ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ಮಾರಾಟ ನಿಷೇಧ ಮಾಲಿನ್ಯಕ್ಕೆ ಕಡಿವಾಣ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಮಾರಾಟದ ಮೇಲೆ ಸುಪ್ರೀಂ ಕೋರ್ಟ್‌ ನಿಷೇಧ ವಿಧಿಸಿರುವುದು ನಾಗರಿಕರ ಆರೋಗ್ಯ ರಕ್ಷಣೆಯ ಮತ್ತು ಮಾಲಿನ್ಯಕ್ಕೆ ಕಡಿವಾಣ ಹಾಕುವ ದಿಟ್ಟ ನಡೆಯಾಗಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪರಿಸರ ಮಾಲಿನ್ಯ ಮಟ್ಟ ತಗ್ಗಿಸಲು ಕೋರ್ಟ್‌ನ ತ್ರಿಸದಸ್ಯ ಪೀಠವು ಅಸಾಮಾನ್ಯ ನಿರ್ಧಾರ ಕೈಗೊಂಡು ಮತ್ತೊಮ್ಮೆ ನಗರವಾಸಿಗಳ ರಕ್ಷಣೆಗೆ ಧಾವಿಸಿದೆ. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಎನ್‌ಸಿಆರ್‌ನಲ್ಲಿನ ವಾಯು ಮಾಲಿನ್ಯದ ಮಟ್ಟವು  ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಟ್ಟಕ್ಕಿಂತ 29 ಪಟ್ಟು ಹೆಚ್ಚಾಗಿತ್ತು.  ‘ಆರೋಗ್ಯ ತುರ್ತು ಪರಿಸ್ಥಿತಿ’ ಎಂದೇ ಅದನ್ನು ಪರಿಗಣಿಸಲಾಗಿತ್ತು. ಈ ಬಾರಿಯೂ ಅಂತಹ ಪರಿಸ್ಥಿತಿ ಮರುಕಳಿಸಬಾರದು ಎನ್ನುವುದು ಕೋರ್ಟ್‌ನ ಕಾಳಜಿಯಾಗಿದೆ. ದೀಪಾವಳಿ ವೇಳೆಯಲ್ಲಿ ಅಂದರೆ ನವೆಂಬರ್‌ 1ರವರೆಗೆ ಮಾತ್ರ ಈ ನಿಷೇಧ ಜಾರಿಯಲ್ಲಿ ಇರಲಿದೆ. ಇದರಿಂದ ಇತರ ಸಂಭ್ರಮ ಸಡಗರದ ಸಂದರ್ಭದಲ್ಲಿ ಪಟಾಕಿ ಬಳಕೆ ಅಬಾಧಿತವಾಗಿರುವ ಬಗ್ಗೆ ಕೋರ್ಟ್‌ ಜಾಗರೂಕತೆ ವಹಿಸಿದೆ.

ಪಟಾಕಿ ಸಿಡಿಸುವುದರ ಮೇಲಿನ ತಾತ್ಕಾಲಿಕ ನಿಷೇಧ ನಿರ್ಧಾರದಲ್ಲಿ ಬಡವ– ಬಲ್ಲಿದರು, ಪಟಾಕಿ ತಯಾರಕರು, ಕಾರ್ಮಿಕರು ಮತ್ತು ಬಳಕೆದಾರರ ಆರೋಗ್ಯ ರಕ್ಷಣೆಯೇ ಮುಖ್ಯವಾಗಿರುವುದನ್ನು ಯಾರೊಬ್ಬರೂ ನಿರ್ಲಕ್ಷಿಸುವಂತಿಲ್ಲ. ಪಟಾಕಿ ಸಿಡಿತದಿಂದ  ಮಾರಕ ರಾಸಾಯನಿಕಗಳು ಪರಿಸರಕ್ಕೆ ಸೇರ್ಪಡೆಯಾಗುವುದರ ಜತೆಗೆ ಶಬ್ದ ಮಾಲಿನ್ಯವನ್ನೂ ಗಮನಾರ್ಹವಾಗಿ ಹೆಚ್ಚಿಸುತ್ತವೆ. ಇಂತಹ ತೀವ್ರ ಸ್ವರೂಪದ ವಾಯು ಮಾಲಿನ್ಯವು ಹಲವಾರು ಬಗೆಯ ಕಾಯಿಲೆಗಳಿಗೂ ಕಾರಣವಾಗುತ್ತಿರುವುದು ಈಗಾಗಲೇ ಸಂದೇಹಕ್ಕೆ ಎಡೆ ಇಲ್ಲದಂತೆ ದೃಢಪಟ್ಟಿದೆ. ಪರಿಸರ ಮಾಲಿನ್ಯದಿಂದಾಗಿ ಉಸಿರಾಟಕ್ಕೆ ಸಂಬಂಧಿಸಿದ ಆಸ್ತಮಾ, ಶ್ವಾಸಕೋಶದ ಕ್ಯಾನ್ಸರ್‌, ಶ್ವಾಸನಾಳದ ಕಾಯಿಲೆಗಳೂ ಹೆಚ್ಚುತ್ತಿವೆ. ವಾತಾವರಣದಲ್ಲಿನ ವಿಷಕಾರಿ ರಾಸಾಯನಿಕಗಳು ಯಕೃತ್ತು,ಕಿಡ್ನಿ, ಮಿದುಳು ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಹೃದಯಾಘಾತ  ಹೆಚ್ಚಳದಲ್ಲಿಯೂ ಇದರ ಕೊಡುಗೆ ಗಮನಾರ್ಹವಾಗಿದೆ. ಕೋರ್ಟ್‌ ತಳೆದ ಈ ನಿಲುವು ನಗರ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟದ ಮೇಲೆ ಖಂಡಿತವಾಗಿಯೂ ಸಕಾರಾತ್ಮಕ ಪರಿಣಾಮ ಬೀರಲಿದೆ. ದೀಪಾವಳಿ ಜತೆಗೆ ಕಾಲಿಡುವ ಚಳಿಗಾಲದಿಂದಾಗಿ ಗಾಳಿ ಬೀಸುವ ವೇಗವೂ ಕಡಿಮೆಯಾಗುತ್ತದೆ. ಬೆಳಗಿನ ಹೊತ್ತು ಬೀಳುವ ಮಂಜಿನ ಜತೆಗೆ, ಫಸಲಿನ ಅಳಿದುಳಿದ ಕಸಕ್ಕೆ ಅಕ್ಕಪಕ್ಕದ ರಾಜ್ಯದ ರೈತರು ಬೆಂಕಿ ಹಚ್ಚುವುದು ಮತ್ತು ವಾಹನಗಳು ಹೊರಸೂಸುವ ಹೊಗೆ ಎಲ್ಲವೂ ಸೇರಿಕೊಂಡು ಎನ್‌ಸಿಆರ್‌ ವ್ಯಾಪ್ತಿಯಲ್ಲಿ ‘ಹೊಂಜು’ ಆವರಿಸಿಕೊಳ್ಳುತ್ತದೆ. ಇದರಿಂದ ನಗರದಾದ್ಯಂತ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣ ಆಗುತ್ತಿದೆ. ಇದು ಬರೀ ದೆಹಲಿ –ಎನ್‌ಸಿಆರ್‌ನ ಸಮಸ್ಯೆಯಲ್ಲ. ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತಗಳಲ್ಲಿಯೂ ಇದೇ ಪರಿಸ್ಥಿತಿ ಇದೆ.

ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಸಾಗಿದೆ. ದೀಪಾವಳಿ ಸಂದರ್ಭದಲ್ಲಿ ಇದು ಇನ್ನಷ್ಟು ಪಾತಾಳಕ್ಕೆ ಕುಸಿದು ದುರ್ವಾಸನೆಯುಕ್ತ ಗಾಳಿಯನ್ನೇ ಸೇವಿಸುವುದರಿಂದ ಇಡೀ ನಗರವೇ ಉಸಿರುಗಟ್ಟಿ ಏದುಸಿರು ಬಿಡುತ್ತಿರುತ್ತದೆ.  ಕಳೆದ ವರ್ಷದ ದೀಪಾವಳಿಯಲ್ಲಿ ಎನ್‌ಸಿಆರ್‌ ಪ್ರದೇಶದಲ್ಲಿ ಮಾಲಿನ್ಯವು ಅಪಾಯಕಾರಿ ಮಟ್ಟ ತಲುಪಿತ್ತು.  ಇಡೀ ನಗರದಲ್ಲಿ ಭಾರಿ ಪ್ರಮಾಣದಲ್ಲಿ ನಡೆದಿದ್ದ ಪಟಾಕಿಗಳ ಸಿಡಿತದಿಂದ ಉಂಟಾದ ಹೊಗೆ ಮತ್ತು ಮಂಜು ಮುಸುಕಿದ ವಾತಾವರಣ ಸೇರಿಕೊಂಡು ಹೊಂಜು ನಿರ್ಮಾಣವಾಗಿತ್ತು. ಇದೇ ಕಾರಣಕ್ಕೆ ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗಿತ್ತು. ಪಟಾಕಿಗಳ ಮೇಲಿನ ನಿಷೇಧ ದೀಪಾವಳಿ ಸಂದರ್ಭಕ್ಕೆ ಮಾತ್ರ ಅನ್ವಯವಾಗಲಿದೆ. ಹೀಗಾಗಿ ವರ್ತಕರು ಮತ್ತು ನಾಗರಿಕರು ನಿರಾಶರಾಗಬೇಕಾಗಿಲ್ಲ. ಇತರೆ ಸಂದರ್ಭಗಳಲ್ಲಿ ಪಟಾಕಿ ಸಿಡಿಸಲು ಯಾವುದೇ ನಿರ್ಬಂಧ ಇಲ್ಲ. ವಾಣಿಜ್ಯ ಹಿತಾಸಕ್ತಿಗಿಂತ ಬಹುಸಂಖ್ಯಾತ ನಾಗರಿಕರ ಆರೋಗ್ಯ ರಕ್ಷಣೆಯೇ ಈ ತೀರ್ಪಿನ ಹಿಂದಿರುವ ಮುಖ್ಯ ಕಾಳಜಿ ಆಗಿರುವುದನ್ನು ಯಾರೊಬ್ಬರೂ ಉಪೇಕ್ಷಿಸುವಂತಿಲ್ಲ. ಭವಿಷ್ಯದ ತಲೆಮಾರಿನ ಆರೋಗ್ಯ ರಕ್ಷಿಸುವ ದೂರಗಾಮಿ ಚಿಂತನೆಯೂ ಇದರಲ್ಲಿ ಅಡಗಿದೆ.  ನಾಗರಿಕರೂ ಕೋರ್ಟ್‌ನ ಕಾಳಜಿಗೆ ಕೈಜೋಡಿಸಿ ದೀಪಗಳ ಹಬ್ಬವನ್ನು ಬೇರೆ ಬಗೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಮನಸ್ಸು ಮಾಡಿದರೆ ಅಂಧಕಾರ ದೂರ ಮಾಡುವ ಬೆಳಕಿನ ಹಬ್ಬದ ಮೆರುಗು ಇನ್ನಷ್ಟು ಹೆಚ್ಚೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT