ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ವರ್ಷದಲ್ಲಿ ಜಯ್ ಷಾ ಕಂಪೆನಿ ಸಾಲದ ಪ್ರಮಾಣ ಶೇ 4,000ದಷ್ಟು ಏರಿಕೆ: ಹೆಚ್ಚಾದ ಅನುಮಾನ

Last Updated 10 ಅಕ್ಟೋಬರ್ 2017, 19:35 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮಗ ಜಯ್ ಷಾ ಅವರ ಒಡೆತನದ ಕಂಪೆನಿಯ ಆದಾಯ ₹ 50 ಸಾವಿರದಿಂದ ₹ 80 ಕೋಟಿಗೆ ಏರಿಕೆಯಾಗಿದೆ ಎಂಬ ‘ದಿ ವೈರ್’ ವರದಿಯ ಬೆನ್ನಲ್ಲೇ ಕಂಪೆನಿಯ ಸಾಲದ ಪ್ರಮಾಣದಲ್ಲೂ ಗಣನೀಯ ಏರಿಕೆ ಕಂಡು ಬಂದಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ.

ದಿ ವೈರ್ ವರದಿಯ ಪ್ರಕಾರ, 2013–14ನೇ ಸಾಲಿನಲ್ಲಿ ₹ 1.3 ಕೋಟಿ ಸಾಲ ಪಡೆದಿರುವುದಾಗಿ ಷಾ ಅವರ ಕಂಪೆನಿ ಹೇಳಿಕೊಂಡಿತ್ತು. ಆದರೆ, ಮುಂದಿನ ವರ್ಷ ಅದು ₹ 53.4 ಕೋಟಿ ಸಾಲ ಪಡೆದಿರುವುದಾಗಿ ಹೇಳಿತ್ತು. ಅಂದರೆ, ಒಂದು ವರ್ಷದ ಅವಧಿಯಲ್ಲಿ ಕಂಪೆನಿ ಪಡೆದ ಸಾಲದ ಪ್ರಮಾಣದಲ್ಲಿ ಶೇಕಡ 4,000ದಷ್ಟು ಏರಿಕೆಯಾದಂತಾಗಿದೆ. ಈ ಕುರಿತು ಮಾಹಿತಿ ಕಲೆ ಹಾಕಲು ಮುಂದಾದಾಗ ದೊರೆತ ಅಂಕಿಅಂಶಗಳು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ಪೈಕಿ, 2015ರಲ್ಲಿ ಕೆಐಎಫ್‌ಎಸ್ ಹಣಕಾಸು ಸೇವೆಗಳ ಕಂಪೆನಿಯಿಂದ (ಬ್ಯಾಂಕೇತರ ಹಣಕಾಸು ಸಂಸ್ಥೆ) ₹ 15.76 ಕೋಟಿ ಸುರಕ್ಷಿತವಲ್ಲದ (ಅನ್‌ಸೆಕ್ಯೂರ್ಡ್) ಸಾಲ ಪಡೆದಿರುವುದಾಗಿ ‘ಟೆಂಪಲ್ ಎಂಟರ್‌ಪ್ರೈಸಸ್’ ಕಂಪೆನಿ ಹೇಳಿಕೊಂಡಿದೆ. ಆದರೆ, ಕೆಐಎಫ್‌ಎಸ್ ನೀಡಿದ ಮಾಹಿತಿ ಪ್ರಕಾರ ಆ ವರ್ಷ ನೀಡಲಾಗಿರುವ  ಸುರಕ್ಷಿತವಲ್ಲದ ಸಾಲದ ಮೊತ್ತ ₹ 1.16 ಲಕ್ಷ. ಹಾಗಾದರೆ, ಷಾ ಒಡೆತನದ ಕಂಪೆನಿ ಸುಳ್ಳು ದಾಖಲೆ ನೀಡಿತೇ ಎಂಬ ಪ್ರಶ್ನೆ ಮೂಡಿದೆ ಎಂದು ವರದಿಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.

ಈ ಮಧ್ಯೆ, 2015–16ನೇ ಸಾಲಿನಲ್ಲಿ ಒಟ್ಟು ₹ 88 ಕೋಟಿ ಸುರಕ್ಷಿತ ಸಾಲ ನೀಡಲಾಗಿದೆ. ಷಾ ಅವರ ಕಂಪೆನಿಗೆ ನೀಡಿರುವುದು ಸುರಕ್ಷಿತ ಸಾಲ ಎಂದು ಕೆಐಎಫ್‌ಎಸ್ ಹೇಳಿದೆ.

ಜಯ್ ಷಾ ಪಾಲುದಾರಿಕೆಯ ಕುಸುಮ್ ಫಿಸ್‌ಸರ್ವ್ ಕಂಪೆನಿ ಪಡೆದ ಸಾಲದ ಕುರಿತಾದ ಅಂಕಿಅಂಶಗಳೂ ಅನುಮಾನಗಳನ್ನು ಸೃಷ್ಟಿಸಿವೆ.

ದಾಖಲೆಗಳ ಪ್ರಕಾರ, 2012ರಲ್ಲಿ ₹ 36,500 ನಷ್ಟ ದಾಖಲಿಸಿದ್ದ ಕಂಪೆನಿ 2014ರಲ್ಲಿ ₹ 1.73 ಕೊಟಿ ಲಾಭ ದಾಖಲಿಸಿತ್ತು. 2015ರಲ್ಲಿ, ಅಹಮದಾಬಾದ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಲುಪುರ್ ವಾಣಿಜ್ಯ ಸಹಕಾರ ಬ್ಯಾಂಕ್‌ನಿಂದ ₹ 25 ಕೋಟಿ ಸಾಲ ಪಡೆದಿತ್ತು. ಇದೇ ವರ್ಷ ಕೆಐಎಫ್‌ಎಸ್‌ನಿಂದ ₹ 2.68 ಕೋಟಿ ಸಾಲ ಪಡೆದಿತ್ತು. ಕಮಾಡಿಟಿ ಕಂಪೆನಿ (ಷೇರುಗಳ ಖರೀದಿ, ವಹಿವಾಟು ಹೊರತುಪಡಿಸಿ ಚಿನ್ನ ಮತ್ತು ಕಚ್ಚಾ ತೈಲ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ) ಆಗಿರುವುದರಿಂದ ಸಾಲ ನೀಡಿರುವುದನ್ನು ಬ್ಯಾಂಕ್ ಸಮರ್ಥಿಸಿಕೊಂಡಿತ್ತು. ಆರ್‌ಬಿಐ ನಿಯಮಗಳ ಪ್ರಕಾರ, ಷೇರು ವಹಿವಾಟಿನಲ್ಲಿ ಮಧ್ಯವರ್ತಿ ಕೆಲಸ ಮಾಡುವ ಕಂಪೆನಿಗಳಿಗೆ ನಗರ ಸಹಕಾರ ಬ್ಯಾಂಕ್‌ಗಳು ಸಾಲ ನೀಡುವಂತಿಲ್ಲ. ಕುಸುಮ್ ಫಿನ್‌ಸರ್ವ್ ಮಧ್ಯವರ್ತಿ ಕಂಪೆನಿ ಅಲ್ಲದಿರುವುದರಿಂದ ಸಾಲ ನೀಡಲಾಗಿದೆ ಎಂದು ಬ್ಯಾಂಕ್ ಹೇಳಿತ್ತು. ಆದರೆ, ತನ್ನ ಲಾಭದ ಶೇಕಡ 60ರಷ್ಟನ್ನು ‘ಕನ್ಸಲ್ಟೆನ್ಸಿ’ಯಿಂದ (ಮಧ್ಯವರ್ತಿ ಕೆಲಸವೇ ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ) ಗಳಿಸಲಾಗಿದೆ ಎಂದು ಕುಸುಮ್ ಫಿನ್‌ಸರ್ವ್ ದಾಖಲೆಗಳಲ್ಲಿ ಹೇಳಲಾಗಿದೆ. ಇಲ್ಲಿ ಯಾವ ರೀತಿಯ ‘ಕನ್ಸಲ್ಟೆನ್ಸಿ’ಯಲ್ಲಿ ಕಂಪೆನಿ ತೊಡಗಿಸಿಕೊಂಡಿತ್ತು ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ. ಇದು ಕಂಪೆನಿಯು ಅಕ್ರಮವಾಗಿ ಸಾಲ ಪಡೆದ ಅನುಮಾನವನ್ನು ಹುಟ್ಟುಹಾಕಿದೆ ಎಂದು ವರದಿ ಹೇಳಿದೆ.

ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ‘ಭಾರತೀಯ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ಏಜೆನ್ಸಿಯಿಂದ (ಐಆರ್‌ಇಡಿಎ) ಕುಸುಮ್ ಫಿನ್‌ಸರ್ವ್ ಕಂಪೆನಿಯು ₹ 10 ಕೋಟಿ ಸಾಲ ಪಡೆದ ಬಗ್ಗೆಯೂ ‘ದಿ ವೈರ್’ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಮಧ್ಯೆ, ಜಯ್ ಷಾ ಅವರ ಕಂಪೆನಿಯ ವೆಚ್ಚವೂ ₹ 80 ಕೋಟಿಗಿಂತ ಹೆಚ್ಚಿದೆ ಎನ್ನುವ ಮೂಲಕ ಪ್ರಕರಣಕ್ಕೆ ತೇಪೆ ಹಚ್ಚಲು ಬಿಜೆಪಿ ಮುಂದಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT