ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಬೇಟಾ ಬಚಾವೊ ಆಂದೋಲನ

ಅಮಿತ್‌ ಷಾ ಪುತ್ರನ ರಕ್ಷಣೆಗೆ ನಿಂತ ಬಿಜೆಪಿ ನಾಯಕರ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ
Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ/ಅಹಮದಾಬಾದ್‌  : ಇಲ್ಲಿಯವರೆಗೆ ‘ಬೇಟಿ ಬಚಾವೊ’ (ಹೆಣ್ಣು ಮಗುವನ್ನು ರಕ್ಷಿಸಿ) ಎನ್ನುತ್ತಿದ್ದ ಬಿಜೆಪಿ ನಾಯಕರು ಈಗ ‘ಬೇಟಾ ಬಚಾವೊ’ (ಮಗನನ್ನು ರಕ್ಷಿಸಿ) ಎಂಬ ಹೊಸ ಮಂತ್ರ ಪಠಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಲೇವಡಿ ಮಾಡಿದ್ದಾರೆ.

ಅಕ್ರಮ ವಹಿವಾಟು ಹಗರಣದಲ್ಲಿ ಸಿಲುಕಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಪುತ್ರ ಜಯ್‌ ಷಾ ಅವರನ್ನು ರಕ್ಷಿಸಲು ಹೆಣಗಾಡುತ್ತಿರುವ ಬಿಜೆಪಿ ನಾಯಕರನ್ನು ಬಗ್ಗೆ ಅವರು ಈ ರೀತಿ ಅಣಕವಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಜಯ್‌ ಷಾ ಅವರನ್ನು ಶೆಹಜಾದಾ (ರಾಜಕುಮಾರ) ಎಂದು ಕರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ಟಾರ್ಟ್‌ ಅಪ್‌ ಇಂಡಿಯಾ’ ಯೋಜನೆಯ ಅತಿ ದೊಡ್ಡ ಫಲಾನುಭವಿ ಯಾರು ಗೊತ್ತೆ? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಅವರು, ‘ಅದು ಜಯ್‌ ಷಾ ಅವರ ಸ್ಟಾರ್ಟ್ ಅಪ್‌ (ನವೋದ್ಯಮ)’ ಎಂದರು.

ಅಮೇಠಿ: 2019ರಲ್ಲೂ ಮತ್ತೆ ರಾಹುಲ್‌ –ಸ್ಮೃತಿ ಇರಾನಿ ಹಣಾಹಣಿ?

ಅಮೇಠಿ: ನೆಹರೂ–ಗಾಂಧಿ ಕುಟುಂಬದ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರವು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವಣ ಮತ್ತೊಂದು ರಾಜಕೀಯ ಕದನಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆ ಕಾಣಿಸುತ್ತಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಇಬ್ಬರೂ ಮುಖಂಡರು ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ಚುನಾವಣೆಯಲ್ಲಿ ಸ್ಮೃತಿ ಅವರು ಈ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುಳಿವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಸೇರಿದಂತೆ ಪಕ್ಷದ ಹಲವು ಮುಖಂಡರು ಬಿಟ್ಟುಕೊಟ್ಟಿದ್ದಾರೆ.

2014ರ ಚುನಾವಣೆಯಲ್ಲಿ ಇರಾನಿ ಅವರು ರಾಹುಲ್‌ ವಿರುದ್ಧ ಲಕ್ಷಕ್ಕೂ ಹೆಚ್ಚು ಮತಗಳ ಅಂತರಿಂದ ಸೋತಿದ್ದರು.

‘ಚುನಾವಣೆಯಲ್ಲಿ ಸೋತರೂ ಸ್ಮೃತಿ ಇರಾನಿ ಅವರು ನಿರಂತರವಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತ ರಾಹುಲ್‌ ಅವರು ಗೆದ್ದಿದ್ದರೂ, ಅಪರೂಪಕ್ಕೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ’ ಎಂದು ಷಾ ಮಂಗಳವಾರದ ರ‍್ಯಾಲಿಯಲ್ಲಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ, ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು ಎಂಬ ಸ್ಮೃತಿ ಅವರ ಕಾಳಜಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಅಮೇಠಿ ಅಭಿವೃದ್ಧಿಗಾಗಿ ಸ್ಮೃತಿ ಇರಾನಿ ಹಲವು ಕ್ರಮ ಕೈಗೊಂಡಿದ್ದರೆ, ರಾಹುಲ್‌ ಗಾಂಧಿ ಜನರ ಆಶೋತ್ತರಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ ಪಾಂಡೆ ಹೇಳಿದ್ದಾರೆ.

ಷಾ ಪುತ್ರನ ಬೆಂಬಲಕ್ಕೆ ನಿಂತ ರಾಜನಾಥ್‌  ಸಿಂಗ್

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮಗ ಜಯ್‌ ಷಾ ಅವರನ್ನು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಸಮರ್ಥಿಸಿಕೊಂಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಜಯ್‌ ಅವರ ವಹಿವಾಟಿನಲ್ಲಿ ಭಾರಿ ಪ್ರಮಾಣ ಏರಿಕೆಯಾಗಿದೆ ಎಂಬ ಆರೋಪ ಆಧಾರರಹಿತವಾಗಿದ್ದು ಯಾವುದೇ ತನಿಖೆ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

‘ಕಾಲ ಕಾಲಕ್ಕೆ ಇಂತಹ ಆರೋಪಗಳು ಕೇಳಿ ಬರುತ್ತಿರುತ್ತವೆ. ಈ ಹಿಂದೆಯೂ ಇಂತಹ ಆರೋಪ ಕೇಳಿ ಬಂದಿದ್ದವು’ ಎಂದು ಅವರು ಹೇಳಿದ್ದಾರೆ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗುವಷ್ಟರಲ್ಲಿ, ಸಿಂಗ್‌ ಅವರ ಮಗ ಪಂಕಜ್‌ ಅವರ ದುರ್ವರ್ತನೆ ಬಗ್ಗೆ ಆರೋಪ ಕೇಳಿ ಬಂದಿತ್ತು. ಆರೋಪ ನಿಜವಾದರೆ ರಾಜಕೀಯ ತೊರೆಯುವುದಾಗಿ ಸಿಂಗ್‌ ಹೇಳಿದ್ದರು.ಆಗ ಮೋದಿ ಮತ್ತು ಅಮಿತ್‌ ಷಾ ಅವರು ಸಿಂಗ್‌ ಬೆಂಬಲಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT