಲಿ ಚಿಂತೆಯ ಬೀಜ ಯಾವಾಗ ಬಿತ್ತಲ್ಪಟ್ಟಿತೋ ಎನ್ನುವುದು ಯಾರಿಗೂ ತಿಳಿದಿರುವುದಿಲ್ಲ. ಅದು ಮರವಾಗಿ ಬೆಳೆದು ರೆಂಬೆಕೊಂಬೆಗಳ ತುಂಬಾ ಹೂವು ಹಣ್ಣುಗಳನ್ನು ಬಿಟ್ಟು ವಿಜೃಂಭಿಸುವಾಗ ಅದರ ದುಷ್ಪರಿಣಾಮಗಳ ಅರಿವಾಗುತ್ತದೆ. ಆ ಚಿಂತೆಯ ಮರದ ಮೂಲವನ್ನು ಹುಡುಕಿ, ಅದನ್ನು ಕತ್ತರಿಸಿ, ಒಣಗಿಸಿ, ಮನಸ್ಸಿನಿಂದ ಹೊರಕ್ಕೆ ಕಿತ್ತೊಗೆಯದಿದ್ದರೆ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಅನುಭವಿಸಲಿಕ್ಕಾಗುವುದಿಲ್ಲ. ಬದುಕಿನ ಭವ್ಯತೆಯನ್ನು ಕಾಣಲಿಕ್ಕಾಗುವುದಿಲ್ಲ. ಚಿಂತೆಯ ಫಸಲು ಹುಲುಸಾಗಿ ಬೆಳೆದಿರುವಾಗ ಬದುಕಿನ ರಸಾನುಭವವಾಗಲಿಕ್ಕೆ ಸಾಧ್ಯವಿಲ್ಲ.

ಚಿಂತೆಗಳ ಸಂತೆಯಲ್ಲಿ ಜೀಕುತ್ತ ಜೋಲುತ್ತ ಬದುಕುವುದರಲ್ಲಿ ಸೊಗಸೇನಿದೆ?
ನೀವಿವತ್ತು ಊಟ-ತಿಂಡಿ ಮಾಡಿದಿರಿ ತಾನೆ?
ನಿನ್ನೆ ರಾತ್ರಿ ಸುಖವಾಗಿ ನಿದ್ರೆ ಮಾಡಿದಿರಿ ತಾನೆ?
ನಿಮಗೆ ಇರಲಿಕ್ಕೊಂದು ಮನೆ ಇದೆತಾನೆ?
ನಿಮಗೊಂದು ಒಳ್ಳೆಯ ಹೃದಯವಿದೆಯಷ್ಟೇ?
ನಿಮ್ಮ ನೆರಮನೆಯವರನ್ನೂ ಸೇರಿಸಿ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತೀರಷ್ಟೇ?
ನಿಮಗೆ ಕುಡಿಯಲಿಕ್ಕೆ ಶುದ್ಧ ನೀರು ಇದೆಯಷ್ಟೇ?
ನಿಮಗಾಗಿ ಕಾಯುವವರು, ಕಾಳಜಿ ಮಾಡುವವರು ಇದ್ದಾರಷ್ಟೇ?
ನಿಮಗಾಗಿ ಒಳ್ಳೆಯ ಸ್ಚಚ್ಛ ಬಟ್ಟೆಗಳಿವೆಯಷ್ಟೆ?
ಬದುಕಿನ ಬಗ್ಗೆ ನಂಬಿಕೆ ಇದೆಯಷ್ಟೇ?
ನೀವು ಇತರರನ್ನು ಕ್ಷಮಿಸುತ್ತೀರಿ ತಾನೆ?
ಮತ್ತೆ ನೀವು ಉಸಿರಾಡುತ್ತೀದ್ದೀರಲ್ಲ?!
ಮತ್ಯಾಕೆ ಚಿಂತೆ?! ಮತ್ಯಾವುದರ ಬಗ್ಗೆ ಚಿಂತೆ?!

ನಿಸರ್ಗವು ನಮಗೆ ಉಚಿತವಾಗಿ ಕೊಟ್ಟಿರುವ ಬದುಕಿಗೆ ಮತ್ತು ಅವಕಾಶಗಳಿಗೆ ಋಣಿಯಾಗಿರೋಣ. ಚಿಕ್ಕ ಪುಟ್ಟ ಸಂತೋಷಗಳನ್ನು ಗುರುತಿಸಿ ಅನುಭವಿಸೋಣ. ಸೂರ್ಯೋದಯವನ್ನು ಸವಿಯೋಣ. ನಕ್ಷತ್ರಗಳನ್ನು ಎಣಿಸೋಣ. ನಮಗೆ ಸಂತೋಷ ಕೊಡುವ ಸಂಗತಿಗಳನ್ನು ಗೆಳೆಯರ ಬಳಿ ಹಂಚಿಕೊಳ್ಳೋಣ. ಅದರಿಂದ ಹೆಚ್ಚಾಗುವ ಅವರ ಸಂತೋಷವೂ ಸಹ ನಮಗೆ ಇನ್ನಷ್ಟು ಸಂತೋಷವನ್ನು ಕೊಡುವುದನ್ನು ಅನುಭವಿಸೋಣ.

ಅದು ಅರಮನೆಯೇ ಆಗಿದ್ದರೂ ಅಲ್ಲಿ ನಿಮಗೆ ಸಂತೋಷ ಸಿಗದಿದ್ದರೆ ಅಲ್ಲಿಂದ ತಕ್ಷಣ ಹೊರಡಿ. ನಿಮ್ಮ ಆತ್ಮಗೌರವಕ್ಕೆ ಧಕ್ಕೆಯಾಗುವ ಜಾಗದಲ್ಲಿ ಕ್ಷಣವೂ ಇರಬೇಡಿ. ಇನ್ನು ಕೋಪವು ತಾಪವನ್ನು ಹೆಚ್ಚಿಸುತ್ತದೆ. ಕೋಪ ಮಾಡಿಕೊಳ್ಳುವುದನ್ನು ಬಿಟ್ಟುಬಿಡಿ. ಕೋಪ ಬರುವ ಸನ್ನಿವೇಶಗಳಿಂದ ಸಾಧ್ಯವಾದಷ್ಟು ಬೇಗನೇ ದೂರ ಹೋಗಿ.

ನಾವು ಸಾಕಿದ ದನ ಕರು ಬೆಕ್ಕು ನಾಯಿಗಳಿಂದ ಹಿಡಿದು ಜೀವಜಗತ್ತಿನ ಯಾವ ಪ್ರಾಣಿಯೂ ಸಹ ಮನುಷ್ಯನಂತೆ ಚಿಂತೆ ಮಾಡುವುದಿಲ್ಲ. ನಿನ್ನೆಗಳಿಗಾಗಿ ಮರುಗುವುದಿಲ್ಲ. ನಾಳೆಗಳಿಗಾಗಿ ಹೆದರುವುದಿಲ್ಲ. ನಾವಾದರೋ ವಿಕಾಸಗೊಂಡ ಮೆದುಳಿನ ಮಾಲೀಕರು. ಅದಕ್ಕಾಗಿಯೇ ನಮಗೆ ನೂರೆಂಟು ಚಿಂತೆ. ಕಾಣದ ನಾಳೆಗಳ ಚಿಂತೆ. ಕಳೆದುಹೋದ ಅವಕಾಶಗಳ ಬಗ್ಗೆ ಚಿಂತೆ.

ಇಲ್ಲದಿರುವುದರ ಬಗ್ಗೆ, ಸಿಗದಿರುವುದರ ಬಗ್ಗೆ ಚಿಂತಿಸಿ ಫಲವಿಲ್ಲ. ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ನಮಗೆ ಸಿಕ್ಕಿರುವುದರ ಬಗ್ಗೆ, ಸಿಗುವುದರ ಬಗ್ಗೆ ಸಂತೋಷ ಇದ್ದರೆ ಸಾಕು. ನಮಗೆ ಏನೇನು ಸಿಗಬೇಕು ಅಂತಿದೆಯೋ ಅವೆಲ್ಲವೂ ಸಿಕ್ಕೇ ಸಿಗುತ್ತವೆ. ಅವರಿಗೆ ಸಿಕ್ಕಿದ್ದೆಲ್ಲ ನಮಗೂ ಸಿಗಬೇಕು ಎನ್ನುವುದು ತಪ್ಪು. ಅದು ನಮಗೆ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅದು ಅವರ ಋಣ. ಹಾಗಾಗಿ ಅವರಿಗೆ ಸಿಕ್ಕಿದೆ. ಅವರಿಗೆ ಅದರಿಂದ ಸಂತೋಷವಾಗಿದೆಯಾದರೆ, ಅದರಿಂದ ನಾವೂ ಸಂತೋಷಪಡಬೇಕು. ನಮ್ಮ ಸಂತೋಷದ ಮನಃಸ್ಥಿತಿಯಲ್ಲಿ ನಾವು ಬಯಸಿದ್ದು ನಮಗೆ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಚಿಂತೆಯಿಂದ ನಮ್ಮ ಮನಸ್ಸು ಹಾಳಾಗುತ್ತದೆ. ಅದರಿಂದ ದೇಹವು ಬಳಲುತ್ತದೆ. ಚಿಂತೆಯಿಂದ ಹಾನಿಯಾಗುತ್ತದೆ. ಚಿಂತೆ ಮಾಡುವುದರಿಂದ ನಯಾ ಪೈಸೆಯಷ್ಟೂ ಲಾಭವಿಲ್ಲ. ಹಾಗಾಗಿ ಚಿಂತೆ ಮಾಡುವ ಸಮಯದಲ್ಲಿಯೇ ನಾವು ಅದರಿಂದ ಹೊರಗಿರುವ ಬಗ್ಗೆ ಆಲೋಚಿಸಬೇಕು. ಚಿಂತೆಯ ಬದಲಿಗೆ ಯಾವುದಾದರೂ ವಿಷಯದ ಬಗ್ಗೆ ಚಿಂತನೆಯಲ್ಲಿರುವುದನ್ನು ರೂಢಿಸಿಕೊಳ್ಳಬೇಕು. ಚಿಂತನೆಯಿಂದ ಮನಃಶಾಂತಿ ಸಿಗುತ್ತದೆ. ಮನಃಶಾಂತಿಯಿಂದ ಶರೀರ ಸುಖವಾಗಿರುತ್ತದೆ. ನಮ್ಮ ಧನಾತ್ಮಕ ಚಿಂತನೆಗಳಿಂದ ಉಳಿದವರಿಗೆ ಅನುಕೂಲವಾಗುತ್ತದೆ. ಅವರಿಂದ ನಮ್ಮ ಹಾಗೂ ನಮ್ಮಿಂದ ಅವರ ತಿಳಿವಳಿಕೆ ವಿಸ್ತಾರವಾಗುತ್ತದೆ. ಪರಸ್ಪರರ ಉನ್ನತಿಯಾಗುತ್ತದೆ. ಚಿಂತೆಯಿಂದ ಮನುಷ್ಯ ಏಕಾಂಗಿಯಾಗುತ್ತಾನೆ. ಅದೇ ಚಿಂತನೆಯಿಂದ ಸಮಾನ ಮನಸ್ಕರು ಮಿತ್ರರಾಗುತ್ತಾರೆ. ಜೀವನದಲ್ಲಿ ಗೆಳೆತನವೂ ಒಂದು ಸಂಪತ್ತು. ಇದು ಉಳಿದೆಲ್ಲ ಸಂಪತ್ತುಗಳಿಗಿಂತಲೂ ಶ್ರೇಷ್ಠವಾದದ್ದು. ಚಿಂತನೆಯಿಂದ ಸಿಗುವ ಜ್ಞಾನದ ಬೆಳಕಿನಿಂದ ನಾವು ಉಳಿದವರ ದಾರಿಗೂ ಬೆಳಕಾಗಬಹುದು. ಜೀವವನ್ನು ಕಾಡುವ, ನೋಯಿಸುವ ಚಿಂತೆ ಮಾಡುವುದಕ್ಕಿಂತ, ಆರೋಗ್ಯಪೂರ್ಣವಾದ ಚಿಂತನೆಯನ್ನು ರೂಢಿಸಿಕೊಳ್ಳುವುದು ಉತ್ತಮ. ಚಿಂತೆಯ ಸಂತೆಯೊಳಗೆ ಹೋಗುವುದರಿಂದ ತಪ್ಪಿಸಿಕೊಳ್ಳಲಿಕ್ಕೆ ಇರುವುದು ಇದೊಂದೇ ಉಪಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT