ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್‌ಗೆ ಜಯದ ಕಾಣಿಕೆ ನೀಡುವ ಬಯಕೆ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಢಾಕಾ: ಹೊಸ ಕೋಚ್‌ ಶೊರ್ಡ್‌ ಮ್ಯಾರಿಜ್ ಮಾರ್ಗದರ್ಶನದಲ್ಲಿ ಪಳಗಿರುವ ಭಾರತ ತಂಡ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಬುಧವಾರ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಭಾರತವು ಜಪಾನ್‌ ತಂಡದ ಸವಾಲನ್ನು ಎದುರಿಸಲಿದೆ.

ರೋಲಂಟ್ ಓಲ್ಟಮನ್ಸ್‌ ರಾಜೀನಾಮೆಯ ನಂತರ ಮಹಿಳಾ ಹಾಕಿ ತಂಡದ ಕೋಚ್‌ ಶೊರ್ಡ್‌ ಮ್ಯಾರಿಜ್ ಅವರ ಹೆಗಲಿಗೆ ಪುರುಷ ತಂಡದ ಹೊಣೆ ಹೊರಿಸಲಾಗಿತ್ತು. ನಾಲ್ಕು ವರ್ಷಗಳಲ್ಲಿ ಭಾರತ ಹಾಕಿ ತಂಡಕ್ಕೆ ಓಲ್ಟಮನ್ಸ್‌ ಅವರು ಹೊಸ ದಿಸೆ ತೋರಿಸಿದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿದ್ದ ತಂಡವನ್ನು ಆರನೇ ಸ್ಥಾನಕ್ಕೆ ಏರಿಸಿದ್ದರು. ಅದೇ ಹಾದಿಯಲ್ಲಿ ತಂಡವನ್ನು ಮುನ್ನಡೆಸುವ ಸವಾಲು ಈಗ ಮ್ಯಾರಿಜ್‌ ಮೇಲಿದೆ. ಇದಕ್ಕೆ ಬುಧವಾರದ ಪಂದ್ಯದಲ್ಲೇ ನಾಂದಿ ಹಾಡಬೇಕಾಗಿದೆ.

ಟೂರ್ನಿಯಲ್ಲಿ ಕಳೆದ ಬಾರಿ ಭಾರತ ರನ್ನರ್ ಅಪ್‌ ಆಗಿತ್ತು. ಮಿಡ್‌ಫೀಲ್ಡರ್‌ ಮನ್‌ಪ್ರೀತ್‌ ಸಿಂಗ್ ಸಾರಥ್ಯದ ತಂಡ  ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಆತಿಥೆಯ ಬಾಂಗ್ಲಾದೇಶ ಕೂಡ ಇದೇ ಗುಂಪಿನಲ್ಲಿದೆ. ‘ಬಿ’ ಗುಂಪಿನಲ್ಲಿ ಚಾಂಪಿಯನ್‌ ಕೊರಿಯಾ ಜೊತೆ ಮಲೇಷ್ಯಾ, ಚೀನಾ ಮತ್ತು ಒಮನ್ ಇದೆ.

ಅಕ್ಟೋಬರ್‌ 13ರಂದು ಬಾಂಗ್ಲಾದೇಶವನ್ನು ಎದುರಿಸಲಿರುವ ಭಾರತ ತಂಡದ ಪಾಕಿಸ್ತಾನ ಎದುರಿನ ಪಂದ್ಯ ಇರುವುದು ಅಕ್ಟೋಬರ್‌ 15ರಂದು. ಈ ಎರಡು ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಬೇಕಾದರೆ ಮೊದಲ ಪಂದ್ಯದಲ್ಲಿ ಜಯದ ಮುನ್ನುಡಿ ಬರೆಯಬೇಕಾಗಿದೆ. ಪಂದ್ಯ ಗೆದ್ದು ಹೊಸ ಕೋಚ್‌ಗೆ ಕಾಣಿಕೆ ನೀಡುವುದು ತಂಡದ ಉದ್ದೇಶ.

ಭಾರತ ಈ ವರ್ಷದ ಆರಂಭದಲ್ಲಿ ಸುಲ್ತಾನ್ ಅಜ್ಲಾನ್ ಷಾ ಕಪ್‌ ಟೂರ್ನಿಯಲ್ಲಿ ಜಪಾನ್ ಎದುರು ಆಡಿತ್ತು. ಆ ಪಂದ್ಯದಲ್ಲಿ ಜಪಾನ್‌ 3–4ರಿಂದ ಸೋತಿತ್ತು. ಆದರೂ ಆ ತಂಡವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ತಂಡಕ್ಕೆ ಯಾವುದೇ ಕ್ಷಣದಲ್ಲಿ ಪುಟಿದೇಳುವ ಸಾಮರ್ಥ್ಯವಿದೆ. ಅಜ್ಲಾನ್ ಷಾ ಕಪ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾವನ್ನು 3–2ರಿಂದ ಮಣಿಸಿದ್ದೇ ಇದಕ್ಕೆ ಉತ್ತಮ ಉದಾಹರಣೆ.

ಯುವ ಆಟಗಾರರ ಮೇಲೆ ಭರವಸೆ
ಭಾರತ ತಂಡದಲ್ಲಿ ಅನುಭವಿಗಳ ಜೊತೆಗೆ ಯುವ ಆಟಗಾರರೂ ಇದ್ದಾರೆ. ಅವರ ಮೇಲೆ ಭರವಸೆಯ ಹೊರೆ ಬಿದ್ದಿದೆ. ಗೋಲ್ ಕೀಪರ್‌ಗಳಾದ ಆಕಾಶ್ ಚಿಕ್ತೆ ಮತ್ತು ಸೂರಜ್ ಕರ್ಕೇರಾ ತಂಡಕ್ಕೆ ಮರಳಿದ್ದು ಯುರೋಪ್ ಟೂರ್‌ ವೇಳೆ ವಿಶ್ರಾಂತಿ ನೀಡಿದ್ದ ಡಿಫೆಂಡರ್‌ಗಳಾದ ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುರೇಂದರ್‌ ಕುಮಾರ್‌ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಮಾಜಿ ನಾಯಕ ಸರ್ದಾರ್‌ ಸಿಂಗ್‌, ಆಕಾಶ್‌ ದೀಪ್ ಸಿಂಗ್‌, ಸತ್ಬೀರ್‌ ಸಿಂಗ್‌ ಮತ್ತು ಉಪನಾಯಕ ಎಸ್‌.ವಿ.ಸುನಿಲ್‌ ಅವರ  ಮೇಲೆಯೂ ನಿರೀಕ್ಷೆ ಇದೆ.

ಮುಂದಿನ 15 ತಿಂಗಳಲ್ಲಿ ವಿಶ್ವ ಹಾಕಿ ಲೀಗ್ ಫೈನಲ್‌, ಏಷ್ಯನ್ ಗೇಮ್ಸ್‌, ಕಾಮನ್‌ವೆಲ್ತ್ ಗೇಮ್ಸ್‌ ಮತ್ತು ವಿಶ್ವಕಪ್‌ಗೆ ಸಜ್ಜಾಗಲು ಏಷ್ಯಾಕಪ್ ಟೂರ್ನಿ ಭಾರತಕ್ಕೆ ಉತ್ತಮ ವೇದಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT