ಶುಕ್ರವಾರ, ಸೆಪ್ಟೆಂಬರ್ 20, 2019
28 °C
ಭುಜದ ಮೇಲೆ ತಾಯಿಯ ಶವ ಹೊತ್ತುಕೊಂಡು ಹೋದ ಪ್ರಕರಣ

ತನಿಖಾ ಸಮಿತಿಯಿಂದ ಆಸ್ಪತ್ರೆಗೆ ಭೇಟಿ, ವಿಚಾರಣೆ

Published:
Updated:
ತನಿಖಾ ಸಮಿತಿಯಿಂದ ಆಸ್ಪತ್ರೆಗೆ ಭೇಟಿ, ವಿಚಾರಣೆ

ಹೊಸಪೇಟೆ: ತಾಯಿಯ ಶವವನ್ನು ಮಗ ಭುಜದ ಮೇಲೆ ಹೊತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ನೇತೃತ್ವದ ಮೂವರು ಸದಸ್ಯರ ತನಿಖಾ ತಂಡವು ಮಂಗಳವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿತು.

ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಆಸ್ಪತ್ರೆಗೆ ಭೇಟಿ ನೀಡಿದ ತಂಡದ ಸದಸ್ಯರು ಸಂಜೆ ವರೆಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯಿಂದ ಮಾಹಿತಿ ಪಡೆದರು. ಭದ್ರತಾ ಸಿಬ್ಬಂದಿಯನ್ನು ವಿಚಾರಿಸಿದರು. ಅಷ್ಟೇ ಅಲ್ಲ, ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿರುವ ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದರು.

ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಬಳ್ಳಾರಿ ತಾಲ್ಲೂಕಿನ ಕೊರ್ಲಗುಂದಿಯ ಮಾರೆಪ್ಪ (76), ಅವರ ಪತ್ನಿ ತಿಪ್ಪಮ್ಮ (70) ಅವರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್‌ ಕುಮಾರ್‌ ಮಿಶ್ರಾ, ‘ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯ ವಿಚಾರಣೆ ನಡೆಸಿದ್ದೇವೆ. ನಾಲ್ಕು ಗಂಟೆಗಳ ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಬೇಕಿದೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯಲಿದೆ. ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರಿಗೆ ವರದಿ ಕೊಡಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಮೇಶ್‌ ಬಾಬು, ಡಿ.ವೈ.ಎಸ್‌.ಪಿ. ಶಿವಾರೆಡ್ಡಿ ತನಿಖಾ ತಂಡದ ಇನ್ನುಳಿದ ಇಬ್ಬರು ಸದಸ್ಯರು. ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಪೋಷಕರು ಮೃತಪಟ್ಟಿದ್ದಾರೆ ಎಂದು ಪ್ರತಿಭಟಿಸಿ ರವಿ ತನ್ನ ತಾಯಿ ತಿಪ್ಪಮ್ಮ ಅವರ ಶವವನ್ನು ಭುಜದ ಮೇಲೆ ಎತ್ತುಕೊಂಡು ಹೋಗಿದ್ದರು. ಅಷ್ಟೇ ಅಲ್ಲ, ಇಬ್ಬರ ಶವವನ್ನು ಆಟೊದಲ್ಲಿ ಸಾಗಿಸಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

Post Comments (+)