ಶಾಸಕರಿಗೂ ಅನ್ನಭಾಗ್ಯ!

ಗುರುವಾರ , ಜೂನ್ 20, 2019
26 °C

ಶಾಸಕರಿಗೂ ಅನ್ನಭಾಗ್ಯ!

Published:
Updated:
ಶಾಸಕರಿಗೂ ಅನ್ನಭಾಗ್ಯ!

ನವದೆಹಲಿ: ವಿಧಾನ ಮಂಡಲದ ಅಧಿವೇಶನದ ಸಂದರ್ಭ ಶಾಸಕರು ಉಭಯ ಸದನಗಳ ಕಲಾಪದಲ್ಲಿ ಭಾಗವಹಿಸುವಂತೆ ಆಕರ್ಷಿಸುವ ನಿಟ್ಟಿನಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿಧಾನಸಭೆಯ ಸ್ಪೀಕರ್‌ ಕೆ.ಬಿ. ಕೋಳಿವಾಡ ತಿಳಿಸಿದರು.

ಇಲ್ಲಿನ ಕರ್ನಾಟಕ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ನಡೆದಾಗ ಅನೇಕ ಶಾಸಕರು ಕಲಾಪದಲ್ಲಿ ಭಾಗವಹಿಸದೆ ಗೈರಾಗುತ್ತಿದ್ದಾರೆ. ಅದನ್ನು ತಡೆಯುವುದಕ್ಕೇ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಮಧ್ಯಾಹ್ನ ಊಟಕ್ಕಾಗಿ ಶಾಸಕರ ಭವನದತ್ತ ಅಥವಾ ಹೋಟೆಲ್‌ಗಳತ್ತ ತೆರಳುವ ಶಾಸಕರು ನಂತರ ನಡೆಯುವ ಕಲಾಪದಲ್ಲಿ ಪಾಲ್ಗೊಳ್ಳದಿರುವುದು ಗಮನಕ್ಕೆ ಬಂದಿದೆ. ಅವರಿಗೆ ವಿಧಾನಸೌಧದಲ್ಲೇ ಉಚಿತವಾಗಿ, ಪೌಷ್ಟಿಕಾಂಶ ಇರುವ ಉತ್ತಮ ಊಟ ನೀಡಬೇಕು ಎಂಬ ಚಿಂತನೆ ನಡೆದಿದೆ ಎಂದು ಹೇಳಿದರು.

ಶಾಸಕರು ರಾತ್ರಿ ವೇಳೆ ಹೋಟೆಲ್‌, ಪಬ್‌ ಮತ್ತಿತರ ಕಡೆ ಊಟಕ್ಕೆ, ‘ಪಾರ್ಟಿ’ ಮಾಡಲು ಹೋಗುವುದನ್ನು ತಡೆಯಲು ‘ಕಾನ್ಸ್‌ಟಿಟ್ಯೂಷನ್‌ ಕ್ಲಬ್‌’ ಮಾದರಿಯ ಕ್ಲಬ್‌ ನಿರ್ಮಿಸಲಾಗುವುದು. ಮುಖ್ಯಮಂತ್ರಿಯವರ ನಿವಾಸ ‘ಅನುಗ್ರಹ’ದ ಸಮೀಪ ಇರುವ 2.20 ಎಕರೆ ಜಮೀನಿನಲ್ಲಿ ಈ ಕಟ್ಟಡ ತಲೆ ಎತ್ತಲಿದ್ದು, ಮುಂದಿನ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಯವರು ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.

ಜನಪ್ರತಿನಿಧಿಗಳು ರಾತ್ರಿ ವೇಳೆ ಊಟಕ್ಕಾಗಿ ಎಲ್ಲೆಂದರಲ್ಲಿ ತೆರಳುವುದು ಅವರ ಗೌರವಕ್ಕೆ ಧಕ್ಕೆ ತರುವಂಥದ್ದಾಗಿದೆ. ಇದನ್ನು ಗಮನಿಸಿ, ಶಾಸಕರ ಖಾಸಗಿತನ ಕಾಪಾಡುವುದಕ್ಕಾಗಿ ಈ ಕ್ಲಬ್‌ ನಿರ್ಮಿಸಲಾಗುತ್ತದೆ. ಜಿಮ್‌, ಈಜುಗೊಳ, ಬ್ಯಾಡ್ಮಿಂಟನ್‌ ಕೋರ್ಟ್‌, ಹೋಟೆಲ್‌, ಸಭಾಂಗಣ ಸೌಲಭ್ಯವನ್ನು ಈ ಕ್ಲಬ್‌ ಒಳಗೊಳ್ಳಲಿದೆ ಎಂದು ಅವರು ತಿಳಿಸಿದರು.

ವಿಧಾನಸೌಧ ವಜ್ರಮಹೋತ್ಸವ

ವಿಧಾನಸೌಧದ ವಜ್ರಮಹೋತ್ಸವ ಸಮಾರಂಭದ ಅಂಗವಾಗಿ ಇದೇ 25ರಿಂದ ಎರಡು ದಿನ ಜಂಟಿ ಅಧಿವೇಶನ ನಡೆಯಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಗವಹಿಸಲಿದ್ದು, ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಕೋಳಿವಾಡ ವಿವರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry