ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನೆಪತ್‌ ಸ್ಫೋಟ ಪ್ರಕರಣ ತುಂಡಾಗೆ ಜೀವಾವಧಿ ಶಿಕ್ಷೆ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸೋನೆಪತ್‌: ಸೋನೆಪತ್‌ ಸ್ಫೋಟ ಪ್ರಕರಣದಲ್ಲಿ ಲಷ್ಕರ್-ಎ-ತೊಯಬಾ (ಎಲ್ಇಟಿ) ಮುಖಂಡ ಅಬ್ದುಲ್ ಕರೀಂ ತುಂಡಾಗೆ (75) ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

‘ಐಪಿಸಿ ಸೆಕ್ಷನ್ 307 (ಹತ್ಯೆ ಯತ್ನ), 120ಬಿ (ಅಪರಾಧ ಸಂಚು), ಸ್ಫೋಟಕ ವಸ್ತುಗಳ ಕಾಯ್ದೆಯ 3ನೇ ಸೆಕ್ಷನ್ ಅಡಿಯಲ್ಲಿ ತುಂಡಾ ಅಪರಾಧಿ
ಎಂದು ತೀರ್ಪು ನೀಡಿದೆ’ ಎಂದು ತುಂಡಾ ಪರ ವಕೀಲ ಆಶಿಷ್ ವತ್ಸ್ ಹೇಳಿದ್ದಾರೆ.

ಸೋಮವಾರ ಅಂತಿಮ ವಿಚಾರಣೆ ನಡೆಸಿ ತುಂಡಾ ಅಪರಾಧಿ ಎಂದು ತೀರ್ಪು ನೀಡಿದ್ದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸುಶೀಲ್ ಕುಮಾರ್ ಗರ್ಗ್ ಅವರು, ಮಂಗಳವಾರ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದ್ದಾರೆ.

ದೇಶದ ವಿವಿಧೆಡೆಯಲ್ಲಿ ತುಂಡಾ ವಿರುದ್ಧ ಇನ್ನೂ ಹಲವು ಪ್ರಕರಣಗಳು ಬಾಕಿ ಇರುವುದರಿಂದ ಆತನನ್ನು ಗಾಜಿಯಾಬಾದ್‌ನಲ್ಲಿರುವ ದಸ್ನಾ ಜೈಲಿನಲ್ಲಿ ಇರಿಸಲಾಗುತ್ತದೆ ಎಂದು ವತ್ಸ್ ತಿಳಿಸಿದ್ದಾರೆ.

1996ರ ಡಿಸೆಂಬರ್ 28ರಂದು ಸೋನೆಪತ್‌ನ ಚಿತ್ರಮಂದಿರ ಹಾಗೂ ಸ್ಥಳೀಯ ಸಿಹಿತಿಂಡಿ ಮಳಿಗೆಯ ಸಮೀಪದಲ್ಲಿ 10 ನಿಮಿಷಗಳ ಅಂತರದಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಕನಿಷ್ಠ 15 ಜನ ತೀವ್ರವಾಗಿ ಗಾಯಗೊಂಡಿದ್ದರು. ಈ ಸ್ಫೋಟ ಸಂಬಂಧ ಪೊಲೀಸರು ತುಂಡಾ ಸೇರಿ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಸ್ಫೋಟ ಸಂಭವಿಸಿದ ಸಂದರ್ಭ ತಾನು ಪಾಕಿಸ್ತಾನದಲ್ಲಿದ್ದೆ ಎಂದು ತುಂಡಾ ಸೆಪ್ಟೆಂಬರ್‌ನಲ್ಲಿ ನಡೆದ ವಿಚಾರಣೆ ವೇಳೆ ಹೇಳಿಕೊಂಡಿದ್ದ.

ಹಲವು ಪ್ರಕರಣಗಳಲ್ಲಿ ಆರೋಪಿ: ಜಮ್ಮು ಮತ್ತು ಕಾಶ್ಮೀರದ ಹೊರಗಡೆ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ತುಂಡಾ ವಿರುದ್ಧ ಆರೋಪವಿದೆ. 1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟ, 1996-98ರಲ್ಲಿ ದೆಹಲಿಯಲ್ಲಿ ಮತ್ತು ಹೈದರಾಬಾದ್, ಸೋನೆಪತ್‌, ಲೂಧಿಯಾನ, ರೋಹ್ಟಕ್ ಹಾಗೂ ಜಲಂಧರ್‌ನಲ್ಲಿ ನಡೆದ 40ಕ್ಕೂ ಹೆಚ್ಚು ಬಾಂಬ್ ಸ್ಫೋಟಗಳಲ್ಲಿ ಈತನ ಕೈವಾಡವಿರುವ ಆರೋ‍‍‍ಪಗಳಿವೆ.

26/11 ಮುಂಬೈ ದಾಳಿ ಬಳಿಕ ಸಿದ್ಧಗೊಂಡಿದ್ದ ಮೋಸ್ಟ್‌ ವಾಂಟೆಡ್‌ 20 ಉಗ್ರರ ಪಟ್ಟಿಯಲ್ಲಿ ತುಂಡಾನ ಹೆಸರಿತ್ತು. ಭಾರತ–ನೇಪಾಳ ಗಡಿಯಲ್ಲಿ 2013ರ ಆಗಸ್ಟ್ 16ರಂದು ತುಂಡಾನನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT