ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರ ಸಮಸ್ಯೆಗೆ ಸ್ಪಂದನೆ: ಮುಖ್ಯಮಂತ್ರಿ ಭರವಸೆ

Last Updated 10 ಅಕ್ಟೋಬರ್ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಗುತ್ತಿಗೆದಾರರು ನ್ಯಾಯಯುತವಾಗಿದ್ದರೆ ಅವರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸದಾ ಸ್ಪಂದಿಸಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ರಾಜ್ಯ ಗುತ್ತಿಗೆದಾರರ ಎರಡು ದಿನಗಳ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ಯಾಕೇಜ್‌ ಟೆಂಡರ್‌ ಕೈಬಿಡಬೇಕೆಂಬ ರಾಜ್ಯ ಗುತ್ತಿಗೆದಾರರ ಸಂಘದ ಬೇಡಿಕೆಯನ್ನು ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದರು.

‘ಗುತ್ತಿಗೆದಾರರು ಶ್ರೀಮಂತರೆನ್ನುವ ಭಾವನೆ ಸಮಾಜದಲ್ಲಿದೆ. ಆದರೆ, ಎಲ್ಲ ಗುತ್ತಿಗೆದಾರರು ಶ್ರೀಮಂತರಲ್ಲ. ಬಡ್ಡಿ ಸಾಲ ತಂದು ಗುತ್ತಿಗೆ ಕೆಲಸ ಮಾಡುವವರೇ ಹೆಚ್ಚಿದ್ದಾರೆ. ಗುತ್ತಿಗೆದಾರರ ಕಷ್ಟದ ಅರಿವು ನನಗೆ ಇದೆ. ಕೆಲಸ ಮಾಡಿಯೂ ನಷ್ಟ ಅನುಭವಿಸಿ ಎನ್ನುವುದಿಲ್ಲ. ಹಾಕಿದ ಬಂಡವಾಳಕ್ಕೆ ನ್ಯಾಯಯುತ ಪ್ರತಿಫಲ ಪಡೆಯಿರಿ’ ಎಂದು ತಿಳಿಸಿದರು.

ರಸ್ತೆ ಗುಂಡಿಗೆ ಕಳಪೆ ಕೆಲಸ ಕಾರಣ

‘ನಗರದ ರಸ್ತೆಗಳು ಒಂದೆರಡು ವರ್ಷಗಳಲ್ಲಿ ಕಿತ್ತು ಹೋಗುತ್ತಿರುವುದಕ್ಕೆ ಮಳೆಯೊಂದೇ ಕಾರಣವಲ್ಲ, ರಸ್ತೆ ನಿರ್ಮಾಣಕ್ಕೆ ಸರಿಯಾದ ಯೋಜನೆ ರೂಪಿಸದಿರುವುದು ಮತ್ತು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದು ಪ್ರಮುಖ ಕಾರಣ’ ಎಂದು ಅವರು ಅಧಿಕಾರಿಗಳು ಮತ್ತು ಗುತ್ತಿಗೆದಾರರ ವೈಫಲ್ಯ ಬೊಟ್ಟು ಮಾಡಿದರು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ‘ನಗರ ಕಟ್ಟುವಲ್ಲಿ ಗುತ್ತಿಗೆದಾರರ ಪಾತ್ರ ಅಮೂಲ್ಯವಾದುದು. ಆದರೆ, ಕಳಪೆ ಕಾಮಗಾರಿ ಮಾಡುವವರಿಂದ ಸರ್ಕಾರಕ್ಕೂ ಕಳಂಕ. ಕೆಟ್ಟ ಗುತ್ತಿಗೆದಾರರನ್ನು ಗುರುತಿಸಿ, ವ್ಯವಸ್ಥೆಯಿಂದ ಬೇರ್ಪಡಿಸಬೇಕು. ಒಳ್ಳೆಯ ಗುತ್ತಿಗೆದಾರರನ್ನು ಪ್ರೋತ್ಸಾಹಿಸಬೇಕು’ ಎಂದರು.

* ಜಾಗತಿಕ ಟೆಂಡರ್‌ ಪದ್ಧತಿಯಿಂದ ರಾಜ್ಯದ ಕಾಮಗಾರಿಗಳು ಹೊರ ರಾಜ್ಯದ ಗುತ್ತಿಗೆದಾರರ ಪಾಲಾಗುತ್ತಿವೆ. ಕನ್ನಡಿಗರು ಅವಕಾಶ ವಂಚಿತರಾಗುವುದನ್ನು ತಪ್ಪಿಸಬೇಕು.

–ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಶಾಸಕ

ಗುತ್ತಿಗೆದಾರರ ಪ್ರಮುಖ ಬೇಡಿಕೆಗಳು

ಪ್ಯಾಕೇಜ್ ಟೆಂಡರ್‌ ರದ್ದುಗೊಳಿಸಬೇಕು

ಕಾಮಗಾರಿ ಪೂರ್ಣಗೊಳಿಸಿದ 30 ದಿನಗಳಲ್ಲಿ ಬಿಲ್‌ ಪಾವತಿಸಬೇಕು

ಗುತ್ತಿಗೆದಾರರ ನೋಂದಣಿಗೆ ಏಕಗವಾಕ್ಷಿ ಪದ್ಧತಿ ಇರಬೇಕು

ಎಲ್ಲ ಕಾಮಗಾರಿಗಳನ್ನು ಟೆಂಡರ್‌ ಮೂಲಕವೇ ನಿರ್ವಹಿಸಬೇಕು

ಕ್ಷೇಮನಿಧಿ ಬಳಕೆಯನ್ನು ’ಗುತ್ತಿಗೆದಾರ ಸ್ನೇಹಿ’ಗೊಳಿಸಬೇಕು

ಗುತ್ತಿಗೆದಾರರು ಮೃತಪಟ್ಟಲ್ಲಿ ಅವಲಂಬಿತರಿಗೆ ಕನಿಷ್ಠ ₹10 ಲಕ್ಷ ಪರಿಹಾರ ನೀಡಬೇಕು

ಅಂಕಿ ಅಂಶ

* 75,000 ರಾಜ್ಯದಲ್ಲಿರುವ ನೋಂದಾಯಿತ ಗುತ್ತಿಗೆದಾರರು

* 17,000 ಪ್ರಥಮದರ್ಜೆ ಗುತ್ತಿಗೆದಾರರು

* ₹100 ಕೋಟಿ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಧಿಯಲ್ಲಿರುವ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT