ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಕಾಲೀನ ಸಂದರ್ಭ ತಂದ ತಲ್ಲಣಗಳು

ರಾಜಕಾರಣವನ್ನು ಧಾರ್ಮಿಕ ಕೇಂದ್ರಗಳಿಗೆ ಹೊಗಿಸಿಕೊಂಡರೆ ಧಾರ್ಮಿಕರ ಪಾಲಿಗೆ ನೆಮ್ಮದಿ ಎಂಬುದು ಮರೀಚಿಕೆ
Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಈ ಸಲದ ಶರಣ ಸಂಸ್ಕೃತಿ ಉತ್ಸವದಲ್ಲಿ (ಸೆ. 23ರಿಂದ ಅ. 2ರ ವರೆಗೆ) ಗಾಂಧಿ ಜಯಂತಿಯ ಆಚರಣೆಯೂ ಸೇರಿಕೊಂಡಿತ್ತು. ಸಾಮಾಜಿಕ ಸಾಮರಸ್ಯ ಕುರಿತು ಅಂದು ಚಿಂತನೆನಡೆಸಲಾಯಿತು. ಸರ್ವಧರ್ಮ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ರಾಷ್ಟ್ರಪಿತ ಗಾಂಧೀಜಿ ಭಾವಚಿತ್ರಕ್ಕೆ ಧಾರ್ಮಿಕ ಮುಖಂಡರಿಂದ ಪುಷ್ಪನಮನ. ಸಾಮಾಜಿಕ ಸಾಮರಸ್ಯಕ್ಕಾಗಿ ಸರ್ವಧರ್ಮಗಳೂ ಸಹಕರಿಸಬೇಕಾಗುತ್ತದೆ; ಅದರ ಸ್ಥಾಪನೆಗಾಗಿ ಯತ್ನಿಸಬೇಕಾಗುತ್ತದೆ. ಮೂಲಭೂತವಾದವು ಧರ್ಮಗಳಲ್ಲಿನ ಅಹಿತಕರವಾದ ಬೆಳವಣಿಗೆಗೆ ಕಾರಣ ಆಗುತ್ತಿದೆ. ಇದರೊಟ್ಟಿಗೆ ಒಂದಷ್ಟು ಕೋಮುವಾದವೂ ನುಸುಳಿಕೊಂಡರೆ ಸಾಮಾಜಿಕ ಸಾಮರಸ್ಯಕ್ಕೆ ಪೆಟ್ಟು ಬೀಳುತ್ತದೆ.

ಹಿಂದೆಲ್ಲ ಯಾವುದಾದರೂ ಊರಲ್ಲಿ ಕೋಮು ಗಲಭೆ ನಡೆದಾಗ ಅಂಥ ಊರುಗಳಿಗೆ ಹೋಗಿ, ಸಾಮಾಜಿಕ ಸಾಮರಸ್ಯವನ್ನು ಸ್ಥಾಪಿಸಲು ಪ್ರಯತ್ನಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗಲಭೆಗ್ರಸ್ತ ಊರುಗಳಿಗೆ ಭೇಟಿ ಕೊಡುವುದು ಕಡಿಮೆ ಆಗುತ್ತಿದೆ. ಕಾರಣವೇನೆಂದರೆ, ಪ್ರತಿಯೊಂದು ಕೋಮು ಗಲಭೆಯಲ್ಲೂ ರಾಜಕಾರಣ ನುಸುಳುತ್ತಿರುವುದು. ಒಂದು ಊರಲ್ಲಿ ಒಂದು ಪಕ್ಷದ ಪ್ರಚೋದನೆ, ಮತ್ತೊಂದು ಊರಲ್ಲಿ ಮತ್ತೊಂದು ಪಕ್ಷದ ಪ್ರಚೋದನೆ. ಇಂಥ ಗಲಭೆಗ್ರಸ್ತ ಸ್ಥಳಗಳಿಗೆ ಭೇಟಿ ನೀಡಿದರೆ, ಒಂದು ಪಕ್ಷದ ಪರವಾಗುತ್ತದೆ; ಮತ್ತೊಂದು ಪಕ್ಷಕ್ಕೆ ವಿರುದ್ಧವಾಗುತ್ತದೆಂಬ ಭಾವನೆ.

ಪಕ್ಷ ರಾಜಕೀಯದ ಮುಖಾಂತರ ನಡೆಯುವ ಕೋಮುಗಲಭೆ ಸಂದರ್ಭದಲ್ಲಿ ಸಾಮರಸ್ಯ ಮೂಡಿಸುವ ಪ್ರಯತ್ನಕ್ಕೆ ದೊಡ್ಡ ಹಿನ್ನಡೆ. ಪಾದಯಾತ್ರೆಗೆ ಅವಕಾಶ ಇಲ್ಲ. ಸರ್ವಧರ್ಮ ಮುಖಂಡರನ್ನು ಒಂದೇ ವೇದಿಕೆಯಲ್ಲಿ ನೋಡುವ ಸಂದರ್ಭ ಅತ್ಯಂತ ವಿರಳ ಆಗುತ್ತಿದೆ. ಇದು ವಿಷಾದನೀಯ. ‘ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯಿಂದ ಸಾಧ್ಯವಾಗದೇ ಇರುವಂತಹ ಸಾಮರಸ್ಯವು ಧಾರ್ಮಿಕ ಮುಖಂಡರಿಂದ ಸಾಧ್ಯವಾಗುತ್ತಿತ್ತು. ಇಂದು ಅದು ಸಾಧ್ಯ ಆಗುತ್ತಿಲ್ಲ ಯಾಕೆ’ ಎಂಬ ಪ್ರಶ್ನೆಯು ಸಾಮಾಜಿಕ ಸಾಮರಸ್ಯದ ಪರವಾಗಿ ಕೆಲಸ ಮಾಡುವವರನ್ನು ಕಾಡುತ್ತಿದೆ.

ಧಾರ್ಮಿಕ ಮುಖಂಡರು ಕೂಡಾ ಒಂದೊಂದು ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆ ಎಂಬ ಅನುಮಾನಗಳು ಕಾಡುತ್ತಿವೆ. ಮೇಲ್ನೋಟಕ್ಕೆ ಕೆಲವರು ಆಡಳಿತ ಪಕ್ಷದ ಪರವಾಗಿದ್ದಾರೆಂದು ತೋರಿಸಿಕೊಂಡರೂ ಆಂತರ್ಯದ ನಿರ್ಧಾರ ಬೇರೆಯೇ ಇರುತ್ತದೆ. ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಹೊಣೆಗಾರಿಕೆ ಎಲ್ಲ ಧಾರ್ಮಿಕರಿಗೂ ಇದೆ. ರಾಜಕೀಯ ಪ್ರಜ್ಞೆ ಬೆಳೆಸುವುದೆಂದರೆ ಯಾವುದೇ ಪಕ್ಷದ ತುತ್ತೂರಿ ಆಗಬೇಕೆಂದೇನೂ ಅಲ್ಲ. ಕೆಲವರದಂತೂ ತುಂಬ ಜಾಣ್ಮೆಯ
ನಡೆ. ಎಲ್ಲ ಪಕ್ಷದವರೂ ತಮ್ಮ ಮಠಕ್ಕೆ ನಡೆದುಕೊಳ್ಳಬೇಕೆಂಬ ಉದ್ದೇಶ. ಕೆಲವೊಮ್ಮೆ ಪ್ರಗತಿಪರ ನಿಲುವಿನಿಂದ ನಿಷ್ಠುರ ಕ್ರಮ ತೆಗೆದುಕೊಂಡಾಗ ಅದನ್ನು ಪ್ರೋತ್ಸಾಹಿಸುವ ಬದಲು ಏನೇನೋ ಸಬೂಬು ಹೇಳುತ್ತ ಕೆಲವರು ದೂರ ಉಳಿಯುತ್ತಾರೆ. ಇನ್ನೊಂದು ಪಕ್ಷದವರನ್ನು ಓಲೈಸುವುದೊಂದೇ ಇದರ ಹಿಂದಿನ ಉದ್ದೇಶ. ಸರ್ಕಾರದ ಸೌಲಭ್ಯಗಳು ಮಠಕ್ಕೆ ಹರಿದುಬರಲೂ ಬೇಕು. ಆದರೆ ಆಂತರ್ಯದಲ್ಲಿ ಮತ್ತೊಂದು ಪಕ್ಷ ಗೆಲ್ಲಬೇಕು. ಎಲ್ಲಿ ತಮ್ಮನ್ನು ಒಂದು ಪಕ್ಷದ ಪರವೆಂದು ಗುರುತಿಸಲಾಗುತ್ತದೋ, ಅಪಕೀರ್ತಿ ಬಂದುಬಿಡುತ್ತದೋ ಎಂಬ ದ್ವಂದ್ವ!

ಪ್ರಜಾಪ್ರಭುತ್ವದಲ್ಲಿ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಅಧಿಕಾರವು ಸುಪ್ರೀಂ ಕೋರ್ಟ್‌ಗೆ ಮಾತ್ರ ಸೇರಿದ್ದು. ಇದನ್ನೆಲ್ಲ ಬದಿಗೊತ್ತಿ ಮಠ ರಾಜಕಾರಣ ಮಾಡಲಾಗುತ್ತದೆ. ಇತ್ತೀಚೆಗೆ ನಾಡಿನ ಹಿರಿಯ ಶ್ರೀಗಳೊಬ್ಬರನ್ನು ವಿವಾದಕ್ಕೆಳೆಯುವಂಥ ಘಟನೆಯೊಂದು ಸೃಷ್ಟಿಯಾದದ್ದು ವಿಷಾದನೀಯ. ಪೂಜ್ಯರಿಗೆ ಗೌರವ ನೀಡಲಿ; ಸಾಧ್ಯವಾದರೆ ರಾಷ್ಟ್ರದ ಅತ್ಯಂತ ಉನ್ನತವಾಗಿರುವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಿ. ಆದರೆ ಅಂತಹವರನ್ನು ವಿವಾದಕ್ಕೆ ಎಳೆಯುವುದು ಬೇಡ. ಅವರ ಅಭಿಮಾನಿಗಳು ಅವರಿಗೆ ಎಷ್ಟೇ ಹತ್ತಿರದವರಾಗಿದ್ದರೂ ಅವರಿಂದ ಹೇಳಿಕೆಗಳನ್ನು ಕೊಡಿಸುವುದು ಉಚಿತವಲ್ಲ.

ಲಿಂಗಾಯತ ಸ್ವತಂತ್ರ ಧರ್ಮದ ಆಂದೋಲನ ನಡೆಯುತ್ತಿದೆ. ಫ.ಗು. ಹಳಕಟ್ಟಿಯವರು ಸಂಪಾದಿಸಿದ ವಚನಗಳನ್ನು ಪುನಃ ಸಂಶೋಧನೆಗೆ ಒಳಪಡಿಸಬೇಕೆಂಬ ಅಭಿಪ್ರಾಯವನ್ನು ಒಬ್ಬರು ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ನಿಮ್ನ ವರ್ಗದವರು ಶಿಕ್ಷಣ ವಂಚಿತರಾದ ದಿನಗಳಲ್ಲಿ ಹಸ್ತಪ್ರತಿಯ ಮೇಲೆ ವಚನಗಳನ್ನು ರಚಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ಪ್ರಸ್ತಾಪಿಸಿದ್ದಾರೆ. ಮೊದಲನೆಯದಾಗಿ ಹಳಕಟ್ಟಿ ಸಂಪಾದಿತ ವಚನಗಳನ್ನು ಪುನರ್ ಪರಿಶೀಲನೆಗೆ ಎತ್ತಿಕೊಳ್ಳುವುದು ಸಾಧುವಲ್ಲ. ಹಾಗೇನಾದರೂ ಕೆಲವರು ಮಾಡಿದರೆ ಉದ್ಧಟತನವಾದೀತು.

ಈ ಅಭಿಪ್ರಾಯವು ವಚನಗಳಿಗೆ ಯಾಕೆ? ವೇದ, ಶಾಸ್ತ್ರ, ಆಗಮಗಳಾದಿಯಾಗಿ ಎಲ್ಲ ಸಾಹಿತ್ಯ ಕೃತಿಗಳನ್ನು ವಿಮರ್ಶೆಗೆ ಒಡ್ಡಬೇಕಾಗುತ್ತದೆ. ಅಂಥ ಸಾಹಸಕ್ಕೆ ಕೈಹಾಕದಿರುವುದು ಪ್ರಜ್ಞಾವಂತರ ಲಕ್ಷಣ. ಎರಡನೆಯ ಅನಿಸಿಕೆಯೆಂದರೆ, ನಿಮ್ನ ವರ್ಗದವರು ಅಕ್ಷರ ಸಂಸ್ಕೃತಿಯಿಂದ ವಂಚಿತರಾ
ಗಿದ್ದು, ಅವರಿಗೆ ಹೇಗೆ ತಾಡೋಲೆಗಳ ಮೇಲೆ ವಚನ ರಚಿಸಲು ಸಾಧ್ಯವಾಯಿತು ಎಂಬುದು. ಈ ಸಂಬಂಧ ಬಸವಣ್ಣನವರ ಒಂದು ವಚನ ಅತ್ಯಂತ ಪ್ರಸ್ತುತ-

ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ, ಮಂಡೋದರಿ ಕಪ್ಪೆಯ ಮಗಳು
ಕುಲವನರಸದಿರಿಂ ಭೋ! ಕುಲದಿಂದ ಮುನ್ನೇನಾದಿರಿ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ, ಕೌಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು:
ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ!

ಬೋವಿತಿಯ ಮಗನಾದರೂ ವ್ಯಾಸ ಮಹರ್ಷಿಯು ಮಹಾಭಾರತ ಮಹಾಕಾವ್ಯವನ್ನು ರಚಿಸಲಿಲ್ಲವೇ? ಮಹರ್ಷಿ ವಾಲ್ಮೀಕಿಯು ರಾಮಾಯಣ ಬರೆದು ಪ್ರಸಿದ್ಧಿ ಪಡೆಯಲಿಲ್ಲವೇ? ಪ್ರತಿಭೆ ಎಂಬುದು ಕೆಲವರ ಸೊತ್ತಲ್ಲ; ಎಲ್ಲ ಜಾತಿಗಳಲ್ಲೂ ಪ್ರತಿಭಾನ್ವಿತರಿದ್ದಾರೆ. ಅವರನ್ನು ಅವಮಾನಿಸಬಾರದಷ್ಟೇ. ತಾವು ಉತ್ತಮ ಜಾತಿಯಲ್ಲಿ ಹುಟ್ಟಿದವರೆಂದು ಹೇಳಿಕೊಳ್ಳುವವರಲ್ಲೂ ಮೂರ್ಖರಿದ್ದಾರೆ; ದಡ್ಡರಿದ್ದಾರೆ. ಅವರಲ್ಲೂ ನೀಚರಿದ್ದಾರೆ. ಮಾತ್ರವಲ್ಲ ಹುಂಬರಿದ್ದಾರೆ. ಇಂಥ ಸಂಕುಚಿತ ಅಭಿಪ್ರಾಯಗಳು ಹುಂಬತನದ ಸಂಕೇತವಲ್ಲದೆ ಮತ್ತೇನು?

ಧರ್ಮಗುರುಗಳು ಮತ್ತು ರಾಜಕಾರಣಿಗಳು ಇಬ್ಬರೂ ತಮ್ಮ ನಡುವೆ ಅಂತರ ಕಾಯ್ದುಕೊಳ್ಳುವುದು ಶ್ರೇಯಸ್ಕರ. ಇತ್ತೀಚಿನ ಬೆಳವಣಿಗೆಗಳಿಂದ ಧಾರ್ಮಿಕ ಭಾವನೆಗೆ ಕೊಂಚ ಧಕ್ಕೆ ಉಂಟಾಗಿರುವುದಂತೂ ನಿಜ. ರಾಜಕಾರಣಿಗಳಿಗೆ ಮಠದಲ್ಲಿ ಪ್ರವೇಶ ಇರಲಿ. ಧರ್ಮಗುರುಗಳಿಂದ ಮಾರ್ಗದರ್ಶನ ಪಡೆಯಲು ಮಠಗಳಿಗೆ ಭೇಟಿ ನೀಡಲಿ. ಆದರೆ ಮಠದಲ್ಲಿ ರಾಜಕಾರಣಕ್ಕೆ ಪ್ರವೇಶ ಕೊಡದಿರಲಿ. ಮಠಾಧೀಶರನ್ನು ರಾಜಕಾರಣಕ್ಕೆ ಎಳೆದು ತರುವ ಪ್ರಯತ್ನದಿಂದ ದೂರವಿರಲಿ. ಪಕ್ಷಾತೀತ ನಿಲುವು ಎಲ್ಲ ಕಾಲಕ್ಕೂಹಿತಕರ. ಪಕ್ಷ ರಾಜಕಾರಣ ಎಲ್ಲ ಕಾಲದಲ್ಲೂ ಅಹಿತಕರ. ಶಾಸಕರನ್ನು, ಸಚಿವರನ್ನು ಮಾಡುವ ಅಧಿಕಾರ ಪ್ರಜೆಗಳಿಗೆ ಇದೆ. ಪ್ರಜೆಗಳದೇ ಪರಮಾಧಿಕಾರ. ಆದರೆ, ಬದಲಾದಸನ್ನಿವೇಶದಲ್ಲಿ ಮುಂದಿನ ಶಾಸಕರು ಮತ್ತು ಸಚಿವರು ಯಾರು ಎಂಬುದನ್ನು ಮಠಗಳು ನಿರ್ಧರಿಸುತ್ತವೆಂದುಹೇಳಲಾಗುತ್ತದೆ. ಪ್ರಜಾಧಿಕಾರದ ಸ್ಥಾನದಲ್ಲಿ ಮಠಾಧಿಕಾರ. ಈ ದಿಶೆಯಲ್ಲಿ ಮಠಗಳು ಮತಬ್ಯಾಂಕ್ ಆಗಿ ಪರಿವರ್ತನೆಗೊಳ್ಳುತ್ತಿರುವುದು ಶೋಭಾಯಮಾನವಲ್ಲ.

ಮಠಗಳು ಭಕ್ತರ ಶ್ರದ್ಧಾಕೇಂದ್ರಗಳು. ಆದರೆ ಭಕ್ತರು ತಮ್ಮ ಮಠವು ರಾಜಕಾರಣದ ಕೇಂದ್ರವಾಗಲೆಂದು ಬಯಸುವುದಿಲ್ಲ. ಈ ಸಂಬಂಧ ಮಠಾಧೀಶರ ಮಾತನ್ನು ಭಕ್ತರು ಕೇಳುತ್ತಾರೆಯೇ ಎಂಬುದು ಕೂಡಾ ಸಂದೇಹಾಸ್ಪದ. ಹೀಗಿದ್ದೂ ಧಾರ್ಮಿಕರು ಬೀದಿ ಮಾರಿಯಂತಿರುವ ರಾಜಕಾರಣವನ್ನು ತಮ್ಮ ಕೇಂದ್ರಕ್ಕೆ ಹೊಗಿಸಿಕೊಂಡರೆ, ಶಾಂತಿ-ನೆಮ್ಮದಿ ಹಾಳಾಗುವುದರಲ್ಲಿ ಸಂದೇಹವಿಲ್ಲ. ಯಾವ ರಾಜಕಾರಣಿಯೂ ನೆಮ್ಮದಿಯಿಂದ ಬದುಕುತ್ತಿಲ್ಲ. ಇನ್ನು ರಾಜಕಾರಣವನ್ನು ತಮ್ಮ ಧಾರ್ಮಿಕ ಕೇಂದ್ರಗಳಿಗೆ ಹೊಗಿಸಿಕೊಂಡರೆ ಧಾರ್ಮಿಕರ ಪಾಲಿಗೆ ನೆಮ್ಮದಿ ಎಂಬುದು ಮರೀಚಿಕೆ. ಈ ಸತ್ಯವನ್ನು ಬೇಗನೆ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

ಒಬ್ಬ ಧಾರ್ಮಿಕನಿಂದ ಜನರು ನಿರೀಕ್ಷಿಸುವುದು ಸಾಮಾಜಿಕ ಸಾಮರಸ್ಯ. ಪ್ರತಿಯೊಂದು ಧರ್ಮವೂ ಒಂದೊಂದುಮೌಲ್ಯಕ್ಕೆ ಒತ್ತಾಸೆಯನ್ನು ನೀಡಿದೆ. ಯಾವುದೇ ಭಾವೈಕ್ಯ ಸಮಾವೇಶದಲ್ಲಿ ಭಾಗವಹಿಸುವ ಧಾರ್ಮಿಕರು ತಮ್ಮಧರ್ಮದ ಸಂದೇಶವನ್ನು ಮಾತ್ರ ಪ್ರಸ್ತಾಪಿಸುತ್ತಾರೆ.
ನಾನು ಹಾಗೆ ಮಾಡುವುದಿಲ್ಲ. ಎಲ್ಲ ಧರ್ಮದ ತಿರುಳನ್ನುಸೇರಿಸಿ ಚಿಂತನೆಗೈಯ್ಯುತ್ತೇನೆ-

ಹಿಂದೂ ಧರ್ಮವು ‘ಸಂಸ್ಕೃತಿ’ ಜನ್ಯವಾದುದು. ಬೌದ್ಧ ಧರ್ಮವು ‘ನೀತಿ’ ಪ್ರಧಾನವಾದುದು. ಕ್ರೈಸ್ತ ಧರ್ಮವು ‘ಪ್ರೀತಿ’ ಯುಕ್ತವಾದುದು. ಇಸ್ಲಾಂ ಧರ್ಮವು ‘ಶಾಂತಿ’ಗೆ ಪ್ರಸಿದ್ಧವಾದುದು. ಜೈನ ಧರ್ಮವು ‘ಧೃತಿ’ಗೆ ಒತ್ತಾಸೆಯಾದುದು. ಬಸವ ಧರ್ಮವು ‘ಕ್ರಾಂತಿ’ ಶೀಲವಾದುದು. ಸಿಖ್ ಧರ್ಮವು ‘ಮತಿ’ಶೀಲವಾದುದು. ಬಸವಪ್ರಭು ಮುರುಘೇಶ ಸರ್ವಧರ್ಮಗಳ ತಿರುಳನನುಸರಿಸೆ ವಿಶ್ವಮಾನವನಾಗಿಪುದು.

ಇಲ್ಲಿ ಹಿಂದೂ (ವೈದಿಕ) ಧರ್ಮವನ್ನೇ ತೆಗೆದುಕೊಳ್ಳೋಣ. ಹಿಂದೂ ಪದಕ್ಕಿಂತ ಭಾರತ-ಭಾರತಿ ಎಂಬುದು ಹೆಚ್ಚು ಅಪ್ಯಾಯಮಾನ. ಇತ್ತೀಚಿನ ದಿನಗಳಲ್ಲಿ ವರ್ಣಾಶ್ರಮ ಧರ್ಮಕ್ಕೆ (ಪದ್ಧತಿ) ಬದಲಾಗಿ ಹಿಂದೂ ಧರ್ಮ ಎಂಬುದು ಹೆಚ್ಚು ಪ್ರಚಾರದಲ್ಲಿದೆ. ಇರಲಿ. ಭಾರತವು ಹಲವಾರು ತತ್ವಜ್ಞಾನಿಗಳಿಗೆ ಜನ್ಮವನ್ನು ನೀಡಿದೆ. ಜತೆಗೆ ವೇದ, ಆಗಮ, ಉಪನಿಷತ್ ಶಾಸ್ತ್ರ, ದರ್ಶನ, ಶ್ರುತಿ, ಸ್ಮೃತಿ, ತತ್ವಗಳ ಉಗಮವಾಗಿದೆ. ತನ್ಮೂಲಕ ಬಗೆ ಬಗೆ ಭಾಷೆ, ವಿವಿಧ ಜಾತಿ, ಅವುಗಳೊಟ್ಟಿಗೆ ಸಂಸ್ಕೃತಿ. ಭಾರತದ್ದು ಎಂದಿಗೂ ಬಹುಮುಖಿ ಸಂಸ್ಕೃತಿ. ಭಾರತವು ಬದುಕಿರುವುದೇ ಈ ವೈವಿಧ್ಯದಿಂದ. ಸಂಸ್ಕೃತಿಯು ಸಮಗ್ರವಾದುದು.

ಭಾರತದಲ್ಲಿ ಆವಿರ್ಭವಿಸಿ, ಹೊರರಾಷ್ಟ್ರದಲ್ಲಿ ಪ್ರಸಾರಗೊಂಡದ್ದು ಬೌದ್ಧ ಧರ್ಮ. ಈ ಧರ್ಮವು ಮಾನವ ಜನಾಂಗಕ್ಕೆ ಬೇಕಾದ ‘ನೀತಿ’ಯನ್ನು ಬೋಧಿಸಿತು; ತ್ರಿಪಿಟಿಕಗಳಲ್ಲಿ ನೀತಿಯನ್ನು ಸಾರಿ ಹೇಳಿತು.

ಕ್ರೈಸ್ತಧರ್ಮವು ಮಾನವ ಪ್ರೀತಿಗೆ ಮಹತ್ವ ನೀಡಿತು. ಶತ್ರುವನ್ನೂ ಪ್ರೀತಿಸಬೇಕೆಂದು ಏಸುಕ್ರಿಸ್ತ ಸಾರಿ ಹೇಳಿದ. ಆತನು ಬೋಧಿಸಿದ ಬೆಟ್ಟದ ಮೇಲಿನ ಉಪದೇಶವು ಜಗತ್ಪ್ರಸಿದ್ಧ. ‘ಜಾಗತಿಕ ಪ್ರೀತಿ’. ಎಲ್ಲ ಮೌಲ್ಯವನ್ನು ಕಳಕೊಂಡರೂ ಜಗತ್ತನ್ನು ಒಗ್ಗೂಡಿಸಲು ಪ್ರೀತಿ ಒಂದೇ ಸಾಕೆನ್ನುತ್ತದೆ ಕ್ರೈಸ್ತ ಧರ್ಮ. ಪ್ರವಾದಿಗಳು ದೇವವಾಣಿಯಾದ ಕುರ್-ಆನ್‌ನನ್ನು ಪ್ರಚುರಪಡಿಸಿದರು. ಮಾನವ ತನಗೆ ಬೇಕಾದುದೆಲ್ಲವನ್ನೂ ಪಡೆಯಬಲ್ಲ; ತನ್ನದಾಗಿಸಿಕೊ
ಳ್ಳಬಲ್ಲ. ಅವನ ಪಾಲಿಗೆ ಶಾಂತಿ ಸಂಪಾದನೆ ಅನನ್ಯವಾದುದು. ಅದಕ್ಕಾಗಿ ಇಸ್ಲಾಂ ಧರ್ಮವು ಪರಮಶಾಂತಿಯನ್ನು ಬೋಧಿಸುತ್ತದೆ. ಇಸ್ಲಾಂ ಎಂದರೆ ಶಾಂತಿ.

ಮಾನವ ಎಂದೆಂದಿಗೂ ಸುಖದ ಅನ್ವೇಷಕ. ಸುಖ ಪ್ರಾಪ್ತಿಯಾದಾಗ ಅವನು ಯಾರ ಮಾತನ್ನೂ ಕೇಳುವುದಿಲ್ಲ. ಅದಕ್ಕಾಗಿ ಜೈನ ಧರ್ಮ ‘ಧೃತಿ’ಗೆ ಒತ್ತಾಸೆ ನೀಡಿತು. ಧೃತಿ ಅಂದರೆ ಸಂಯಮ. ಈ ಸಂಬಂಧ ಅದು ಪಂಚಶೀಲಗಳನ್ನು ಪ್ರಸ್ತಾಪಿಸಿತು. 900 ವರ್ಷಗಳ ಹಿಂದೆ 770 ಅಮರಗಣಂಗಳು ಸೇರಿ ಬಸವಣ್ಣನ ನೇತೃತ್ವದಲ್ಲಿ ಕಾಯಕಪ್ರಧಾನ ಸಮಾಜವನ್ನು ಕಟ್ಟಿದರು. ಜಾತೀಯತೆ ಮತ್ತು ಲಿಂಗತಾರತಮ್ಯ ವಿರುದ್ಧದ ಪರಿವರ್ತನೆಯ ಮಹಾ ಪರ್ವ ಆರಂಭವಾಯಿತು. ಶರಣರು ಪರಿವರ್ತನೆಗೆ ಆದ್ಯತೆ ನೀಡಿದ್ದರಿಂದ ‘ಕ್ರಾಂತಿ’ ಅಗತ್ಯವೆನಿಸಿತು. ಕ್ರಾಂತಿಯ ಮುಖಾಂತರ ಶಾಂತಿ.

16ನೇ ಶತಮಾನದಲ್ಲಿ ಭಾರತದಲ್ಲಿ ಮತ್ತೊಂದು ಧರ್ಮ ಪ್ರಚಾರಕ್ಕೆ ಬಂತು. ಗುರುನಾನಕ್ ಮುಂತಾದ ತತ್ವವೇತ್ತರು ಸ್ಥಾವರ ಕಲ್ಪನೆಯನ್ನು ಅಲ್ಲಗಳೆದರು. ಮಾನವೀಯಮೌಲ್ಯವನ್ನು ಪ್ರತಿಪಾದಿಸಿದರು. ಗ್ರಂಥಸಾಹಿಬ್, ಸಿಖ್ ಧರ್ಮದ ಪವಿತ್ರ ಗ್ರಂಥವಾಯಿತು. ಸುಜ್ಞಾನ ಈ ಧರ್ಮದ ಸಾರವಾಗಿದೆ. ಸುಜ್ಞಾನವೆಂದರೆ, ಸುಮತಿ. ಅಂದರೆ ಉತ್ತಮವಾದ ಮತಿ. ಮಾನವ ತಾನು ಮತಿಶೀಲನಾಗಬೇಕು. ಅಂದಾಗಲೇ ಗತಿಶೀಲ ಆಗುವನು.

ಧರ್ಮಗಳು ದೈನಂದಿನ ಬದುಕಿನಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಮುಂದಾಗಬೇಕಾದ ಅನಿವಾರ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಧರ್ಮಗಳು ಸಾರುವ ಒಂದೊಂದು ತಿರುಳೂ ಅಥವಾ ತತ್ವವು ಸೇರಿದಾಗ ಭಾವೈಕ್ಯಭಾರತ. ಬಹುಮುಖಿ ಭಾರತ. ಧಾರ್ಮಿಕ ಮೌಲ್ಯಗಳಿಗೆ ಒತ್ತು ಕೊಡುತ್ತ, ಸಾಮಾಜಿಕ ಸಾಮರಸ್ಯವನ್ನು ಕಾಯ್ದುಕೊಳ್ಳಬೇಕಾಗಿದೆ. ಸಮಾಜ ಬದುಕಿದರೆ ಧರ್ಮ ಉಳಿಯುತ್ತದೆ. ಸಮಾಜವೇ ವಿನಾಶದತ್ತ ಸಾಗಿದರೆ ಧರ್ಮಕ್ಕೆ ಉಳಿಗಾಲವಿಲ್ಲ. ಜನರಿಗಾಗಿ ಧರ್ಮ ಇದೆ; ಧರ್ಮಕ್ಕಾಗಿ ಜನರು ಅಲ್ಲ. ಈ ದಿಶೆಯಲ್ಲಿ ಸಮಕಾಲೀನ ಸಮಸ್ಯೆಗಳತ್ತ ಧಾರ್ಮಿಕರು ಹೆಚ್ಚು ಮಹತ್ವ ಕೊಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT