ಗುರುವಾರ , ಸೆಪ್ಟೆಂಬರ್ 19, 2019
29 °C
3 ತಂಡ ರಚನೆಗೆ ಹೈಕೋರ್ಟ್‌ ನಿರ್ದೇಶನ

ಠೇವಣಿದಾರರ ಅಂತಿಮ ಪಟ್ಟಿಗೆ ಆದೇಶ

Published:
Updated:

ಹೈದರಾಬಾದ್‌: ಅಗ್ರಿಗೋಲ್ಡ್‌ ಸಂಸ್ಥೆಯಿಂದ ವಂಚನೆಗೆ ಒಳಗಾದ ಠೇವಣಿದಾರರ ಅಂತಿಮ ಪಟ್ಟಿ ಸಿದ್ಧಪಡಿಸಿ ವಿವರಗಳ ದೃಡೀಕರಣಕ್ಕೆ ಮೂರು ತಂಡಗಳನ್ನು ರಚಿಸಬೇಕೆಂದು  ಇಲ್ಲಿಯ ಹೈಕೋರ್ಟ್‌ ಪೀಠವು ಆಂಧ್ರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಸಮಿತಿಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಸಿಐಡಿ ಅಧಿಕಾರಿಗಳು, ಝೀ –ಎಸ್ಸೆಲ್‌ ಗ್ರೂಪ್‌ ಮತ್ತು ಅಗ್ರಿಗೋಲ್ಡ್‌ನ ಪ್ರತಿನಿಧಿಗಳು ಇರಬೇಕು. ಈ ಸಮಿತಿಯು ಠೇವಣಿದಾರರ ಹೆಸರು, ಅವರಿಗೆ ಪಾವತಿಸಬೇಕಾದ ಮೊತ್ತದ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ಇದೇ 23ರ ಒಳಗೆ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಸೂಚಿಸಿದೆ. ಅಕ್ಟೋಬರ್‌ 24ರಿಂದ ವಿಚಾರಣೆ ಮುಂದುವರೆಸಲಾಗುವುದು ಎಂದು ಪೀಠವು ತಿಳಿಸಿದೆ.

ಅಗ್ರಿಗೋಲ್ಡ್‌ ಸಂಸ್ಥೆಯು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಾಂತರ ಠೇವಣಿದಾರರಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಆರೋಪ ಎದುರಿಸುತ್ತಿದೆ. ಈ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲು ಝೀ –ಎಸ್ಸೆಲ್‌ ಗ್ರೂಪ್‌ ಇತ್ತೀಚೆಗೆ ಒಲವು ವ್ಯಕ್ತಪಡಿಸಿದೆ. ಕೋರ್ಟ್‌ ಆದೇಶದ ಅನ್ವಯ, ₹ 10 ಸಾವಿರ ಕೋಟಿಗಳನ್ನು ಕೋರ್ಟ್‌ನಲ್ಲಿ ಠೇವಣಿ ಇರಿಸಲು ಸಂಸ್ಥೆ ಒಪ್ಪಿಗೆ ಸೂಚಿಸಿದೆ. ಇದರಿಂದ ಠೇವಣಿದಾರರ ಹಣ ಮರಳುವ ಸಾಧ್ಯತೆ ಹೆಚ್ಚಿದೆ.

‘ಇದೇ ಭಾನುವಾರದಿಂದ ರಾಜ್ಯದ ಸಿಐಡಿ ಅಧಿಕಾರಿಗಳು ಠೇವಣಿದಾರರ ದಾಖಲೆಗಳ ದೃಢೀಕರಣ ಆರಂಭಿಸಲಿದ್ದಾರೆ’ ಎಂದು ಆಂಧ್ರಪ್ರದೇಶ ಡಿಜಿಪಿ ಸಾಂಬಶಿವ ರಾವ್‌ ಅವರು ಪ್ರಕಟಿಸಿದ್ದಾರೆ.

ಠೇವಣಿದಾರರು  ಮೂಲ ಠೇವಣಿ ದಾಖಲೆ, ಬಾಂಡ್‌ ಮತ್ತು ಬೌನ್ಸ್ ಆದ ಚೆಕ್‌ಗಳನ್ನು ತಮ್ಮ ಬ್ಯಾಂಕ್‌ ಖಾತೆಯ ವಿವರಗಳೊಂದಿಗೆ ಸಲ್ಲಿಸಬೇಕು ಎಂದೂ ಅವರು ಸೂಚಿಸಿದ್ದಾರೆ.

‘ಆಂಧ್ರಪ್ರದೇಶದ ಸಿಐಡಿಯ ಅಂತರ್ಜಾಲ ತಾಣದಲ್ಲಿ ಇದುವರೆಗೆ ಕೇವಲ 9.98 ಲಕ್ಷ ಠೇವಣಿದಾರರು ನೋಂದಣಿ ಮಾಡಿಕೊಂಡಿದ್ದಾರೆ.  10 ಲಕ್ಷಕ್ಕೂ ಹೆಚ್ಚು ಠೇವಣಿದಾರರು ತಮ್ಮ ಹೆಸರನ್ನು ನೋಂದಾಯಿಸಿಲ್ಲ. ಹೀಗೆ ಹೆಸರು ನೋಂದಾಯಿಸದ ವಂಚನೆಗೆ ಒಳಗಾದ ಠೇವಣಿದಾರರು ಈ ತಿಂಗಳಾಂತ್ಯದ ಹೊತ್ತಿಗೆ ತಮ್ಮ ಹೆಸರನ್ನು ನೋಂದಾಯಿಸಬೇಕು. ಠೇವಣಿದಾರರ ಪ್ರತಿಕ್ರಿಯೆ ಆಧರಿಸಿ ನೋಂದಾವಣೆ ಅವಧಿ ವಿಸ್ತರಿಸಲಾಗುವುದು. ಸಿಐಡಿ ಕೈಗೊಳ್ಳುವ  ನೋಂದಣಿ ಪ್ರಕ್ರಿಯೆಯು ಆಂಧ್ರಪ್ರದೇಶದ ಠೇವಣಿದಾರರಿಗೆ ಮಾತ್ರ ಸೀಮಿತವಾಗಿರಲಿದೆ’ ಎಂದು ಅವರು ಹೇಳಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ, ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಪಡಿಸಬೇಕು ಎಂದು ಅಗ್ರಿಗೋಲ್ಡ್‌ನ ನಿರ್ದೇಶಕರು ಮಾಡಿಕೊಂಡ ಮನವಿಯನ್ನು ಪೀಠವು ತಳ್ಳಿ ಹಾಕಿದೆ.

ಚಿತ್ತೂರ್‌, ನೆಲ್ಲೂರ್‌ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಪಡಿಸಲು ನಿರ್ದೇಶಕರು ಕೋರಿಕೊಂಡಿದ್ದರು.

Post Comments (+)