ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 11–10–1967

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಾಸರಗೋಡು ಕನ್ನಡ ನಾಡಿಗೆ, ಬೆಳಗಾವಿ – ಕಾರವಾರ ನಮ್ಮಲ್ಲೇ: ಮಹಾಜನ್ ಆಯೋಗದ ವರದಿ

ಬೆಂಗಳೂರು, ಅ. 10– ಕನ್ನಡವೇ ಪ್ರಧಾನವಾಗಿರುವ, ಭೌಗೋಳಿಕವಾಗಿ ಮಂಗಳೂರಿನೊಡನೆ ನಿಕಟ ಸಂಪರ್ಕವನ್ನು ಹೊಂದಿರುವ, ಆಹಾರ ಹಾಗೂ ವ್ಯಾಪಾರ, ವ್ಯವಹಾರದ ಅಗತ್ಯಗಳಿಗೆ ಮೈಸೂರನ್ನೇ ಅವಲಂಬಿಸಿರುವ ಚಂದ್ರಗಿರಿ ಮತ್ತು ಪಯಸ್ವಿನೀ ನದಿಗಳ ಉತ್ತರಕ್ಕಿರುವ ಕಾಸರಗೋಡು ತಾಲ್ಲೂಕಿನ ಪ್ರದೇಶಗಳನ್ನು ಮೈಸೂರಿಗೆ ಸೇರಿಸಬೇಕೆಂದು ಮಹಾಜನ್ ಆಯೋಗವು ಶಿಫಾರಸು ಮಾಡಿದೆ.

ಈ ಭಾಗವನ್ನು ಅದರ ಹಳೆಯ ಜಿಲ್ಲೆಯಾದ ದಕ್ಷಿಣ ಕನ್ನಡಕ್ಕೆ ಸೇರಿಸಿದರೆ ಭಾಷಾ ಸಮರೂಪತೆಯ ತತ್ವವನ್ನು ಉಲ್ಲಂಘಿಸಿದಂತಾಗುವುದಿಲ್ಲವೆಂದೂ ಶಿಫಾರಸು ಸ್ಪಷ್ಟವಾಗಿ ಸೂಚಿಸಿದೆ.

ಮಂಗಳೂರಿನೊಡನೆ ಸುಲಭ ಸಂಪರ್ಕವನ್ನು ಹೊಂದಿರುವ ಈ ಪ್ರದೇಶವನ್ನು ಜನತೆಯ ಸೌಲಭ್ಯದ ದೃಷ್ಟಿಯಿಂದ ಕೇರಳಕ್ಕೆ ಸೇರಿಸಲೇಬಾರದಿತ್ತು ಎಂದು ಆಯೋಗವು ಅಭಿಪ್ರಾಯಪಟ್ಟಿದೆ.

ಯಾವ ಸೂತ್ರ ಅನ್ವಯಿಸಿದರೂ ಬೆಳಗಾವಿ ಮಹಾರಾಷ್ಟ್ರಕ್ಕಿಲ್ಲ

ಬೆಂಗಳೂರು, ಅ. 10– ‘ಕೇವಲ ಒಂದು ಭಾಷಾ ಗುಂಪಿನವರನ್ನು ತೃಪ್ತಿಪಡಿಸುವ ಉದ್ದೇಶದಿಂದ ಈಗಿರುವಂತೆ ಷಹಾ‍ಪುರ ಮತ್ತು ದಂಡು ಪ್ರದೇಶಗಳನ್ನೊಳಗೊಂಡ ಬೆಳಗಾವಿ ನಗರವನ್ನು ಮಹಾರಾಷ್ಟ್ರ ರಾಜ್ಯದೊಡನೆ ವಿಲೀನಗೊಳಿಸಬೇಕೆಂದು ಶಿಫಾರಸು ಮಾಡುವುದು ಸಾಧ್ಯವೇ ಇಲ್ಲವೆಂಬ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಶ್ರೀ ಮಹಾಜನ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

‘ಮರಾಠಿಗೆ ಕೊಂಕಣಿ ಸೇರಿಸಲಾರೆ’

ಬೆಂಗಳೂರು, ಅ. 10– ಕೊಂಕಣಿ ಮರಾಠಿಯ ಉಪ ಭಾಷೆ ಎಂದು ಪರಿಗಣಿಸಲು ಮಹಾಜನ್ ಗಡಿ ಆಯೋಗ ಸ್ವಷ್ಟವಾಗಿ ನಿರಾಕರಿಸಿದೆ.

ಏಕಭಾಷಾ ರಾಜ್ಯ ಕಲ್ಪನೆ ಅಪಾಯ ಕುರಿತು ಮಹಾಜನ್

ಬೆಂಗಳೂರು, ಅ. 10– ಏಕ ಭಾಷಾ ರಾಜ್ಯ ಆ ಭಾಷೆ ಮಾತನಾಡುವ ಜನರಿಗಾಗಿ ಮಾತ್ರ ಇದೆ ಎಂಬ ಭಾವನೆಯ ವಿರುದ್ಧ ಮಹಾಜನ ಗಡಿ ಆಯೋಗ ತೀವ್ರ ಎಚ್ಚರಿಕೆ ನೀಡಿದೆ.

ಮರಾಠಿಗರ ಚಳವಳಿಯ ನಿಜರೂಪ ಬಯಲು

ಬೆಂಗಳೂರು, ಅ. 10– ಭಾಷಾ ಭಾವೋದ್ರೇಕವನ್ನು ಪ್ರಚೋದಿಸಿ ಚಳವಳಿ ನಡೆಸುವುದು ಉತ್ತರೋತ್ತರ ರಾಷ್ಟ್ರದ ಐಕ್ಯಕ್ಕೆ ಅಪಾಯಕಾರಿಯಾಗುವುದೆಂದು ಮಹಾಜನ್ ಗಡಿ ಆಯೋಗ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.

ಬೆಳಗಾವಿಯಲ್ಲಿ ಮಹಾರಾಷ್ಟ್ರಕ್ಕೆ ವರ್ಗಾಯಿಸಿ ಶಿಫಾರಸು ಮಾಡಲು ನಿರಾಕರಿಸಿ ಅದಕ್ಕೆ ಕಾರಣಗಳನ್ನು ವಿವರಿಸುವ ಸಂದರ್ಭದಲ್ಲಿ ಶ್ರೀ ಮಹಾಜನ್ ಅವರು ‘ಭಾಷಾ ಭಯದ ಬಗ್ಗೆ ಜನಸಾಮನ್ಯ ತಲೆಗೆ ಹಚ್ಚಿಕೊಳ್ಳುವುದಿಲ್ಲವೆಂಬುದು ನನ್ನ ಅಭಿಪ್ರಾಯ. ರಾಜಕೀಯ ಕಾರ್ಯಕರ್ತರು ಮಾತ್ರ ಅದರಲ್ಲೂ, ಮಹಾರಾಷ್ಟ್ರಕ್ಕೆ ಕೆಲವು ಪ್ರದೇಶಗಳನ್ನು ಕೊಂಡೊಯ್ಯಬೇಕೆಂಬ ಏಕೋದ್ದೇಶವುಳ್ಳ, ಇದೇ ಉದ್ದೇಶಕ್ಕಾಗಿ ಅಸ್ತಿತ್ವಕ್ಕೆ ಬಂದ ಸಮಿತಿಯ ಕಾರ್ಯಕರ್ತರು ಮಹಾರಾಷ್ಟ್ರಕ್ಕೆ ಬೆಳಗಾವಿ ಸೇರಬೇಕೆಂದು ಚಳವಳಿ ನಡೆಸುತ್ತಿದ್ದಾರೆ. ಈ ಪ್ರಶ್ನೆಯಲ್ಲಿ ಆಸಕ್ತಿಯುಳ್ಳ ಆಜ್ಞಾನಿ ಜನರ ಭಾವೋದ್ರೇಕಗಳಿಗೆ ಮೊರೆಹೋಗಿ ತುಂಬಾ ಗೊಂದಲ ಹಾಗೂ ತೊಂದರೆಯನ್ನುಂಟು ಮಾಡಿದ್ದಾರೆ.

‘ಭಾಷಾ ಭಾವನೆಗಳನ್ನು ಬಡಿದೆಬ್ಬಿಸುವ ಏಕೋದ್ದೇಶವುಳ್ಳ ಇಂಥ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಡೆಸುತ್ತ ಹೋದರೆ, ಅಂತ್ಯದಲ್ಲಿ ಅದು ರಾಷ್ಟ್ರದ ಐಕ್ಯಕ್ಕೆ ಅಪಾಯಕಾರಿಯಾಗುತ್ತದೆ. ಇವರೆಲ್ಲ ಹಳೆಯ ಹಾಗೂ ಹಿರಿಯ ಧ್ಯೇಯವಾದ ಸಹನೆ ಹಾಗೂ ಸಹಬಾಳ್ವೆ ಮರೆಯುತ್ತಾರೆ.

‘ಏನೇ ಆಗಲಿ, ಮರಾಠಿಗರ ಬಹುಸಂಖ್ಯೆ (ಗ್ರಾಮಗಳಲ್ಲಿ) ಮೈಸೂರು ರಾಜ್ಯದಿಂದ ಮಾಯವಾಗುವುದಿಲ್ಲ ಅಥವಾ ಕನ್ನಡ ಅಲ್ಪಸಂಖ್ಯಾಕರು ಮಹಾರಾಷ್ಟ್ರದಲ್ಲಿ ಮಾಯವಾಗುವುದಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT