ಇರಾಕ್‌ಗೆ ಐತಿಹಾಸಿಕ ಜಯದ ಕನಸು

ಮಂಗಳವಾರ, ಜೂನ್ 25, 2019
25 °C

ಇರಾಕ್‌ಗೆ ಐತಿಹಾಸಿಕ ಜಯದ ಕನಸು

Published:
Updated:
ಇರಾಕ್‌ಗೆ ಐತಿಹಾಸಿಕ ಜಯದ ಕನಸು

ಕೋಲ್ಕತ್ತ: ಬಲಿಷ್ಠ ಮೆಕ್ಸಿಕೊ ತಂಡವನ್ನು ಮೊದಲ ಪಂದ್ಯದಲ್ಲಿ ಕಟ್ಟಿಹಾಕಿ 1–1ರ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿರುವ ಇರಾಕ್‌ 17 ವರ್ಷದೊಳಗಿನವರ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಐತಿಹಾಸಿಕ ಜಯದ ಕನಸಿನೊಂದಿಗೆ ಬುಧವಾರ ಅಂಗಣಕ್ಕೆ ಇಳಿಯಲಿದೆ.

ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಎಫ್‌’ ಗುಂಪಿನ ಪಂದ್ಯದಲ್ಲಿ ಈ ತಂಡ ಚಿಲಿಯನ್ನು ಎದುರಿಸಲಿದೆ. ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಚಿಲಿ 0–4ರಲ್ಲಿ ಸೋತಿತ್ತು. ಎರಡನೇ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಇರಾಕ್‌ ಮೊದಲ ಪಂದ್ಯದಲ್ಲಿ ವಿಶ್ವಕಪ್‌ನ ಮೊದಲ ಪಾಯಿಂಟ್‌ ಗಳಿಸಿ ಸಂಭ್ರಮಿಸಿತ್ತು. ಈಗ ಮೊದಲ ಜಯದ ಐತಿಹಾಸಿಕ ಕ್ಷಣದ ಸವಿಯುಣ್ಣುವ ತವಕದಲ್ಲಿದೆ.

ಮೆಕ್ಸಿಕೊ ವಿರುದ್ಧ ಮಿಂಚಿದ್ದ ಮಹಮ್ಮದ್ ದಾವೂದ್‌ ಮೇಲೆ ತಂಡ ಸಂಪೂರ್ಣ ಭರವಸೆ ಇರಿಸಿದೆ. ಮೊದಲ ಪಂದ್ಯದಲ್ಲಿ ಅವರು ಎದುರಾಳಿಗಳ ಪಾಳಯದಲ್ಲಿ ನಿರಂತರ ಆತಂಕ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಪಂದ್ಯದಲ್ಲಿ ಆರಂಭಿಕ ಮುನ್ನಡೆಯ ಗೋಲು ಕೂಡ ಗಳಿಸಿದ್ದರು. ಬುಧವಾರವೂ ಇದೇ ರೀತಿಯಲ್ಲಿ ಆಡಲು ಸಾಧ್ಯವಾದರೆ ತಂಡದ ಪ್ರೀ ಕ್ವಾರ್ಟರ್ ಫೈನಲ್ ಹಾದಿ ಸುಗಮವಾಗಲಿದೆ.

ಆದರೆ ತಂಡ ಚಿಲಿ ವಿರುದ್ಧದ ಪಂದ್ಯದ ಕಡೆಗೆ ಮಾತ್ರ ಸದ್ಯ ಗಮನ ಹರಿಸಿದ್ದು ಮುಂದಿನ ಹಾದಿಯ ಕುರಿತು ಈ ಪಂದ್ಯದ ನಂತರವಷ್ಟೇ ಯೋಚನೆ ಮಾಡಲಾಗುವುದು ಎಂದು ಕೋಚ್‌ ಓಹ್ಟಾನ್‌ ಜತಿರ್ ಹೇಳಿದ್ದಾರೆ.

‘ಚಿಲಿ ಸುಲಭವಾಗಿ ಮಣಿಯುವ ತಂಡವಲ್ಲ. ಅತ್ಯುತ್ತಮ ಆಟಗಾರರನ್ನು ಹೊಂದಿರುವ ಆ ತಂಡದವರು ದೈಹಿಕವಾಗಿಯೂ ಬಲಿಷ್ಠವಾಗಿದ್ದಾರೆ. ತಂತ್ರಗಳ ಬಳಕೆಯಲ್ಲೂ ಅವರು ಮುಂದೆ ಇದ್ದಾರೆ. ಆದ್ದರಿಂದ ಬುಧವಾರದ ಪಂದ್ಯದಲ್ಲಿ ನಮ್ಮ ಸರ್ವಶಕ್ತಿಯನ್ನೂ ಮುಡಿಪಾಗಿಟ್ಟು ಕಾದಾಡಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ ಚಿಲಿ ತಂಡ ಗೋಲ್‌ ಕೀಪರ್‌ ಜೂಲಿಯೊ ಬೋರ್ಕೆಜ್‌ ಅವರ ಅನುಪಸ್ಥಿತಿಯಲ್ಲಿ ಕೊರಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್‌ ಶಿಕ್ಷೆಗೆ ಗುರಿಯಾಗಿರುವ ಅವರ ಬದಲಿಗೆ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದು ತಂಡಕ್ಕೆ ತಲೆ ನೋವಾಗಿದೆ. ದಕ್ಷಿಣ ಅಮೆರಿಕ 17 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಶ್ರೇಷ್ಠ ಗೋಲ್ ಕೀಪರ್‌ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಆರಂಭದಲ್ಲೇ ಭಾರಿ ಸೋಲಿನೊಂದಿಗೆ ನಿರಾಸೆ ಅನುಭವಿಸಿರುವ ತಂಡಕ್ಕೆ ಅವರ ಅನುಪಸ್ಥಿತಿ ಭಾರಿ ಹಿನ್ನಡೆಯಾಗಿದೆ.

ಸಮಬಲದ ಹೋರಾಟ ನಿರೀಕ್ಷೆ

ಗುವಾಹಟಿಯಲ್ಲಿ ನಡೆಯಲಿರುವ ‘ಇ’ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಜಪಾನ್ ನಡುವೆ ಸಮಬಲದ ಹೋರಾಟ ನಿರೀಕ್ಷಿಸಲಾಗಿದೆ. ಮೊದಲ ಪಂದ್ಯದಲ್ಲಿ ಫ್ರಾನ್ಸ್‌ 7–1ರಿಂದ ನ್ಯೂ ಕೆಲಡೋನಿಯ ಎದುರು ಗೆದ್ದಿದ್ದರೆ ಜಪಾನ್‌ 6–1ರಿಂದ ಹೊಂಡುರಾಸ್‌ ತಂಡವನ್ನು ಮಣಿಸಿತ್ತು.

ಈ ಭರ್ಜರಿ ಜಯ ಉಭಯ ತಂಡಗಳ ವಿಶ್ವಾಸವನ್ನು ಗಗನಕ್ಕೆ ಏರಿಸಿದೆ. ಟೂರ್ನಿಯ ಮೊದಲ ಹ್ಯಾಟ್ರಿಕ್ ಗೋಲು ಗಳಿಸಿದ ಕೀಟೊ ನಕಮುರ ಅವರು ಜಪಾನ್ ಪಾಳಯದಲ್ಲಿ ಮತ್ತೊಮ್ಮೆ ಮಿಂಚು ಹರಿಸಲು ಸಜ್ಜಾಗಿದ್ದಾರೆ.

ಇಂಗ್ಲೆಂಡ್‌ಗೆ ಮೆಕ್ಸಿಕೊ ಎದುರಾಳಿ

ಕೋಲ್ಕತ್ತದಲ್ಲಿ ಸಂಜೆ ನಡೆಯಲಿರುವ ‘ಎಫ್‌’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೆಕ್ಸಿಕೊದ ಸವಾಲನ್ನು ಎದುರಿಸಲಿದೆ. ಗುವಾಹಟಿಯಲ್ಲಿ ನಡೆಯಲಿರುವ ‘ಇ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಹೊಂಡುರಾಸ್‌ ಮತ್ತು ನ್ಯೂ ಕೆಲೆಡೋನಿಯಾ ತಂಡಗಳು ಸೆಣಸಲಿವೆ. ‌

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry