ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೂ ಜಿಎಸ್‌ಟಿ ಬರೆ

ಮಹೋತ್ಸವಕ್ಕಾಗಿ ಶ್ರವಣಬೆಳಗೊಳದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳ ಮೇಲೆ ಅಡ್ಡಪರಿಣಾಮ
Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹಾಸನ: ಫೆಬ್ರುವರಿಯಲ್ಲಿ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಬಿಡುಗಡೆ ಮಾಡಿರುವ ಅನುದಾನದ ಮೇಲೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಣಾಮ ಬೀರಿದೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ₹ 175 ಕೋಟಿ ಪೈಕಿ ₹ 12 ಕೋಟಿಯಷ್ಟು ಜಿಎಸ್‌ಟಿಗೆ ಸೋರಿ ಹೋಗುವುದರಿಂದ ಅಭಿವೃದ್ಧಿ ಕಾರ್ಯಕ್ಕೆ ಸಾಕಷ್ಟು ತೊಂದರೆ ಆಗಿದೆ.

ಭಕ್ತರು ಹಾಗೂ ಪ್ರವಾಸಿಗರು ತಂಗಲು ತಾತ್ಕಾಲಿಕವಾಗಿ 12 ಉಪನಗರಗಳನ್ನು ₹ 75 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಕೆಲಸವನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ. ಇದರಲ್ಲಿ ₹ 10,38,71,792 ಜಿಎಸ್‌ಟಿಗೆ ಹೋಗಲಿದೆ. ಹಾಗೆಯೇ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಉನ್ನತೀಕರಣಕ್ಕೆ ಮಂಜೂರಾಗಿರುವ ₹3.24 ಕೋಟಿ ಅನುದಾನದಲ್ಲಿ ₹38.80 ಲಕ್ಷ, ಅಟ್ಟಣಿಗೆ ನಿರ್ಮಾಣಕ್ಕೆ ನೀಡಿರುವ ₹ 11.25 ಕೋಟಿಯಲ್ಲಿ ₹ 24 ಲಕ್ಷ, ಕರ್ನಾಟಕ ನಗರ ನೀರು ಸರಬರಾಜು ಒಳ ಚರಂಡಿ ಅಭಿವೃದ್ಧಿ ಮಂಡಳಿಗೆ ಮಂಜೂರಾಗಿರುವ ₹15 ಕೋಟಿಯಲ್ಲಿ ₹ 25 ಲಕ್ಷ, ಜಿಲ್ಲಾ ಪಂಚಾಯಿತಿ ಕೈಗೊಳ್ಳುವ ₹ 12 ಕೋಟಿ ವೆಚ್ಚದ ಕಾಮಗಾರಿಯಲ್ಲಿ ₹ 1.20 ಲಕ್ಷ ಜಿಎಸ್‌ಟಿಗೆ ಹೋಗಲಿದೆ.

ಜೂನ್‌ 12ರಂದು ಮಹೋತ್ಸವಕ್ಕೆ ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಿತು. ಆಗ ಜಿಎಸ್‌ಟಿ ಜಾರಿ ಆಗಿರಲಿಲ್ಲ. ಈ ಬಾರಿ ಕೇಂದ್ರ ಸರ್ಕಾರ ಮಹೋತ್ಸವಕ್ಕೆ ಅನುದಾನವನ್ನೂ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಜಿಎಸ್‌ಟಿ ಹೊಡೆತ ನೀಡಿದೆ.

‘ಜಿಎಸ್‌ಟಿ ಮಂಡಳಿ ಸಭೆಯಲ್ಲಿ ವಿವಿಧ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ. ಅದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ರಸ್ತೆ ಅಭಿವೃದ್ಧಿ ನಿಗಮದವರು ವಾಣಿಜ್ಯ ತೆರಿಗೆ ಇಲಾಖೆ ಜತೆ ಸಂಪರ್ಕದಲ್ಲಿದ್ದಾರೆ. ಸಿಮೆಂಟ್‌, ಶೌಚಗೃಹಗಳಲ್ಲಿ ಅಳವಡಿಸುವ ಸಾಮಗ್ರಿಗಳು, ಕಬ್ಬಿಣದ ಉತ್ಪನ್ನಗಳು ಶೇ 28ರ ತೆರಿಗೆ ವ್ಯಾಪ್ತಿಯಲ್ಲಿವೆ. ಬೃಹತ್‌ ಮೊತ್ತವನ್ನು ಜಿಎಸ್‌ಟಿಗೆ ನೀಡುವುದರಿಂದ ಅಭಿವೃದ್ಧಿ ಕಾರ್ಯಕ್ಕೆ ತೊಂದರೆ ಆಗಲಿದೆ’ ಎಂದು ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ವಿಶೇಷ ಅಧಿಕಾರಿ ವರಪ್ರಸಾದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ. ಮತ್ತೆ ಸರ್ಕಾರಕ್ಕೆ ತೆರಿಗೆ ಕಡಿತ ಹಣವನ್ನು ವಾಪಸ್‌ ನೀಡುವಂತೆ ಕೇಳುವುದರಲ್ಲಿ ಅರ್ಥವಿಲ್ಲ. ಧಾರ್ಮಿಕ ಉದ್ದೇಶದ ಕಾರ್ಯಗಳಿಗೆ ತೆರಿಗೆ ವಿನಾಯಿತಿ ನೀಡಬೇಕು’ ಎಂಬುದು ಭಕ್ತರ ಅಭಿಪ್ರಾಯ.

‘ಸರ್ಕಾರ ಅನುದಾನ ಬಿಡುಗಡೆ ಮಾಡಿದಾಗ ಜಿಎಸ್‌ಟಿ ಜಾರಿಯಾಗಿರಲಿಲ್ಲ. ಈಗ ₹ 12ರಿಂದ ₹ 15 ಕೋಟಿ ತೆರಿಗೆ ಪಾವತಿ ಮಾಡಬೇಕಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆ ಆಗುತ್ತಿದೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಹೆಚ್ಚುವರಿಯಾಗಿ ₹25 ಕೋಟಿ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ. ಅ.15ರ ನಂತರ ದೆಹಲಿಗೆ ತೆರಳಿ ಮತ್ತೊಮ್ಮೆ ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಮನವಿ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT